ನ್ಯಾಯಯುತ ಬೆಲೆ ಕೇಳಿದ ಟೊಮೇಟೋ ಬೆಳೆಗಾರನ ಮೇಲೆ ಮಾರಣಾಂತಿಕ ಹಲ್ಲೆ
ಅವಾಚ್ಯ ಶಬ್ದಗಳಿಂದ ನಿಂದನೆ, ಪ್ರಾಣ ಬೆದರಿಕೆ; ರೌಡಿಗಳ ಅಡ್ಡೆಯಾದ ಮಾರುಕಟ್ಟೆ; ಟೊಮೇಟೋ ಮಂಡಿ ಮಾಲೀಕರಿಂದ ರೈತನ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ
by Ra Na Gopala Reddy Bagepalli & GS Bharath Gudibande
ಬಾಗೇಪಲ್ಲಿ: ನಿರಂತರ ಮಳೆ ಮತ್ತು ನೆರೆಯ ನಡುವೆಯೂ ಟೊಮೇಟೋ ಬೆಳೆದು ಮಾರಾಟಕ್ಕೆ ಬಂದ ರೈತನ ಮೇಲೆ ಇಲ್ಲಿನ ಮಂಡಿ ಮಾಫಿಯಾ ಗ್ಯಾಂಗ್ ಮಾರಣಾಂತಿಕ ಹಲ್ಲೆ ನಡೆಸಿರುವ ಅಮಾನುಷ ಘಟನೆ ಶನಿವಾರ ನಡೆದಿದೆ.
ತಮ್ಮ ಸಹ ರೈತನ ಮೇಲೆ ನಡೆದ ದಾಳಿಯಿಂದ ರೊಚ್ಚಿಗೆದ್ದ ರೈತರು ಟೊಮೇಟೋ ಮಾರುಕಟ್ಟೆಯನ್ನು ಬಂದ್ ಮಾಡಿ ಉಗ್ರ ಪ್ರತಿಭಟನೆ ನಡೆಸಿದ್ದಾರೆ. ದೇಶದ ರೈತರಿಗೆ ಒಳ್ಳೆಯದಾಗಲಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದ ಕೆಲ ದಿನಗಳ ನಂತರವೇ ಇಂಥ ಘಟನೆ ನಡೆದಿರುವುದು ರಾಜ್ಯ ಬಿಜೆಪಿ ಸರಕಾರವನ್ನು ತಲೆ ತಗ್ಗಿಸುವಂತೆ ಮಾಡಿದೆ.
ಬಿಸಿಲು ಮಳೆಯೆನ್ನದೇ ಕಷ್ಟಪಟ್ಟು ಬೆಳೆದ ಬೆಳೆಗೆ ನಷ್ಟವಾಗದೆ ನ್ಯಾಯೋಚಿತ ಬೆಲೆ ಸಿಕ್ಕರೆ ಸಾಕು ಎಂದು ರೈತರು ಕೃಷಿ ಉತ್ಪನ್ನ ಮಾರುಕಟ್ಟೆಗೆ (ಎಪಿಎಂಸಿ) ಹೋಗುತ್ತಾರೆ. ಆದರೆ ಅಲ್ಲಿಯೂ ಕೂಡ ರೈತರನ್ನು ವಂಚಿಸುತ್ತಿರುವ ಘಟನೆಗಳು ನಡೆಯುತ್ತಿವೆ. ಇಂಥ ಘಟನೆಗಳಿಂದ ರೋಸಿ ಹೋಗಿರುವ ರೈತರು ಇದೀಗ ತಮ್ಮ ಶಕ್ತಿ ಏನೆಂಬುದನ್ನು ತೋರಿಸಲು ಮುಂದಾಗಿದ್ದಾರೆ.
ಬಾಗೇಪಲ್ಲಿ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೇಟೋ ಮಾರಾಟ ಮಾಡಲು ಹೆಚ್ಚುವರಿ ಕಮೀಷನ್ ಪಡೆದ ಬಗ್ಗೆ ಪ್ರಶ್ನಿಸಿದ ರೈತನ ಮೇಲೆ ಏಕಾಎಕಿ ಮಂಡಿ ಮಾಲೀಕ ಹಾಗೂ ಆತನ ಸಂಬಂಧಿಕರು ತೀವ್ರ ಹಲ್ಲೆ ನಡೆಸಿ ಕೋಣೆಯಲ್ಲಿ ಅಕ್ರಮವಾಗಿ ಬಂಧಿಸಿಟ್ಟು ಚಿತ್ರಹಿಂಸೆ ನೀಡಿದ ಘಟನೆಯನ್ನು ಖಂಡಿಸಿ ರೈತರು ಬಾಗೇಪಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಯ ಮುಖ್ಯದ್ವಾರ ಬಂದ್ ಮಾಡಿ, ಎಪಿಎಂಸಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ರೈತನ ಪ್ರಶ್ನೆಗೆ ದರ್ಪ ತೋರಿದ ಮಂಡಿ ಮಾಲೀಕ
ಗುಡಿಬಂಡೆ ತಾಲೂಕಿನ ಬೆಣ್ಣೆಪರ್ತಿ ಗ್ರಾಮದ ರೈತ ಬಿ.ಆರ್.ಶ್ರೀನಿವಾಸಯ್ಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಶನಿವಾರ 12 ಟೊಮೋಟೊ ಬಾಕ್ಸ್ʼಗಳನ್ನು ಮಾರಾಟಕ್ಕೆ ತಂದಿದ್ದಾರೆ. ಒಂದು ಬಾಕ್ಸ್ʼಗೆ 350 ರೂ.ನಂತೆ ಅತ್ಯಂತ ಕಡಿಮೆ ಬೆಲೆಗೆ ಮಂಡಿ ಮಾಲೀಕ ನಾಗೇಶ್ ಹರಾಜು ಮಾಡಿದ್ದನ್ನು ರೈತ ಶ್ರೀನಿವಾಸಯ್ಯ ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ಹರಾಜು ಹಾಕಿದ್ದಲ್ಲದೆ, ನಿಗದಿಗಿಂತ ಹೆಚ್ಚು ಕಮೀಷನ್ ವಸೂಲಿ ಮಾಡಿದ್ದನ್ನು ರೈತ ಪ್ರಶ್ನೆ ಮಾಡಿದ್ದಾರೆ. ಇಷ್ಟೇ ಅವರ ಮೇಲೆ ಅಮಾನುಷ ಹಲ್ಲೆಗೆ ಕಾರಣವಾಯಿತು.
ನಮ್ಮ ಹಣ ನಮಗೆ ನೀಡಿ ಎಂದಿದ್ದೇ ತಪ್ಪಾಯ್ತು
ರೈತರಿಗೆ ಅನ್ಯಾಯ ಮಾಡಬೇಡಿ. ಟೊಮೇಟೋ ಬಾಕ್ಸ್ʼಗಳಿಗೆ ನಿಖರ ಬೆಲೆ ನೀಡಿ. ಕಡಿಮೆ ಬೆಲೆಗೆ ಮಾರಲಾಗದು. ರೈತರಿಗೆ ಅನ್ಯಾಯ ಮಾಡಿ, ಹೆಚ್ಚುವರಿ ಕಮೀಷನ್ ಪಡೆದರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ ರೈತ ಶ್ರೀನಿವಾಸಯ್ಯ. ಇದರಿಂದ ದರ್ಪದಿಂದ ಉತ್ತರ ಕೊಟ್ಟ ಮಂಡಿ ಮಾಲೀಕ ನಾಗೇಶ್; “ನಾವು ಎಷ್ಟು ಕೊಟ್ಟರೆ ಅಷ್ಟು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ನಿನ್ನ ಕೈಲಿ ಏನಾಗುತ್ತದೋ ಅದನ್ನು ಮಾಡಿಕೋ ಹೋಗು” ಎಂದು ಅವಾಜ್ ಹಾಕಿದ್ದಾನೆ. ಇದಕ್ಕೆ ಜಗ್ಗದ ರೈತ ನ್ಯಾಯಯುತ ಬೆಲೆಗೆ ಪಟ್ಟು ಹಿಡಿದಿದ್ದಾರೆ.
ರೈತನ ಮೇಲೆ ಮಂಡಿ ವರ್ತಕರ ಗೂಂಡಾಗಿರಿ
ಪ್ರಶ್ನೆ ಮಾಡಿದ ರೈತ ಶ್ರೀನಿವಾಸಯ್ಯನ ಮೇಲೆ ಏಕಾಎಕಿ ಹಲ್ಲೆ ನಡೆಸಿದ ನಾಗೇಶ್ ಜತೆ ಅಕ್ಕಪಕ್ಕದ ಮಂಡಿ ಮಾಲೀಕರು, ವರ್ತಕರು, ದಲ್ಲಾಳಿಗಳು ಸೇರಿಕೊಂಡಿದ್ದಾರೆ. ಆಗ ಅಲ್ಲಿದ್ದ ರೈತರಿಗೆ ಬಾಗೇಪಲ್ಲಿ ಎಪಿಎಂಸಿ ಮಾರುಕಟ್ಟೆಯಲ್ಲಿನ ಮಂಡಿ ಮಾಫಿಯಾದ ವಿರಾಟ ದರ್ಶನವಾಗಿ ಎಲ್ಲರೂ ಬೆಚ್ಚಿಬಿದ್ದಿದ್ದಾರೆ.
ಪಕ್ಕದ ಮಂಡಿ ಮಾಲೀಕ ಕೆ.ಎನ್.ಎಸ್.ಕೃಷ್ಣಪ್ಪ ಏಕಾಎಕಿ ನುಗ್ಗಿಬಂದು ರೈತ ಶ್ರೀನಿವಾಸಯ್ಯ ಮುಖಕ್ಕೆ ಹೊಡೆದಿದ್ದಾನೆ. ಆಗ ಅವರ ಮುಖದಲ್ಲಿ ರಕ್ತ ಕಿತ್ತುಕೊಂಡಿದೆ. ಜತೆಗೆ, ಬಿ.ಎನ್.ವಿ ಮಂಡಿಯ 5 ರಿಂದ 6 ಜನರು ಗೂಂಡಾಗಿರಿ ನಡೆಸಿ ಶ್ರೀನಿವಾಸಯ್ಯನ ಅಂಗಿ ಹರಿದುಹಾಕಿ ಬರೆಯಲು ಸಾಧ್ಯವಾಗದಷ್ಟು ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ. ಜೀವವನ್ನು ರಕ್ಷಿಸಿಕೊಂಡರೆ ಸಾಕು ಎನ್ನುವ ದುಃಸ್ಥಿತಿಯಲ್ಲಿ ಸಿಲುಕಿದ್ದಾನೆ ರೈತ.
ಇಷ್ಟಕ್ಕೆ ಸುಮ್ಮನಾಗದ ಮಂಡಿ ಗೂಂಡಾಗಳು ರೈತ ಶ್ರೀನಿವಾಸಯ್ಯನನ್ನು ಕೋಣೆಯೊಳಕ್ಕೆ ಅಕ್ರಮವಾಗಿ ಕೂಡಿಹಾಕಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ರಕ್ತಸ್ರಾವ ಆಗುವ ರೀತಿಯಲ್ಲಿ ಹೊಡೆದಿದ್ದಾರೆ. ಈ ವಿಷಯ ಎಲ್ಲಾದರೂ ಬಾಯಿ ಬಿಟ್ಟರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಸಿಕೆನ್ಯೂಸ್ ನೌ ವೆಬ್ ತಾಣಕ್ಕೆ ಲಭ್ಯವಾಗಿದೆ.
ಗುಡಿಬಂಡೆ ರೈತರ ಪ್ರತಿಭಟನೆ
ರೈತ ಶ್ರೀನಿವಾಸಯ್ಯ ಮೇಲಿನ ಹಲ್ಲೆಯನ್ನು ಖಂಡಿಸಿ ಗುಡಿಬಂಡೆ ತಾಲೂಕಿನ ರೈತರು ಹಾಗೂ ರೈತ ಮುಖಂಡರು ರೊಚ್ಚಿಗೆದ್ದು, ಎಪಿಎಂಸಿಯ ಮುಖ್ಯದ್ವಾರಕ್ಕೆ ಪೈಪು ಹಾಕಿ ವಾಹನಗಳ ಸಂಚಾರ ತಡೆದರು. ಹಲ್ಲೆ ಮಾಡಿರುವ ಟೊಮೇಟೋ ಮಂಡಿ ಮಾಲೀಕರು, ಗೂಂಡಾಗಳ ವಿರುದ್ಧ ಕ್ರಮ ಜರುಗಿಸಿ ಕೂಡಲೇ ಬಂಧಿಸಬೇಕು ಹಾಗೂ ಅವರ ಅಂಗಡಿ ಲೈಸೆನ್ಸ್ ರದ್ದು ಮಾಡಬೇಕು ಎಂದು ಪಟ್ಟು ಹಿಡಿದರು. ಎಪಿಎಂಸಿ ಕಚೇರಿಯಲ್ಲಿನ ಸಿಬ್ಬಂದಿಯನ್ನು ಹೊರ ಕಳಿಸಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡಿದರು. ಟೊಮೇಟೋ ಮಂಡಿ ಮಾಲೀಕರ ವಿರುದ್ಧ ರೈತರು ಧಿಕ್ಕಾರ ಕೂಗಿದರು.
ಹಲ್ಲೆಗೆ ಒಳಗಾದ ರೈತ ಶ್ರೀನಿವಾಸಯ್ಯ ಅವರಿಂದ ಮಾಹಿತಿ ಪಡೆದ ಪೊಲೀಸ್ ಅಧಿಕಾರಿಗಳು.
ಫಲಿಸದ ಪೊಲೀಸರ ಸಂಧಾನ
ಪ್ರತಿಭಟನಾ ಸ್ಥಳಕ್ಕೆ ಆರಕ್ಷಕ ಉಪ ನಿರೀಕ್ಷಕ ಗೋಪಾಲರೆಡ್ಡಿ ಆಗಮಿಸಿ ಪ್ರತಿಭಟನಾ ನಿರತರ ರೈತರನ್ನು ಸಮಾಧಾನ ಮಾಡಿ ಪ್ರತಿಭಟನೆ ವಾಪಸ್ ಪಡೆಯುವಂತೆ ಮನವಿ ಮಾಡಿದರು. ಆದರೆ ಹಲ್ಲೆ ಮಾಡಿದವರನ್ನು ಬಂಧಿಸುವವರಿಗೂ ಪ್ರತಿಭಟನೆ ವಾಪಸ್ ಪಡೆಯುವುದಿಲ್ಲ ಎಂದು ರೈತರು ಪಟ್ಟು ಹಿಡಿದರು. ನಂತರ ಸ್ಥಳಕ್ಕೆ ಸಿಪಿಐ ಡಿ.ಆರ್.ನಾಗರಾಜ್ ಬಂದು ರೈತರ ಬೇಡಿಕೆಗಳನ್ನು ಆಲಿಸಿ ಘಟನೆಯ ಬಗ್ಗೆ ದೂರು ಸ್ವೀಕರಿಸಿ, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂಬಂಧ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಲೈಸೆನ್ಸ್ ರದ್ದು ಮಾಡಿ ನಾಗೇಶ್ ಮಂಡಿಗೆ ನೋಟೀಸ್ ಅಂಟಿಸಿರುವುದು.
ಮಂಡಿ ಮಾಲೀಕನ ಲೈಸೆನ್ಸ್ ರದ್ದು
ಮಂಡಿ ಮಾಲೀಕ ನಾಗೇಶ್, ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ 1966ರ ಕಲಂ 72, 73(1) (ಬಿ) ಅನ್ವಯ ಹಾಗೂ 79 ಮತ್ತು 80ರ ನಿಮಯ ಮತ್ತು ಉಪನಿಯಮಗಳನ್ನು ಸ್ಪಷ್ಟವಾಗಿ ಉಲಂಘಸಿರುವುದರಿಂದ ಆತನ ಮಂಡಿಯ ಪರವಾನಗಿಯನ್ನು ರದ್ದು ಮಾಡಲಾಗಿದೆ. ಮುಂದಿನ ಆದೇಶದವರೆಗೆ ನಾಗೇಶ್ ಮಾರುಕಟ್ಟೆಯಲ್ಲಿ ಯಾವುದೇ ವ್ಯಾಪಾರ-ವಹಿವಾಟು ಮಾಡದಂತೆ ನಿಷೇಧ ಹೇರಲಾಗಿದೆ ಎಂದು ಬಾಗೇಪಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಹಿತಿ ನೀಡಿದೆ.
ಲೈಸೆನ್ಸ್ ರದ್ದು ಮಾಡಿರುವ ಬಗ್ಗೆ ಬಾಗೇಪಲ್ಲಿ ಕೃಷಿ ಉತ್ಪನ್ನ ಸಮಿತಿ ಹಲ್ಲೆ ಮಾಡಿ ಪರಾರಿಯಾದ ನಾಗೇಶ್ ಅಂಗಡಿಗೆ ನೋಟಿಸ್ ಅಂಟಿಸಿದೆ. ಈ ನಡುವೆ ಪೋಲೀಸರು ನಾಗೇಶ್ʼಗಾಗಿ ಶೋಧ ಮುಂದುವರಿಸಿದ್ದಾರೆ.
Comments 2