ಸಿಕೆನ್ಯೂಸ್ ನೌ ಬಳಿ ಕಣ್ಣೀರಿಟ್ಟ ರೈತ ಶ್ರೀನಿವಾಸಯ್ಯ
By GS Bharath Gudibande
ಗುಡಿಬಂಡೆ: ಇಲ್ಲಿನ ಎಪಿಎಂಸಿ ಮಾರುಕಟ್ಟೆಯ ಮಂಡಿ ಗೂಂಡಾಗಳಿಂದ ಮಾರಣಾಂತಿಕ ದಾಳಿಗೆ ಒಳಗಾದ ಗುಡಿಬಂಡೆ ತಾಲೂಕಿನ ಬೆಣ್ಣೆಪರ್ತಿ ಗ್ರಾಮದ ಶ್ರೀನಿವಾಸಯ್ಯ ಇನ್ನು ದಾಳಿಯ ಆಘಾತದಿಂದ ಇನ್ನೂ ಹೊರಬಂದಿಲ್ಲ. ಏಕಾಎಕಿ ಮಂಡಿ ಗೂಂಡಾಗಳ ಗುಂಪು ಕಟ್ಟಿಕೊಂಡು ತಮ್ಮ ಮೇಲೆ ಮುಗಿಬಿದ್ದ ಕಾರಣಕ್ಕೆ ಅವರು ಭಯಭೀತರಾಗಿದ್ದಾರೆ.
ಈ ಘಟನೆಯಿಂದ ಬೇಸಾಯದ ಬಗ್ಗೆಯೇ ಬೇಸರವಾಗಿದೆ ಎಂದು ಹೇಳುತ್ತಿರುವ ಶ್ರೀನಿವಾಸಯ್ಯ, ದಲ್ಲಾಳಿಗಳು, ವರ್ತಕರು ಹಾಗೂ ಮಂಡಿ ಮಾಫಿಯಾ ಜೇಬು ತುಂಬಿಸಲು ರೈತರು ಬೆವರು ಸುರಿಸಬೇಕಾಗಿದೆ ಎಂದು ಎಂದು ನೊಂದು ನುಡಿದಿದ್ದಾರೆ.
ಎಪಿಎಂಸಿ ಮಾರುಕಟ್ಟೆಗಳಲ್ಲಿ ದಲ್ಲಾಳಿಗಳ ಉಪಟಳವನ್ನು ಹತ್ತಿಕ್ಕಲು ರಾಜ್ಯ ಸರಕಾರ ಜಾರಿಗೆ ತಂದಿರುವ ಕೃಷಿ ಉತ್ಪನ್ನ ಮಾರುಕಟ್ಟೆ ತಿದ್ದುಪಡಿ ಕಾಯ್ದೆ ಅಗತ್ಯವೇ ಬೇಡವೇ ಎನ್ನುವ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ ಬಾಗೇಪಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶನಿವಾರ ನಡೆದಿರುವ ಹಲ್ಲೆ ಘಟನೆ ಸರಕಾರ ತಲೆತಗ್ಗಿಸುವಂತೆ ಮಾಡಿದೆ.
ಜತೆಗೆ; ಕೃಷಿ ಉತ್ಪನ್ನ ಮಾರುಕಟ್ಟೆ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಮಂಡಿ ಮಾಫಿಯಾ ಪರ ವಕಾಲತ್ತು ವಹಿಸುತ್ತಿದ್ದ ನಾಯಕರು ಈಗ ಮೌನವಾಗಿದ್ದು, ರೈತರ ಆಕ್ರೋಶ ಕಟ್ಟೆಯೊಡೆಯುವಂತೆ ಮಾಡಿದೆ. ನಾಳೆ ಬಾಗೇಪಲ್ಲಿ ಪಟ್ಟಣದಲ್ಲಿ ರೈತರು ಪ್ರತಿಭಟನೆ ಕರೆ ನೀಡಿದ್ದು, ಟೊಮೇಟೋ ಬೆಳೆಗಾರನ ಮೇಲೆ ದಾಳಿ ನಡೆಸಿದ ಮಂಡಿ ಗೂಂಡಾಗಳನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯ ಮಾಡುತ್ತಿದ್ದಾರೆ.
ರೈತರು ದೇಶದ ಬೆನ್ನೆಲುಬು. ರೈತರೇ ದೇಶದ ಆಸ್ತಿ, ಅವರಿಗೆ ಎಲ್ಲಾ ಸೌಲಭ್ಯಗಳನ್ನು ನೀಡುವ ಮೂಲಕ ಗೌರವಿಸೋಣ ಎಂದು ಕೃಷಿ ಚಟುವಟಿಕೆಗೆ ಪ್ರೋತ್ಸಾಹ ನೀಡಲು ಸರಕಾರ ಹತ್ತಾರು ಯೋಜನೆಗಳನ್ನು ಜಾರಿಗೊಳಿಸಿದ್ದರೂ ಅದರಿಂದ ರೈತರಿಗೆ ಸಿಗುತ್ತಿರುವ ಪ್ರಯೋಜನ ಅಷ್ಟುಕ್ಕಷ್ಟೇ ಎನ್ನುವುದಕ್ಕೆ ಬಾಗೇಪಲ್ಲಿ ಎಪಿಎಂಸಿ ಮಾರುಕಟ್ಟೆಯಲ್ಲಿ ನನ್ನ ಮೇಲೆ ನಡೆದ ದಾಳಿಯೇ ಸಾಕ್ಷಿ ಎನ್ನುತ್ತಾರೆ ರೈತ ಶ್ರೀನಿವಾಸಯ್ಯ.
ವರ್ತಕರು ಮತ್ತು ರೈತರ ನಡುವೆ ಮಾರುಕಟ್ಟೆಯಲ್ಲಿ ನಂಬಿಕೆಯಿಂದಲೇ ವ್ಯವಹಾರ ನಡೆಯುತ್ತದೆ. ಮಂಡಿ ವರ್ತಕರು ರೈತರಿಗೂ ವಂಚನೆ ಮಾಡುವುದಿಲ್ಲ. ಆದಾಯ ಕೈ ತಪ್ಪುವುದಿಲ್ಲ ಎನ್ನುವ ನಂಬಿಕೆ ಇತ್ತು. ಈಗ ಅಂತಹ ವಾತಾವರಣವೇ ಇಲ್ಲಿ ಮಾಯವಾಗಿದೆ. ಮಂಡಿ ವರ್ತಕರು ತೂಕ ಮತ್ತು ಹಣ ನೀಡುವಾಗ ವಂಚನೆ ಎಸಗುತ್ತಿರುವುದು ಅಮಾನವೀಯ ಕೃತ್ಯ ಎಂದಿದ್ದಾರೆ ಅವರು.
ಎಪಿಎಂಸಿಯಲ್ಲಿ ನಡೆದದ್ದಾರೂ ಏನು?
ಇಡೀ ಘಟನೆಯನ್ನು ದಾಳಿಗೊಳಗಾದ ಗುಡಿಬಂಡೆ ತಾಲೂಕಿನ ಬೆಣ್ಣೆಪರ್ತಿ ಗ್ರಾಮದ ಶ್ರೀನಿವಾಸಯ್ಯ ವಿವರಿಸಿದ್ದು ಹೀಗೆ;
“ಡಿಸೆಂಬರ್ 1ರಂದು ಮಧ್ಯಾಹ್ನ 12.15 ಗಂಟೆಗೆ ಬಾಗೇಪಲ್ಲಿ ಎಪಿಎಂಸಿ ಮಾರುಕಟ್ಟೆಗೆ 102 ಬಾಕ್ಸ್ ಟೊಮ್ಯಾಟೊ ಬೆಳೆಯನ್ನು ಮಾರಾಟ ಮಾಡಲು ತಂದಿದ್ದೆ. ಸಿವೈಎನ್ ಮಂಡಿಯ ನಾಗೇಶ್ ಅವರು ಟೊಮೆಟೋ ಬಾಕ್ಸ್ ಒಂದಕ್ಕೆ 950 ರೂ.ನಂತೆ ಹರಾಜಿನಲ್ಲಿ ಖರೀದಿ ಮಾಡಿ ನಂತರ 102ರಲ್ಲಿ 3 ಬಾಕ್ಸ್ ಟೊಮೆಟೋ ಲೆಸ್ ಮಾಡಿ ಹರಾಜಿನಲ್ಲಿ ಕೂಗಿದ 950 ರೂಪಾಯಿ ಬದಲಿಗೆ 900 ರೂ. ದರ ನಿಗದಿ ಮಾಡಿದ್ದರು. ನಾನು ಇದನ್ನು ಪ್ರಶ್ನಿಸಿದೆ.
ನಂತರ ಡಿಸೆಂಬರ್ 2ರಂದು ಪುನಾ ಮೊಬೈಲ್ ಮೂಲಕ ನಾಗೇಶ್ʼಗೆ ಕರೆ ಮಾಡಿ ಹಣ ಕೇಳಿದಕ್ಕೆ, ಆತ ಹೊಸದಾಗಿ ಪಟ್ಟಿ ಮಾಡಿ ಪುನಾ 4 ಬಾಕ್ಸ್ ರಿಜೆಕ್ಟ್ ಮಾಡಿ ವಾಟ್ಸಾಪ್ ಮೂಲಕ ಹೊಸ ಪಟ್ಟಿ ಕಳಿಸಿದ್ದರು.
ಡಿಸೆಂಬರ್ 4ರಂದು ಬೆಳಗ್ಗೆ 8 ಗಂಟೆಗೆ 12 ಬಾಕ್ಸ್ ಟೊಮೆಟೋವನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋದೆ. ಸಿವೈಎನ್ ಮಂಡಿಯ ನಾಗೇಶ್ 350 ರೂ.ನಂತೆ ಹರಾಜಿನಲ್ಲಿ ಖರೀದಿಸಿದರು. ಆಗ ನಾನು, ʼಮೊನ್ನೆ ಮಾಡಿದ ಹಾಗೆ ಮಾಡಬೇಡಿ. ಈಗಲೇ ಕ್ವಾಲಿಟಿ ನೋಡಿಕೊಂಡು ಸರಿಯಾದ ದರ ನೀಡಿ ಎಂದೆ. ಅಷ್ಟಕ್ಕೆ ವಿವೇಚನೆ ಕಳೆದುಕೊಂಡ ನಾಗೇಶ್ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಸಿದರು.
ವಂಚನೆ ಮತ್ತು ಕಮೀಷನ್ ಬಗ್ಗೆ ಪ್ರಶ್ನೆ ಮಾಡಿದ್ದೇ ತಡ ರೊಚ್ಚಿಗೆದ್ದ ಮಂಡಿ ವರ್ತಕ ನಾಗೇಶ್, ಅಕ್ಕಪಕ್ಕದ ಅಂಗಡಿಯ ಪ್ರಸಾದ್, ಪ್ರತಾಪ್, ಕಿಟ್ಟಿ, ನಾರಾಯಣಸ್ವಾಮಿ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ನಾಗೇಶ್ ಪರವಾಗಿ ಕೃಷ್ಣಪ್ಪ ನಿನ್ನ ಹಣ ಕೊಡಲ್ಲ. ಏನ್ ಮಾಡ್ತಿಯಾ ಮಾಡಿಕೋ ಎಂದ. ನನಗೆ ಆತಂಕವಾಯಿತು. ಜೋರಾಗಿ ಅಲ್ಲಿ ಗೊತ್ತಿರುವ ರೈತರನ್ನು ಕೂಗಿದೆ. ಅಷ್ಟರಲ್ಲಿ ಏಕಾಎಕಿ ಕೃಷ್ಣಪ್ಪ ನನ್ನ ಮುಖಕ್ಕೆ ಹೊಡೆದ. ಮಾರುಕಟ್ಟೆಯಲ್ಲಿ ಅಟ್ಟಾಡಿಸಿ ನನ್ನ ಮೇಲೆ ಹಲ್ಲೆ ನಡೆಸಿದರಲ್ಲದೆ ಬಟ್ಟೆ ಹರಿದು ಹೊಟ್ಟೆ, ಬೆನ್ನಿಗೆ ಥಳಿಸಿದರು. ಈ ವಿಷಯವನ್ನು ಎಪಿಎಂಸಿ ಮಾರುಕಟ್ಟೆಯಲ್ಲಿ ಹೇಳಿದರೆ ನಿನ್ನ ಜೀವ ತೆಗೆಯುತ್ತೇವೆ ಎಂದು ಬೆದರಿಸಿದರು. ಒಂದು ಕಡೆ ಕೂಡಿ ಹಾಕಿ ಮನಸೋ ಇಚ್ಛೆ ಥಳಿಸಿದರು ಎಂದು ಶ್ರೀನಿವಾಸಯ್ಯ ಅಳಲು ತೋಡಿಕೊಂಡರು.
ಬಾಗೇಪಲ್ಲಿ ಎಪಿಎಂಸಿ ಮಾರುಕಟ್ಟೆಯಲ್ಲಿ ನಾಗೇಶ್ ಮತ್ತು ಆತನ ಸಂಬಂಧಿಕರು ರೈತರು ತಂದ ಬೆಳೆ ಹರಾಜು ಮಾಡಲು ಬಿಡುವುದಿಲ್ಲ. ಮೋಸ, ವಂಚನೆ, ಹೆಚ್ಚು ಕಮೀಷನ್ ವಸೂಲಿ.. ಹೀಗೆ ರೈತರಿಗೆ ಮೋಸ ಮಾಡುತ್ತಾರೆ. ಅವರ ಲೈಸೆನ್ಸ್ ಅನ್ನು ಶಾಶ್ವತವಾಗಿ ರದ್ದು ಮಾಡಬೇಕು. ಇಂತಹ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು.
ಶ್ರೀನಿವಾಸಯ್ಯ, ಹಲ್ಲೆಗೊಳಗಾದ ಬೆಣ್ಣೆಪರ್ತಿ ರೈತ
ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..
Comments 1