ರೈತರನ್ನು ಕಡೆಗಣಿಸಿ ಮಂಡಿ ಗೂಂಡಾಗಳ ಪರ ನಿಂತ ಬಾಗೇಪಲ್ಲಿ ರಾಜಕಾರಣಿಗಳು; ರೈತನ ಮೇಲೆ ಹಲ್ಲೆ ನಡೆಸಿದ ಆರೋಪಿಗಳು ನ್ಯಾಯಾಲಯಕ್ಕೆ ಹಾಜರು, ಜಾಮೀನು
ಬಾಗೇಪಲ್ಲಿ/ಬೆಂಗಳೂರು: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಟೊಮೆಟೋ ಬೆಳೆಗಾರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಮಂಡಿ ಗೂಂಡಾಗಳು ಸಿಕ್ಕಿದ್ದು, ಸೋಮವಾರ ಅವರನ್ನು ಇಲ್ಲಿನ ಸ್ಥಳೀಯ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದ್ದರು. ಅವರಿಗೆ ಕೋರ್ಟ್ ಜಾಮೀನು ನೀಡಿದೆ.
ಶನಿವಾರದಂದು ಗುಡಿಬಂಡೆ ತಾಲೂಕಿನ ಬೆಣ್ಣೆಪರ್ತಿಯ ರೈತ ಶ್ರೀನಿವಾಸಯ್ಯ ಮೇಲೆ ದಾಳಿ ನಡೆಸಿ ಅವರನ್ನು ಗಾಯಗೊಳಿಸಿ ಪ್ರಾಣ ಬೆದರಿಕೆ ಹಾಕಿದ್ದ ಆರೋಪಿಗಳು, ಭಾನುವಾರ ಬಾಗೇಪಲ್ಲಿ ಠಾಣೆಯಲ್ಲಿ ಪ್ರತ್ಯಕ್ಷರಾದರು. ಪೊಲೀಸರು ಬಂಧಿಸಿದ್ದೇವೆ ಎಂದು ಹೇಳುತ್ತಿದ್ದಾರಾದರೂ, ಆರೋಪಿಗಳು ಶರಣಾದರು ಎಂದು ಕೆಲ ಮೂಲಗಳು ಹೇಳುತ್ತಿವೆ.
ಮಂಡಿ ವರ್ತಕರಾದ ನಾಗೇಶ್, ಕೃಷ್ಣಪ್ಪ, ಪ್ರತಾಪ್, ಕಿಟ್ಟಿ, ನಾರಾಯಣಸ್ವಾಮಿ, ಪ್ರಸಾದ್ ಎಂಬುವವರನ್ನು ಪೋಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಇದರ ಜತೆಗೆ ರೈತ ಶ್ರೀನಿವಾಸಯ್ಯನ ಮೇಲೆ ನಡೆದ ಮಾರಣಾಂತಿಕ ಹಲ್ಲೆಯನ್ನು ಮುಚ್ಚಿಹಾಕುವ ಅಥವಾ ಅದಕ್ಕೆ ತಿಪ್ಪೆ ಸಾರಿಸುವ ಪ್ರಯತ್ನಗಳನ್ನು ಪ್ರಭಾವೀ ರಾಜಕೀಯ ಶಕ್ತಿಗಳು ನಡೆಸಿದ್ದು, ಪ್ರಕರಣ ದಾಖಲಾಗದೇ ಹೊರಗೆಯೇ ರಾಜಿ ಪಂಚಾಯಿತಿ ನಡೆಸಿ ಮಂಡಿ ಗೂಂಡಾಗಳನ್ನು ರಕ್ಷಿಸಿಕೊಳ್ಳುವ ವ್ಯರ್ಥ ಪ್ತಯತ್ನಕ್ಕೆ ಕೆಲ ರಾಜಕಾರಣಿಗಳು ಯತ್ನಸಿರುವ ನಾಚಿಕೆಗೇಡಿನ ಬೆಳವಣಿಗೆಯೂ ನಡೆದಿದೆ.
ಮತ್ತೊಂದೆಡೆ ಬಾಗೇಪಲ್ಲಿ ಕ್ಷೇತ್ರದ ಪ್ರಭಾವೀ ರಾಜಕಾರಣಿ ಕಂ ಜನಪ್ರತಿನಿಧಿ ಸೇರಿ, ಅವರ ಸಂಬಂಧಿಕರೊಬ್ಬರು ಪೊಲೀಸ್ ಠಾಣೆ ಬಳಿಯೇ ಶ್ರೀನಿವಾಸಯ್ಯ ಮೇಲೆ ಒತ್ತಡ ಹೇರಿ ಕೆಲ ಲಕ್ಷ ರೂ.ಗಳಿಗೆ ರಾಜಿ ವ್ಯವಹಾರ ಕುದುರಿಸಲು ಯತ್ನಸಿದ ಹೇಯ ಕೃತ್ಯವೂ ಬೆಳಕಿಗೆ ಬಂದಿದೆ. ಹಣ ಪಡೆದು ರಾಜಿ ಮಾಡಿಕೊಳ್ಳಲು ಸ್ಪಷ್ಟವಾಗಿ ನಿರಾಕರಿಸಿದ ಶ್ರೀನಿವಾಸಯ್ಯ ಆರೋಪಿಗಳ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಖಡಕ್ ಆಗಿ ಹೇಳಿದ್ದಾರೆ.
ಅಲ್ಲದೆ; ತಾಲೂಕು ಮತ್ತು ಜಿಲ್ಲಾ ಮಟ್ಟದ ರೈತ ಮುಖಂಡರು ಸಂತ್ರಸ್ತ ರೈತನ ನೆರವಿಗೆ ಧಾವಿಸಿದ್ದಾರಲ್ಲದೆ, ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಿಲ್ಲವಾದರೆ ಉಗ್ರ ಪ್ರತಿಭಟನೆ ನಟಡೆಸುವುದಾಗಿ ಎಚ್ಚರಿಕೆ ನೀಡಿದ್ದರು. ಪರಿಣಾಮವಾಗಿ ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಮತ್ತೊಂದೆಡೆ, ರಾಜಿ ಮಾಡಿಕೊಳ್ಳುವಂತೆ ರೈತ ಶ್ರೀನಿವಾಸಯ್ಯ ಮೇಲೆ ರಾಜಕೀಯ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವರು, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆಂದು ಗೊತ್ತಾಗಿದೆ. ಅವರ ಮೊಬೈಲ್ ಗೆ ಕರೆ ಮಾಡಿದರೆ ನಾಟ್ ರೀಚಬಲ್ ಮೋಡ್ ನಲ್ಲಿತ್ತು. ಬೇರೆ ಬೇರೆ ರೀತಿಯಲ್ಲಿ ಅವರ ಮೇಲೆ ಒತ್ತಡ ಹೇರುವ, ಬೆದರಿಕೆ ಹಾಕುವ ತಂತ್ರಗಳನ್ನು ಅನುಸರಿಸಲಾಗುತ್ತಿದೆ ಎಂದು ಅವರ ಸಂಬಂಧಿಕರೊಬ್ಬರು ತಿಳಿಸಿದ್ದು, ಪೊಲೀಸರು ಶ್ರೀನಿವಾಸಯ್ಯ ಅವರಿಗೆ ರಕ್ಷಣೆ ನೀಡಬೇಕು ಎನ್ನುತ್ತಾರೆ.
ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..
ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ
ರೈತನ ವಿರುದ್ಧ ನಡೆದ ಹಲ್ಲೆ ಪ್ರಕರಣವನ್ನು ಮುಚ್ಚಿಹಾಕಿಸಿ ಇಡೀ ಪ್ರಕರಣವನ್ನು ರಾಜಿ ಹೆಸರಿನಲ್ಲಿ ಹಳ್ಳ ಹಿಡಿಸಲು ಪ್ರಯತ್ನಪಟ್ಟ ಜನಪ್ರತಿನಿಧಿ ಹಾಗೂ ಅವರ ಭಾವಮೈಧುನನ ಕಥೆ ಇದೀಗ ಇಡೀ ಬಾಗೇಪಲ್ಲಿ ಕ್ಷೇತ್ರದಲ್ಲಿ ರೈತರು ಆಕ್ರೋಶದಿಂದ ಮಾತನಾಡಿಕೊಳ್ಳುತ್ತಿದ್ದಾರೆ. ಮತಕ್ಕಾಗಿ ರೈತರ ಮನೆ ಬಾಗಿಲಿಗೆ ಬಂದು ʼಸೇವೆʼಯ ಪೋಸು ಕೊಡುವ ಆ ಜನಪ್ರತಿನಿಧಿಯು ಮಂಡಿ ಮಾಲೀಕರ ಪರವಾಗಿ ನಿಂತ ಬಗ್ಗೆ ಇಡೀ ರೈತ ಸಮೂಹದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಬಾಗೇಪಲ್ಲಿ ಮಾರುಕಟ್ಟೆಯಲ್ಲಿ ಕಮೀಷನ್ ಮತ್ತು ತೂಕದಲ್ಲಿ ಮೋಸ ಮಾಡುವುದು ಅವ್ಯಾಹತವಾಗಿ ನಡೆದುಕೊಂಡು ಬರುತ್ತಿದ್ದರೂ ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಚಕಾರ ಎತ್ತದಿರುವುದು ಕೂಡ ಜನರ ಆಕ್ರೋಶಕ್ಕೆ ಕಾರಣವಾಗಿದೆ. ರೈತನ ಮೇಲೆ ಸಾಯುವ ರೀತಿಯಲ್ಲಿ ಮಂಡಿ ಗೂಂಡಾಗಳು ದಾಳಿ ನಡೆಸಿದರೂ ಆ ಬಗ್ಗೆ ಇನ್ನು ಒಂದು ಹೇಳಿಕೆಯನ್ನೂ ನೀಡದ ಶಾಸಕರ ಬಗ್ಗೆ ಜನರ ತಾಳ್ಮೆ ಕಟ್ಟೆಯೊಡೆಯುತ್ತಿದೆ.
ಡಿಸೆಂಬರ್ 16ಕ್ಕೆ ಪ್ರತಿಭಟನೆ
ಬಾಗೇಪಲ್ಲಿ ಎಪಿಎಂಸಿ ಮಾರುಕಟ್ಟೆಯಲ್ಲಿ10 ರೂ. ಕಮೀಷನ್ ಹಾಗೂ ಬಾಕ್ಸ್ ಗೆ 2 ರೂ. ಬಾಡಿಗೆ ಪಡೆಯುತ್ತಿರುವುದರ ವಿರುದ್ಧ ಬಾಗೇಪಲ್ಲಿ, ಗುಡಿಬಂಡೆ ತಾಲೂಕುಗಳ ಸಾವಿರಾರು ರೈತರು ಪ್ರತಿಭಟನೆ ನಡೆಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಎಪಿಎಂಸಿ ಕಾಯ್ದೆಗಳನ್ನು ಉಲಂಘನೆ ಮಾಡಿ, ರೈತರಿಗೆ ಮೋಸ ಮಾಡುತ್ತಿರುವ ಎಪಿಎಂಸಿ ವರ್ತಕರ ವಿರುದ್ಧ ರೈತಸಂಘ ಹಾಗೂ ಮತ್ತಿತರೆ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಲಿದ್ದಾರೆ.
ರಾಜಕೀಯ ಒತ್ತಡಕ್ಕೆ ಮಣಿಯದ ಪೊಲೀಸರು
ಮಂಡಿ ವರ್ತಕರ ವಿರುದ್ಧ ಪೊಲೀಸರು ಎಫ್.ಐ.ಆರ್ ದಾಖಲಿಸುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದರೆ ಹಾಗೂ ಅವರನ್ನು ಬಂಧಿಸದಂತೆ ಪೊಲೀಸರ ಮೇಲೆ ಒತ್ತಡವನ್ನು ಹೇರಲಾಗಿತ್ತು ಎನ್ನುವ ಅಂಶ ಬೆಳಕಿಗೆ ಬಂದಿದೆ. ಇಂಥ ಯಾವ ಒತ್ತಡಕ್ಕೂ ಕೇರ್ ಮಾಡದ ಪೊಲೀಸರು ಅಪರಾಧಿಗಳನ್ನು ಬಂಧಿಸಿದ್ದಾರೆಂದು ಕೆಲ ಮೂಲಗಳು ಸಿಕೆನ್ಯೂಸ್ ನೌ ಗೆ ತಿಳಿಸಿವೆ. ಅಲ್ಲದೆ, ಆರೋಪಿಗಳನ್ನು ಬಂಧಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ರೈತರು ಎಚ್ಚರಿಕೆ ನೀಡಿದ್ದರು.
ರಾಜ್ಯವ್ಯಾಪಿ ಖಂಡನೆ
ಬಾಗೇಪಲ್ಲಿ ಎಪಿಎಂಸಿ ಮಾರುಕಟ್ಟೆ ರೈತರ ಮೇಲೆ ಹಲ್ಲೆ ಖಂಡಿಸಿ ರಾಜ್ಯಾದ್ಯಂತ ಖಂಡನೆ ವ್ಯಕ್ತವಾಗಿದೆ. ಮಂಡಿ ವರ್ತಕರ ಕಮೀಷನ್ ದಂಧೆ ವಿರುದ್ಧ ರಾಜ್ಯ ರೈತ ಸಂಘದಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಇದರ ಬೆನ್ನೆಲ್ಲೆ ಡಿ.16ರಂದು ಬೆಣ್ಣೆಪರ್ತಿ ರೈತ ಶ್ರೀನಿವಾಸಯ್ಯ ಪರವಾಗಿ ಪ್ರತಿಭಟನೆ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ರೈತ ಮೂಲಗಳಿಂದ ಸಿಕೆನ್ಯೂಸ್ ನೌ ಗೆ ಲಭ್ಯವಾಗಿದೆ.
ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..