ಪ್ರಾಚ್ಯವಸ್ತು ಇಲಾಖೆಯ ದಿವ್ಯನಿರ್ಲಕ್ಷ್ಯದಿಂದ ಅಳಿವಿನಂಚಿನಲ್ಲಿ ಸ್ಮಾರಕಗಳು
By Guru Prasad Rao Hawaldar
ರಾಜ್ಯದ ವಿಶ್ವ ಪಾರಂಪರಿಕ ತಾಣ ಹಂಪಿ ಮತ್ತೂ ಹಾಳು ಹಂಪಿಯಾಗಿ ಮುಂದುವರಿದಿದೆ. ಬಹಮನಿ ಸುಲ್ತಾನರಿಂದ ದಾಳಿಗೊಳಗಾಗಿ ಪತನವಾದ ಈ ಶ್ರೀಮಂತ ಸಾಮ್ರಾಜ್ಯದಲ್ಲಿ ಅಳಿದುಳಿದ ಕುರುಹುಗಳು ಸರಕಾರ, ಪ್ರಾಚ್ಯವಸ್ತು ಇಲಾಖೆಯ ದಿವ್ಯ ನಿರ್ಲಕ್ಷ್ಯದಿಂದ ಮತ್ತಷ್ಟು ಕುಗ್ಗಿ ಹೋಗುತ್ತಿದೆ. ವರ್ಷಕ್ಕೊಂದು ಹಂಪಿ ಉತ್ಸವ ಮಾಡಿ ಕೈತೊಳೆದುಕೊಳ್ಳುವ ಸರಕಾರಕ್ಕೆ ಆತ್ಮಸಾಕ್ಷಿ ಎನ್ನುವುದಿದ್ದರೆ ಒಮ್ಮೆ ಇತ್ತ ನೋಡಬೇಕು.
ನೀವು ಎಂದಾದರೂ ಪ್ರಾಚೀನ ಕೋಟೆ ಕೊತ್ತಲಗಳು, ಅವಶೇಷಗಳು, ಪುರಾತನ ನಾಗರಿಕತೆಯನ್ನು ಪರಿಚಯಿಸುವ ರಚನೆಗಳಿಗೆ ಭೇಟಿ ನೀಡಿದ್ದರೆ ಖಂಡಿತವಾಗಿಯೂ ನಿಮ್ಮ ಮನದಲ್ಲಿ ಒಂದು ವಿಚಿತ್ರ ಭಾವನೆ, ಕುತೂಹಲ, ತರಹೇವಾರಿ ಯೋಚನೆಗಳು ಮೂಡೇ ಮೂಡಿರುತ್ತವೆ. ಹೌದು, ಏಕೆಂದರೆ ಇವು ಗತಕಾಲದ ತಮ್ಮ ವೈಭವವನ್ನು ಹೇಳಲು ಪ್ರಯತ್ನಿಸುತ್ತಿರುತ್ತವೆ.
ಇಂತಹ ಐತಿಹಾಸಿಕ ಪ್ರಾಮುಖ್ಯತೆಯುಳ್ಳ ಅದೆಷ್ಟೋ ರಚನೆಗಳು, ಸ್ಥಳಗಳು ಭಾರತದಾದ್ಯಂತ ಕಾಣಬಹುದು. ಅವುಗಳಲ್ಲಿಯೂ ಸಹ ಕೆಲ ಅತ್ಯಂತ ಶ್ರೀಮಂತ ವಾಸ್ತುಕಲೆ, ಇತಿಹಾಸ, ಪ್ರಾಚೀನ ಕಾಲದಲ್ಲಿಯೇ ಉನ್ನತ ಮಟ್ಟದ ಜೀವನಶೈಲಿಗಾಗಿ ವಿಶ್ವವಿಖ್ಯಾತಿಯನ್ನೆ ಪಡೆದಿವೆ. ಅಂತಹ ಕೆಲ ಅದ್ಭುತ ಸ್ಥಳಗಳ ಪೈಕಿ ಒಂದಾಗಿದೆ ಕರ್ನಾಟಕದ ಹೆಮ್ಮೆಯ ಹಂಪಿ ಅಥವಾ ಹಂಪೆ.
ಬಳ್ಳಾರಿಯ ಹೊಸಪೇಟೆಯ ಬಳಿ ಇರುವ ಊರು ಹಂಪಿಯಾಗಿದ್ದು, ಶ್ರೀಮಂತ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಯುನೆಸ್ಕೋದ ವಿಶ್ವ ಪರಂಪರೆಯ ತಾಣ ಎಂದು ಕರೆಯಲ್ಪಟ್ಟ ಈ ಪ್ರದೇಶವು ಕರ್ನಾಟಕದ ಹೆಮ್ಮೆಯ ತಾಣವೂ ಆಗಿದೆ. ಹಂಪಿ ಎಂದಾಕ್ಷಣ ನೆನಪಾಗುವುದು ಸುಂದರವಾದ ವಾಸ್ತುಶಿಲ್ಪ, ಕಲೆ, ಸಂಸ್ಕೃತಿ, ವಿಜಯನಗರ ಸಾಮ್ರಾಜ್ಯ. ಹಂಪಿ ಪರಿಸರದಲ್ಲಿರುವ ಪ್ರತಿಯೊಂದು ಸ್ಮಾರಕಗಳು ಅತ್ಯಂತ ವಿಸ್ಮಯಕಾರಿಯಿಂದ ಕೂಡಿದೆ.
ಭಾರತ ಕಂಡ ಅತ್ಯದ್ಭುತ ರಾಜ ಸಾಮ್ರಾಜ್ಯಗಳ ಪೈಕಿ ವಿಜಯನಗರ ಸಾಮ್ರಾಜ್ಯವೂ ಸಹ ಒಂದು. ಶ್ರೀಕೃಷ್ಣದೇವರಾಯರ ಕಾಲದಲ್ಲಿ ಅತ್ಯಂತ ಸುಸ್ಥಿತಿಯಲ್ಲಿದ್ದ ಈ ಸಾಮ್ರಾಜ್ಯ ಶ್ರೀಮಂತ ಸಾಮ್ರಾಜ್ಯವಾಗಿತ್ತು. ಬೀದಿಬದಿಗಳಲ್ಲೆ ರತ್ನ, ವೈಢೂರ್ಯ, ವಜ್ರಗಳ ವ್ಯಾಪಾರ ನಡೆಯುತ್ತಿತ್ತೆಂದರೆ ನೀವೇ ಊಹಿಸಬಹುದು ವಿಜಯನಗರದ ವೈಭೋಗವನ್ನು.
ಹೀಗೆ ಆರ್ಥಿಕ ಶ್ರೀಮಂತಿಕೆ ಒಂದೆಡೆಯಾದರೆ, ಶಿಲ್ಪಕಲೆ ದೃಷ್ಟಿಯಿಂದ ಇನ್ನಷ್ಟು ಹೆಚ್ಚಾಗಿ ವಿಕಸಿತಗೊಂಡಿದ್ದು ಹೊರಗಿನವರೂ ಒಂದೊಮ್ಮೆಯಾದರೂ ಹೊಟ್ಟೆಕಿಚ್ಚು ಪಡುವಂತೆ ನಳನಳಿಸುತ್ತಿದ್ದವು ಇಲ್ಲಿನ ಶಿಲೆಯಲ್ಲಿ ಮೂಡಿದ ಶಿಲ್ಪಕಲಾಕೃತಿಗಳು. ಈ ಸಾಮ್ರಾಜ್ಯದ ಒಂದೊಂದೂ ಮೂಲೆಗಳಲ್ಲೂ ನಿಪುಣ ಶಿಲ್ಪಕಲಾಕಾರರ ಅದ್ಭುತ ರಚನೆಗಳು ಸುಂದರವಾಗಿ ರೂಪಗೊಂಡಿದ್ದವು. ಕಾಲ ಕ್ರಮೇಣ ವಿಜಯನಗರದ ವರ್ಚಸ್ಸು ಕಡಿಮೆಯಾದಂತೆ ಹಲವಾರು ಬಾರಿ ಶತ್ರುಗಳ ದಾಳಿಗೆ ಒಳಗಾಗಿ, ಕಾಲದ ಹಿಡಿತಕ್ಕೆ ನಡಿಗೆಯನ್ನು ನಡೆದುಕೊಂಡು ಬಂದಿತಾದರೂ ತನ್ನ ವೈಭವ ಸಾರುವ ಇನ್ನೂ ಎಷ್ಟೋ ರಚನೆಗಳನ್ನು ಉಳಿಸಿಕೊಂಡೂ ಸಹ ಬಂದಿದೆ.
ಹಂಪಿ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನ, ಕಡಲೆಕಾಳು ಗಣೇಶ, ಸಾಸಿವೆಕಾಳು ಗಣೇಶ, ಬಡವಲಿಂಗ, ಉಗ್ರನರಸಿಂಹ, ಕಮಲ್ ಮಹಲ್, ಆನೆಲಾಯ, ಮಹಾನವಮಿ ದಿಬ್ಬ, ರಾಣಿಸ್ನಾನ ಗೃಹ, ವಿಜಯವಿಠ್ಠಲ ದೇವಸ್ಥಾನ, ಸಪ್ತಸ್ವರ ಮಂಟಪ, ಕಲ್ಲಿನ ತೇರು, ಪುರಂದರ ದಾಸರ ಮಂಟಪ, ವರಾಹ ದೇವಸ್ಥಾನ, ಅಚ್ಯುತರಾಯ ದೇವಸ್ಥಾನ, ಉದ್ಧಾನ ವೀರಭದ್ರೇಶ್ವರ ದೇವಸ್ಥಾನ, ಹಜಾರ ರಾಮ ದೇವಸ್ಥಾನ, ರಾಮಲಕ್ಷ್ಮಣರ ದೇವಸ್ಥಾನ, ಅಚ್ಯುತರಾಯ ದೇವಸ್ಥಾನ, ಕೃಷ್ಣದೇವಸ್ಥಾನ, ಪುಷ್ಕರಣಿಗಳು ಸೇರಿದಂತೆ ವಿವಿಧ ಸ್ಮಾರಕಗಳ ಸೊಬಗನ್ನು ಪ್ರವಾಸಿಗರು ನೋಡಲು ದೇಶ-ವಿದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಹಂಪಿಯ ಸ್ಮಾರಕಗಳನ್ನು ಕಣ್ತುಂಬಿಸಿಕೊಳ್ಳುತ್ತಾರೆ.
ವಿದೇಶಿ ಪ್ರವಾಸಿಗರು ಅಕ್ಟೋಬರ್ʼನಿಂದ ಮಾರ್ಚ್ʼವರೆಗೆ ಹಂಪಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಪ್ರವಾಸಿಗರ ಹೆಚ್ಚಳದಿಂದ ಸ್ಥಳೀಯ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತಿದೆ. ಸ್ಥಳೀಯ ವ್ಯಾಪಾರಸ್ಥರಿಗೆ ಒಂದಿಷ್ಟು ವ್ಯಾಪಾರ ಜೋರಾಗಿ ನಡೆಯುತ್ತದೆ. ಸ್ಥಳೀಯ ಹೋಟೆಲ್ʼಗಳು, ರೆಸ್ಟೋರೆಂಟ್, ಟ್ಯಾಕ್ಸಿ ವಾಹನಗಳು, ಪ್ರವಾಸಿ ಮಾರ್ಗದರ್ಶಿಗಳು, ರಸ್ತೆ ಬದಿಯ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಅನುಕೂಲವಾಗಿದೆ.
ಕೆನಡಾ, ಇಟಲಿ, ಇಂಗ್ಲೆಡ್, ಅಮೆರಿಕ, ಫ್ರಾನ್ಸ್, ನೈಜೀರಿಯಾ, ದಕ್ಷಿಣ ಆಫ್ರಿಕಾ, ಜರ್ಮನಿ, ಇಸ್ರೇಲ್ ಹಾಗೂ ಇತರೆ ದೇಶಗಳಿಂದ ಹಂಪಿಗೆ ನಿತ್ಯವೂ ನೂರಾರು ಪ್ರವಾಸಿಗರು ಪ್ರತಿವರ್ಷವೂ ಭೇಟಿ ನೀಡಲಿದ್ದಾರೆ. ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು, ಉತ್ತರ ಪ್ರದೇಶ, ಮಹಾರಾಷ್ಟ್ರ, ಕೇರಳ ಸೇರಿದಂತೆ ವಿವಿಧ ರಾಜ್ಯಗಳಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಹಂಪಿಗೆ ಭೇಟಿ ನೀಡುತ್ತಾರೆ. ವಿಶ್ವ ವಿಖ್ಯಾತ ಹಂಪಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ದಿನದಿನಕ್ಕೂ ಅಧಿಕ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದ್ದು, ಸ್ಥಳೀಯರು ಹಾಗೂ ವಿದೇಶಿ ಪ್ರವಾಸಿಗರು ಸೇರಿ ಈ ವರ್ಷ ಜನದಟ್ಟಣೆ ಹೆಚ್ಚಾಗಿ ಕಂಡು ಬರುತ್ತಿದೆ.
ರಾಜ್ಯದ ಇತರೆ ಪ್ರವಾಸಿ ತಾಣಗಳಿಗೆ ಹೋಲಿಸಿದರೆ ಹಂಪಿಗೆ ಬರುವರ ಸಂಖ್ಯೆ ಹೆಚ್ಚು. ಹಂಪಿಯ ಕೆಲ ಸ್ಮಾರಕಗಳನ್ನು ನೋಡಲು ಪ್ರವಾಸಿಗರಿಂದ ಶುಲ್ಕವನ್ನು ಸ್ವೀಕರಿಸಲಾಗುತ್ತಿದೆ. ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಪ್ರಕಾರ 2017-18ನೇ ಸಾಲಿನಲ್ಲಿ ಭಾರತೀಯ ಪ್ರವಾಸಿಗರು 5,95,903 ಮತ್ತು ವಿದೇಶಿ 46,303 ಪ್ರವಾಸಿಗರು, 2018-19ನೇ ಸಾಲಿನಲ್ಲಿ ಭಾರತೀಯ ಪ್ರವಾಸಿಗರು 6,22,040 ಮತ್ತು 30,811 ವಿದೇಶಿ ಪ್ರವಾಸಿಗರು, ಪ್ರಸಕ್ತ ವರ್ಷ ಅಂದರೆ 2019-20ರ ನವೆಂಬರ್ ತಿಂಗಳವರೆಗೆ ದೇಶಿಯ 3,15,418 ಪ್ರವಾಸಿಗರು ಮತ್ತು 10,424 ವಿದೇಶಿ ಪ್ರವಾಸಿಗರು ಹಂಪಿಗೆ ಭೇಟಿ ನೀಡಿದ್ದಾರೆ. ಪ್ರತಿ ತಿಂಗಳು 2 ಲಕ್ಷಕ್ಕೂ ಅಧಿಕ ಪ್ರವಾಸಿಗರು ಹಂಪಿಗೆ ಬಂದು ಹೋಗುತ್ತಿದ್ದಾರೆ.
ಹಂಪಿ ಪ್ರವಾಸೋದ್ಯಮದಿಂದ ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಸರ್ಕಾರಕ್ಕೆ ವರ್ಷಕ್ಕೆ ನೂರಾರು ಕೋಟಿ ಆದಾಯ ಹರಿದು ಬರುತ್ತಿದೆ. ಆದರೆ ಹಂಪಿಗೆ ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಗರೂ ಇಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳು ಇಲ್ಲದಿರುವುದನ್ನು ನೋಡಿ ಬೇಸರಗೊಳ್ಳುತ್ತಾರೆ.
ಪ್ರವಾಸಿಗರು ಹೊಸಪೇಟೆಯ ಲಾಡ್ಜ್ʼಗಳಲ್ಲಿ ವಾಸ್ತವ್ಯ ಮಾಡಿ ಹಂಪಿಯನ್ನು ವೀಕ್ಷಿಸುವಂತಾಗಿದೆ. ಹಂಪಿಯಲ್ಲಿ ಯಾವುದಾದರೂ ಮಾಹಿತಿ ಕೇಳಬೇಕೆಂದರೂ ಒಂದು ಸಣ್ಣ ಮಾಹಿತಿ ಕೇಂದ್ರವಿಲ್ಲ. ಹೊಸಪೇಟೆಯಲ್ಲಿ ಹಂಪಿಯ ಬಗ್ಗೆ ಮಾಹಿತಿ ಪಡೆದುಕೊಂಡು ಹೋಗುವುದಕ್ಕೂ ಹೊಸಪೇಟೆಯಲ್ಲೂ ಮಾಹಿತಿ ಕೇಂದ್ರ ಇಲ್ಲ. ಹೊಸಪೇಟೆಯಲ್ಲಿರುವ ಮಾಹಿತಿ ಕೇಂದ್ರವನ್ನು ಕಮಲಾಪುರದ ಕಮಲ್ ಮಹಲ್ ಬಳಿ ಇರುವ ರಾಜ್ಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಕಟ್ಟಡದಲ್ಲಿ ಸ್ಥಳಾಂತರಿಸಲಾಗಿದೆ.
ಹಂಪಿಯು ಕೇವಲ ಪ್ರವಾಸಿ ತಾಣವಲ್ಲ, ಶ್ರೀ ಕ್ಷೇತ್ರವೂ ಆಗಿದೆ. ಹಂಪಿ ವಿರೂಪಾಕ್ಷ ದೇವಾಲಯಕ್ಕೆ ಪ್ರತಿ ಹುಣ್ಣುಮೆ, ಅಮಾವಾಸ್ಯೆ, ಜಾತ್ರೆ ಸಂದರ್ಭದಲ್ಲಿ ಸುತ್ತ ಮುತ್ತಲಿನಿಂದ ಹೊರ ಜಿಲ್ಲೆ ರಾಜ್ಯದ ನಾನಾ ಕಡೆಗಳಿಂದ ಸಹಸ್ರಾರು ಭಕ್ತರು ಆಗಮಿಸುತ್ತಾರೆ. ಅದರೆ ಅವರಲ್ಲಿ ಲಾಡ್ಜ್, ಹೋಂ ಸ್ಟೇಗಳಲ್ಲಿ ಉಳಿದುಕೊಳ್ಳಲು ಹಣವಿರುವುದಿಲ್ಲ. ಇಂತಹ ಸಂದರ್ಭಗಳಲ್ಲಿ ದೇವಾಲಯದ ಅವರಣಗಳಲ್ಲಿ ಉಳಿದುಕೊಳ್ಳುತ್ತಾರೆ. ಈ ಸಮಯದಲ್ಲಿ ಪ್ರಕೃತಿ ಕರೆಯಂತಹ ಮೂತ್ರ ವಿಸರ್ಜನೆ, ಶೌಚಾದಿಗಳನ್ನು ಮಾಡಲು ದೇವಸ್ಥಾನದ ಬಳಿ ಶೌಚಾಲಯಗಳೇ ಇಲ್ಲ. ಅವರಿಗೆ ಬಯಲೇ ಗತಿಯಾಗಿದೆ. ಅಲ್ಲದೆ ಅತ್ಯಂತ ಕೆಟ್ಟ ಸ್ಥಿತಿಯಲ್ಲಿರುವ ಮೂಲಭೂತ ಸೌಕರ್ಯಗಳ ವ್ಯವಸ್ಥೆಗಳೂ ವಿದೇಶಿ ಪ್ರವಾಸಿಗರಿಗೆ ಒಂದು ದೊಡ್ಡ ಸಮಸ್ಯೆಯಾಗಿ ಕಾಡಿದೆ. ಪ್ರವಾಸೋದ್ಯಮ ಇಲಾಖೆಯಿಂದ ಹಂಪಿಗೆ ಬರುವಂತಹ ಪ್ರವಾಸಿಗರಿಗೆ ಬೇಕಾಗುವ ಮಾಹಿತಿಯನ್ನು ಒದಗಿಸಬೇಕು. ಪ್ರವಾಸೋದ್ಯಮದ ಅಭಿವೃದ್ಧಿ ಯೋಜನೆಯನ್ನು ಕೈಗೆತ್ತಿಕೊಳ್ಳುವ ಸಂದರ್ಭದಲ್ಲಿ ಸರಕಾರ ಇದನ್ನೆಲ್ಲ ಗಮನಿಸಬೇಕು.
ಕೋವಿಡ್ ಸಮಯದಲ್ಲಿ ಕಳೆದ ವರ್ಷ ಸಾಂಕ್ರಾಮಿಕ ರೋಗ ಹರಡಿದ ನಂತರ ಪ್ರವಾಸಿಗರಿಗೆ ಹಂಪಿಯನ್ನು ಎರಡು ಬಾರಿ ಮುಚ್ಚಲಾಯಿತು. ಕೋವಿಡ್ʼನ ಎರಡನೇ ಅಲೆ ಸಮಯದಲ್ಲಿ ಹಂಪಿಯನ್ನು ಎರಡು ತಿಂಗಳಿಗಿಂತ ಹೆಚ್ಚು ಕಾಲ ಮುಚ್ಚಲಾಯಿತು. ಇದರಿಂದಾಗಿ ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡು ಜೀವನ ನಡೆಸುತ್ತಿದ್ದ ಸ್ಥಳೀಯ ವ್ಯಾಪಾರಸ್ಥರಿಗೆ ಹೊಡೆತ ಬಿತ್ತು. ಸ್ಥಳೀಯ ಹೋಟೆಲ್ʼಗಳು, ರೆಸ್ಟೋರೆಂಟ್, ಟ್ಯಾಕ್ಸಿ ವಾಹನಗಳು, ಪ್ರವಾಸಿ ಮಾರ್ಗದರ್ಶಿಗಳು, ರಸ್ತೆ ಬದಿಯ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಬದುಕು ಅಧೋಗತಿಗೆ ಇಳಿಯಿತು. ಈ ಸಂದರ್ಭದಲ್ಲಿ ಇನ್ಫೋಸಿಸ್ ಸಂಸ್ಥೆಯ ಸುಧಾಮೂರ್ತಿ ಅವರು ಹಂಪಿಯ ಗೈಡ್ʼಗಳಿಗೆ ಸಹಾಯ ಹಸ್ತ ಚಾಚಿದ್ದರು. ನಂತರ ಎಚ್ಚೆತ್ತ ಸರ್ಕಾರ ಸಹಾಯ ಧನ ನೀಡಿತು. ನಂತರ ಕೋವಿಡ್ ಕಡಿಮೆಯಾದ ನಂತರ ಭಾರತೀಯ ಪುರಾತತ್ವ ಇಲಾಖೆ (ಎಎಸ್ಐ) ಜೂನ್ ಮಧ್ಯದಲ್ಲಿ ಕರ್ನಾಟಕದಲ್ಲಿ ಸ್ಮಾರಕಗಳನ್ನು ತೆರೆಯುವುದಾಗಿ ಘೋಷಿಸಿದ ನಂತರ, ಪ್ರವಾಸಿಗರ ಸಂಖ್ಯೆ ಹೆಚ್ಚಾಯಿತು. ಇದರಿಂದಾಗಿ ಹಂಪಿ ಬಳಿ ಹೆಚ್ಚಿನ ಹೋಂ ಸ್ಟೇಗಳನ್ನು ಪ್ರಾರಂಭವಾದವು.
ಹಂಪಿ ಸ್ಮಾರಕಗಳ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಸಾವಿರಾರು ಗಡಿ ದಾಟಿತ್ತು. ಶನಿವಾರ, ಭಾನುವಾರ, ಹಾಲಿಡೇ ಸೇರಿ ಸಾಲು ರಜೆಗಳು ಸಿಕ್ಕಾಗ ಬೆಂಗಳೂರು, ಮೈಸೂರು ಸೇರಿದಂತೆ ನೆರೆಯ ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡು ಸೇರಿ ದೇಶದ ನಾನಾ ಭಾಗ ಮತ್ತು ವಿದೇಶಗಳಿಂದಲೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಹಂಪಿಗೆ ಆಗಮಿಸಿದ್ದರು. ಆದರೆ, ಹಂಪಿಯಲ್ಲಿ ವಾಸ್ತವ್ಯ, ಊಟ-ಉಪಚಾರ ಸೇರಿ ಕುಡಿವ ನೀರಿಗೂ ತತ್ವಾರ ಉಂಟಾಗಿದೆ. ಇದರಿಂದ ಪ್ರವಾಸಿಗರು ಸ್ಮಾರಕ ವೀಕ್ಷಣೆ ಬಳಿಕ ಧಣಿವಾರಿಸಿಕೊಳ್ಳಲು ಆಗದೇ ಪರದಾಡಿದ್ದರು.
ಮೂಲಭೂತ ಸೌಕರ್ಯಗಳ ಕೊರತೆ
ಪ್ರತೀ ವರ್ಷ 2 ಲಕ್ಷಕ್ಕೂ ಅಧಿಕ ಪ್ರವಾಸಿಗರು ಬರುವ ಹಂಪಿಗೆ ಹಲವೆಡೆ ಶೌಚಾಲಯಗಳ ಕೊರತೆ ಇರುವುದರಿಂದ ಸಾಕಷ್ಟು ಪ್ರವಾಸಿಗರು ಸ್ಮಾರಕಗಳ ಹಿಂದೆಯೇ ಮಲಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಇದರಂತೆ ಶೌಚಾಲಯ ಅಭಿವೃದ್ಧಿ, ಸ್ಮಾರಕಗಳು, ಕುಡಿಯುವ ನೀರಿನ ಸೌಲಭ್ಯ, ರಸ್ತೆ ಮಾರ್ಗಗಳ ಅಭಿವೃದ್ಧಿ, ಅಗತ್ಯವರಿಸುವ ಆಸನಗಳು, ಪಾರ್ಕಿಂಗ್ ವ್ಯವಸ್ಥೆಗಳು, ಟಿಕೆಟ್ ಕೌಂಟರ್ʼಗಳು, ಕಸದ ಬುಟ್ಟಿಗಳು ಹಾಗೂ ಕ್ಯೂ ನಿರ್ವಹಣೆ, ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕಿದೆ.
₹ 500 ಕೋಟಿ ವೆಚ್ಚದಲ್ಲಿ ಹಂಪಿಯ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್ ತಯಾರಿಸಲಾಗಿದೆ’ ಎಂದು ಪ್ರವಾಸೋದ್ಯಮ ಸಚಿವರು ತಿಳಿಸಿದ್ದರು. ಹಂಪಿ ಬಳಿ ಸರ್ಕಾರಕ್ಕೆ ಸೇರಿದ 200 ಎಕರೆ ಜಾಗದಲ್ಲಿ ಸುಸಜ್ಜಿತ ತ್ರಿತಾರ ಹೋಟೆಲ್ ನಿರ್ಮಿಸಲಾಗುವುದು. ಅದಕ್ಕೆ ₹18ರಿಂದ 20 ಕೋಟಿ ವೆಚ್ಚವಾಗಲಿದೆ. ವಾಹನ ನಿಲುಗಡೆಗೆ ಪಾರ್ಕಿಂಗ್, ಹೆಲಿಪ್ಯಾಡ್, ಥೀಮ್ ಪಾರ್ಕ್ ಹಾಗೂ ಒಂದು ಸಾವಿರ ವಿದ್ಯಾರ್ಥಿಗಳು ಉಳಿದುಕೊಳ್ಳಲು ಕಟ್ಟಡ ನಿರ್ಮಿಸಲಾಗುವುದು. ಅದಕ್ಕೆ ಬಹಳ ಕಡಿಮೆ ದರ ನಿಗದಿಪಡಿಸಲಾಗುವುದು. ಹಂಪಿಯ ಇತಿಹಾಸ ಯುವಜನಾಂಗಕ್ಕೆ ತಿಳಿಸುವುದು ಇದರ ಉದ್ದೇಶವಾಗಿದೆ.
ರಾಜ್ಯದಲ್ಲಿ ಮತ್ತೊಂದು ಹಂಪಿ ನಿರ್ಮಿಸಲು ಆಗುವುದಿಲ್ಲ. ಆದರೆ, ಅಲ್ಲಿ ಹೆಚ್ಚಿನ ಮೂಲಸೌಕರ್ಯ ಕಲ್ಪಿಸಿ ಅಧಿಕ ಪ್ರವಾಸಿಗರನ್ನು ಆಕರ್ಷಿಸಲು ಯೋಜನೆ ಹಾಕಿಕೊಳ್ಳಲಾಗುತ್ತಿದೆ. ಹಂಪಿ ಮಾಸ್ಟರ್ ಪ್ಲ್ಯಾನ್ ಪರಿಷ್ಕರಣೆಗೊಂಡ ನಂತರ ಹೋಂ ಸ್ಟೇಗಳಿಗೆ ಹೆಚ್ಚಿನ ಉತ್ತೇಜನ ನೀಡಲಾಗುವುದು. ಹೋಂ ಸ್ಟೇಗಳಿಂದ ಪರಿಸರಕ್ಕೆ ಯಾವುದೇ ತೊಂದರೆ ಆಗುವುದಿಲ್ಲ.
ಪ್ರವಾಸಿಗರಿಗೂ ಉಳಿದುಕೊಳ್ಳಲು ಅನುಕೂಲವಾಗುತ್ತದೆ ಹಂಪಿ ಮಾಸ್ಟರ್ ಪ್ಲ್ಯಾನ್ ಪರಿಷ್ಕರಣೆ ಕೆಲಸ ಪ್ರಗತಿಯಲ್ಲಿದ್ದು, ಎರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಸಚಿವರು ತಿಳಿಸಿದ್ದರು. ಅದರೆ ಅವರು ಹೇಳಿ ತಿಂಗಳುಗಳೇ ಕಳೆದಿವೆ. ಯಾವ ಯೋಜನೆಯ ಮಾಸ್ಟರ್ ಪ್ಲಾನ್ ಜಾರಿಗೆ ಬಂದಿಲ್ಲ. ಪ್ರತಿ ಬಾರಿ ಮಂತ್ರಗಳು ಉನ್ನತ ಮಟ್ಟದ ಅಧಿಕಾರಿಗಳು ಭೇಟಿ ನೀಡುತ್ತಲೇ ಇರುತ್ತಾರೆ. ಅವರಿಗೆ ಇದಾವುದೂ ಕಣ್ಣಿಗೆ ಕಾಣದೇ ಇರುವುದು ಸೋಜಿಗದ ಸಂಗತಿಯಾಗಿದೆ.
ಹಂಪಿ ಪ್ರವಾಸೋದ್ಯಮದಿಂದ ಸರ್ಕಾರಕ್ಕೆ ವರ್ಷಕ್ಕೆ ನೂರಾರು ಕೋಟಿ ಆದಾಯ ಹರಿದು ಬರುತ್ತಿದೆ. ಇನ್ನೂ ಮುಂದೆಯಾದರೂ ಸರ್ಕಾರ, ಪ್ರವಾಸೋದ್ಯಮ ಇಲಾಖೆ ಎಚ್ಚತ್ತುಕೊಳ್ಳಬೇಕಿದೆ.
ಡಾ.ಗುರುಪ್ರಸಾದ ಹವಲ್ದಾರ್
- ಮೂಲತಃ ಉಪನ್ಯಾಸಕರು. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನ ಹಳ್ಳಿಯವರು. ಪ್ರಸ್ತುತ ಹಗರಿಬೊಮ್ಮನಹಳ್ಳಿ ಜಿವಿಪಿಪಿ ಪದವಿ ಕಾಲೇಜನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತ ಜೊತೆಗೆ ಪತ್ರಿಕೆಗಳಿಗೆ ವೆಬ್ ನ್ಯೂಸ್ ಪೋಟ್೯ಲ್ ಗಳಿಗೆ ಲೇಖನ ಬರೆಯುತ್ತಿದ್ದಾರೆ.