ಗೌರಿಬಿದನೂರಿನಲ್ಲಿ ಹೆಚ್.ಡಿ.ಕುಮಾರಸ್ವಾಮಿ ಪ್ರಚಾರ
ಡಿಕೆಶಿಗೆ ಪ್ರತ್ಯುತ್ತರ ಕೊಟ್ಟ ಹೆಚ್‌ಡಿಕೆ; ಮಂಡ್ಯ ಅಭ್ಯರ್ಥಿ ಮನೆ ಮುಂದೆ ಕೈಕಟ್ಟಿ ನಡು ಬಗ್ಗಿಸಿ ನಿಲ್ಲುವ ನಿಮ್ಮಿಂದ ಪಾಠ ಬೇಡ ಎಂದ ಮಾಜಿ ಸಿಎಂ; ಬಿಜೆಪಿ ಬಿ ಟೀಂ ಎಂದ ಪಕ್ಷವೇ ಸರಕಾರ ಮಾಡಲು ನಮ್ಮ ಮುಂದೆ ದೈನೇಸಿಯಾಗಿ ನಿಂತಿತ್ತು!
ಗೌರಿಬಿದನೂರು: ತಮ್ಮ ಹೇಳಿಕೆಗಳ ಬಗ್ಗೆ ಲಘುವಾಗಿ ಪ್ರತಿಕ್ರಿಯೆ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಬಗ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಯಾವ ಸಂದರ್ಭದಲ್ಲಿ ಯಾವ ಹೇಳಿಕೆ ನೀಡಬೇಕು ಎನ್ನುವ ಪರಿಜ್ಞಾನ ನನಗೂ ಇದೆ. ನಾವೇನು ಅವರ ಅಡಿಯಾಳುಗಳಲ್ಲ ಎಂದು ಖಾರವಾಗಿ ಹೇಳಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಇಂದು ವಿಧಾನ ಪರಿಷತ್ ಚುನಾವಣೆಯ ಪ್ರಚಾರದ ವೇಳೆ ಈ ಬಗ್ಗೆ ಮಾಧ್ಯಮಗಳು ಗಮನ ಸೆಳೆದಾಗ ತೀಕ್ಷ್ಣವಾಗಿ ಉತ್ತರಿಸಿದ ಅವರು; “ನೀವು ಬನ್ನಿ, ನಾವು ವೋಟು ಹಾಕುತ್ತೇವೆ ಎಂದು ಅವರ ಮುಂದೆ ಹೋಗಿಲ್ಲ. ಕಾಂಗ್ರೆಸ್ ನಡವಳಿಕೆಯೇ ಜೆಡಿಎಸ್ ಪಕ್ಷವನ್ನು ನಿರಂತರವಾಗಿ ನಿಂದಿಸುವುದು” ಎಂದು ಚಾಟಿ ಬೀಸಿದರು.
2018ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಬಿಜೆಪಿಯ ಬಿ ಟೀಂ ಎಂದು ಹೇಳಿಕೊಂಡು ತಿರುಗಿದವರೇ ಅವರು. ಫಲಿತಾಂಶ ಬಂದ ಕೂಡಲೇ ಅದೇ ಬಿಜೆಪಿ ಬಿ ಟೀಂ ಅಂಥ ಯಾವ ಪಕ್ಷವನ್ನು ಜರೆದಿದ್ದರೋ ಅದೇ ಪಕ್ಷದ ಜತೆ ಸರಕಾರ ಮಾಡುವುದಕ್ಕೆ ನಮ್ಮ ಮನೆಯ ಬಾಗಿಲ ಮುಂದೆ ದೈನೇಸಿ ಸ್ಥಿತಿಯಲ್ಲಿ ಬಂದು ನಿಂತಿದ್ದರು. ಹಾಗಾದರೆ, ಇವರ ನೀತಿಗಳು ಯಾವುವು? ದಿನಕ್ಕೊಂದು ಬಣ್ಣ ಬದಲಾಯಿಸುವ ಇವರು ನನ್ನ ಪಕ್ಷದ ಬಗ್ಗೆ ಚರ್ಚೆ ಮಾಡುವ ನೈತಿಕತೆ ಇವರೇನು ಉಳಿಸಿಕೊಂಡಿದ್ದಾರೆ ಎಂದು ಕುಮಾರಸ್ವಾಮಿ ಅವರು ಖಾರವಾಗಿ ಪ್ರಶ್ನೆ ಮಾಡಿದರು.
ಬಿಜೆಪಿಯ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ನಿನ್ನೆ ಮಂಡ್ಯದಲ್ಲಿ ಏನು ಹೇಳಿಕೆ ನೀಡಿದ್ದಾರೆ ಎನ್ನುವುದನ್ನು ಕೆಪಿಸಿಸಿ ಅಧ್ಯಕ್ಷರು ಗಮನಿಸಲಿ. ಆ ಸಚಿವರು ಮೊದಲು ಕಾಂಗ್ರೆಸ್ ಪಕ್ಷದ ಶಾಸಕರಾಗಿದ್ದರು. ಈಗ ಬಿಜೆಪಿ ಸರಕಾರದಲ್ಲಿ ಸಚಿವರಾದ ಮೇಲೆ ಅವರ ಬಳಿ ಸಹಾಯಕನಾಗಿದ್ದ ವ್ಯಕ್ತಿ ಈಗ ಮಂಡ್ಯದಲ್ಲಿ ಮೇಲ್ಮನೆ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ. ಆ ಅಭ್ಯರ್ಥಿ ಗೂಳಿಗೌಡ ಎನ್ನುವವರ ಮನೆ ಬಾಗಿಲ ಮುಂದೆ ಕೈ ಕಟ್ಟಿಕೊಂಡು, ನಡು ಬಗ್ಗಿಸಿಕೊಂಡು ಕಾಂಗ್ರೆಸ್ ನಾಯಕರು ದಿನ ಬೆಳಗಾದರೆ 6 ರೂಪಾಯಿ, 5 ರೂಪಾಯಿ, 2 ರೂಪಾಯಿಗೆಲ್ಲ ಕೈಕಟ್ಟಿ ನಿಲ್ಲುತ್ತಿದ್ದಾರೆ ಎಂದು ಸಚಿವರೇ ಹೇಳಿದ್ದಾರೆ. ಇಂಥ ದೈನೇಸಿ ಪರಿಸ್ಥಿತಿಗೆ ಬಂದಿರೋದು ಕಾಂಗ್ರೆಸ್ ಪಕ್ಷ. ಇಂಥ ಕಾಂಗ್ರೆಸ್ ಪಕ್ಷದ ನಾಯಕರು ಪ್ರತಿನಿತ್ಯ ನನ್ನ ಹೇಳಿಕೆ ಬಗ್ಗೆ ಚರ್ಚೆ ಮಾಡುವುದು ಏನಿದೆ? ಹೀಗಾಗಿ ಕೆಪಿಸಿಸಿ ಅಧ್ಯಕ್ಷರ ಸರ್ಟಿಫಿಕೇಟ್ ನನಗೆ ಬೇಕಿಲ್ಲ, ಅದನ್ನು ನಮ್ಮ ಜನ ಕೊಡುತ್ತಾರೆಂದು ಕುಮಾರಸ್ವಾಮಿ ಅವರು ಹೇಳಿದರು.
ಹಣ ಹಂಚುತ್ತಿರುವುದು ಗಮನಕ್ಕೆ ಬಂದಿದೆ
ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಹಣ ಹಂಚುತ್ತಿವೆ ಎನ್ನುವ ಅಂಶ ನನ್ನ ಗಮನಕ್ಕೂ ಬಂದಿದೆ. ಬಿಜೆಪಿ ನಾಯಕರು ಹಣದಿಂದಲೇ ಚುನಾವಣೆ ಗೆಲ್ಲಬಹುದು ಎಂದು ನಂಬಿದ್ದಾರೆ. ಕಳೆದ ಎಲ್ಲ ಉಪ ಚುನಾವಣೆಗಳನ್ನು ಹಣದ ಮೇಲೆಯೇ ಗೆದ್ದಿದ್ದೇವೆ, ಹೀಗಾಗಿ ಈ ಚುಣಾವಣೆಯನ್ನು ಕೂಡ ಹಣದಿಂದಲೇ ಗೆಲ್ಲುತ್ತೇವೆ ಎಂದು ಹೊರಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.
ಕೋಲಾರ-ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿಗೆ 450ರಿಂದ 500 ಮತಗಳಷ್ಟೇ ಇವೆ. ಅದು ಗೊತ್ತಿದ್ದರೂ ಹಣದ ಮೂಲಕ ಇತರೆ ಪಕ್ಷಗಳು ಹಿತೈಷಿಗಳು, ಬೆಂಬಲಿಗರ ಮತಗಳನ್ನು ಖರೀದಿಸಲು ಹೊರಟಿದ್ದಾರೆ. ಆದರೆ ಮತದಾರರು ಆ ಪಕ್ಷಕ್ಕೆ ತಕ್ಕಪಾಠ ಕಲಿಸಲಿದ್ದಾರೆ. ಬಿಜೆಪಿಗೆ ಮುಖಭಂಗ ಆಗುವುದು ಖಚಿತ ಎಂದು ಕುಮಾರಸ್ವಾಮಿ ಅವರು ಹೇಳಿದರು.
500 ಮತಗಳನ್ನು 2,500 ಮತಗಳಿಗೆ ಏರಿಕೆ ಮಾಡಲು ಬಿಜೆಪಿಯವರು ಹೊರಟಿದ್ದಾರೆ, ತಕ್ಕಡಿ ಯಾವ ಕಡೆ ವಾಲುತ್ತೋ ನೋಡೋಣ. ನಾವೂ ನಮ್ಮ ಪ್ರಯತ್ನ ಮಾಡುತ್ತೇವೆ ಎಂದುರು ಮಾಜಿ ಮುಖ್ಯಮಂತ್ರಿಗಳು.