21 ವರ್ಷದ ನಂತರ ಭಾರತದ 21 ವರ್ಷದ ಬೆಡಗಿಗೆ ಮಿಸ್ ಯೂನಿವರ್ಸ್ ಕಿರೀಟ
ನವದೆಹಲಿ: 21 ವರ್ಷಗಳ ನಂತರ ಭಾರತಕ್ಕೆ ಭುವನ ಸುಂದರಿ ಕಿರೀಟ ಸಿಕ್ಕಿದೆ.
ಪಂಜಾಬ್ ಮೂಲದ 21 ವರ್ಷದ ಸುಂದರಿ ಹರ್ನಾಜ್ ಕೌರ್ ಸಂಧು ಅವರು 70ನೇ ಮಿಸ್ ಯೂನಿವರ್ಸ್ ಪಟ್ಟ ಒಲಿಸಿಕೊಂಡಿದ್ದು, ಮತ್ತೊಮ್ಮೆ ಇಡೀ ಜಗತ್ತು ಭಾರತದತ್ತ ನೋಡುವಂತಾಗಿದೆ
2000ನೇ ಇಸವಿಯಲ್ಲಿ ಬಾಲಿವುಡ್ ನಟಿ ಲಾರಾ ದತ್ತ ಅವರಿಗೆ ಈ ಪಟ್ಟ ಒಲಿದಿತ್ತು. ಬಳಿಕ ಯಾರಿಗೂ ಈ ಕಿರೀಟ ದೊರೆತಿರಲಿಲ್ಲ.
ಇಸ್ರೇಲ್ʼನ ಐಲಾಟ್ ನಗರದಲ್ಲಿ ನಡೆದ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಪೆರುಗ್ವೆ ಹಾಗೂ ದಕ್ಷಿಣ ಆಫ್ರಿಕಾದ ಸುಂದರಿಯರನ್ನು ಹಿಂದಿಕ್ಕಿ ಸಂಧು ಅವರು ಈ ಕಿರೀಟ ಗೆದ್ದುಕೊಂಡಿದ್ದಾರೆ.
ಸಂಧು ಹೆಸರು ಘೋಷಣೆ ಆಗುತ್ತಿದ್ದಂತೆಯೇ 2020ರಲ್ಲಿ ಭುವನ ಸುಂದರಿಯಾಗಿದ್ದ ಮೆಕ್ಸಿಕೋ ದೇಶದ ಆಂಡ್ರಿಯಾ ಮೆಜಾ ಭಾರತದ ಬೆಡಗಿಗೆ ಕಿರೀಟಧಾರಣೆ ಮಾಡಿದರು.
ಪೆರುಗ್ವೆಯ ನಾಡಿಯಾ ಫೆರಾರಿಯಾ ಮತ್ತು ದಕ್ಷಿಣ ಆಫ್ರಿಕಾದ ಲಾಲೀಲಾ ಸ್ಮವಾನೆ ಮೊದಲ ಮತ್ತು ಎರಡನೇ ರನ್ನರ್ ಅಪ್ ಆಗಿ ಆಯ್ಕೆಯಾದರು.
ಸಂಧು ಗೆಲುವಿನ ಉತ್ತರ
ಅತ್ಯಂತ ಕಠಿಣವಾದ ಸ್ಪರ್ಧೆಯಲ್ಲಿ ಸಂಧು ಎಲ್ಲ ಹಂತಗಳಲ್ಲಿ ತೇರ್ಗಡೆಯಾದರಲ್ಲದೆ, ಟಾಪ್ ಮೂರು ಸುತ್ತುಗಳಲ್ಲಿ ಸ್ಪರ್ಧಿಗಳಿಗೆ ಈಗಿನ ಮಹಿಳೆಯರು ಎದುರಿಸುತ್ತಿರುವ ಒತ್ತಡಗಳನ್ನು ಹೇಗೆ ನಿಭಾಯಿಸಬಹುದು. ಇದಕ್ಕೆ ನೀವು ಏನು ಹೇಳುತ್ತೀರಿ? ಎಂದು ತೀರ್ಪುಗಾರರು ಪ್ರಶ್ನೆ ಮಾಡಿದ್ದರು.
ಈ ಪ್ರಶ್ನೆಗೆ ಸಂಧು ನೀಡಿದ್ದ ಉತ್ತರ ಹೀಗಿತ್ತು;
“ಇಂದಿನ ಯುವಜನರು ಎದುರಿಸುತ್ತಿರುವ ಅತಿ ದೊಡ್ಡ ಒತ್ತಡವೆಂದರೆ ತಮ್ಮಲ್ಲಿ ನಂಬಿಕೆ ಇಡಬೇಕಿರುವುದು. ನೀವು ವಿಶೇಷ ವ್ಯಕ್ತಿಗಳು ಎಂದು ಭಾವಿಸಿದರೆ ನಿಮ್ಮ ಬದುಕು ಸುಂದರವಾಗುತ್ತದೆ. ನಿಮ್ಮನ್ನು ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳುವುದನ್ನು ನಿಲ್ಲಿಸಿಬಿಡಿ. ಪ್ರಪಂಚದಾದ್ಯಂತ ನಡೆಯುತ್ತಿರುವ ಹೆಚ್ಚು ಮುಖ್ಯವಾದ ವಿಷಯಗಳ ಬಗ್ಗೆ ಮಾತನಾಡಬೇಕಿದೆ. ನೀವು ಮನೆಯಿಂದ ಹೊರ ಬನ್ನಿ. ನಿಮ್ಮ ಬಗ್ಗೆ ಯೋಚನೆ ಮಾಡಿ. ನಿಮ್ಮ ಜೀವನಕ್ಕೆ ನೀವೇ ನಾಯಕರು. ನಿಮಗೆ ನೀವೇ ದನಿಯಾಗಿ. ನಾನು ನನ್ನ ಮೇಲೆ ನಂಬಿಕೆ ಇಟ್ಟಿರುವುದರಿಂದ ಇಂದು ಇಲ್ಲಿ ನಿಂತಿದ್ದೇನೆ” ಎಂದರು.