ನಿಕಟಪೂರ್ವ ಅಧ್ಯಕ್ಷರ ವಿರುದ್ಧ ಅಸಮಾಧಾನ; ಅರ್ಜಿ ಸಲ್ಲಿಸಲು ಹಿಂದೇಟು
by GS Bharath Gudibande
ಗುಡಿಬಂಡೆ: ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ, ಜಿಲ್ಲಾ ಘಟಕಗಳ ಚುನಾವಣೆ ಮುಗಿದಿದ್ದು, ತಾಲೂಕು ಅಧ್ಯಕ್ಷರ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. ಆದರೆ, ಹಾಲಿ ಅಧ್ಯಕ್ಷರಿಗೆ ಹೊಸ ಅಧ್ಯಕ್ಷರಾಗ ಬಯಸುವ ಅಭ್ಯರ್ಥಿಗಳು ಅರ್ಜಿ ನೀಡಬೇಕು ಎಂಬ ವಿಚಾರ ಈಗ ಸಾಹಿತ್ಯ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿ ಪ್ರೊ.ಕೋಡಿ ರಂಗಪ್ಪ ಅವರು ಆಯ್ಕೆಯಾದ ನಂತರ ಮೊದಲ ಬಾರಿಗೆ ಗುಡಿಬಂಡೆಯಲ್ಲಿ ಕೃತಜ್ಞತಾ ಕಾರ್ಯಕ್ರದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಈ ರೀತಿಯ ತೀರ್ಮಾನ ಕೈಗೊಳ್ಳಲಾಗಿದೆ. ಈ ಬಗ್ಗೆ ತಾಲೂಕು ಪರಿಷತ್ ಸದಸ್ಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ನಿಕಟಪೂರ್ವ ಅಧ್ಯಕ್ಷರಿಗೆ ಯಾಕೆ ಅರ್ಜಿ ಕೊಡಬೇಕು?
ಈ ಹಿಂದೆ ಗುಡಿಬಂಡೆ ಕಸಾಪದ ನಿಕಟಪೂರ್ವ ಅಧ್ಯಕ್ಷೆಯಾಗಿ ಐದು ವರ್ಷ ಸೇವೆ ಸಲ್ಲಿಸಿದ್ದ ಅನುರಾಧಾ ಆನಂದ್ ಅವರಿಗೆ ಹೊಸದಾಗಿ ತಾಲೂಕು ಕಸಾಪ ಅಧ್ಯಕ್ಷರಾಗ ಬಯಸುವ ಅಭ್ಯರ್ಥಿಗಳು ಅರ್ಜಿ ನೀಡಬೇಕು ಎಂದು ನೂತನ ಜಿಲ್ಲಾಧ್ಯಕ್ಷರು ಹೇಳಿರುವುದು ಸರಿಯಲ್ಲ ಎಂದು ಅನೇಕ ಸದಸ್ಯರು ಸಿಕೆನ್ಯೂಸ್ ನೌ ಜತೆ ಮಾತನಾಡುತ್ತಾ ತಿಳಿಸಿದ್ದಾರೆ.
ಅನುರಾಧಾ ಆನಂದ್ ಅವರ ಬಗ್ಗೆ ಗುಡಿಬಂಡೆ ತಾಲೂಕಿನ ಕಸಾಪ ಸದಸ್ಯರಿಗೆ ಅಸಮಾಧಾನ ಹೆಚ್ಚಾಗಿದೆ, ಹಾಗೂ ಅವರ ಸರ್ವಾಧಿಕಾರಿ ಧೋರಣೆಯಿಂದ ಕೆಲ ಸಾಹಿತಿಗಳು ತಾಲೂಕು ಪರಿಷತ್ತಿನಿಂದ ಹೊರಗೆ ಉಳಿದಿದ್ದರು. ಹೀಗಿರುವಾಗ ಅರ್ಜಿ ಅವರಿಗೆ ಕೊಡುವ ಅವಶ್ಯಕತೆ ಏನು? ಹಾಗಾಗಿ ಕೆಲವರಿಗೆ ಅರ್ಜಿ ಹಾಕುವ ಉದ್ದೇಶವಿದ್ದರೂ ಹಿಂಜರಿಯುತ್ತಿದ್ದಾರೆ ಎಂದು ಕಸಾಪ ಬಂಡಾಯ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೊಸಬರಿಗೆ ಅವಕಾಶ ಸಿಗುವುದೇ?
ಈ ಸಲವಾದರೂ ಹಳಬರಿಗೆ ಮಣೆ ಹಾಕಿ, ಅವಕಾಶ ನೀಡಲಾಗುತ್ತದೆಯೇ ಎಂಬ ಪ್ರಶ್ನೆಗಳು ಕಸಾಪ ವಲಯದಲ್ಲಿ ಹರಿದಾಡುತ್ತಿವೆ. ಈ ಕುರಿತು ತಾಲೂಕು ಕಸಾಪ ಅಧ್ಯಕ್ಷರ ಆಯ್ಕೆಯಾದ ನಂತರವಷ್ಟೇ ಸ್ಪಷ್ಟವಾಗಲಿದೆ ಎನ್ನುತ್ತಾರೆ ಅಧ್ಯಕ್ಷ ಅಕಾಂಕ್ಷಿಯೊಬ್ಬರು.
ತಾಲೂಕು ಕಸಾಪ ಅಧ್ಯಕ್ಷರ ಆಯ್ಕೆ ಹೇಗೆ?
ತಾಲೂಕು ಅಧ್ಯಕ್ಷರ ನೇಮಕ ನೇರವಾಗಿ ಜಿಲ್ಲಾಧ್ಯಕ್ಷರ ವಿವೇಚನೆಗೆ ಬಿಟ್ಟ ವಿಚಾರ. ಆದರೆ, ಆಕಾಂಕ್ಷಿಗಳ ಕನ್ನಡ ಸೇವೆ, ಸಾಹಿತ್ಯ ಕೃಷಿ ಇತ್ಯಾದಿ ಮಾನದಂಡಗಳನ್ನು ಪರಿಗಣಿಸಿ ಆಯ್ಕೆ ಮಾಡುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಆದರೆ ಈ ಬಾರಿ ಅಧ್ಯಕ್ಷ ಆಕಾಂಕ್ಷಿ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ. ನಿಮ್ಮ ಸಾಧನೆಯನ್ನು ಪರಿಗಣಿಸಿ ಆಯ್ಕೆ ಮಾಡಲಾಗುವುದು ಎಂಬ ಉದ್ದೇಶದಿಂದ ಅರ್ಜಿ ಕೆರೆಯಲಾಗಿದೆ ಎಂದು ಜಿಲ್ಲಾಧ್ಯಕ್ಷರು ಹೇಳಿದ್ದಾರೆ. ಅರ್ಜಿ ಸಂಪ್ರದಾಯ ಶುರುವಾಗಿರುವ ಹಿನ್ನೆಲೆಯಲ್ಲಿ ಈಗ ಆಕಾಂಕ್ಷಿಗಳು ಯಾರ ಮರ್ಜಿ ಹಿಡಿಯಬೇಕು ಎನ್ನುವ ಪೀಕಲಾಟದಲ್ಲಿ ಇದ್ದಾರೆ.
ಗುಡಿಬಂಡೆ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಆಹ್ವಾನಿಸಿರುವುದು ಶ್ಲಾಘನೀಯ. ಆದರೆ ನಿಕಟಪೂರ್ವ ಅಧ್ಯಕ್ಷರಿಗೆ ಜವಾಬ್ದಾರಿ ವಹಿಸಿರುವುದು ಕೆಲವರಿಗೆ ಅಸಮಾಧಾನ, ಆಕ್ರೋಶಕ್ಕೆ ಕಾರಣವಾಗಿದೆ. ಹಾಗಾಗಿ ಕೂಡಲೇ ಈ ಜವಾಬ್ದಾರಿ ಬೇರೆಯವರಿಗೆ ವಹಿಸಬೇಕು. ಎಲ್ಲರಿಗೂ ತಮ ಹಕ್ಕು ಚಲಾಯಿಸಲು ಅವಕಾಶ ನೀಡುವ ಬಗ್ಗೆ ಜಿಲ್ಲಾಧ್ಯಕ್ಷರು ಗಮನಿಸಬೇಕು.
ಜಿ.ಎನ್.ನವೀನ್ ಕುಮಾರ್, ಕಸಾಪ ಸದಸ್ಯ
ಈ ರೀತಿ ಕ.ಸಾ.ಪ.ತಾಊಕು ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಕರೆದರೆ ಅದನ್ನು ಜಿಲ್ಲಾಧ್ಯಕ್ಷ ರಿಗೆ ಸಲ್ಲಿಸಿ ನಂತರ ತೀರ್ಮಾನ ಕೈಗೊಳ್ಳುವ ಕ್ರಮ ಸೂಕ್ತ ವಾಗುತ್ತದೆ