ಕೈಗಾರಿಕೆಗಳ ರಾಸಾಯನಿಕ ತ್ಯಾಜ್ಯ ವಿಲೇವಾರಿ; ವಿವಿಧ ಇಲಾಖೆಗಳಿಂದ ಜಂಟಿ ಸಮೀಕ್ಷೆ; ಶ್ರೀನಿವಾಸ ಸಾಗರ ಸುತ್ತಮುತ್ತ ಗ್ರಾಮದ ಜನರು ಕೆರೆ ನೀರು ಬಳಸದಂತೆ ಎಚ್ಚರಿಕೆ; HN ವ್ಯಾಲಿ ಅಧಿಕಾರಿಗಳಿಂದ ತಪಾಸಣೆ
by GS Bharath Gudibande
ಚಿಕ್ಕಬಳ್ಳಾಪುರ: ಬಯಲುಸೀಮೆ ಪ್ರದೇಶದಲ್ಲಿ ಯಾರು ಹೇಳುವವರು, ಕೇಳುವವರು ಇಲ್ಲದಿರುವುದರಿಂದ ಪ್ರತಿದಿನವೂ ಒಂದಲ್ಲ ಒಂದು ಅಪಾಯಕಾರಿ ಸಂಗತಿಗಳು ಹೊರಗೆ ಬರುತ್ತಿವೆ. ಜಿಲ್ಲಾಡಳಿತ, ಪೊಲೀಸ್ ವ್ಯವಸ್ಥೆ ಬಗ್ಗೆ ಸಾರ್ವಜನಿಕರ ತಾಳ್ಮೆ ಕಟ್ಟೆಯೊಡೆಯುತ್ತಿದೆ.
ಭಯಂಕರ ಸಮಸ್ಯೆಗಳ ನಡುವೆ ಜಿಲ್ಲೆಯ ಅಮಾಯಕ ಜನರು ಒದ್ದಾಡುತ್ತಿರುವ ಸ್ಥಿತಿ ನಿರ್ಮಾಣವಾಗಿದೆ ಈಗ. ರಾತ್ರೋರಾತ್ರಿ ರಾತ್ರಿ ಕೈಗಾರಿಕೆಗಳ ಕಿರಾತಕರು ಇಂತಹ ಹೀನಕೃತ್ಯಗಳನ್ನು ಎಸಗುತ್ತಿದ್ದು, ಈ ಧಾರುಣ ಕೆಲಸ ಗಸ್ತು ಪೊಲೀಸರು ಕಣ್ಣಿಗೆ ಬೀಳಲಿಲ್ಲವೇ ಎಂಬ ಹಲವು ಪ್ರಶ್ನೆಗಳನ್ನು ಸಾರ್ವಜನಿಕರು ಕೇಳುತ್ತಿದ್ದಾರೆ.
ಗುಡಿಬಂಡೆಯಲ್ಲಿ ನಡೆದ ಇಂಥದ್ದೇ ಕೃತ್ಯವನ್ನು ಬಯಲಿಗೆಳೆದಿದ್ದ ಸಿಕೆನ್ಯೂಸ್ ನೌ ಎಲ್ಲರಿಗಿಂತ ಮೊದಲೇ ವಿಷದಾಳಿಯ ಬಗ್ಗೆ ಸಮಗ್ರ ವರದಿ ಮಾಡಿತ್ತು. ಕೂಡಲೇ ಎಚ್ಚೆತ್ತ ಅಧಿಕಾರಿಗಳ ತಂಡ ಬೆಳಗ್ಗೆಯೇ ಶ್ರೀನಿವಾಸ ಸಾಗರ ಹಾಗೂ ಸುತ್ತಮುತ್ತ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಮಾರ್ಗ ಮಧ್ಯೆ ಇರುವ ಜಕ್ಕಲಮಡಗು ಕ್ರಾಸ್ʼನ ಸೇತುವೆ ಬಳಿ ಯಾರೋ ಕಿಡಿಗೇಡಿಗಳು ಟ್ಯಾಂಕರ್ʼನಲ್ಲಿ ವಿಷಯುಕ್ತ ರಾಸಾಯನಿಕ ತ್ಯಾಜ್ಯ ನೀರನ್ನು ವಿಲೇವಾರಿ ಮಾಡುವ ಮೂಲಕ ಶ್ರೀನಿವಾಸ ಸಾಗರ ಜಲಾಶಯದ ನೀರಿಗೆ ಮಿಶ್ರಣ ಮಾಡಿದ್ದಾರೆ. ಜಿಲ್ಲೆಯ ಜಿಲ್ಲಾ ಮಾಲಿನ್ಯ ಹಾಗೂ ಪರಿಸರ ಇಲಾಖೆ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಮೀನುಗಾರಿಕೆ, ಸಣ್ಣ ನೀರಾವರಿ ಇಲಾಖೆ, ಅರಣ್ಯ ಇಲಾಖೆ, ಕೈಗಾರಿಕೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಜಂಟಿ ಸಮೀಕ್ಷೆ ನಡೆಸುವ ಮೂಲಕ ಮಾಹಿತಿಯನ್ನು ಕಲೆ ಹಾಕಿದರು.
ಸ್ಯಾಂಪಲ್ ಸಂಗ್ರಹ, ಲ್ಯಾಬ್ʼಗೆ ರವಾನೆ
ಜಕ್ಕಲಮಡುಗು ಕ್ರಾಸ್ ಹಾಗೂ ಶ್ರೀನಿವಾಸ ಸಾಗರದ ಬಳಿ ವಿಸರ್ಜಿಸಲಾಗಿರುವ ರಾಸಾಯನಿಕ ತ್ಯಾಜ್ಯ ನೀರು (ಜನರಲ್ ಪ್ಯಾರಾಮೀಟರ್, ಆಯಿಲ್ ಅಂಡ್ ಗ್ರೀಸ್, ಹೆವಿ ಮೆಟಲ್ ಮತ್ತು ಸೈನೈಡ್) ಮತ್ತು ಮಣ್ಣಿನ ಮಾದರಿ ಹಾಗೂ ಶ್ರೀನಿವಾಸ ಸಾಗರ ಜಲಾಶಯದ ನೀರನ್ನು ಸಂಗ್ರಹಿಸಿ ಬೆಂಗಳೂರಿನ ಕೇಂದ್ರ ಪರಿಸರ ಪ್ರಯೋಗಾಲಯಕ್ಕೆ ಕಳುಹಿಸಿಲಾಗಿದೆ. ಕೇಂದ್ರ ಪರಿಸರ ಪ್ರಯೋಗಾಲಯದ ಅಧಿಕಾರಿಗಳಿಗೆ ಶೀಘ್ರದಲ್ಲಿ ವಿಶ್ಲೇಷಣಾ ವರದಿಯನ್ನು ನೀಡುವಂತೆ ಕೋರಿದ್ದು. ಆ ವರದಿ ಬಂದ ನಂತರ ಜಿಲ್ಲಾಧಿಕಾರಿ ಹಾಗೂ ಕೇಂದ್ರ ಕಚೇರಿಗೆ ವರದಿಯನ್ನು ಸಲ್ಲಿಸಿ ಮುಂದಿನ ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಪರಿಸರ ಅಧಿಕಾರಿ ಸಿದ್ಧೇಶ್ವರ ಬಾಬು ತಿಳಿಸಿದರು.
ಕಿರಾತಕರಿಗಾಗಿ ತೀವ್ರ ಶೋಧ
ವಿಷಯುಕ್ತ ರಾಸಾಯನಿಕ ತ್ಯಾಜ್ಯ ನೀರನ್ನು ವಿಲೇವಾರಿ ಮಾಡಿ, ಪರಿಸರ ಹಾನಿ, ನೀರು ಮಿಶ್ರಣ ಮಾಡಿರುವ ಕಿಡಿಗೇಡಿಗಳ ಪತ್ತೆಗಾಗಿ ಪೊಲೀಸ್ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ. ಈ ದುರಂತಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಉಪಾಧೀಕ್ಷಕ ವಾಸುದೇವ್ ಮಾಹಿತಿ ನೀಡಿದರು.
ಮೀನು ಹಿಡಿಯಬೇಡಿ, ನೀರು ಬಳಸಬೇಡಿ
ಶ್ರೀನಿವಾಸ ಸಾಗರ ಜಲಾಶಯದಲ್ಲಿ ಮೀನು ಹಿಡಿಯದಂತೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಜೆತೆಗೆ ಈ ಕೆರೆಯ ನೀರು ಮತ್ತು ಮೀನನ್ನು ಪರೀಕ್ಷೆಗಾಗಿ
ಬೆಂಗಳೂರಿನ ಹೆಬ್ಬಾಳದಲ್ಲಿರುವ ಪಶು ಸಂಶೋಧನಾ ಕೇಂದ್ರದ ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ ಎಂದು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಮಾಧುರಿ ಹೇಳಿದರು.
ವರದಿ ಬರುವವರೆಗೂ ಕೆರೆ ನೀರು ಬಳಸಬೇಡಿ
ಪ್ರಯೋಗಾಲಯದ ವರದಿ ಬರುವವರೆಗೆ ಸುತ್ತಮುತ್ತಲ ಗ್ರಾಮಗಳ ಜನರು ತಮ್ಮ ಜಾನುವಾರುಗಳಿಗೆ ಕೆರೆಯ ನೀರನ್ನು ಕುಡಿಸದಂತೆ ಡಂಗೂರ ಸಾರಿ ಅರಿವು ಮೂಡಿಸುತ್ತಿದ್ದಾರೆ ಜನರು ಸ್ವಲ್ಪ ದಿನ ನೀರನ್ನು ಕುಡಿಯುವ ಉದ್ದೇಶಕ್ಕೆ ಬಳಸದಂತೆ ಚಿಕ್ಕಬಳ್ಳಾಪುರ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹರ್ಷವರ್ಧನ್ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಈ ಜಂಟಿ ಸಮೀಕ್ಷೆಯಲ್ಲಿ ಕೈಗಾರಿಕಾ ಇಲಾಖೆಯ ಉಪ ನಿರ್ದೇಶಕ ಶರೀಫ್, ತಹಸೀಲ್ದಾರ್ ಗಣಪತಿ ಶಾಸ್ತ್ರಿ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ (ಎಚ್.ಎನ್ ವ್ಯಾಲಿ ಯೋಜನೆ)ಯ ಸಹಾಯಕ ಕಾರ್ಯಪಾಲಕ ಅಭಿಯಂತರ ರವೀಂದ್ರನಾಥ್, ವಲಯ ಅರಣ್ಯಾಧಿಕಾರಿ ಶ್ರೀ ಲಕ್ಷ್ಮಿ ಸೇರಿದಂತೆ ವಿವಿಧ ಇಲಾಖೆಗಳು ಸ್ಥಳಕ್ಕೆ ಭೇಟಿ ನೀಡಿದ್ದರು.
ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ