ಮುಂದಿನ ಮುಂಗಾರಿಗೆ ನೀರು ಹರಿಸುವುದಾಗಿ ಮತ್ತೆ ಹೇಳಿದ ಸಚಿವ ಗೋವಿಂದ ಕಾರಜೋಳ
ಬೆಳಗಾವಿ: ಬಯಲುಸೀಮೆ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ಕೋಲಾರ ಇನ್ನಿತರೆ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಎತ್ತಿನಹೊಳೆ ಯೋಜನೆಯ ಭೂ ಸ್ವಾಧೀನದ ಅಡೆತಡೆಗಳನ್ನು ನಿವಾರಿಸಿ, ಯೋಜನೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಇಂದು ವಿಧಾನ ಪರಿಷತ್ತಿಗೆ ತಿಳಿಸಿದರು.
ಸದಸ್ಯರಾದ ಎಂ.ಎ.ಗೋಪಾಲಸ್ವಾಮಿ ಅವರ ಪ್ರಶ್ನೆಗೆ ಉತ್ತರವಾಗಿ ಸಚಿವರು ಹೇಳಿಕೆ ನೀಡಿ, ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯನ್ನು ಎರಡು ಹಂತಗಳಲ್ಲಿ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ವಿವರಿಸಿದರು.
ಮೊದಲನೇ ಹಂತ: ಎತ್ತಿನಹೊಳೆ ಯೋಜನೆಯ ಲಿಫ್ಟ್ ಕಾಮಗಾರಿಗಳು ಹಾಗೂ ವಿದ್ಯುತ್ ಪೂರೈಕೆ ಕಾಮಗಾರಿಗಳು. ಎರಡನೇ ಹಂತ: ಎತ್ತಿನಹೋಳೆ ಗುರುತ್ವ ಕಾಲುವೆ (260.00 ಕಿ.ಮೀ) ಟಿ.ಜಿ.ಹಳ್ಳಿ ಮತ್ತು ರಾಮನಗರ ಫೀಡರ್ ಕಾಲುವೆ, ಮಧುಗಿರಿ ಫೀಡರ್ ಕಾಲುವೆ ಹಾಗೂ ಗೌರಿಬಿದನೂರು ಫೀಡರ್ ಕಾಲುವೆ ಮತ್ತು ಭೈರಗೊಂಡ್ಲು ಜಲಾಶಯ ನಿರ್ಮಾಣ ಕಾಮಗಾರಿ.
ಮೊದಲನೇ ಹಂತದ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಲಿಫ್ಟ್ ಕಾಮಗಾರಿಗಳು ಹಾಗೂ ವಿದ್ಯುತ್ ಪೂರೈಕೆ ಕಾಮಗಾರಿಗಳು ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿ ಬರುತ್ತಿದ್ದು, ಪ್ರಸ್ತುತ ಕಾಮಗಾರಿಗಳು ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದ್ದು, ಈ ಕಾಮಗಾರಿಗಳನ್ನು ಮಾರ್ಚ್ 2022ರ ಅಂತ್ಯಕ್ಕೆ ಪೂರ್ಣಗೊಳಿಸಿ ಮುಂದಿನ ಮುಂಗಾರಿನ ಹಂಗಾಮಿನಲ್ಲಿ ಪ್ರಾಯೋಗಿಕವಾಗಿ ನೀರನ್ನೆತ್ತಲು ಯೋಜಿಸಲಾಗಿರುತ್ತದೆ ಎಂದು ಸಚಿವರು ವಿವರಿಸಿದರು.