ಜನತಾ ಪರಿವಾರದ ಕೊಂಡಿ, ಕಾಂಗ್ರೆಸ್ಪಕ್ಷದ ಹಿರಿಯ ನಾಯಕ; ಅಂಗಾಂಗಳ ವೈಫಲ್ಯದಿಂದ ಆಸ್ಪತ್ರೆಯಲ್ಲಿ ನಿಧನ
ಚಿಕ್ಕಬಳ್ಳಾಪುರ/ಕೋಲಾರ: ಹಿರಿಯ ರಾಜಕಾರಣಿ ಹಾಗೂ ಕೇಂದ್ರದ ಮಾಜಿ ಸಚಿವ ಆರ್.ಎಲ್.ಜಾಲಪ್ಪ ಅವರು ಇನ್ನಿಲ್ಲ. ಅವರಿಗೆ 96 ವರ್ಷ ವಯಸ್ಸಾಗಿತ್ತು.
ಅನಾರೋಗ್ಯದಿಂದ ಕೋಲಾರದ ದೇವರಾಜ ಅರಸು ವೈದ್ಯ ಕಾಲೇಜಿನಲ್ಲಿ ಅಂಗಾಂಗಳ ವೈಫಲ್ಯದಿಂದ ಚಿಕಿತ್ಸೆ ಫಲಕಾರಿಯಗದೇ ಇಂದು (ಶುಕ್ರವಾರ) ಸಂಜೆ ನಿಧನರಾಗಿದ್ದಾರೆ.
ಶ್ವಾಸಕೋಶ, ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಅಲ್ಲದೆ; ಕಳೆದ ಫೆಬ್ರವರಿಯಲ್ಲಿ ಅವರು ಪಾರ್ಶ್ವವಾಯುಗೆ ತುತ್ತಾಗಿದ್ದರು ಹಾಗೂ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಶಸ್ತ್ರ ಚಿಕತ್ಸೆಯನ್ನೂ ಮಾಡಲಾಗಿತ್ತು. ಸುಮಾರು ನಲವತ್ತು ದಿನಗಳ ಕಾಲ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.
ಡಿ.12ರಂದು ದೇವರಾಜ ಅರಸು ವೈದ್ಯ ಕಾಲೇಜಿಗೆ ಭೇಟಿ ನೀಡಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಜಾಲಪ್ಪ ಅವರ ಆರೋಗ್ಯ ವಿಚಾರಿಸಿದ್ದರು. ರಾಜ್ಯದಲ್ಲಿ ಗೃಹ, ಕಂದಾಯದಂಥ ಮಹತ್ವದ ಖಾತೆಗಳನ್ನು ನಿಭಾಯಿಸಿದ್ದ ಅವರು ಲೋಕಸಭೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರವನ್ನು ನಾಲ್ಕು ಬಾರಿ ಪ್ರತಿನಿಧಿಸಿದ್ದರು. ಹೆಚ್.ಡಿ.ದೇವೇಗೌಡರ ಸಂಯುಕ್ತ ರಂಗ ಸರಕಾರದಲ್ಲಿ ಅವರು ಜವಳಿ ಖಾತೆ ಮಂತ್ರಿಯಾಗಿದ್ದರು.
ನೇರ ನಿಷ್ಠುರತೆಯ ರಾಜಕಾರಣಿ
ಡೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆಯಲ್ಲಿ 1925ರ ಅಕ್ಟೋಬರ್ 19ರಂದು ಜನಿಸಿದ್ದ ಅವರು ಪ್ರಾಥಮಿಕ ಶಿಕ್ಷಣವನ್ನು ದೊಡ್ಡಬಳ್ಳಾಪುರದಲ್ಲಿ ಪಡೆದಿದ್ದರು. ಬಳಿಕ ಮೈಸೂರು ಮಹಾರಾಜ ಕಾಲೇಜಿನಲ್ಲಿ ಬಿಎ ವ್ಯಾಸಂಗ ಮಾಡಿದ್ದರು. ಅವರು ಜನತಾದಳ, ಕಾಂಗ್ರೆಸ್ಪಕ್ಷಗಳಲ್ಲಿದ್ದು, ತಮ್ಮ ಅಗಲಿಕೆವರೆಗೂ ಅವರು ಕಾಂಗ್ರೆಸ್ ಸದಸ್ಯರಾಗಿದ್ದರು.
ರಾಜಕೀಯದಲ್ಲಿ ನೇರ ನಿಷ್ಠುರತೆಗೆ ಹೆಸರಾಗಿದ್ದ ಜಾಲಪ್ಪ ಅವರು ರಾಮಕೃಷ್ಣ ಹೆಗಡೆ ಅವರ ಸಂಪುಟದಲ್ಲಿ (1987-88) ಅತ್ಯಂತ ಪ್ರಭಾವವುಳ್ಳ ಗೃಹ ಖಾತೆಯನ್ನು ಹೊಂದಿದ್ದರು. ಅದಾದ ಮೇಲೆ ದೇವೇಗೌಡರ ಸಂಪುಟದಲ್ಲಿಯೂ ಅವರು ಕಂದಾಯ ಸಚಿವರಾಗಿದ್ದರು. ತದನಂತರ ನಡೆದ ಲೋಕಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಅದುವರೆಗೂ ಸೋಲಿಲ್ಲದ ಸರದಾರನಂತೆ ಮಿಂಚಿದ್ದ ನಕ್ಕಲಹಳ್ಳಿಯ ವಿ.ಕೃಷ್ಣರಾವ್ ಅವರನ್ನು ಮಣಿಸಿದ್ದರು.
1996ರಲ್ಲಿ ಅಂದಿನ ಪ್ರಧಾನಿ ದೇವೇಗೌಡರ ಸಂಪುಟದಲ್ಲಿ ಕ್ಯಾಬಿನೇಟ್ಬದಲು ರಾಜ್ಯ ಸಚಿವ ಸ್ಥಾನ ನೀಡಿದ್ದಕ್ಕೆ ಪ್ರತಿಭಟಿಸಿ ಪ್ರಮಾಣ ವಚನ ಸಮಾರಂಭವನ್ನು ಬಹಿಷ್ಕರಿಸಿ ಬೆಂಗಳೂರಿಗೆ ವಾಪಸ್ಸಾಗಿದ್ದರು. ಬಳಿಕ ದೇವೇಗೌಡರು ಅವರಿಗೆ ಕ್ಯಾಬಿನೇಟ್ದರ್ಜೆಯ ಜವಳಿ ಖಾತೆಯನ್ನೇ ನೀಡಿದ್ದರು.
1998ರಲ್ಲಿ ಜನತಾದಳವನ್ನು ತೊರೆದ ಜಾಲಪ್ಪ ಚಿಕ್ಕಬಳ್ಳಾಪುರ ಕ್ಷೇತ್ರದಿಂದಲೇ ಪುನಾ ಆಯ್ಕೆಯಾದರಲ್ಲದೆ, 2004ರವರೆಗೂ ಅವರು ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಒಮ್ಮೆ ಅವರು ಜನತಾ ಪರಿವಾರದ ತಮ್ಮ ಒಡನಾಡಿಯಾಗಿದ್ದ ಸಿ.ಭೈರೇಗೌಡರನ್ನು ಸೋಲಿಸಿದ್ದರು.
ಜಾಲಪ್ಪ ರಾಜಕೀಯ ಪ್ರೊಫೈಲ್
- 1980-83: ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
- 1983-96: ಸದಸ್ಯರು, ಕರ್ನಾಟಕ ವಿಧಾನಸಭೆ
- 1983-84 & 1985-86: ಸಹಕಾರ ಸಚಿವರು, ಕರ್ನಾಟಕ ಸರ್ಕಾರ
- 1986-87: ಗೃಹ ಸಚಿವರು, ಕರ್ನಾಟಕ ಸರ್ಕಾರ
- 1995-96: ಕಂದಾಯ ಸಚಿವರು, ಕರ್ನಾಟಕ ಸರ್ಕಾರ
- 1996: 11ನೇ ಲೋಕಸಭೆಗೆ ಚುನಾಯಿತ ಜವಳಿ
- 1996-98: ಕೇಂದ್ರ ಜವಳಿ ಸಚಿವ
- 1998: 12ನೇ ಲೋಕಸಭೆಗೆ ಆಯ್ಕೆ
- 1998-99: ಸದಸ್ಯರು, ಹಣಕಾಸು ಸಮಿತಿ ಸದಸ್ಯ, ಸಂಸತ್ತಿನ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಸದಸ್ಯರು ಸಮಿತಿ, ಸಲಹಾ ಸಮಿತಿಯ ಸದಸ್ಯರು ಕೃಷಿ ಸಚಿವಾಲಯ.
- 1999: 13ನೇ ಲೋಕಸಭೆಗೆ ಆಯ್ಕೆ
- 1999-2000: ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಮಿತಿ ಸದಸ್ಯರು.
- 2004: 14ನೇ ಲೋಕಸಭೆಗೆ ಆಯ್ಕೆ
- 2006: ಮಾನವ ಸಂಪನ್ಮೂಲ ಅಭಿವೃದ್ಧಿ ಸಮಿತಿಯ ಸದಸ್ಯರು
ನಾಳೆ ಅವರ ಹುಟ್ಟೂರು ತೂಬಗೆರೆಯಲ್ಲಿ ಜಾಲಪ್ಪ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಮೊಮ್ಮಗ ವಿನಯ್ ಶ್ಯಾಂ ತಿಳಿಸಿದ್ದಾರೆ.