ಗುಡಿಬಂಡೆ ಕಣ್ಣಿಗೆ ಸುಣ್ಣ, ಚಿಕ್ಕಬಳ್ಳಾಪುರಕ್ಕೆ ಬೆಣ್ಣೆ!
ಆರ್.ಎಲ್.ಜಾಲಪ್ಪ ಅಂತ್ಯಕ್ರಿಯೆ ಕಾರಣ ನೀಡಿ ಗಡಿ ತಾಲೂಕು ಕಾರ್ಯಕ್ರಮ ರದ್ದು, ಚಿಕ್ಕಬಳ್ಳಾಪುರದಲ್ಲಿ ರದ್ದು ಇಲ್ಲ!!
by GS Bharath Gudibande
ಗುಡಿಬಂಡೆ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಮತ್ತೊಮ್ಮೆ ಗಡಿಭಾಗದ ತಾಲೂಕು ಗುಡಿಬಂಡೆಗೆ ಕೈ ಕೊಟ್ಟಿದ್ದಾರೆ.
ಕೋವಿಡ್ ಮೃತರ ಕುಟುಂಬದವರಿಗೆ, ಮಳೆ-ನೆರೆ ಸಂತ್ರಸ್ತರಿಗೆ ಪರಿಹಾರ ವಿತರಿಸಲು ನಿಗದಿತ ಕಾರ್ಯಕ್ರಮಕ್ಕೆ ಬರಬೇಕಾಗಿದ್ದ ಸಚಿವರು, ಇನ್ನೊಂದು ನೆಪ ಹೇಳಿ ಗುಡಿಬಂಡೆ ಕಾರ್ಯಕ್ರಮವನ್ನು ತಪ್ಪಿಸಿಕೊಂಡಿದ್ದು, ಇದೇ ವೇಳೆ ಅವರು ಗೌರಿಬಿದನೂರು-ಚಿಕ್ಕಬಳ್ಳಾಪುರದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳಿಗೆ ಹಾಜರಾಗುತ್ತಿದ್ದಾರೆ.
ಈ ಬಗ್ಗೆ ಸಚಿವರ ಪ್ರವಾಸದ ಬಗ್ಗೆ ಹೊರಡಿಸಲಾಗಿರುವ ಪ್ರವಾಸ ಪಟ್ಟಿ ಈ ಬಗ್ಗೆ ಮಾಹಿತಿ ನೀಡಿದ್ದು, ಮತ್ತೊಮ್ಮೆ ಗುಡಿಬಂಡೆ ತಾಲೂಕು ಜನರಿಗೆ ಸಚಿವರ ದರ್ಶನ ಸಾಧ್ಯವಿಲ್ಲದಂತಾಗಿದೆ. ಇನ್ನು, ಸಂತ್ರಸ್ತರು ಸಚಿವರ ʼಅಮೃತ ಹಸ್ತʼದಿಂದ ಪರಿಹಾರವನ್ನು ಸ್ವೀಕಾರ ಮಾಡಲು ಇನ್ನಷ್ಟು ದಿನ ಕಾಯಬೇಕಿದೆ.
ಕಳೆದ ಒಂದೂವರೆ ವರ್ಷದಿಂದ ಕೋವಿಡ್ ಸೋಂಕಿನಿಂದ ತತ್ತರಿಸಿದ್ದ ಜನರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದರು. ಕುಟುಂಬದ ಕುಡಿಗಳು, ಯಜಮಾನರು ಸೇರಿದಂತೆ ಮುಂತಾದವರನ್ನು ಕಳೆದುಕೊಂಡ ಕುಟುಂಬಸ್ಥರು ಈಗ ಅನಾಥರಾಗಿದ್ದಾರೆ. ಅಂತು ಇಂತೂ ಪರಿಹಾರ ಬಂತು ಅಂದುಕೊಳ್ಳುತ್ತಿದಂತೆ ಗುಡಿಬಂಡೆ ಮತ್ತು ಬಾಗೇಪಲ್ಲಿಯಲ್ಲಿ ಆಯೋಜನೆಗೊಂಡಿದ್ದ ಸಚಿವರ ಪರಿಹಾರ ವಿತರಣಾ ಕಾರ್ಯಕ್ರಮ ರದ್ದಾಗಿದೆ. ಆದರೆ, ಸಚಿವರ ಸ್ವಕ್ಷೇತ್ರದಲ್ಲಿರುವ ಮಂಚೇನಹಳ್ಳಿ, ಚಿಕ್ಕಬಳ್ಳಾಪುರ ಹಾಗೂ ಪಕ್ಕದ ಗೌರಿಬಿದನೂರಿನಲ್ಲಿ ನಿಗದಿಯಾಗಿರುವ ಕಾರ್ಯಕ್ರಮಗಳು ರದ್ದಾಗಿಲ್ಲ.
ಸುಧಾಕರ್ ಅವರು ಸಚಿವರಾದ ಮೇಲೆ ಬಾಗೇಪಲ್ಲಿ ಕ್ಷೇತ್ರದ ಬಗ್ಗೆ ಮಲತಾಯಿ ದೋರಣೆ ತಾಳಲಾಗಿದೆ. ಅದರಲ್ಲೂ ಮುಖ್ಯವಾಗಿ ಗುಡಿಬಂಡೆ ತಾಲೂಕಿನ ಬಗ್ಗೆ ಸಚಿವರು ಅತೀವ ನಿರ್ಲಕ್ಷ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕು ಭಾರೀ ಮಳೆಯಿಂದ ತತ್ತರಿಸಿ ಸುಮಾರು ಐವತ್ತು ದಿನಗಳಿಗೆ ಹೆಚ್ಚು ಕಾಲ ತತ್ತರಿಸಿತ್ತು. ನಾಲ್ಕು ದಿಕ್ಕುಗಳಿಂದ ಸಂಪರ್ಕ ಕಡಿದುಹೋಗಿ ಗುಡಿಬಂಡೆ ನಡುಗಡ್ಡೆಯಾಗಿ ಬದಲಾದರೂ ಸಚಿವರು ತಾಲೂಕಿಗೆ ಭೇಟಿ ನೀಡಿರಲಿಲ್ಲ. ಅವರ ಭೇಟಿ ಕೇವಲ ಚಿಕ್ಕಬಳ್ಳಾಪುರಕ್ಕೆ ಮಾತ್ರ ಸೀಮಿತಚವಾಗಿತ್ತು. ಅಲ್ಲದೆ; ಜಿಲ್ಲಾಧಿಕಾರಿಗಳು ಕೂಡ ಮಳೆ ಶುರುವಾಗಿ ನಲವತ್ತೈದು ದಿನಗಳ ನಂತರ ಗುಡುಬಂಡೆಗೆ ಕಾಟಾಚಾರಕ್ಕೆ ಭೇಟಿ ನೀಡಿದ್ದರು. ಗುಡಿಬಂಡೆಗೆ ನಿಗದಿಯಾಗಿದ್ದ ಮುಖ್ಯಮಂತ್ರಿ ಭೇಟಿಯೂ ಕೊನೆ ಕ್ಷಣದಲ್ಲಿ ರದ್ದಾಗಿತ್ತು. ಈ ಬಗ್ಗೆ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಚಿಕ್ಕಬಳ್ಳಾಪುರಕ್ಕೆ ಸೀಮಿತವಾದ ಸರಕಾರ
ಈ ಹಿಂದೆ ಹಲವು ಭಾರಿ ಗುಡಿಬಂಡೆ ಮತ್ತು ಬಾಗೇಪಲ್ಲಿಗೆ ಸಚಿವ ಡಾ.ಸುಧಾಕರ್ ಭೇಟಿ ಕಾರ್ಯಕ್ರಮ ನಿಗದಿಯಾಗಿತ್ತು. ಇನ್ನೇನು ಕಾರ್ಯಕ್ರಮ ನಡೆಯುತ್ತದೆ ಎಂದು ಅಧಿಕಾರಿಗಳು ಎದ್ದೆವೋ ಬಿದ್ದೆವೋ ಅಂತ ಎಲ್ಲಾ ಸಿದ್ದತೆಗಳು ಮಾಡಿಕೊಂಡು ಗಂಟೆಗಟ್ಟಲೆ ಕಾದಿದ್ದರು. ಪೊಲೀಸರಂತೂ ಸಚಿವರ ಶಿಷ್ಠಾಚಾರದಲ್ಲೇ ಇಲ್ಲದ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲು ಸಿದ್ಧವಾಗಿದ್ದರು. ಕೊನೆಗೆ ಕಾರ್ಯಕ್ರಮ ರದ್ದಾಗಿದೆ ಎಂಬ ಮಾಹಿತಿ ಬಂದ ನಂತರ ಅಧಿಕಾರಿಗಳು ಸುಸ್ತಾಗುತ್ತಿದ್ದರು. ಈಗ ಮತ್ತೆ ಅದೇ ರಾಗ ಮುಂದುವರಿದಿದ್ದು ಇಂದು ನಿಗದಿಯಾಗಿದ್ದ ಕಾರ್ಯಕ್ರಮವೂ ಮುಂದೂಡಲಾಗಿದೆ ಎಂದು ತಾಲೂಕು ಆಡಳಿತ ಮಾಹಿತಿ ನೀಡಿದೆ.
ಪರಿಹಾರಕ್ಕೆ ಇನ್ನಷ್ಟು ದಿನ ಕಾಯಬೇಕು
ಮೊದಲ ಮತ್ತು ಎರಡನೇ ಅಲೆಯಲ್ಲಿ ಕೋವಿಡ್ ಸೋಂಕಿಗೆ ಮೃತರಾದವರ ಕುಟುಂಬ ಸಂಕಷ್ಟದಲ್ಲಿದೆ. ಸರಕಾರ ಪರಿಹಾರ ಘೋಷಿಸಿತಚ್ತು. ಆದರೆ, ಈಗ ಪರಿಹಾರ ಪಡೆಯಲು ಸಚಿವರು ಬರುವವರೆಗೂ ಕಾಯಬೇಕಂತೆ ಎಂದು ಕೋವಿಡ್ ಮೃತರ ಕುಟುಂಬ ಅಳಲು ತೋಡಿಕೊಳ್ಳುತ್ತಿದ್ದಾರೆ.
ಕೆಲಸ ಇಲ್ಲ, ಮನೆ ನಡೆಯುವುದೇ ಕಷ್ಟವಾಗಿದೆ. ಈಗ ನೋಡಿದರೆ ಸಚಿವರು ಬರುತ್ತಿಲ್ಲ ಎನ್ನುವ ಸುದ್ದಿ ಬಂದಿದೆ. ನಮಗೆ ಇನ್ನು ಪರಿಹಾರ ಯಾವಾಗ ಸಿಗುತ್ತದೆಯೋ ಗೊತ್ತಿಲ್ಲ ಎಂದು ಕೋವಿಡ್ ಸಂತ್ರಸ್ತರೊಬ್ಬರು ಸಿಕೆನ್ಯೂಸ್ ನೌ ಬಳಿ ಅಳಲು ತೋಡಿಕೊಂಡರು.
ಸಿಎಂ ಪ್ರವಾಸ ಕೂಡ ರದ್ದಾಗಿತ್ತು
ಕಳೆದ ತಿಂಗಳಲ್ಲಿ ಮಳೆ ಹಾನಿ ಪ್ರದೇಶಗಳ ವೀಕ್ಷಣೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಭೇಟಿ ನಿಗದಿಯಾಗಿತ್ತು. ಗುಡಿಬಂಡೆ ತಾಲೂಕು ಆಡಳಿತ ಸೇರಿದಂತೆ ಎಲ್ಲಾ ಅಧಿಕಾರಿಗಳು ಸಿಎಂ ಬರುತ್ತಾರೆಂದು ಕಾದು ಕಾದು ಕಾರ್ಯಕ್ರಮ ರದ್ದಾದ ನಂತರ ನಿರಾಸೆಯಿಂದ ವಾಪಸ್ ಹೋದರು. ಬೊಮ್ಮಾಯಿ ಬರುತ್ತಾರೆಂದು ಅಮಾನಿ ಭೈರಸಾಗರ ಕೆರೆ ಏರಿ ಮೇಲೆ ತಾತ್ಕಾಲಿಕ ದೀಪಗಳ ವ್ಯವಸ್ಥೆ ಮಾಡಲಾಗಿತ್ತು. ಇದೆಲ್ಲವನ್ನು ಗಮನಿಸಿದರೆ ಸರಕಾರ ಕೇವಲ ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರಕ್ಕಷ್ಟೇ ಸೀಮತವಾದಂತಿದೆ ಎಂದು ಗುಡಿಬಂಡೆ ಜನರು ಹೇಳುತ್ತಿದ್ದಾರೆ.
ಹೊಸದಾಗಿ ಹೊರಡಿಸಲಾಗಿರುವ ಸಚಿವ ಪ್ರವಾಸ ಕಾರ್ಯಕ್ರಮದ ಪಟ್ಟಿ.
ಕೇಂದ್ರದ ಮಾಜಿ ಸಚಿವರಾದ ಆರ್.ಎಲ್.ಜಾಲಪ್ಪ ಅವರ ಅಂತ್ಯಕ್ರಿಯೆಯಲ್ಲಿ ಸಚಿವರು ಭಾಗಿಯಾಗಲಿದ್ದಾರೆ. ಹಾಗಾಗಿ ಗುಡಿಬಂಡೆ ಕಾರ್ಯಕ್ರಮವನ್ನು ಅವರು ರದ್ದುಗೊಳಿಸಿದ್ದಾರೆ. ಆದ್ದರಿಂದ ಇಂದು ಗುಡಿಬಂಡೆಯಲ್ಲಿ ಕೋವಿಡ್ ಮತ್ತು ಮಳೆ ಸಂತ್ರಸ್ತರಿಗೆ ಪರಿಹಾರ ಚೆಕ್ ವಿತರಣಾ ಕಾರ್ಯಕ್ರಮವನ್ನು ಮುಂದೂಡಲಾಗಿರುತ್ತದೆ. ಮುಂದಿನ ದಿನಾಂಕ ನಿಗದಿ ಮಾಡಿ ಪರಿಹಾರ ವಿತರಣಾ ಕಾರ್ಯಕ್ರಮ ನಡೆಸುತ್ತೇವೆ.
ಸಿಬ್ಗತ್ ವುಲ್ಲಾ, ತಹಸೀಲ್ದಾರ್