ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪ ಕೃತ್ಯವೂ ವಿಕೃತಿಯೇ, ಕತ್ತಲಾದ ಮೇಲೆ ಕಳ್ಳರಂತೆ ನುಸುಳಿ ಕಲ್ಲು ಹೊಡೆಯುವುದು ಹೇಡಿತನ
ಬೆಂಗಳೂರು: ಶಿವಾಜಿ ಪ್ರತಿಮೆಗೆ ಮಸಿ ಬಳಿಯುವ ಮೂಲಕ ಕ್ನನಡಿಗರು ವಿಕೃತಿ ಮೆರೆದಿದ್ದಾರೆ ಎಂದು ಟೀಕಿಸಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ರಾಜ್ಯದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಖಡಕ್ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಇಂದು ಟ್ವೀಟ್ ಮಾಡಿರುವ ಅವರು; ಉದ್ಧವ್ ಠಾಕ್ರೆ ಅವರಿಗೆ ಶಿವಾಜಿ ಮುಖ್ಯವಾದರೆ, ಕನ್ನಡಿಗರಿಗೆ ಸಂಗೊಳ್ಳಿ ರಾಯಣ್ಣ ಅವರು ಮುಖ್ಯರೇ. ಇದನ್ನು ಅವರು ಅರ್ಥ ಮಾಡಿಕೊಂಡು ಮಾತನಾಡಬೇಕಿತ್ತು ಎಂದು ಎಂದು ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಟ್ವೀಟ್ʼನ ಪೂರ್ಣಪಾಠ ಇಲ್ಲಿದೆ;
ಬೆಳಗಾವಿಯಲ್ಲಿ ಬೇರೆಯವರು ಬೇಳೆ ಬೇಯಿಸಿಕೊಳ್ಳುವುದು ಬೇಡ. ನಮ್ಮ ಹೆಮ್ಮೆಯ ಕಲಿ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಯನ್ನು ವಿರೂಪಗೊಳಿಸಿದ ದೇಶ ದ್ರೋಹಿಗಳಿಗೆ ತಕ್ಕ ಪಾಠ ಕಲಿಸುವುದು ಬಿಟ್ಟು ಕನ್ನಡಪರ ಹೋರಾಟಗಾರರ ಮೇಲೆ ರಾಜ್ಯ ಸರಕಾರ ಪ್ರತಾಪ ತೋರಿಸುವುದು ಬೇಡ.
ಶಿವಾಜಿ ಪ್ರತಿಮೆ ವಿರೂಪ ಮಾಡಿದ ವಿಷಯವನ್ನು ಪ್ರಸ್ತಾಪ ಮಾಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಅನಗತ್ಯ ಹೇಳಿಕೆ ಒಪ್ಪಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಪದವಿಯಲ್ಲಿದ್ದು ಒಕ್ಕೂಟ ವ್ಯವಸ್ಥೆ ಆಶಯವನ್ನು ಗಾಳಿಗೆ ತೂರುವ ಉದ್ಧಟತನದ ಮಾತೇಕೆ?
ಶಿವಾಜಿ ಮಹಾರಾಜರ ಬಗ್ಗೆ ಗೌರವ ಕೊಡೋಣ. ಹಾಗಂತ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಅವರ ಬಗ್ಗೆ ಮರಾಠಿಗರಿಗೆ ಅಸಡ್ಡೆ ಯಾಕೆ? ಇಡೀ ದೇಶಕ್ಕೆ ಸ್ವಾತಂತ್ರ್ಯ ಸಿಗಲಿ ಎಂದು ಹೋರಾಟ ನಡೆಸಿದ ರಾಯಣ್ಣ ಅವರ ಪ್ರತಿಮೆ ಹಾಳು ಮಾಡಿದ ಕೆಟ್ಟ ಮನಸ್ಸುಗಳಿಗೆ ಏನು ಹೇಳುವುದು?
ವಿಕೃತ ಮನಸ್ಸು ಯಾರದ್ದು ಎನ್ನುವುದು ಉದ್ಧವ್ ಠಾಕ್ರೆ ಅವರು ಅರ್ಥ ಮಾಡಿಕೊಂಡರೆ ಉತ್ತಮ. ನಿಮಗೆ ಶಿವಾಜಿ ಹೇಗೆ ಮುಖ್ಯರೋ, ನಮಗೆ ಸಂಗೊಳ್ಳಿ ರಾಯಣ್ಣ ಅವರು ಹಾಗೆಯೇ ಪೂಜ್ಯರು. ಈ ವಿಷಯ ನಿಮಗೆ ಅರ್ಥವಾಗಲಿಲ್ಲ, ಯಾಕೆ?
ಕತ್ತಲಾದ ಮೇಲೆ ಕಳ್ಳರಂತೆ ನುಸುಳಿ ವಾಹನಗಳಿಗೆ ಕಲ್ಲು ಹೊಡೆಯುವುದು ಹೇಡಿತನ. ಮಹಾನ್ ರಾಷ್ಟ್ರಪ್ರೇಮಿ, ಕೆಚ್ಚದೆಯ ವೀರರಾದ ರಾಯಣ್ಣ ಅವರ ಪ್ರತಿಮೆಗೆ ಹಾನಿ ಮಾಡಿದ್ದು ನಿಜವಾದ ವಿಕೃತ. ಮಹಾರಾಷ್ಟ್ರ ಮುಖ್ಯಮಂತ್ರಿಗಳು ಇದನ್ನೆಲ್ಲ ಸಮರ್ಥನೆ ಮಾಡಿಕೊಳ್ಳುತ್ತಿರುವುದು ವಿಪರ್ಯಾಸ.