ಮಂಡಿಕಲ್ಲು, ಭೋಗಪರ್ತಿ ಗ್ರಾಮಗಳ ಸುತ್ತಮುತ್ತ ಗ್ರಾಮಗಳಲ್ಲಿ ನಡುಗಿದ ಮನೆಗಳು
ಕಲ್ಲುಕ್ವಾರಿಗಳಿಂದ ಕಾದಿದೆಯಾ ಆಪತ್ತು; ಕಲ್ಲು ಕಿರಾತಕರಿಗೆ ತಟ್ಟಲಿದೆಯಾ ಬಾಲನಾಗಮ್ಮನ ಶಾಪ
by GS Bharath Gudibande
ಚಿಕ್ಕಬಳ್ಳಾಪುರ: ಕಳೆದ ತಿಂಗಳು ಮಳೆಯಿಂದ ತತ್ತರಿಸಿದ್ದ ಚಿಕ್ಕಬಳ್ಳಾಪುರ ಜಿಲ್ಲೆ ಇದೀಗ ಭೂಕಂಪನದಿಂದ ಬೆಚ್ಚಿಬಿದ್ದಿದೆ.
ಬೆಳ್ಳಂಬೆಳಿಗ್ಗೆ ಎರಡು ಬಾರಿ ಭೂಮಿ ನಡುಗಿದ ಅನುಭವವಾಗಿದ್ದು, ಜನರು ಆತಂಕಕ್ಕೆ ಗುರಿಯಾಗಿದ್ದಾರೆ. ಭೂಮಿ ನಡುಗಿದ ಅನುಭವ ಆಗುತ್ತಿದ್ದಂತೆಯೇ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ಲು, ಭೋಗಪರ್ತಿ ಗ್ರಾಮಗಳ ಸುತ್ತಮುತ್ತ ಗ್ರಾಮಗಳಲ್ಲಿ ಭೂಕಂಪನದ ಅನುಭವ ಆಗಿದೆ. ರಿಕ್ಟರ್ ಮಾಪಕದಲ್ಲಿ 2.9ರಿಂದ 3ರಷ್ಟು ಕಂಪನದ ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಎಸ್‌ಸಿ) ತಿಳಿಸಿದೆ.
ಎರಡು ಸಲ ಕಂಪಿಸಿದ ಭೂಮಿ
ತಾಲೂಕಿನ ಮಂಡಿಕಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಬೋಗೇನಹಳ್ಳಿ, ಭೋಗಪರ್ತಿ, ಹೊಸಹಳ್ಳಿ, ದೊಡ್ಡಹಳ್ಳಿ ಮುಂತಾದ ಕಡೆ ಎರಡು ಬಾರಿ ಲಘು ಭೂಕಂಪನ ಉಂಟಾಗಿದೆ ಎಂದು ವರದಿಯಾಗಿದೆ. ಈ ಭೂಕಂಪನದಿಂದ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ.
ಆತಂಕದಲ್ಲಿ ಸಾರ್ವಜನಿಕರು
ಇತ್ತೀಚಿನ ದಿನಗಳಲ್ಲಿ ಒಂದಲ್ಲ ಒಂದು ರೀತಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಲವು ಸಲ ಭೂಮಿ ಕಂಪಿಸಿದ ಅನುಭವ ಆಗುತ್ತಿದೆ. ಇದಕ್ಕೆಲ್ಲ ಎಗ್ಗಿಲ್ಲದೆ ನಡಯುತ್ತಿರುವ ಕಲ್ಲು ಗಣಿಗಾರಿಕೆ, ಭಾರೀ ಪ್ರಮಾಣದ ಬಾಂಬ್ ಬ್ಲಾಸ್ಟಿಂಗ್ ಮಾಡುವುದು ಸಮಸ್ಯೆ ಆಗಿರಬಹುದೇ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಹರದಾಡುತ್ತಿವೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತವಾಗಿ ಪರಿಶೀಲಿಸಿ ಕ್ರಮ ವಹಿಸಬೇಕಾಗಿದೆ.
ಮಂಡಿಕಲ್ ಸುತ್ತಮುತ್ತ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಮುಖ್ಯವಾಗಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರ ಹುಟ್ಟೂರು ಪೆರೇಸಂದ್ರಕ್ಕೆ ಕೂಗಳತೆ ದೂರದಲ್ಲೇ ಕಲ್ಲು ಗಣಿಗಾರಿಕೆ ಭಾರೀ ಪ್ರಮಾಣದಲ್ಲಿ ನಡೆಯುತ್ತಿದೆ. ಕೆಲ ತಿಂಗಳ ಹಿಂದೆ ಸಮೀಪದ ಹಿರೇನಾಗವೇಲಿ ಗ್ರಾಮದ ಬಳಿಯ ಕಲ್ಲು ಕ್ವಾರಿಯಲ್ಲಿ ಅಕ್ರಮ ಸ್ಫೋಟಕಗಳು ಸಿಡಿದು ಆರು ಜನರ ದೇಹಗಳು ಛಿದ್ರವಾಗಿದ್ದವು. ಈ ಪ್ರಕರಣ ಮಾಸುವ ಮುನ್ನವೇ ಜಿಲ್ಲೆಯಲ್ಲಿ ಭೂಕಂಪ ಸಂಭವಿಸಿದೆ.
ಈ ನಡುವೆ; ಭೂ ಕಂಪದ ಬಗ್ಗೆ ಆತಂಕ ಬೇಡ ಎಂದು ಜಿಲ್ಲಾಧಿಕಾರಿ ಆರ್.ಲತಾ ಅವರು ಜನರಿಗೆ ಧೈರ್ಯ ತುಂಬಿದ್ದಾರೆ.
ಚಿಕ್ಕಬಳ್ಳಾಪುರಕ್ಕೆ ಕಂಟಕವಾಗುವರೇ ಬಾಲನಾಗಮ್ಮ!?
ಚಿಕ್ಕಬಳ್ಳಾಪುರದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಜನರ ಪ್ರಾಣಕ್ಕೆ ಕುತ್ತಾಗುತ್ತಾ ಎನ್ನುವ ಆತಂಕ ಎದುರಾಗಿದೆ. ತಾಲೂಕಿನ ಹಿರೇನಾಗವೇಲಿಯ ಬಾಲನಾಗಮ್ಮ ಬೆಟ್ಟದಲ್ಲಿನ ಕಲ್ಲು ಗಣಿಗಾರಿಕೆ ಶಾಪವಾಗಿ ಪರಿಣಮಿಸುತ್ತಾ ಎನ್ನುವ ಭೀತಿ ಜನರಿಗೆ ಕಾಡುತ್ತಿದೆ.
ಬಾಲನಾಗಮ್ಮ ಬೆಟ್ಟ ಮುಟ್ಟಿದವರಿಗೆ ಹಲವು ರೀತಿಯಲ್ಲಿ ಅಪಾಯವಾಗಿದೆ ಎನ್ನುವುದು ಸ್ಥಳೀಯರು ಹೇಳುವ ಮಾತು. ಈ ಬೆಟ್ಟ ಮುಟ್ಟಿದವರಿಗೆ ಕಂಠಕ ತಪ್ಪಿಲ್ಲ. ಅಂಥ ದುಪ್ಷ್ರಯತ್ನ ಮಾಡಿರುವ ಅನೇಕ ಶಾಸ್ತಿ ಆಗಿದೆ. ಈಗಾಗಲೇ ಹಲವರು ಪ್ರಾಣ ಕಳೆದುಕೊಂಡು, ಆಸ್ತಿಪಾಸ್ತಿ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಬಾಲನಾಗಮ್ಮ ಬೆಟ್ಟ ಈಗ ಹಾಳು ಮಾಡಿರುವ ಪ್ರತಿಯೊಬ್ಬರಿಗೂ ಮುಂದೆ ಕಾದಿದೆ ಎನ್ನುವ ಮಾತನ್ನೂ ಸ್ಥಳೀಯರು ಹೇಳುತ್ತಾರೆ.
ಬಾಲನಾಗಮ್ಮ ಬೆಟ್ಟ
ಇನ್ನೊಂದೆಡೆ, ಹಿರೇನಾಗವೇಲಿ ಈ ಬೆಟ್ಟದ ಮೇಲೆ ಪುರಾಣ ಪ್ರಸಿದ್ಧ ಬಾಲನಾಗಮ್ಮ ದೇವಾಲಯ ಇದೆ. ಕಲ್ಲು ರಕ್ಕಸರು ಇನ್ನೇನು ದೇಗುಲದ ಹತ್ತಿರದವರೆಗೂ ಕಲ್ಲು ಗಣಿಗಾರಿಕೆ ಮಾಡಿದ್ದಾರೆ. ಸುಂಕಲಮ್ಮ ಗುಡಿಯನ್ನು ನೆಲಸಮ ಮಾಡಿದ ಮಾಡಿದ ಬಳ್ಳಾರಿ ಧಣಿಗಳು ಎದುರಿಸಿದ ಸಂಕಷ್ಟವನ್ನೇ ಬಾಲನಾಗಮ್ಮ ಬೆಟ್ಟವನ್ನು ನುಂಗಿದವರು ಅನುಭವಿಸಲಿದ್ದಾರೆ ಎಂದು ಸ್ಥಳೀಯರು ಹಿಡಿ ಶಾಪ ಹಾಕುತ್ತಿದ್ದಾರೆ.
1959ರಲ್ಲಿ ತೆಲುಗಿನಲ್ಲಿ ಬಂದ ʼಬಾಲನಾಗಮ್ಮʼ ಸಿನಿಮಾವನ್ನು ಈ ಬೆಟ್ಟದ ಮೇಲೆಯೇ ಚಿತ್ರೀಕರಿಸಲಾಗಿತ್ತಲ್ಲದೆ, ಅಂದಿನಿಂದ ಈ ಬೆಟ್ಟವನ್ನು ಬಾಲನಾಗಮ್ಮ ಬೆಟ್ಟ ಎಂದು ಕರೆಯಲಾಗುತ್ತದೆ. ಸುತ್ತಮುತ್ತಲಿನ ಗ್ರಾಮದವರ ಪಾಲಿಗೆ ಈ ಬೆಟ್ಟ ದೈವಕ್ಷೇತ್ರವಾಗಿತ್ತು. ಆದರೆ, ಸರಕಾರ ಮತ್ತು ಜಿಲ್ಲಾಡಳಿತ, ಕಲ್ಲುಕ್ವಾರಿ ಮಾಫಿಯಾ ಇಡೀ ಬೆಟ್ಟವನ್ನು ನುಂಗಿ ನೀರು ಕುಡಿದೆ.
ಬಾಲನಾಗಮ್ಮ ಬೆಟ್ಟವನ್ನು ಕಲ್ಲು ಕ್ವಾರಿಗಳು ನಾಶ ಮಾಡಿದ್ದಕ್ಕೆ ಬಾಲನಾಗಮ್ಮ ತಕ್ಕಶಾಸ್ತಿ ಮಾಡುತ್ತಿದ್ದಾರೆ ಎನ್ನುವ ಅನುಮಾನ ನಮ್ಮದು. ಈ ಬೆಟ್ಟದ ತಂಟೆಗೆ ಹೋದವರು ಅನೇಕರು ತೊಂದರೆ ಅನುಭವಿಸಿದ್ದಾರೆ. ಕೆಲ ತಿಂಗಳ ಹಿಂದೆ ಇಲ್ಲಿ ಜಿಲೆಟಿನ್ ಕಡ್ಡಿಗಳ ಸ್ಫೋಟಕ್ಕೆ ಆರು ಜನ ಬಲಿಯಾದರು. ಈಗ ಈ ಭಾಗದ ಸುತ್ತಮುತ್ತಲಿನ ಹತ್ತು-ಹದಿನೈದು ಹಳ್ಳಿಗಳಲ್ಲಿ ಭೂಕಂಪನವಾಗಿದೆ. ಇದಕ್ಕೆಲ್ಲ ಬಾಲನಾಗಮ್ಮನಿಗೆ ಅಪಚಾರ ಆಗಿದ್ದೇ ಕಾರಣವಾ ಎಂಬ ಭಯ ನಮಗೆ ಶುರುವಾಗಿದೆ.
ನವೀನ್, ಸ್ಥಳೀಯ ನಿವಾಸಿ
Comments 1