ಕೆಲಸ ಕಾಯಂ ಮಾಡುವಂತೆ ಒತ್ತಾಯ; ಜಿಲ್ಲಾಧಿಕಾರಿಗೆ ಮನವಿ
By GS Bharath Gudibande
ಚಿಕ್ಕಬಳ್ಳಾಪುರ: ಸರಕಾರಿ ಪದವಿ ಕಾಲೇಜುಗಳಲ್ಲಿ ಬೋಧನೆ ಮಾಡುತ್ತಿರುವ ಅತಿಥಿ ಉಪನ್ಯಾಸಕರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಚಿಕ್ಕಬಳ್ಳಾಪುರದ ನಗರದಲ್ಲಿ ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿ ನೂರಾರು ಅತಿಥಿ ಉಪನ್ಯಾಸಕರು ಮೆರವಣಿಗೆಯಲ್ಲಿ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ನಗರದ ಎಂ.ಜಿ.ರಸ್ತೆಯಲ್ಲಿರುವ ಸರಕಾರಿ ಪದವಿ ಕಾಲೇಜು ಮುಂಭಾಗದಿಂದ ಮೆರವಣಿಗೆ ಹೊರಟ ಉಪನ್ಯಾಸಕರು ಜೈ ಭೀಮ್ ವಿದ್ಯಾರ್ಥಿ ನಿಲಯ ಅವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಂತರ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಸಾಗಿದ ಸರಕಾರದ ವಿರುದ್ದ ಘೋಷಣೆ ಕೂಗಿ ಪ್ರತಿಭಟಿಸಿದರು.
ಸೇವಾ ಭದ್ರತೆ ನೀಡಿ
ಪ್ರತಿಭಟನಾ ನಿರತ ಅತಿಥಿ ಉಪನ್ಯಾಸಕರನ್ನು ಉದ್ದೇಶಿಸಿ ಮಾತನಾಡಿದ ಎಂ.ಮುನಿರಾಜು; ರಾಜ್ಯದಲ್ಲಿರುವ 438 ಸರಕಾರಿ ಪದವಿ ಕಾಲೇಜುಗಳಲ್ಲಿ ಸುಮಾರು 14,500 ಅತಿಥಿ ಉಪನ್ಯಾಸಕರು ಹತ್ತಾರು ವರ್ಷಗಳಿಂದ ಅತ್ಯಂತ ಕಡಿಮೆ ವೇತನ ಪಡೆದು ಕೆಲಸ ಮಾಡುತ್ತಾ ಬಂದಿದ್ದಾರೆ. ಸೇವೆಯನ್ನು ಖಾಯಂ ಮಾಡಿ ಎಂದು ಅನೇಕ ಹೋರಾಟ, ಹರತಾಳ, ಧರಣಿ, ತರಗತಿ ಬಹಿಷ್ಕಾರ ಮಾಡುವ ಮೂಲಕ ಸರಕಾರಕ್ಕೆ ಮನವಿ ಮಾಡಲಾಗಿದೆ. ಆದರೂ ಈ ಬೇಡಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳದೆ ಅತಿಥಿ ಉಪನ್ಯಾಸಕರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದೆ. ಹತ್ತಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಕೆಲವಾರು ಉಪನ್ಯಾಸಕರಿಗೆ ವಯೋಮಿತಿ ಮೀರಿದೆ. ಹಲವರು ಈ ವ್ಯವಸ್ಥೆಯಿಂದ ರೋಸಿ ಹೋಗಿ ಜೀವವನ್ನು ಕಳೆದುಕೊಂಡಿದ್ದಾರೆ. ಇಷ್ಟಾದರೂ ಕ್ರಮಕೈಗೊಳ್ಳದ ಸರಕಾರದ ಮೊಂಡುತನವನ್ನು ವಿರೋಧಿಸಿ ಡಿ.10ರಿಂದ ಪ್ರಾರಂಭವಾಗಿರುವ ತರಗತಿ ಬಹಿಷ್ಕಾರ ಚಳವಳಿ ನಡೆಸುತ್ತಿದ್ದೇವೆ. ಇದು ಮಾಡು ಇಲ್ಲವೆ ಮಡಿ ಹೋರಾಟವಾಗಿದ್ದು, ಸರಕಾರದಿಂದ ಸ್ಪಷ್ಟ ಆದೇಶ ಬರುವವರೆಗೆ ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವ ಪ್ರಮೇಯವೇ ಇಲ್ಲ ಎಂದು ತಿಳಿಸಿದರು.
ಅನಿರ್ದಿಷ್ಟಾವಧಿ ಪ್ರತಿಭಟನೆ
ಹಿರಿಯ ಉಪನ್ಯಾಸಕ ನರಸಿಂಹಮೂರ್ತಿ ಮಾತನಾಡಿ; ಹತ್ತಾರು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ನಮ್ಮನ್ನು ಕರ್ನಾಟಕ ನಾಗರೀಕ ಸೇವೆ ನಿಯಮ1(3)(2)ಮತ್ತು ನಿಯಮ14ಡಿ ಅಡಿಯಲ್ಲಿ ಸೇವೆಯನ್ನು ವಿಲೀನಗೊಳಿಸಬೇಕು. ಈ ಪ್ರಕ್ರಿಯೆ ಮುಗಿಯುವವರೆಗೂ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅಧಿಸೂಚನೆಯನ್ನು ತಡೆಹಿಡಿಯಬೇಕು. ಕೊರೋನಾ ಅವಧಿ ನಂತರ ಅತಿಥಿ ಉಪನ್ಯಾಸಕರ ನೇಮಕಾತಿ ಆದೇಶವನ್ನು ಹಿಂಪಡೆದು, 12 ತಿಂಗಳ ಅವಧಿಗೆ ನೇಮಕ ಆದೇಶ ಮಾಡಬೇಕು. ಇಲ್ಲದಿದ್ದರೆ ವಿಧಾನಸೌಧದ ಮುಂದೆ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಪ್ರತಿಭಟನೆಯಲ್ಲಿ ರವೀಂದ್ರ, ಹರ್ಷನ್, ಡಾ.ಪ್ರಭು, ರಘುನಾಥ, ರಾಮಚಂದ್ರ, ಗಿರಿಜಾ, ಕೃಷ್ಣಮೂರ್ತಿ, ಅಜಿತ್ ಕುಮಾರ್, ಮೊಹಮ್ಮದ್ ಸಖೀಬ್. ಎನ್.ನರಸಿಂಹ ಮೂರ್ತಿ, ಗಂಗಾಧರ್, ನಾರಾಯಾಣಸ್ವಾಮಿ, ಮಂಜುನಾಥ್, ರಾಮಾಂಜಿನಪ್ಪ, ಹರೀಶ್, ಸೌಮ್ಯಾ, ಮಾಲಿನಿ, ರೋಜಾ, ರೀಟಾ, ಗಂಗಾಧರಪ್ಪ, ವೆಂಕಟರಮಣ, ಜಯಚಂದ್ರ, ಕಾಂತರಾಜ್, ಜಿ.ಎಸ್.ಭರತ್ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.