ಅಭದ್ರತೆ ಅಡಿಪಾಯವನ್ನೇ ಅಲ್ಲಾಡಿಸುತ್ತಿದೆ ಎಂದು DK ಬ್ರದರ್ಸ್ʼಗೆ ಟಾಂಗ್ ಕೊಟ್ಟ HDK
ಬೆಂಗಳೂರು: ತಮ್ಮನ್ನು ಹಾಸನದಿಂದ ವಲಸೆ ಬಂದವರು ಎಂದ ಡಿ.ಕೆ.ಶಿವಕುಮಾರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಟ್ವೀಟ್ ಮೂಲಕ ಕಟುವಾಗಿ ಚುಚ್ಚಿದ್ದಾರೆ.
ಹಾಗಾದರೆ; ಮಾಜಿ ಮುಖ್ಯಮಂತ್ರಿಗಳು ಮಾಡಿರುವ ಟ್ವೀಟ್ʼನಲ್ಲಿ ಏನಿದೆ? ಇಲ್ಲಿದೆ ಓದಿ..
- ಕಲ್ಲು ಬಂಡೆಗಳನ್ನು ನುಂಗಿ, ಮಣ್ಣು ಬಗೆದು ಪರರಿಗೆ ಬಿಕರಿ ಮಾಡಿಕೊಂಡು ಕೋಟೆ ಕೊತ್ತಲಗಳನ್ನು ಕಟ್ಟಿಕೊಂಡು ಮೆರೆಯುತ್ತಿರುವ ʼಡಿಸೈನ್ ವೀರರಿಗೆʼ ನಮ್ಮ ನೆಲ, ನಮ್ಮ ಜಲ ಎನ್ನುವುದು ಈಗ ನೆನಪಿಗೆ ಬಂದಿದೆ. ಆಭದ್ರತೆ ಅಡಿಪಾಯವನ್ನೇ ಅಲ್ಲಾಡಿಸುತ್ತಿದೆ! ಅಲ್ಲವೇ?
- ಕನಕಪುರ, ರಾಮನಗರ ಯಾರೋಬ್ಬರ ಸ್ವತ್ತಲ್ಲ. ಈ ನೆಲದ ಮಕ್ಕಳು ಎಂದು ಬಡಾಯಿ ಬಿಡುವ ಸಹೋದರರು ಇದೇ ನೆಲವನ್ನು ಹೇಗೆಲ್ಲಾ ನುಂಗಿ ನೀರು ಕುಡಿಯುತ್ತಿದ್ದಾರೆ ಎಂಬುದು ನನಗಿಂತ ಇಲ್ಲಿನ ಜನರಿಗೇ ಚೆನ್ನಾಗಿ ಗೊತ್ತು. ಆಟ ಎಂದ ಮೇಲೆ ಅಂತ್ಯವೂ ಇರಬೇಕಲ್ಲವೇ? ಆ ಕ್ಷಣ ಹತ್ತಿರ ಬಂದಿದೆಯೇನೋ.
- ನಾವು ಹಾಸನದಿಂದ ಬಂದಿದ್ದೇವೆ, ನಿಜ. ಇಲ್ಲಿನ ಜನ ನಮ್ಮನ್ನು ಮನೆ ಮಕ್ಕಳೆಂದು ಭಾವಿಸಿದ್ದಾರೆ. ನಾವೂ ಹಾಗೆಯೇ ನಡೆದುಕೊಂಡಿದ್ದೇವೆ. ಜನರ ಪ್ರೀತಿ, ಅಭಿಮಾನ, ನಮ್ಮ ದುಡಿಮೆ ಫಲವಾಗಿ ಜಿಲ್ಲೆಯಲ್ಲಿ ರಾಜಕೀಯ ಮಾಡುತ್ತಿದ್ದೇವೆ. ಜನರೇ ನಮಗೆ ಅಧಿಕಾರ ನೀಡಿದ್ದಾರೆ.
- ಹೌದು, ಹರದನಹಳ್ಳಿ ನನ್ನ ಜನ್ಮಸ್ಥಳ. ಬಿಡದಿ ನನ್ನ ಕರ್ಮಸ್ಥಳ. ಇದುವೇ ನನ್ನ ಪಾಲಿನ ಧರ್ಮಸ್ಥಳ. ಈ ಮಣ್ಣಲ್ಲಿಯೇ ನಾನು ಮಣ್ಣಾಗುವೆ ಎಂದು ಈಗಾಗಲೇ ಹೇಳಿದ್ದೇನೆ. ಇದರ ಹೊರತಾಗಿ ರಾಮನಗರಕ್ಕೆ ರಿಯಲ್ ಎಸ್ಟೇಟ್ ಮಾಡಲಿಕ್ಕೆ ನಾನು ಬಂದವನಲ್ಲ.
- ಹಾದಿ ತಪ್ಪಿದ ರಾಜಕಾರಣ ಬಹಳ ದಿನ ನಡೆಯಲ್ಲ. ಹಣ, ದರ್ಪ, ಧಮ್ಕಿ, ಧಿಮಾಕು ಇನ್ನು ಸಾಕು. ಜನ ಕೊಟ್ಟೂ ನೋಡುತ್ತಾರೆ, ಕೆಲವೊಮ್ಮೆ ಬಿಟ್ಟೂ ನೋಡುತ್ತಾರೆ. ಅನುಭವದಿಂದ ಪಾಠ ಕಲಿತರೆ ಒಳ್ಳೆಯದು. ಉಳಿದದ್ದು ಅವರಿಗೇ ಬಿಟ್ಟಿದ್ದು.