ಸಚಿವ ಡಾ.ಕೆ.ಸುಧಾಕರ್ & ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ನಡುವೆ ನಡೆದಿದೆಯಾ ಹಗ್ಗಜಗ್ಗಾಟ
By GS Bharath Gudibande
ಗುಡಿಬಂಡೆ: ಕೊರೊನಾದಿಂದ ಮೃತಪಟ್ಟ ಬಿಪಿಎಲ್ ಕುಟುಂಬ ಸದಸ್ಯರಿಗೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡುವ ರಾಜ್ಯ ಸರಕಾರದ ಘೋಷಣೆ ಹೊರಬಿದ್ದು ತಿಂಗಳುಗಳೇ ಕಳೆದಿದ್ದರೂ ಇನ್ನೂ ಪರಿಹಾರ ಸಂತ್ರಸ್ತರ ಕೈ ಸೇರಿಲ್ಲ.
ಪರಿಹಾರಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿರುವ ಜನರ ನೋವು ಒಂದೆಡೆಯಾದರೆ, ರಾಜಕಾರಣಿಗಳು ಬೇರೆಯದ್ದೇ ಲೆಕ್ಕಾಚಾರದಲ್ಲಿ ನಿರತಗಾಗಿ ರಾಜಕೀಯ ಲಾಭ ಪಡೆಯಲು ಹೊರಟಿದ್ದಾರೆಂಬ ಆಕ್ರೋಶ ವ್ಯಕ್ತವಾಗುತ್ತಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ, ಬಾಗೇಪಲ್ಲಿ ತಾಲೂಕುಗಳಿಗೆ ಸಚಿವ ಡಾ.ಕೆ.ಸುಧಾಕರ್ ಅವರು ಪರಿಹಾರ ವಿತರಣೆ ಮಾಡುವ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ, ಕಾರಣಾಂತರಗಳಿಂದ ಕಾರ್ಯಕ್ರಮ ರದ್ದು ಮಾಡಿ ಮುಂದೂಡಲಾಗಿತ್ತು.
ದುಡಿಯುವ ಜೀವವನ್ನು ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳಿಗೆ ಆಸರೆಯಾಗಲು ಪರಿಹಾರ ವಿತರಿಸಲು ರಾಜಕೀಯ ನಾಯಕರೇ ಬರಬೇಕು ಅಲ್ಲಿಯವರೆಗೂ ಪರಿಹಾರ ವಿತರಿಸಲು ಸಾಧ್ಯವಿಲ್ಲ ಎಂಬಂತೆ ಕಾಣುತ್ತಿದೆ ಎಂದು ಮೃತರ ಕುಟುಬಂಸ್ಥರು ಸಿಕೆನ್ಯೂಸ್ ನೌ ಜತೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಸಚಿವರು ಮತ್ತು ಶಾಸಕರ ಮೇಲಾಟ
ಸಂತ್ರಸ್ತರ ಪರಿಹಾರದ ವಿಚಾರದಲ್ಲಿ ಸಚಿವ ಡಾ.ಕೆ.ಸುಧಾಕರ್ ಮತ್ತು ಬಾಗೇಪಲ್ಲಿ ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ನಡುವೆ ಹಗ್ಗಜಗ್ಗಾಟ ನಡೆಯುತ್ತಿದೆಯಾ ಎಂಬ ಅನುಮಾನ ಈ ಭಾಗದ ಜನರಿಗೆ ಕಾಡುತ್ತಿದೆ. ಪರಿಹಾರದ ಹಣ ತಮ್ಮ ಕೈಯ್ಯಿಂದಲೇ ನಾವೇ ಕೊಡಬೇಕು ಎಂಬ ಹಠ ಇಬ್ಬರಲ್ಲಿ ಇದ್ದಂತೆ ಕಾಣುತ್ತಿದೆ.
ಅಧಿಕಾರಿಗಳಿಂದ ಕೊಡಿಸಲು ಜನ ಪ್ರತಿನಿಧಿಗಳಿಗೆ ಮನಸ್ಸಿಲ್ಲ. ಹೀಗಾಗಿ ಪರಿಹಾರ ವಿತರಣೆ ವಿಳಂಬವಾಗುತ್ತಿದೆ. ಇನ್ನೂ ರಾಜ್ಯದಲ್ಲಿ ಮತ್ತೆ ಮೂರನೇ ಅಲೆ ಭೀತಿ ಆರಂಭವಾಗಿದ್ದು ಪರಿಹಾರ ವಿತರಣೆ ಮತ್ತಷ್ಟು ವಿಳಂಬವಾಗಬಹುದು ಎನ್ನುವ ಅನುಮಾನ ಜನರನ್ನು ಕಾಡುತ್ತಿದೆ.
ಮೊದಲ ಮತ್ತು ಎರಡನೇ ಅಲೆಯಲ್ಲಿ ಕೋವಿಡ್-19 ಸೋಂಕಿಗೆ ಮೃತಪಟ್ಟವರ ಕುಟುಂಬಕ್ಕೆ ಸರಕಾರ ಪರಿಹಾರ ಘೋಷಿಸಿದೆ. ಆದರೆ ರಾಜಕೀಯ ನಾಯಕರು ತಮ್ಮ ಬೇಳೆ ಬೇಯಿಸಿಕೊಳ್ಳಲು ಸಂತ್ರಸ್ಥರ ಜತೆಗೆ ಆಟವಾಡುತ್ತಿರುವುದು ಸರಿಯಿಲ್ಲ. ಪರಿಹಾರ ಶೀಘ್ರವಾಗಿ ವಿತರಿಸಿ ಜನರ ನೆರವಿಗೆ ಸಹಕರಿಸಬೇಕು.
ರಮೇಶ್ (ದೂಕುಡು), ಗುಡಿಬಂಡೆ ನಿವಾಸಿ