ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಟೀಕೆ
ಬೆಂಗಳೂರು: ಮೇಕೆದಾಟು ಯೋಜನೆಯ ವಿಷಯದಲ್ಲಿ ಕಾಂಗ್ರೆಸ್ಸಿನವರು ಮಾಡಿದ ವಿಳಂಬ ದ್ರೋಹದ ಬಗ್ಗೆ ಸ್ಪೋಟಕ ಮಾಹಿತಿ ಹೊರಹಾಕುತ್ತೇನೆ ಎಂದು ಹೇಳಿದ ತಕ್ಷಣ ಕಾಂಗ್ರೆಸ್ ನಾಯಕರೆಲ್ಲಾ ಕಾವೇರಿಯಿಂದ ಭೀಮಾವರೆಗೆ ಮೈಮೇಲೆ ದೆವ್ವ ಬಂದಂತೆ ಕುಣಿಯುತ್ತಿದ್ದಾರೆ.
ಹೀಗೆಂದು ಹೇಳಿದವರು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು.
ನನ್ನ ಬುಟ್ಟಿಯಲ್ಲಿ ಹಾವು ಇದೆ ಎಂದು ಹೇಳಿದ್ದೇನೆಯೇ ಹೊರತು, ಯಾವ ಹಾವು ಎಂದು ಹೇಳಿಲ್ಲ. ಯೋಜನೆಯ ವಿಳಂಬಕ್ಕೆ ಕಾರಣವಾದ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ. ಅಧಿಕಾರದಲ್ಲಿದ್ದಾಗ ಆಲಸ್ಯತನ ವಿರೋಧ ಪಕ್ಷದಲ್ಲಿದ್ದಾಗ ಆಂದೋಲನ ಮಾಡುವುದು ಕಾಂಗ್ರೆಸ್ಸಿನವರ ಜಾಯಮಾನ ಎಂದು ಸಚಿವರು ಟೀಕಿಸಿದರು.
ಸ್ಪೋಟಕ ಮಾಹಿತಿಯನ್ನು ಕಾಂಗ್ರೆಸ್ಸಿನವರು ಪಾದಯಾತ್ರೆಯ ಮುನ್ನವೇ ಬಿಡುಗಡೆ ಮಾಡುವುದಾಗಿ ಸಚಿವರು ತಿಳಿಸಿದರು.
ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರಿಂದ ಮೇಕೆದಾಟು ಯೋಜನೆಗೆ ಅಡೆತಡೆ ಉಂಟಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರು ಹೇಳಿದ್ದಾರೆ. ಡಿಎಂಕೆ ಜತೆಗೂಡಿ ಸರಕಾರ ರಚಿಸಿರುವ ತಮಿಳುನಾಡು ಕಾಂಗ್ರೆಸಿಗರಿಗೆ ಸಿದ್ಧರಾಮಯ್ಯನವರು ಬುದ್ದಿ ಹೇಳಲಿ ಎಂದು ಹೇಳಿದರು.
40% ಕಮೀಷನ್ ವ್ಯವಹಾರ
ರಾಜ್ಯದಲ್ಲಿ 42,000 ನೊಂದಾಯಿತ ಗುತ್ತಿಗೆದಾರರಿದ್ದು, ಆರೋಪ ಮಾಡಿದ ಗುತ್ತಿಗೆದಾರರ ಸಂಘದ ಸದಸ್ಯತ್ವ ಕೇವಲ 800 ಮಾತ್ರ. 40% ಕಮೀಷನ್ 20% ಟ್ಯಾಕ್ಸ್ ಕೊಟ್ಟು ಕೇವಲ 40% ನಲ್ಲಿ ಕೆಲಸ ಮಾಡಿದ ಗುತ್ತಿಗೆದಾರರ ಯಾರಿರಬಹುದು? ಎಂದು ವ್ಯಂಗ್ಯವಾಡಿದರು ಸಚಿವರು. ಈಗ 40% ಆಗಿದೆ ಎಂದು ಹೇಳಿರುವ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಈ ಹಿಂದೆಯೂ ಕಮೀಷನ್ ದಂಧೆ ಇತ್ತು ಎಂದರೆ ಎಷ್ಟು ಇತ್ತು ಎಂದು ಜನತೆಗೆ ಹೇಳಲಿ ಎಂದು ಚುಚ್ಚಿದರು.