ಸರಕಾರಿ ಬಾಲಕಿಯರ ಪ್ರಾಥಮಿಕ ಶಾಲೆಗೆ ರಜೆ ಘೋಷಣೆ; ಆತಂಕದಲ್ಲಿ ಪೋಷಕರು
by GS Bharath Gudibande
ಗುಡಿಬಂಡೆ: ಕೋವಿಡ್-19 ಮೂರನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆಯು ಹೆಚ್ಚಾಗುತ್ತಿದೆ. ಮೊದಲ ಮತ್ತು ಎರಡನೇ ಅಲೆ ವೇಳೆ ಕೋವಿಡ್ ವಿರುದ್ಧ ಪರಿಣಾಮಕಾರಿ ಹೋರಾಟ ನಡೆಸಿದ್ದ ಗುಡಿಬಂಡೆ ತಾಲೂಕಿನಲ್ಲಿ ಮೂರನೇ ಅಲೆ ಅಬ್ಬರಿಸತೊಡಗಿದೆ.
ಪಟ್ಟಣದ ಕರ್ನಾಟಕ ಪಬ್ಲಿಕ್ ಬಾಲಕಿಯರ ಶಾಲೆಯ ಅಡುಗೆ ಸಿಬ್ಬಂದಿಯೊಬ್ಬರಿಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಮಕ್ಕಳ ಹಿತದೃಷ್ಟಿಯಿಂದ ಶಾಲೆಗೆ ರಜೆ ಘೋಷಣೆ ಮಾಡಲಾಗಿದೆ. ಆದರೆ, ಮಕ್ಕಳ ಪೋಷಕರಲ್ಲಿ ತೀವ್ರ ಆತಂಕ ಉಂಟಾಗಿದ್ದು, ತಾಲೂಕು ಆಡಳಿತ ಆ ಮಕ್ಕಳ ಆರೋಗ್ಯದ ಮೇಲೆ ತೀವ್ರ ನಿಗಾ ಇರಿಸಿದೆ.
280 ವಿದ್ಯಾರ್ಥಿಗಳ ಶಾಲೆ
ಈ ಶಾಲೆಯಲ್ಲಿ ಎಲ್.ಕೆ.ಜಿ, ಯು.ಕೆ.ಜಿ ಯಿಂದ 8ನೇ ತರಗತಿಯ ವರೆಗೆ ಒಟ್ಟು 280 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅಡುಗೆ ಸಿಬ್ಬಂದಿಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಸ್ಯಾನಿಟೈಸ್ ಮಾಡಿ ತಾಲೂಕು ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ರಜೆ ಘೋಷಣೆ ಮಾಡಿದ್ದಾರೆ.
ಅಲ್ಲದೆ, ಕೋವಿಡ್ ಸೋಂಕಿನ ಮೂಲವನ್ನು ಪತ್ತೆ ಹಚ್ಚುವ ಕೆಲಸದಲ್ಲಿ ಅಧಿಕಾರಿಗಳು ಮಗ್ನರಾಗಿದ್ದು, ಮಹಿಳಾ ಸಿಬ್ಬಂದಿಯ ಸಂಪರ್ಕಕ್ಕೆ ಬಂದ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸುವುದು ಸೇರಿದಂತೆ, ಅವರ ಸಂಪರ್ಕಕ್ಕೆ ಬಂದರ ಸರಪಳಿ ಪತ್ತೆಗೂ ಯತ್ನಿಸುತ್ತಿದ್ದಾರೆ.
ಆತಂಕದಲ್ಲಿ ಪೋಷಕರು
ಕೋವಿಡ್-19 ಮೊದಲ ಮತ್ತು ಎರಡನೇ ಅಲೆಯಲ್ಲಿ ಮಕ್ಕಳ ಹಿತದೃಷ್ಟಿಯಿಂದ ಸರಕಾರ ಶಾಲಾ-ಕಾಲಾಜುಗಳಿಗೆ ರಜೆ ನೀಡಿತ್ತು. ಆದರೆ, ಕೋವಿಡ್-19 ಮೂರನೇ ಅಲೆ ಹೆಚ್ಚಾಗುತ್ತಿದ್ದರೂ ಶಾಲೆ ಕಾಲೇಜುಗಳಿಗೆ ರಜೆ ಘೋಷಣೆ ಮಾಡದೇ ನಿರ್ಲಕ್ಷ್ಯ ತೋರಿದ್ದಾರೆ ಹಾಗೂ ಈಗ ಶಾಲೆಯ ಅಡುಗೆ ಸಿಬ್ಬಂದಿಗೆ ಸೋಂಕಿನ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಪೋಷಕರು ಆತಂಕದಲ್ಲಿದ್ದಾರೆ ಎಂದ ಕೆಲ ಪೋಷಕರು ಸಿಕೆನ್ಯೂಸ್ ನೌ ಜತೆ ಮಾತನಾಡುತ್ತಾ ಅಳಲು ತೋಡಿಕೊಂಡರು.
ಆದರೆ, ತಾಲೂಕು ಮಟ್ಟದ ಅಧಿಕಾರಿಗಳು ಪೋಷಕರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಶಾಲೆಯ ಅಡುಗೆ ಸಿಬ್ಬಂದಿಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಯಾವುದೇ ಭಯ ಮತ್ತು ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ಇದೇ ವೇಳೆ ಸಿಕೆನ್ಯೂಸ್ ನೌ ಜತೆ ಮಾಹಿತಿ ಹಂಚಿಕೊಂಡ ಶಾಲೆಯ ಮುಖ್ಯ ಶಿಕ್ಷಕ ಆದಿನಾರಾಯಣಪ್ಪ; ಮೂವರು ಅಡುಗೆ ಸಿಬ್ಬದಿಯಲ್ಲಿ ಒಬ್ಬರಿಗೂ ಪಾಸಿಟಿವ್ ಬಂದಿದೆ. 10 ಶಿಕ್ಷಕರು ಈ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದು, ಎಲ್ಲರನ್ನೂ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದರು.
ಶಾಲೆಯ ಅಡುಗೆ ಸಿಬ್ಬಂದಿಗೆ ಪಾಸಿಟಿವ್ ಬಂದಿದ್ದು, ಯಾರೂ ಆತಂಕಪಡುವ ಅಗತ್ಯವಿಲ್ಲ. ಸೋಂಕಿತ ವ್ಯಕ್ತಿ ಆರೋಗ್ಯವಾಗಿದ್ದಾರೆ. ಮಕ್ಕಳ ಹಿತದೃಷ್ಟಿಯಿಂದ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸೂಚನೆ ಮೆರೆಗೆ ರಜೆ ಘೋಷಿಸಲಾಗಿದೆ.
ಚಂದ್ರಶೇಖರ್, ಶಿಕ್ಷಣ ಸಂಯೋಜಕರು, ಗುಡಿಬಂಡೆ
ರಾಜ್ಯದಲ್ಲಿ ಸೋಂಕು ಸ್ಫೋಟ
ಉಳಿದಂತೆ; ರಾಜ್ಯಾದ್ಯಂತ ಕಳೆದ 24 ಗಂಟೆಗಳಲ್ಲಿ 11,698 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ನಾಲ್ವರು ಕೋವಿಡ್-19 ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಬೆಂಗಳೂರು ಒಂದರಲ್ಲೇ 9,221 ಮಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಕೋವಿಡ್-19 ಪಾಸಿಟಿವಿಟಿ ದರ 7.77%ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.