ಪರಿಹಾರ ವಿತರಿಸಿ ಪ್ರಚಾರ ಗಿಟ್ಟಿಸಲು ಸಚಿವರು-ಶಾಸಕರ ಹಗ್ಗಜಗ್ಗಾಟ
by GS Bharath Gudibande
ಗುಡಿಬಂಡೆ: ಕೋವಿಡ್ ಸೋಂಕಿನಿಂದ ಮೃತಪಟ್ಟವರ ಕುಟುಂಬಗಳಿಗೆ ಸರಕಾರ ಪರಿಹಾರ ಘೋಷಿಸಿದ್ದರೂ ಜಿಲ್ಲೆಯ ಸಚಿವರು, ಶಾಸಕರು ರಾಜಕೀಯ ಲಾಭ ಪಡೆಯಲು ಜನರ ಸಂಕಷ್ಟಗಳ ಜತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ತಾಲೂಕಿನ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಕೆನ್ಯೂಸ್ ನೌ ಜತೆ ಮಾತನಾಡಿದ ಅವರು; ಕೋವಿಡ್-19 ಸೋಂಕಿನಿಂದ ಮೃತರಾದವರ ಕುಟುಂಬಗಳು ಸಾಕಷ್ಟು ಸಮಸ್ಯೆ, ತೊಂದರೆಗಳನ್ನು ಅನುಭವಿಸುತ್ತಿದ್ದು, ಅವರಿಗೆ ಪರಿಹಾರ ನೀಡಲು ಮೀನಾಮೇಷ ಎಣಿಸುತ್ತಿರುವುದು ಸರಿಯಲ್ಲ. ಕೂಡಲೇ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು..
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ, ಬಾಗೇಪಲ್ಲಿ ತಾಲೂಕುಗಳಿಗೆ ಸಚಿವ ಡಾ.ಕೆ.ಸುಧಾಕರ್ ಅವರು ಪರಿಹಾರ ವಿತರಣೆ ಮಾಡುವ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ, ಕಾರಣಾಂತರಗಳಿಂದ ಕಾರ್ಯಕ್ರಮ ಮುಂದೂಡಿ ತಿಂಗಳಾದರೂ ಇನ್ನೂ ಕಾರ್ಯಕ್ರಮ ನಿಗದಿಯಾಗಿಲ್ಲ.
ದುಡಿಯುವ ಜೀವವನ್ನು ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳಿಗೆ ಆಸರೆಯಾಗಿ ಪರಿಹಾರ ವಿತರಿಸಲು ರಾಜಕೀಯ ನಾಯಕರೇ ಬರಬೇಕು. ಅಲ್ಲಿಯವರೆಗೂ ಪರಿಹಾರ ವಿತರಿಸಲು ಸಾಧ್ಯವಿಲ್ಲ ಎಂಬಂತೆ ಕಾಣುತ್ತಿದೆ ಎಂದು ಮೃತರ ಕುಟುಬಂಸ್ಥರು ಸಿಕೆನ್ಯೂಸ್ ನೌ ಜತೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಸಚಿವರು ಮತ್ತು ಶಾಸಕರ ಜಗ್ಗಾಟ
ಸಂತ್ರಸ್ತರ ಪರಿಹಾರದ ವಿಚಾರದಲ್ಲಿ ಸಚಿವ ಡಾ.ಕೆ.ಸುಧಾಕರ್ ಮತ್ತು ಬಾಗೇಪಲ್ಲಿ ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ನಡುವೆ ಹಗ್ಗಜಗ್ಗಾಟ ನಡೆಯುತ್ತಿದೆಯಾ ಎಂಬ ಅನುಮಾನ ಈ ಭಾಗದ ಜನರಿಗೆ ಕಾಡುತ್ತಿದೆ. ಪರಿಹಾರದ ಹಣ ತಮ್ಮ ಕೈಯ್ಯಿಂದಲೇ ಸ್ವತಃ ನಾವೇ ಕೊಡಬೇಕು ಎಂಬ ಹಠ ಇಬ್ಬರಲ್ಲಿ ಇದ್ದಂತೆ ಕಾಣುತ್ತಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳಿಂದ ಕೊಡಿಸಲು ಜನ ಪ್ರತಿನಿಧಿಗಳಿಗೆ ಮನಸ್ಸಿಲ್ಲ
ಪರಿಹಾರಕ್ಕಾಗಿ ಸಂತ್ರಸ್ಥರು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಇನ್ನೂ ರಾಜ್ಯದಲ್ಲಿ ಮತ್ತೆ ಮೂರನೇ ಅಲೆ ಭೀತಿ ಆರಂಭವಾಗಿದ್ದು ಪರಿಹಾರ ವಿತರಣೆ ಮತ್ತಷ್ಟು ವಿಳಂಬವಾಗಬಹುದು ಎನ್ನುವ ಅನುಮಾನ ಜನರನ್ನು ಕಾಡುತ್ತಿದೆ. ಅನಗತ್ಯವಾಗಿ ಜನಪ್ರತಿನಿಧಿಗಳು ಪರಿಹಾರ ನೀಡಿಕೆಯನ್ನು ವಿಳಂಬ ಮಾಡುತ್ತಿದ್ದು, ಅಧಿಕಾರಿಗಳು ಅಸಹಾಯಕರಾಗಿದ್ದಾರೆ.
ತಂದೆ, ತಾಯಿ ಮಕ್ಕಳನ್ನು ಹೀಗೆ ಮನೆಯ ಆಧಾರ ಸ್ತಂಭಗಳನ್ನು ಕಳೆದುಕೊಂಡ ಕುಟುಂಬಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಹೀಗಿರುವಾಗ ಸರಕಾರ ಘೋಷಿಸಿರುವ ಕೋವಿಡ್ ಪರಿಹಾರ ಹಣ ನೇರವಾಗಿ ಸಂತ್ರಸ್ತರ ಖಾತೆಗೆ ವರ್ಗಾವಣೆ ಮಾಡದೇ, ಸಚಿವರ ಅಪಾಯಿಂಟ್ʼಮೆಂಟ್ʼಗಾಗಿ ಅಧಿಕಾರಿಗಳು ಕಾಯುತ್ತಿರುವುದು ಮಾನವೀಯತೆ ಅಲ್ಲ. ಕೂಡಲೇ ಅಧಿಕಾರಿಗಳು ಸಂತ್ರಸ್ತರಿಗೆ ಪರಿಹಾರ ವರ್ಗಾವಣೆ ಮಾಡಬೇಕು.
ನವೀನ್ ಜಿ.ಎನ್., ಜಿಲ್ಲಾ ಯುವಾಧ್ಯಕ್ಷ, ಜಯಕರ್ನಾಟಕ
ಕೋವಿಡ್ ಮೃತರ ಕುಟುಂಬಕ್ಕೆ ಪರಿಹಾರ ಶೀಘ್ರವಾಗಿ ನೀಡಿ ಎಂದು ತಹಸೀಲ್ದಾರ್ ಸಿಬ್ಗತ್ ವುಲ್ಲಾ ಅವರಲ್ಲಿ ಮನವಿ ಮಾಡಿದಾಗ, ಅವರು ದೊಡ್ಡ ಸಾಹೇಬರು ಬರಬೇಕು. ಅವರು ಬರುವವರೆಗೂ ಪರಿಹಾರ ನೀಡಬಾರದು ಎಂದು ಹೇಳಿದ್ದಾರೆ, ನಾವು ಏನು ಮಡೋದು ಎಂದಿದ್ದಾರೆ. ಗುಡಿಬಂಡೆಯ ಮುಖ್ಯರಸ್ತೆಯಲ್ಲಿ ಬಜ್ಜಿ ಹಾಕಿ ಜೀವನ ಮಾಡುತ್ತಿದ್ದ ನಾಗೇಂದ್ರ ಎಂಬುವರು ಸೋಂಕಿಗೆ ಬಲಿಯಾಗಿದ್ದರು. ಈಗ ಅವರ ಪತ್ನಿಗೂ ಕೋವಿಡ್ ಪಾಸಿಟಿವ್ ಬಂದಿದೆ. ಇಂತಹ ಸಂದರ್ಭದಲ್ಲಿ ಸಚಿವರು ಹಾಗೂ ಶಾಸಕರು ರಾಜಕೀಯ ಮಾಡುವುದು ಮಾನವೀಯತೆ ಅಲ್ಲ. ಕೂಡಲೇ ಪರಿಹಾರವನ್ನು ಸಂತ್ರಸ್ತರ ಖಾತೆಗೆ ಜಮಾ ಮಾಡಬೇಕು.
ಬುಲೆಟ್ ಶ್ರೀನಿವಾಸ್, ಅಧ್ಯಕ್ಷರು, ಜಯಕರ್ನಾಟಕ, ಗುಡಿಬಂಡೆ
ಪಟ್ಟಣದ 7ನೇ ವಾರ್ಡಿನ ಕುತುಬ್ದೀನ್ (ಚೋಟು) ಕೋವಿಡ್ ಸೋಂಕಿಗೆ ಬಲಿಯಾಗಿದ್ದರೆ, ಅವರ ಕುಟುಂಬಕ್ಕೆ ಅವರೇ ಆಧಾರವಾಗಿದ್ದರು. ಹಾಗಾಗಿ ಅವರನ್ನು ಕಳೆದುಕೊಂಡ ಜೀವನ ನಡೆಸಲು ಸಾಧ್ಯವಾಗದೇ ಆರ್ಥಿಕವಾಗಿ ನೋವನ್ನು ಎದುರಿಸುತ್ತಿದ್ದಾರೆ ಆ ಮನೆಯವರು. ಇಬ್ಬರು ಹೆಣ್ಣು ಮಕ್ಕಳು ಹಾಗೂ ತಾಯಿ ಬೀಡಿ ಸುತ್ತಿ ಜೀವನ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ, ಬಾಡಿಗೆ ಕಟ್ಟಲು ಸಾಧ್ಯವಾಗದೇ ಪ್ರತಿದಿನ ನೋವಿನಲ್ಲಿ ಜೀವನ ಮಾಡುತ್ತಿದ್ದಾರೆ. ಇಂತಹ ಕುಟುಂಬಗಳನ್ನು ರಕ್ಷಿಸಬೇಕಾದ ಸರಕಾರ ಹಾಗೂ ಅಧಿಕಾರಿಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಗ್ಗೊಲೆ ಮಾಡಿ ಬಡವರನ್ನು ಬಾವಿಗೆ ತಳ್ಳುತ್ತಿದ್ದಾರೆ. ಇನ್ನಾದರೂ ಅಧಿಕಾರಿಗಳು ಕಣ್ತೆರೆದು ಕೂಡಲೇ ಪರಿಹಾರ ನೀಡಬೇಕು.
ಕಡೇಹಳ್ಳಿ ಶ್ರೀನಿವಾಸ್, ಗುಡಿಬಂಡೆ
ಹಣ ನೇರ ಜನರ ಖಾತೆಗೇ ಬರುತ್ತದೆ; ಜನ ಪ್ರತಿನಿಧಿಗಳ ಶೋ ಏಕೆ?
ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲವನ್ನೂ ಡಿಜಿಟಲ್ ಮಾಡಿದ್ದಾರೆ. ಸರಕಾರದ ಎಲ್ಲಾ ಸೌಲಭ್ಯಗಳು ನೇರವಾಗಿ ಆರ್.ಟಿ.ಜಿ.ಎಸ್ ಮೂಲಕ ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಆಗುತ್ತವೆ. ಹೀಗಿರುವಾಗ ಪರಿಹಾರ ವಿತರಣೆಗೆ ಕಾರ್ಯಕ್ರಮ ಎನ್ನುವುದೇ ಅಪ್ರಸ್ತುತ ಮತ್ತು ಅನಗತ್ಯ. ಈ ಕಾರ್ಯಕ್ರಮಕ್ಕೆ ಸಚಿವರು, ಶಾಸಕರು ಬಂದು ಶೋ ಮಾಡುವ ಅಗತ್ಯವಿಲ್ಲ. ಕೇವಲ ಪ್ರಚಾರಕ್ಕಾಗಿ ಅವರು ಪರಿಹಾರ ವಿತರಣೆಗೆ ಕೊಕ್ಕೆ ಹಾಕಿ ಕೂತಿದ್ದಾರೆ. ಚೆಕ್ ಅಥವಾ ನಗದು ರೂಪದಲ್ಲಿ ಪರಿಹಾರ ವಿತರಿಸುವ ವ್ಯವಸ್ಥೆಯೇ ಈಗ ಇಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೋವಿಡ್ ಸೋಂಕಿಗೆ ಬಲಿಯಾದ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರವನ್ನು ನೇರವಾಗಿ ಅವರ ಖಾತೆಗೆ ಆರ್.ಟಿ.ಜಿ.ಎಸ್ ಮಾಡಬೇಕು ಎಂಬುದು ನಿಯಮ. ರಾಜ್ಯ ಸರಕಾರ ಪರಿಹಾರ ಘೋಷಣೆ ಮಾಡಿ ಹಲವು ದಿನಗಳೇ ಕಳೆದಿದೆ. ತಾಲೂಕು ಮಟ್ಟದ ಅಧಿಕಾರಿಗಳು ಸಂತ್ರಸ್ತರ ಬಳಿ ದಾಖಲೆಗಳನ್ನು ಪಡೆದು ಹಲವು ತಿಂಗಳಾಗಿದೆ. ಆದರೆ ಇನ್ನೂ ಪರಿಹಾರ ಅವರ ಖಾತೆಗೆ ಜಮೆ ಆಗಿಲ್ಲ. ಸಚಿವರು ಬಂದು ಅವರ ಅಮೃತಹಸ್ತ (?)ದ ಮೂಲಕವೇ ಪರಿಹಾರ ನೀಡಬೇಕು ಎಂಬ ಮಾತು ಇರುವುದಿಂದ ಅಧಿಕಾರಿಗಳು ಏನು ಮಾಡದ ಸ್ಥಿತಿಯಲ್ಲಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯೋ ಅಥವಾ ಜಂಗಲ್ ರಾಜ್ಯವೋ ಎಂದು ಸಂಘಟನೆಗಳು ಪ್ರಶ್ನೆ ಮಾಡುತ್ತಿವೆ.