ಅಂತಿಮ ಅಸ್ತ್ರ ಬಳಸಲು ಸಿದ್ಧವಾಗುತ್ತದೆ ಸರಕಾರ
ಬೆಂಗಳೂರು: ಕೋವಿಡ್-19 ಪಾಸಿಟಿವಿಟಿ ದರ ಹೆಚ್ಚಳಕ್ಕೆ ಕಡಿವಾಣ ಹಾಕಲು ಲಾಕ್‌ಡೌನ್ ಜಾರಿಗೊಳಿಸುವ ಬಗ್ಗೆ ಸರ್ಕಾರ ಬಹುತೇಕ ನಿರ್ಧರಿಸಿದೆ ಎಂಬ ಮಾಹಿತಿ ಸರಕಾರದ ಅತ್ಯುನ್ನತ ಮೂಲಗಳಿಂದ ಸಿಕೆನ್ಯೂಸ್ ನೌ ಗೆ ಲಭ್ಯವಾಗಿದೆ.
ರಾಜ್ಯದಲ್ಲಿ ಹತೋಟಿಗೆ ಬಾರದೇ ಸೋಂಕು ನಿರಂತರವಾಗಿ ಏರುಗತಿಯಲ್ಲಿರುವುದರಿಂದ ಸರಕಾರ ಗತ್ಯಂತರ ಇಲ್ಲದೆ ಲಾಕ್ʼಡೌನ್ ಮಾಡಲು ಮುಂದಾಗಿದೆ ಎಂದು ಗೊತ್ತಾಗಿದೆ
ಮೂರನೇ ಅಲೆ ರಾಜ್ಯದಲ್ಲಿ ವೇಗವಾಗಿ ಹರಡುತ್ತಿದೆ. ಇದು ಎಷ್ಟು ವೇಗವಾಗಿ ಹರಡುತ್ತಿದೆಯೋ ಅಷ್ಟೇ ವೇಗವಾಗಿ ಇಳಿಕೆಯಾಗಲಿದೆ ಎಂದು ಆ ಮೂಲಗಳು ಹೇಳಿವೆ.
ಇದರ ನಡುವೆ ರಾಜ್ಯದಲ್ಲಿ ಸೋಂಕು ಫೆಬ್ರವರಿ ಮೊದಲ ವಾರದೊಳಗೆ ಸೋಂಕಿನ ಪಾಸಿಟಿವಿಟಿ ದರ ಪ್ರತಿನಿತ್ಯ 1 ಲಕ್ಷ ಮುಟ್ಟುವ ಸಾಧ್ಯತೆ ಇದೆ. ಸೋಂಕಿಗೆ ಒಳಗಾದವರಲ್ಲಿ ಶೇ.೨ರಿಂದ ೩ರಷ್ಟು ಮಂದಿಗೆ ಆಸ್ಪತ್ರೆಯ ಸೌಲಭ್ಯದ ಅಗತ್ಯತೆ ಬೇಕಾಗಬಹುದು ಎನ್ನಲಾಗಿದೆ.
ಇಂತಹ ಸಂದರ್ಭದಲ್ಲಿ ಸೋಂಕಿತರಿಗೆ ಹಾಸಿಗೆ ಸೌಲಭ್ಯ ಕಲ್ಪಿಸುವುದು ಕಷ್ಟವಾಗುತ್ತದೆ. ಮೊದಲನೇ ಮತ್ತು ಎರಡನೇ ಅಲೆಯ ಅನುಭವದಲ್ಲಿ ತಕ್ಷಣವೇ ಕಠಿಣ ಕ್ರಮ ಜರುಗಿಸಿದರೆ ಸೋಂಕಿನ ಸರಪಳಿ ಕಳಚಬಹುದು ಎಂದು ತಜ್ಞರು ಮುಖ್ಯಮಂತ್ರಿಯವರ ಗಮನಕ್ಕೆ ತಂದಿದ್ದಾರೆ ಎಂದು ಆ ಮೂಲಗಳು ತಿಳಿಸಿವೆ.
ಸೋಂಕು ಸರಪಳಿ ಕಳಚಲು ಸುದೀರ್ಘ ಲಾಕ್‌ಡೌನ್ ಅಗತ್ಯವಿಲ್ಲ. 10 ದಿನಗಳ ಮಟ್ಟಿಗೆ ರಾಜ್ಯವನ್ನು ಸ್ಥಬ್ಧಗೊಳಿಸಿದರೆ ಜನರ ಆರೋಗ್ಯ ಕಾಪಾಡಬಹುದು. ಹಾಲಿ ಇರುವ ವಾರಾತ್ಯದ ಕರ್ಫ್ಯೂವನ್ನು ಮುಂದುವರಿಸುವುದರ ಜತೆಗೆ ಸಭೆ ಸಮಾರಂಭಗಳಿಗೆ ಕಡಿವಾಣ ಹಾಕಿ. ಜನರು ಗುಂಪು ಸೇರುವುದಕ್ಕೆ ಅವಕಾಶ ನೀಡಬೇಡಿ. ಕೋವಿಡ್ ನಿಯಮಾವಳಿಗಳನ್ನು ಪಾಲಿಸುವಂತೆ ನೋಡಿಕೋಳ್ಳುವ ಕರ್ತವ್ಯ ಸರ್ಕಾರದ್ದು ಎಂದು ತಜ್ಞರು ತಿಳಿಸಿದ್ದಾರೆ ಎಂದು ಗೊತ್ತಾಗಿದೆ.
ಸೋಂಕಿತರಲ್ಲಿ ದೊಡ್ಡ ಪ್ರಮಾಣದ ರೋಗ ಹರಡುತ್ತದೆ. ಮುನ್ನೆಚ್ಚರಿಕೆಯಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಹಿಡಿದು ಅಗತ್ಯ ಔಷಧಿಗಳನ್ನು ಸಂಗ್ರಹಿಸಿಟ್ಟುಕೊಳ್ಳಿ. ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಹಾಸಿಗೆ ಸೌಲಭ್ಯ ಹೆಚ್ಚಿಸಿ ಎಂದು ತಾಂತ್ರಿಕ ನಿಪುಣರು ಈಗಾಗಲೇ ಸರಕಾರಕ್ಕೆ ಸಲಹೆ ಮಾಡಿದ್ದಾರೆ.
ವಿಶ್ವದ ಅನೇಕ ನಗರಗಳಲ್ಲೇ ಸೋಂಕು ಹೆಚ್ಚು ಕಂಡಿದೆ. ನಮ್ಮಲ್ಲಿಯೂ ದೆಹಲಿ, ಮುಂಬಯಿ ನಂತರ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಮೂರನೇ ಅಲೆ ಸೋಂಕು ದೊಡ್ಡ ಪ್ರಮಾಣದಲ್ಲೇ ಹರಡುತ್ತಿದೆ ಎಂದು ತಜ್ಞರು ಅಂಕಿ ಅಂಶಗಳನ್ನು ನೀಡಿದ್ದಾರೆ.
ಕೊರೋನಾ ಸೋಂಕಿನಿಂದ ಬಳಲುತ್ತಿರುವ ಮುಖ್ಯಮಂತ್ರಿಯವರು ತಮ್ಮ ಆರ್.ಟಿ.ನಗರ ನಿವಾಸದಿಂದಲೇ ಈ ವೀಡಿಯೋ ಸಂವಾದ ನಡೆಸಿದರು. ನಂತರ ಪ್ರಧಾನಿಯವರ ಜೊತೆಗೆ ಮನೆಯಿಂದಲೇ ಸಂವಾದ ಮಾಡಿದರು.
ಪ್ರಧಾನಿಯವರು ನೀಡುವ ಸಲಹೆ ಸೂಚನೆಗಳನ್ನು ಆಧರಿಸಿ ಸೋಂಕಿನ ಸರಪಳಿ ಕಳಚಲು ಕಲವು ಕಠಿಣ ತೀರ್ಮಾನಗಳನ್ನು ಮುಖ್ಯಮಂತ್ರಿಯವರು ಒಂದೆರಡು ದಿನಗಳಲ್ಲೇ ತೆಗೆದುಕೊಳ್ಳಲಿದ್ದಾರೆ.