ಹಳ್ಳಿ ಕೆರೆಗಳಲ್ಲಿ ತುಂಬಿದ ಜೀವಜಲ
- ಕೆರೆಗಳ ಪಾಲಿನ ಭಗೀರಥರ ಬಗ್ಗೆ ಜನರ ಮೆಚ್ಚುಗೆ
- ರಾಜ್ಯದ 230 ಕೆರೆಗಳಿಗೆ ಜೀವಕೊಟ್ಟ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ
- ಬೊಮ್ಮಗಾನಹಳ್ಳಿ ಕೆರೆ ಅಭಿವೃದ್ಧಿ ಸಮಿತಿಯಿಂದ ಅಂತರ್ಜಲ ವೃದ್ಧಿ ಗ್ರಾಮಸ್ಥರ ಸಂತೋಷ
by Gs Bharath Gudibande
ಗುಡಿಬಂಡೆ: ಕೆಲ ದಶಕಗಳ ಹಿಂದೆ ನಿರ್ಮಾಣ ಮಾಡಿರುವ ಕೆರೆಗಳಿಗೆ ಈಗ ಜೀವಕಳೆ ಬಂದಿದೆ. ಈವರೆಗೆ ಮಳೆಯೇ ಬಂದು ಕೋಡಿ ಹರಿಯಬೇಕೆಂದು ಕೈಕಟ್ಟಿ ಕೂರದೇ ಕೆರೆ ಉಳಿಸಲು ಜನರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಹೂಳು ತೆಗೆದು ಕೆರೆಯನ್ನು ಜಲಶ್ಯಾಮಲಗೊಳಿಸಿದ ಹಳ್ಳಿಗರ ಕಥೆ ಇದು.
ಚಿಕ್ಕಬಳ್ಳಾಪುರ ತಾಲೂಕಿನ ಬೊಮ್ಮಗಾನಹಳ್ಳಿಯ ಹೊಸಕೆರೆಯನ್ನು, ಬೊಮ್ಮಗಾನಹಳ್ಳಿ ಹೊಸಕೆರೆ ಅಭಿವೃದ್ಧಿ ಸಮಿತಿ, ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಸಹಕಾರದಿಂದ 2021ರ ಮಾರ್ಚ್ ವೇಳೆಗೆ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ಹೂಳು ತೆಗೆಯುವ ಕಾರ್ಯ ಆಗಿದೆ. ಈಗ ಕೆರೆ ತುಂಬಿ ಕೋಡಿ ಹರಿದಿದ್ದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿಯೇ 230ನೇ ಕೆರೆ
ರಾಜ್ಯಾದ್ಯಂತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ಮಾಡುತ್ತಿರುವ ಇಂಥ ಸಮಾಜಮುಖಿ ಕೆಲಸಕ್ಕೆ ಅಭೂತಪೂರ್ವ ಮೆಚ್ಚುಗೆ ವ್ಯಕ್ತವಾಗಿದೆ. ಇವರ ಭಗೀರಥ ಪ್ರಯತ್ನದಿಂದ ಇಂದು ಕೆರೆಗಳಲ್ಲಿ ಹೂಳಿಲ್ಲ, ಎಲ್ಲೆಡೆ ನೀರು ತುಂಬಿರುವುದು ಕಂಡು ಬರುತ್ತಿದೆ. ಆದರೆ ಇವರು ಕೆರೆಗಳ ಹೂಳು ತೆಗೆಯುವ ಕಾಯಕ ಮಾತ್ರ ನಿಲ್ಲಿಸಿಲ್ಲ. ಇನ್ನೂ ಅನೇಕ ಕೆರೆಗಳನ್ನು ಜೀವಂತವಾಗಿಸುವ ಕೆಲಸದಲ್ಲಿ ಇವರು ಯಶಸ್ಸು ಕಾಣುತ್ತಿದ್ದಾರೆ.
ಕೆರೆ ಅಭಿವೃದ್ಧಿ ಸಮಿತಿ, ಗ್ರಾಪಂ ಅಧ್ಯಕ್ಷರು, ಗ್ರಾಮಸ್ಥರ ಸಂಕಲ್ಪ
ಬೊಮ್ಮಗಾನಹಳ್ಳಿ ಕೆರೆ ಅಭಿವೃದ್ಧಿ ಸಮಿತಿಯ ಜೊತೆಗೆ ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯತಿ ಅಧ್ಯಕ್ಷ ಬೊಮ್ಮಗಾನಹಳ್ಳಿ ಪೃಥ್ವಿ ಹಾಗೂ ಊರಿನ ಸದಸ್ಯರು, ಯುವಕರು, ಹಿರಿಯರ ಆಶಯದಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಸಹಕಾರದಿಂದ ಈ ಒಳ್ಳೆಯ ಕೆಲಸ ಮಾಡಲಾಯಿತು. ಇಂತಹ ಇನ್ನೂ ಅನೇಕ ಕೆರೆಗಳಿಗೆ ಪ್ರಾಣ ತುಂಬುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಕಮ್ಮಗುಟ್ಟಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಬೊಮ್ಮಗಾನಹಳ್ಳಿ ಪೃಥ್ವಿ ಅವರು ಸಿಕೆನ್ಯೂಸ್ ನೌ ಜತೆ ಮಾತನಾಡುತ್ತಾ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ, ಬೊಮ್ಮಗಾನಹಳ್ಳಿ ಕೆರೆ ಅಭಿವೃದ್ಧಿ ಸಮಿತಿ ಹಾಗೂ ಕಮ್ಮಗುಟ್ಟಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ಸಹಯೋಗದಲ್ಲಿ 2021ರ ಮಾರ್ಚ್ 3ರಂದು ಆರಂಭವಾದ ಕಾಮಗಾರಿ ಮಾರ್ಚ್ 31ಕ್ಕೆ ಮುಕ್ತಾಯ ಮಾಡಿದ್ದಾರೆ. ಬೊಮ್ಮಗಾನಹಳ್ಳಿಯ ಹೊಸಕೆರೆಯಲ್ಲಿ ಹೂಳು ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು ಕೆರೆಯಲ್ಲಿ ನೀರು ತುಂಬಿಕೊಂಡಿದ್ದು, ಗ್ರಾಮಸ್ಥರಲ್ಲಿ ಸಂತೋಷ ಮನೆ ಮಾಡಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ರಾಜ್ಯದ ಕೆರೆಗಳು ಹೂಳು ತೆಗೆಯುವ ನಡೆದಿರುವುದು ಶ್ಲಾಘನೀಯ. ಬೊಮ್ಮಗಾನಹಳ್ಳಿ ಕೆರೆಯು ರಾಜ್ಯದ 230ನೇ ಕೆರೆ. ಈ ರೀತಿಯ ಪ್ರಾಣ ಕಳೆದುಕೊಂಡ ಕೆರೆಗಳಿಗೆ ಪ್ರಾಣ ತುಂಬುವ ಕೆಲಸ ಹಾಗೂ ನೀರಿನ ದಾಹವನ್ನು ನೀಗಿಸಿ ಮಹತ್ವದ ಸಾಧನೆ ಮಾಡಿದ್ದಾರೆ. ಬೊಮ್ಮಗಾನಹಳ್ಳಿ ಕೆರೆ ಅಭಿವೃದ್ಧಿ ಸಮಿತಿಯ ಆಶಯ ಈಡೇರಿದ್ದು ಊರಿನ ಹಿರಿಯರು, ಯುವಕರು ಸೇರಿದಂತೆ ಎಲ್ಲರಿಗೂ ಸಂತೋಷವಾಗಿದೆ.
ಬೊಮ್ಮಗಾನಹಳ್ಳಿ ಪೃಥ್ವಿ, ಅಧ್ಯಕ್ಷರು, ಕಮ್ಮಗುಟ್ಟಹಳ್ಳಿ ಗ್ರಾಮ ಪಂಚಾಯಿತಿ