30 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಆನ್-ಲೈನ್ ಮೂಲಕ ಅರ್ಜಿ
ಬೆಂಗಳೂರು: 2022-23ನೇ ಶೈಕ್ಷಣಿಕ ಸಾಲಿಗೆ ಅನ್ವಯವಾಗುವಂತೆ ರಾಜ್ಯದಲ್ಲಿ ಆರಂಭಿಸಿರುವ ಅತಿಥಿ ಉಪನ್ಯಾಸಕರ ನೇಮಕ ಪ್ರಕ್ರಿಯೆಗೆ ಭಾರೀ ಸ್ಪಂದನ ವ್ಯಕ್ತವಾಗಿದ್ದು, ಗುರುವಾರದವರೆಗೆ 30 ಸಾವಿರಕ್ಕೂ ಹೆಚ್ಚು ಅರ್ಹ ಅಭ್ಯರ್ಥಿಗಳು ಆನ್-ಲೈನ್ ಮೂಲಕ ಅರ್ಜಿ ಹಾಕಿಕೊಂಡಿದ್ದಾರೆ ಎಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, `ರಾಜ್ಯ ಸರಕಾರವು ಇತ್ತೀಚೆಗೆ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಬಳವನ್ನು ಎರಡೂವರೆ ಪಟ್ಟಿಗಿಂತ ಹೆಚ್ಚು ಏರಿಸಿದೆ. ಇದು ಅರ್ಹ ಅಭ್ಯರ್ಥಿಗಳಲ್ಲಿ ಸಕಾರಾತ್ಮಕ ಪರಿಣಾಮವನ್ನು ಉಂಟುಮಾಡಿದೆ ಎನ್ನುವುದಕ್ಕೆ ಇಷ್ಟೊಂದು ಪ್ರಮಾಣದಲ್ಲಿ ಅರ್ಜಿಗಳು ಬಂದಿರುವುದೇ ಸಾಕ್ಷಿ’ ಎಂದಿದ್ದಾರೆ.
ಅಲ್ಲದೆ, ಅರ್ಜಿ ಹಾಕಿಕೊಳ್ಳಲು ಶುಕ್ರವಾರ ಮಧ್ಯರಾತ್ರಿ 12 ಗಂಟೆಯವರೆಗೂ ಅವಕಾಶವಿದೆ. ಇದುವರೆಗೂ ಅರ್ಜಿ ಹಾಕದೆ ಇರುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಇಂಥವರು https://dec.karnataka/gov.in ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಅವರು ಹೇಳಿದ್ದಾರೆ.
ಸರಕಾರವು ಕಳೆದ ವಾರ ಅತಿಥಿ ಉಪನ್ಯಾಸಕರ ವೇತನವನ್ನು ಗರಿಷ್ಠ 32 ಸಾವಿರ ರೂ.ವರೆಗೂ ಹೆಚ್ಚಳ ಮಾಡಿ ಆದೇಶ ಹೊರಡಿಸಿರುವುದನ್ನು ಇಲ್ಲಿ ನೆನೆಯಬಹುದು.
ಈ ಮೂಲಕ ಪತ್ರಕರ್ತರಿಗೆ ನನ್ನದೊಂದು ಮನವಿ, ರಾಜೇಶ ವಿಎಸ್ ಆದ ನಾನು ಸುಮಾರು 11 ವರ್ಷಗಳ ಕಾಲ ಅತಿಥಿ ಉಪನ್ಯಾಸಕನಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದೇನೆ ಹಾಗೂ slet ಎಕ್ಸಾಮ್ ಅನ್ನು ಪಾಸು ಮಾಡಿರುತ್ತೇನೆ. ಇದೀಗ ಸರ್ಕಾರವು ಅತಿಥಿ ಉಪನ್ಯಾಸಕ ಹುದ್ದೆಗೆ ಅರ್ಜಿಯನ್ನು ಕರೆದಿದ್ದು ಕೇವಲ ಐದು ದಿನಗಳು ಮಾತ್ರ ಅವಕಾಶ ನೀಡಿತ್ತು,ಅದರಲ್ಲಿ ಸೋಮವಾರ ಮತ್ತು ಮಂಗಳವಾರ ಪೋರ್ಟಲ್ ಓಪನ್ ಆಗಲಿಲ್ಲ ಕೇವಲ ಬುಧವಾರ ಗುರುವಾರ ಶುಕ್ರವಾರ ಅವಕಾಶವಿದ್ದು ಶುಕ್ರವಾರದಂದು ಸುಮಾರು ಹದಿನೈದು ಬಾರಿ ಪ್ರಯತ್ನಪಟ್ಟರು submit ಮಾಡಿದ ನಂತರವೂ ಐಡಿ ನಂಬರ್ ಬಂದಿಲ್ಲ, ಕಾರಣ ತಾಂತ್ರಿಕ ದೋಷವಿರಬಹುದು ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರಾದ ಪ್ರದೀಪ್ ರವರಿಗೆ ಹಾಗೂ ಡೈರೆಕ್ಟರ್ ಮಲ್ಲೇಶ್ವರಪ್ಪರವರಿಗೆ ಮನವಿಗಳನ್ನು ಸಲ್ಲಿಸಿದ್ದರೂ, ಇತರೆ ಅಧಿಕಾರಿಗಳು ಸಹ ಯಾರು ಸಹಕರಿಸಲಿಲ್ಲ,ಹಾಗಾಗಿ ಈ ಮೂಲಕ ಪತ್ರಕರ್ತರಾದರು ನನಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಈ ಮೂಲಕ ತಮ್ಮಲ್ಲಿ ಮನವಿ ಯನ್ನು ಸಲ್ಲಿಸುತ್ತಿದ್ದೇನೆ ಧನ್ಯವಾದಗಳೊಂದಿಗೆ.