ರಾಜ್ಯ ಸರಕಾರಗಳ ಅಧಿಕಾರಕ್ಕೆ ಕೇಂದ್ರದ ಗುನ್ನ ಎಂದ ಸಿದ್ದರಾಮಯ್ಯ
ಬೆಂಗಳೂರು: ‘ಭಾರತೀಯ ಆಡಳಿತ ಸೇವೆಯ (ಸಿಬ್ಬಂದಿ) ನಿಯಮ 1954’ ಕ್ಕೆ ತಿದ್ದುಪಡಿ ತರುವುದರ ಮೂಲಕ ರಾಜ್ಯಗಳ ಆಡಳಿತಗಳ ಮೇಲೆ ಕೇಂದ್ರ ಸರ್ಕಾರ ನಿಯಂತ್ರಣ ಸಾಧಿಸಲು ಹೊರಟಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ರಾಜ್ಯ ಸರ್ಕಾರ ತನ್ನ ವಿರೋಧ ವ್ಯಕ್ತಪಡಿಸಬೇಕು. ಪ್ರತಿ ಪಕ್ಷಗಳ ಜೊತೆ ಚರ್ಚಿಸಿ ಕೇಂದ್ರದ ನಿಲುವಿಗೆ ತನ್ನ ವಿರೋಧ ತಿಳಿಸಬೇಕು ಎಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿಯವರಿಗೆ ಸಿದ್ದರಾಮಯ್ಯ ಅವರು ಬರೆದಿರುವ ಪತ್ರದ ಮುಖ್ಯಾಂಶಗಳು ಹೀಗಿದೆ :
ಮೋದಿಯವರ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರ ‘ಭಾರತೀಯ ಆಡಳಿತ ಸೇವೆಯ (ಸಿಬ್ಬಂದಿ) ನಿಯಮ-6, 1954’ ಕ್ಕೆ ತಿದ್ದುಪಡಿ ತರುವ ಉದ್ದೇಶದಿಂದ ಇದೇ 12 ರಂದು ರಾಜ್ಯಗಳಿಗೆ ಪತ್ರ ಬರೆಯಲಾಗಿದೆ. ಸದರಿ ಪತ್ರದಲ್ಲಿ 3 ಮುಖ್ಯ ತಿದ್ದುಪಡಿಗಳನ್ನು ಪ್ರಸ್ತಾಪಿಸಲಾಗಿದೆ. ರಾಜ್ಯಗಳು ತಮ್ಮ ಅಭಿಪ್ರಾಯವನ್ನು ದಿನಾಂಕ 25/1/2022 ರ ಒಳಗೆ ತಿಳಿಸಬೇಕೆಂದೂ ಸಹ ಸೂಚಿಸಲಾಗಿದೆ. ಉದ್ದೇಶಿತ ತಿದ್ದುಪಡಿಯ ಪ್ರಕಾರ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ಬೇಕೆಂದಾಗ ಕೇಂದ್ರಕ್ಕೆ ಕರೆಸಿಕೊಳ್ಳುವ, ಬೇಡವೆಂದಾಗ ರಾಜ್ಯಗಳಿಗೆ ವಾಪಸ್ಸು ಕಳಿಸುವ ಪ್ರಸ್ತಾಪ ಇದರಲ್ಲಿದೆ.
ಕೇಂದ್ರ ಸರ್ಕಾರವು ಐಎಎಸ್-ಐಪಿಎಸ್ ಅಧಿಕಾರಿಗಳನ್ನು ಕೇಂದ್ರ ಸೇವೆಗೆ ನಿಯೋಜಿಸುವಂತೆ ಸೂಚಿಸಿದರೆ ರಾಜ್ಯ ಸರ್ಕಾರ ನಿರ್ಧಿಷ್ಟ ಸಮಯದೊಳಗೆ ಈ ಕೆಲಸವನ್ನು ಅನುಷ್ಠಾನ ಮಾಡಬೇಕು. ಅದಕ್ಕೂ ಮೊದಲು ರಾಜ್ಯಗಳು ಕೇಂದ್ರ ಸೇವೆಗೆ ಅರ್ಹರಾದವರನ್ನು ಪಟ್ಟಿ ಸಿದ್ದಪಡಿಸಬೇಕು. ಕೇಂದ್ರ ಸರ್ಕಾರವು ಎಷ್ಟು ಮಂದಿ ಅಧಿಕಾರಿಗಳು ಬೇಕು ಎಂದು ತಿಳಿಸುತ್ತದೋ ಅಷ್ಟು ಜನರನ್ನು ಕೇಂದ್ರವು ಔಪಚಾರಿಕವಾಗಿ ರಾಜ್ಯಗಳನ್ನು ಸಂಪರ್ಕಿಸಿ ತನ್ನ ಸೇವೆಗೆ ನಿಯೋಜಿಸಿಕೊಳ್ಳಬಹುದು.
ರಾಜ್ಯ ಸರ್ಕಾರ ಕೇಂದ್ರದ ಸೂಚನೆಯಂತೆ ನಡೆದುಕೊಳ್ಳದಿದ್ದರೆ ಕೇಂದ್ರ ಬಯಸಿದ ಅಧಿಕಾರಿಯನ್ನು ಆ ನಿರ್ಧಿಷ್ಟ ದಿನಾಂಕದ ಬಳಿಕ ಏಕಮುಖವಾಗಿ ಕೇಂದ್ರದ ಸೇವೆಗೆ ನಿಯೋಜಿಸಿಕೊಳ್ಳಬಹುದು. (ಸದ್ಯ ರಾಜ್ಯ ಸೇವೆಯಲ್ಲಿರುವ ಯಾವುದೇ ಐಎಎಸ್-ಐಪಿಎಸ್ ಅಧಿಕಾರಿಯನ್ನು ಕೇಂದ್ರ ಸರ್ಕಾರ ಕೇಂದ್ರದ ಸೇವೆಗೆ ಕರೆಸಿಕೊಳ್ಳಬೇಕಿದ್ದರೆ ಅದಕ್ಕೆ ರಾಜ್ಯಗಳು ಅನುಮತಿ ನೀಡಬೇಕಿತ್ತು). ರಾಜ್ಯಗಳ ಈ ಅಧಿಕಾರವನ್ನು ಮುಲಾಜಿಲ್ಲದೆ ಕಿತ್ತು ಹಾಕಲು ಒಕ್ಕೂಟ ಸರ್ಕಾರ ಮುಂದಾಗಿದೆ.
ತಮಗೆ ಬೇಕಾದಂತೆ ಐಎಎಸ್-ಐಪಿಎಸ್ ಅಧಿಕಾರಿಗಳನ್ನು ನೇಮಿಸಿಕೊಳ್ಳುವ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಒಮ್ಮತ ಮೂಡದಿದ್ದರೆ, ರಾಜ್ಯಗಳಿಗೆ ಕೇಂದ್ರ ಸರ್ಕಾರದ ತೀರ್ಮಾನಗಳ ಬಗ್ಗೆ ತಕರಾರು ಇದ್ದರೂ ಕೂಡ ರಾಜ್ಯಗಳು ಕೇಂದ್ರದ ತೀರ್ಮಾನವನ್ನು ನಿರ್ಧಿಷ್ಟ ಅವಧಿಯ ಒಳಗೆ ಬಾಯಿ ಮುಚ್ಚಿಕೊಂಡು ಒಪ್ಪಿಕೊಳ್ಳಬೇಕು. ಈ ಕುರಿತಂತೆ ಕೇಂದ್ರದ ತೀರ್ಮಾನಗಳೇ ಅಂತಿಮವಾಗಿರುತ್ತವೆ.
ನಿರ್ಧಿಷ್ಟ ಸಂದರ್ಭದಲ್ಲಿ ನಿರ್ಧಿಷ್ಟ ಅಧಿಕಾರಿ/ಅಧಿಕಾರಿಗಳ ಸೇವೆ ಸಾರ್ವಜನಿಕ ಹಿತಾಸಕ್ತಿ ಕಾರಣಕ್ಕೆ ಕೇಂದ್ರ ಸೇವೆಗೆ ಅಗತ್ಯವಿದೆ ಎಂದು ಕೇಂದ್ರ ತಿಳಿಸಿದರೆ ರಾಜ್ಯಗಳು ಕೇಂದ್ರದ ಸೂಚನೆಗೆ ನಿರ್ಧಿಷ್ಟ ಅವಧಿಯ ಒಳಗೆ ಕೇಂದ್ರದ ಸೂಚನೆಯನ್ನು ಅನುಷ್ಠಾನಗೊಳಿಸಬೇಕು [ಸದ್ಯಕ್ಕೆ ಕೇಂದ್ರದ ಆದೇಶವೆಂಬ ಪದವನ್ನು ಬಳಸುವ ಧಾಷ್ಟ್ಯವನ್ನು ತೋರಿಸಿಲ್ಲ,
(ಆದರೆ ಪತ್ರದ ಆಶಯ ಹಾಗೆ ಇದೆ).
ರಾಜ್ಯಗಳ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಅಧಿಕಾರಿಗಳ ನಿಯೋಜನೆ, ವರ್ಗಾವಣೆಗಳ ಮೇಲಿನ ಅಧಿಕಾರವನ್ನು ಕೇಂದ್ರವು ತನ್ನ ವ್ಯಾಪ್ತಿಗೆ ತೆಗೆದುಕೊಳ್ಳಲು ಹೊರಟಿರುವುದು ಸ್ಪಷ್ಟವಾಗಿ ಸಂವಿಧಾನ ವಿರೋಧಿ, ಒಕ್ಕೂಟ ತತ್ವ ವಿರೋಧಿಯಾದ ಕೃತ್ಯವಾಗುತ್ತದೆ. ರಾಜ್ಯಗಳು ಕೇಂದ್ರದ ಬಿಜೆಪಿ ಸರ್ಕಾರದ ಸಾಮ್ರಾಜ್ಯಶಾಹಿ, ಪಾಳೇಗಾರಿಕೆ ಧೋರಣೆಯಾಗುತ್ತದೆ. ಕೇಂದ್ರದ ಈ ನಿಯಮದಿಂದ ರಾಜ್ಯಗಳು ತಮ್ಮ ಎಲ್ಲ ಅಧಿಕಾರಗಳನ್ನು ಕಳೆದುಕೊಂಡು ಕೇಂದ್ರದ ಸಾಮಂತರಂತೆ ಬದುಕಬೇಕಾದ ಪರಿಸ್ಥಿತಿ ಬರುತ್ತದೆ.
ಅಧಿಕಾರಿಗಳ ಮೇಲಿನ ನಿಯಂತ್ರಣವೆಂದರೆ, ಆಡಳಿತದ ಮೇಲಿನ ನಿಯಂತ್ರಣವೆಂದು ಅರ್ಥ. ರಾಜ್ಯ ಸರ್ಕಾರಗಳಿಗೆ ತನ್ನ ಅಧಿಕಾರಿಗಳ ಮೇಲೆ ನಿಯಂತ್ರಣವಿಲ್ಲದಿದ್ದರೆ ಜನರ ಕೆಲಸಗಳನ್ನು ಹೇಗೆ ಮಾಡಿಸುವುದು? ರಾಜ್ಯಗಳ ಚುನಾಯಿತ ಸರ್ಕಾರಗಳ ಮೇಲೆ ನಿಯಂತ್ರಣ ಸಾಧಿಸುವ ಉದ್ದೇಶದಿಂದ ಕೇಂದ್ರವು ಈ ದುಷ್ಟ ತಿದ್ದುಪಡಿಯನ್ನು ತರಲು ಹೊರಟಿದೆ. ಇದರಿಂದ ಕೇಂದ್ರ, ರಾಜ್ಯಗಳ ನಡುವೆ ನೇರವಾದ ಹಿತಾಸಕ್ತಿ ಸಂಘರ್ಷ ಪ್ರಾರಂಭವಾಗುತ್ತದೆ.
ರಾಜ್ಯಗಳನ್ನು ಕೇಂದ್ರಾಡಳಿತ ಪ್ರದೇಶಗಳ ಮುಂದುವರಿದ ರೂಪ ಎಂದು ಪರಿಗಣಿಸಿದಂತೆ ಮೋದಿಯವರ ಸರ್ಕಾರ ಭಾವಿಸಿದಂತೆ ಕಾಣುತ್ತಿದೆ. ಸೌಹಾರ್ದ ಸಂಬಂಧದ ಆಡಳಿತದ ನಡೆಸಿ, ಜನರ ಕೆಲಸ ಮಾಡಬೇಕಾದ ಕಡೆ ತನಗೆ ವಿರೋಧಿಯಾದ ಪಕ್ಷಗಳು ಆಡಳಿತ ನಡೆಸುತ್ತಿರುವ ರಾಜ್ಯ ಸರ್ಕಾರಗಳನ್ನು ಹೇಗೆ ನಿಯಂತ್ರಿಸುವುದು ಎನ್ನುವ ಕೆಟ್ಟ ಉದ್ದೇಶ ಮಾತ್ರ ಈ ತಿದ್ದುಪಡಿಯ ಹಿಂದೆ ಇದೆ.
ನರೇಂದ್ರ ಮೋದಿಯವರು ಪ್ರಧಾನಮಂತ್ರಿ ಆದ ಬಳಿಕ ಅವರ ಸರ್ಕಾರದ ಆಡಳಿತ ವೈಖರಿ ರಾಜ್ಯಗಳ ಸಂವಿಧಾನಬದ್ದ ಹಕ್ಕುಗಳಿಗೆ ಗಂಡಾಂತರಗಳು ಬಂದೆರಗುತ್ತಲೆ ಇವೆ.
ಮೋದಿಯವರ ಸರ್ಕಾರದ ಈ ಸರ್ವಾಧಿಕಾರಿ, ಒಕ್ಕೂಟ ತತ್ವ ವಿರೋಧಿ ಧೋರಣೆಯನ್ನು ಈಗಾಗಲೇ ಆರು ರಾಜ್ಯಗಳು ಖಂಡಿಸಿರುವುದು ಮಾತ್ರವಲ್ಲದೆ ಯಾವುದೇ ಹಂತದಲ್ಲೂ ದಾಳಿಯನ್ನು ರಾಜ್ಯಗಳು ಸಹಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ತಿಳಿಸಿವೆಯೆಂಬ ಮಾಹಿತಿ ಇದೆ.
ಉಳಿದ ರಾಜ್ಯಗಳ ಜನರಲ್ಲೂ ಬಿಜೆಪಿಯ ವಿರುದ್ಧ ಆಕ್ರೋಶ ಮಡುಗಟ್ಟುತ್ತಿದೆ. ಈ ಆಕ್ರೋಶವು ಮುಂದೊಂದು ದಿನ ಅನಾಹುತಕಾರಿ ದಿಕ್ಕಿನ ಕಡೆಗೆ ತಿರುಗಿಬಿಡಬಹುದೆಂಬ ಆತಂಕ ನನ್ನನ್ನು ಕಾಡುತ್ತಿದೆ.
ಅದಾಗದಂತೆ ನೋಡಿಕೊಳ್ಳಬೇಕೆಂದರೆ ನಮ್ಮ ಸಂವಿಧಾನ ಪಿತೃಗಳ ಆಶಯವೇನಿದ್ದವು ಅವುಗಳಂತೆ ನಡೆದುಕೊಳ್ಳಿ ಎಂದು ಕೇಂದ್ರದ ಬಿಜೆಪಿ ಸರ್ಕಾರಕ್ಕೆ ತಿಳಿಸಿ ಹೇಳಬೇಕು. ಆದ್ದರಿಂದ ತುರ್ತಾಗಿ ವಿರೋಧ ಪಕ್ಷಗಳ ಜೊತೆ ಚರ್ಚಿಸಿ ರಾಜ್ಯದ ವಿರೋಧವನ್ನು ಒಕ್ಕೂಟ ಸರ್ಕಾರಕ್ಕೆ ತಿಳಿಸಬೇಕು ಎಂದು ಒತ್ತಾಯಿಸುತ್ತೇನೆ.
Super