ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಬಿ.ಎಸ್.ಲಿಂಗದೇವರು ಅವರ ವಿಶೇಷ ಲೇಖನ
by B S lingadevaru Bengaluru
ಸಿದ್ಧಗಂಗಾ ಮಠ ಮತ್ತು ಶ್ರೀಗಳ ಜೊತೆಗೆ ನನ್ನ ಒಡನಾಟ ಶುರುವಾಗಿದ್ದು 95-96ರ ಸಮಯದಲ್ಲಿ. ಸುಮಾರು 23 ವರ್ಷಗಳ ಹಿಂದೆ. ಗೊರು ಚನ್ನಬಸಪ್ಪ ಅವರ ಮಾರ್ಗದರ್ಶನದಲ್ಲಿ ನಾನು ಸ್ವಾಮೀಜಿಯವರ ಕುರಿತಾಗಿ ಒಂದು ಸಾಕ್ಷ್ಯಚಿತ್ರ ನಿರ್ದೇಶನ ಮಾಡಿದೆ. ಸ್ವಾಮೀಜಿ ಒಂದು ದಿನದಲ್ಲಿ ಏನೇನು ಮಾಡುತ್ತಾರೆ ಅನ್ನುವುದು ಅದರ ವಸ್ತು.
ಅವರು ಮುಂಜಾವದ 2.30ಕ್ಕೆ ಎದ್ದರೆ ಮಲಗುತ್ತಿದ್ದುದು ರಾತ್ರಿ 11 ಗಂಟೆಗೆ. ಆ ಸಮಯದಲ್ಲಿ ಅವರು ಹೇಗಿರುತ್ತಿದ್ದರು ಅಂತ ನಾನು ಚಿತ್ರೀಕರಿಸಬೇಕಾಗಿತ್ತು. ಆ ಒಂದು ದಿನವನ್ನು ಚಿತ್ರೀಕರಿಸಲು ನಾನು ತೆಗೆದುಕೊಂಡಿದ್ದು ಎಂಟು ದಿನಗಳು. ಅಷ್ಟು ದಿನವೂ ನಾನೂ ಮಠದಲ್ಲೇ ಇದ್ದೆ. ಅವರು ಏಳುವ ಮೊದಲೇ ಅಂದರೆ 2 ಗಂಟೆಗೆ ರೆಡಿಯಾಗಿದ್ದು ಕಾಯುತ್ತಿದ್ದೆ. ಅವರು ಎದ್ದು ಪುಸ್ತಕ ಓದುತ್ತಿದ್ದರು. ವಚನ ಓದುತ್ತಿದ್ದರು. ನಂತರ ಸ್ನಾನ. ಆಮೇಲೆ ಯೋಗ- ಧ್ಯಾನ. ಬೆಳಿಗ್ಗೆ ಆರು ಗಂಟೆಗೆ ಉಪಾಹಾರ. ಉಪಾಹಾರ ಅಂದ್ರೆ ಒಂದು ಇಡ್ಲಿ ಮತ್ತು ಬೇವಿನ ಕಷಾಯ. ಅಷ್ಟೇ. ಆಗಂತೂ ಅವರು ಶಿವಪೂಜೆ ಮಾಡಿಕೊಳ್ಳುತ್ತಿದ್ದ ಕೋಣೆಗೆ ಯಾರನ್ನೂ ಬಿಡುತ್ತಿರಲಿಲ್ಲ. ಆದರೆ ಶ್ರೀಗಳು ನಮಗೆ ಅವಕಾಶ ಮಾಡಿಕೊಟ್ಟಿದ್ದರು.
ಅವರ ದಿನ ಹೀಗೆ ಶುರುವಾಗುತ್ತಿತ್ತು. ಆಗ ಅವರಿಗೆ 88 ವರ್ಷ ಆಗಿದ್ದಿರಬಹುದು. ಆ ವಯಸ್ಸಲ್ಲೂ ವೇಗವಾಗಿ ಮಠದಲ್ಲಿ ಸುತ್ತಾಡುತ್ತಿದ್ದರು. ದಾಸೋಹದ ಮನೆಗೆ, ಕೊಟ್ಟಿಗೆಗೆ, ಹೊಲಕ್ಕೆ, ಯಾವುದಾದರೂ ಕಟ್ಟಡ ಕಟ್ಟುತ್ತಿದ್ದರೆ ಅಲ್ಲಿಗೆ ವೇಗವಾಗಿ ಸಾಗುವುದನ್ನು ನೋಡುವುದೇ ಚೆಂದ. ನಾನು ಚಿತ್ರೀಕರಿಸುತ್ತಿದ್ದಾಗ ಒಂದು ಕಟ್ಟಡದ ಕೆಲಸ ನಡೆಯುತ್ತಿತ್ತು. ಅಲ್ಲಿ ಯಾರೋ ಮಂಕರಿ ಎತ್ತಿಕೊಂಡು ಹೋಗುತ್ತಿದ್ದವರಿಗೆ ಅವರು ನೆರವಾಗಿದ್ದರು. ಅವರು ಎಷ್ಟು ವೇಗವಾಗಿ ನಡೆಯುತ್ತಿದ್ದರೆಂದರೆ ನಮಗೆ ಅವರ ಸಮಕ್ಕೆ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಅವರ ಜತೆಜತೆಗೆ ಹೋಗಿ ಶೂಟಿಂಗ್ ಮಾಡೋದು ದೊಡ್ಡ ಸವಾಲಾಗಿತ್ತು. ಆಗಿನ್ನೂ ಮೂವತ್ತರ ಹರೆಯದಲ್ಲಿದ್ದ ನನಗೆ ಸ್ವಾಮಿಗಳ ಲವಲವಿಕೆ ನೋಡಿ ಭಾರಿ ಆಶ್ಚರ್ಯ.
ಸುತ್ತಾಡಿ ಬಂದ ನಂತರ ಆಫೀಸಿನಲ್ಲಿ ಕುಳಿತು ಪತ್ರಿಕೆಗಳನ್ನು ಓದೋರು. ಆ ನಂತರ ಭಕ್ತಾದಿಗಳ ಜತೆ ಮಾತುಕತೆ. ಎಲ್ಲರನ್ನೂ ಮಾತನಾಡಿಸಿಯಾದ ಮೇಲೆ ಬೇರೆ ಊರುಗಳಿಗೆ ಪಾದಪೂಜೆಗೆ ಹೋಗುತ್ತಿದ್ದರು. ಸಂಜೆ ಮತ್ತೆ ಮಠದಲ್ಲಿ ಪಾದಪೂಜೆ. ನಂತರ ಮತ್ತೆ ಮಠದಲ್ಲಿ ಸುತ್ತು ಹೊಡೆಯುತ್ತಿದ್ದರು. ಮಕ್ಕಳ ಹಾಸ್ಟೆಲ್ ಗಳಿಗೆ ಹೋಗುತ್ತಿದ್ದರು. ಅಲ್ಲಿ ಏನೇನು ನಡೆಯುತ್ತಿದೆ ಅನ್ನುವುದನ್ನು ವಿಚಾರಿಸುತ್ತಿದ್ದರು. ಅವರ ಕಣ್ಣು ತಪ್ಪಿಸಿ ಏನೂ ನಡೆಯೋಕೆ ಸಾಧ್ಯವೇ ಇರುತ್ತಿರಲಿಲ್ಲ. ಸಿದ್ಧಗಂಗಾ ಮಠ ಇವತ್ತು ಶಿಸ್ತಿಗೆ ಹೆಸರಾಗಿದ್ದರೆ ಅದಕ್ಕೆ ಕಾರಣ ಅವರು. ಆ ಶಿಸ್ತು ಸುಮ್ಮನೆ ಬಂದಿದ್ದಲ್ಲ. ಅದು ಅವರ ಬದುಕಿನಿಂದ ಬಂದಿದ್ದು. ಆ ಜೀವದಿಂದ ಬಂದಿದ್ದು.
ನಾನು ಚಿತ್ರೀಕರಣ ನಡೆಸಿದಾಗ ಶಾಲೆಗಳಿ ಅಡ್ಮಿಷನ್ ಸಮಯ ಅನ್ನಿಸುತ್ತದೆ. ಅಲ್ಲಿ ಬೇರೆ ಉಚಿತ ಶಿಕ್ಷಣ ಇತ್ತು. ಶ್ರೀಗಳು ಯಾರು ಬಂದ್ರೂ ಸಹಿ ಹಾಕಿ ಹಾಕಿ ಕಳುಹಿಸುತ್ತಾ ಇರೋರು. ಪ್ರಾಥಮಿಕ ಶಾಲೆಯಿಂದ ಹಿಡಿದು ಎಂಜಿನಿಯರಿಂಗ್ ಕಾಲೇಜಿಗೆ ಅಡ್ಮಿಷನ್ ಪಡೆಯಲೂ ಜನ ಬರುತ್ತಿದ್ದರು. ಹಾಗೆ ಬಂದ ಪ್ರತಿಯೊಬ್ಬರನ್ನೂ ವಿಚಾರಿಸಿ ಕಷ್ಟ ಸುಖ ಕೇಳುತ್ತಿದ್ದರು. ನಮ್ಮ ರಾಜ್ಯದಿಂದ ಮಾತ್ರ ಅಲ್ಲ, ಬೇರೆ ರಾಜ್ಯಗಳಿಂದಲೂ ಜನ ಬರುತ್ತಿದ್ದರು, ಮಹಾರಾಷ್ಟ್ರ, ತಮಿಳುನಾಡು, ಕೇರಳ ಯಾರು ಬಂದ್ರೂ ಉತ್ಸಾಹದಿಂದ ಮಾತನಾಡಿಸಿ ಎಲ್ಲರಲ್ಲೂ ಧನ್ಯತೆಯ ಭಾವ ಮೂಡಿಸುತ್ತಿದ್ದ ದೇವರು ಅವರು.
2004-05ರಲ್ಲಿ ನಾನು ಮತ್ತೊಂದು ಸಾಕ್ಷ್ಯಚಿತ್ರ ಮಾಡಿದೆ. ಸೆಂಟ್ರಲ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯನ್ ಲ್ಯಾಂಗ್ವೇಜಸ್ ಜತೆ ಸಿದ್ಧಗಂಗಾ ಮಠದ ಶೈಕ್ಷಣಿಕ ಕೊಡುಗೆ ಎಂಬ ವಿಷಯ ಅದು. ಸಿದ್ಧಗಂಗಾ ಮಠ ಅಸಾಧ್ಯವಾದ ಶಿಕ್ಷಣ ಕ್ರಾಂತಿಯನ್ನೇ ಮಾಡಿದೆ ಎಂದು ಗೊತ್ತಾಗಿದ್ದೇ ಆವಾಗ. 1917ರಲ್ಲೇ ಸಂಸ್ಕೃತ ಪಾಠಶಾಲೆ ತೆರೆದಿದ್ದರು. ಎಲ್ಲರಿಗೂ ಶಿಕ್ಷಣ ಇರದಿದ್ದ ಕಾಲದಲ್ಲಿ ಜಾತಿ, ಮತ, ಧರ್ಮ ಅಂತ ನೋಡದೆ ಎಲ್ಲರಿಗೂ ಶಿಕ್ಷಣ ದೊರಕಬೇಕು ಎಂಬ ಕನಸು ಕಂಡ ಮಹಾ ಗುರು ಅವರು. ಪ್ರತಿಯೊಬ್ಬರಿಗೂ ಉಚಿತ ಶಿಕ್ಷಣ, ವಸತಿ ನೀಡಿದರು. ಅತಿ ದೊಡ್ಡ ಶಿಕ್ಷಿತ ಸಮೂಹವನ್ನು ಸಮಾಜಕ್ಕೆ ಕೊಟ್ಟರು.
ಸಿದ್ಧಗಂಗಾ ಮಠದಲ್ಲಿ ಪ್ರತಿ ದಿನ ಬೆಳಿಗ್ಗೆ ಆರೂವರೆಗೆ ಪ್ರಾರ್ಥನೆ ನಡೆಯುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ಅದನ್ನು ನೋಡುತ್ತಿದ್ದರೆ ಮನಸ್ಸಲ್ಲಿ ದೈವಿಕ ಭಾವ. ಎಲ್ಲರೂ ತಣ್ಣೀರು ಸ್ನಾನ ಮಾಡಿಕೊಂಡು ಪ್ರಾರ್ಥನೆಗೆ ಬರುತ್ತಿದ್ದರು. ಶ್ರೀಗಳು ಬಂದು ಕುಳಿತು ವಚನ ಹೇಳುತ್ತಿದ್ದರು. ಸ್ವಲ್ಪ ಹೊತ್ತು ಮಾತನಾಡುತ್ತಿದ್ದರು. ಆಗ ಅವರಿಗೆ 104ನೇ ವಯಸ್ಸು. ಆಗಲೂ ಅವರು ದಿನನಿತ್ಯದ ಕಾರ್ಯಕ್ರಮಗಳನ್ನೂ ಮಾಡುವುದು ಬಿಟ್ಟಿರಲಿಲ್ಲ. ಅದೇ ಕ್ರೀಯಾಶೀಲತೆ. ಅದೇ ಉತ್ಸಾಹ. ಅದೇ ಶಕ್ತಿ. ಅದೇ ಹುರುಪು.
ಇನ್ನು ಶಿವರಾತ್ರಿ ಸಮಯದಲ್ಲಿ ನಡೆಯುವ ಸಿದ್ಧಗಂಗಾ ಜಾತ್ರೆ ಎಂದರೆ ಇಡೀ ಊರಿಗೆ ಹಬ್ಬ. ಸಿದ್ಧಗಂಗಾ ಜಾತ್ರೆ ಅಂದ್ರೆ ದನಗಳ ಜಾತ್ರೆ ಅಂತ ಜಿಲ್ಲೆಗೆ ಪ್ರಸಿದ್ಧ. ಅದನ್ನೂ ಭಾರಿ ಅಚ್ಚುಕಟ್ಟಾಗಿ ನಡೆಸಿಕೊಂಡು ಬಂದಿದ್ದು ಅವರ ಹೆಗ್ಗಳಿಕೆ. ಅನ್ನ ದಾಸೋಹ ಇದ್ದಾಗ ಅವರು ಪಂಕ್ತಿಯಲ್ಲಿ ಸುತ್ತು ಹೊಡೆಯುತ್ತಿದ್ದರು. ಅಡುಗೆ ಮಾಡುವಲ್ಲಿ ಹೋಗಿ ವಿಚಾರಿಸುತ್ತಿದ್ದರು. ಏನೇ ಆದರೂ ಅವರು ಅಲ್ಲೇ ನಿಂತು ಎಲ್ಲವನ್ನೂ ನಿಭಾಯಿಸುತ್ತಿದ್ದರು.
ಇಡೀ ಜಗತ್ತಿಗೆ ಮಾದರಿಯಾದ ಒಂದು ಸಂಸ್ಥೆಯನ್ನು ಕಟ್ಟಿಕೊಟ್ಟು, ಎಲ್ಲರಿಗೂ ಸ್ಫೂರ್ತಿಯಾಗುವಂತೆ ಬದುಕಿ ನಮ್ಮನ್ನೆಲ್ಲಾ ಕಣ್ಣೀರಾಗಿಸಿ ಹೊರಟು ಬಿಟ್ಟಿದ್ದಾರೆ. ಅವರ ನೆನೆದರೆ ಜೀವ ವೀಣೆ ಮೀಟಿದಂತೆ ಭಾಸವಾಗುತ್ತಿದೆ. ಹೆಜ್ಜೆ ಸೋತಿದೆ. ಮೌನ ಆವರಿಸಿದೆ. ಮೂರಲ್ಲ, ಇನ್ನೂ ನೂರು ಪುಣ್ಯಸ್ಮರಣೆಗಳು ಬಂದರೂ ಶ್ರೀಗಳು ಅಮರ, ಅಜರಾಮರ.
ಬಿ.ಎಸ್.ಲಿಂಗದೇವರು
ಲೇಖಕರು ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ದೇಶಕರು. ʼಮೌನಿʼ, ʼಕಾಡ ಬೆಳದಿಂಗಳುʼ, ʼನಾನು ಅವನಲ್ಲ.. ಅವಳುʼ ಚಿತ್ರಗಳು ಅವರ ನಿರ್ದೇಶನದಲ್ಲಿ ಮೂಡಿಬಂದಿವೆ.
Comments 1