ಆರೋಗ್ಯ ಸಚಿವರ ಕೈತಪ್ಪಿದ ತವರು ಜಿಲ್ಲೆ ಉಸ್ತುವಾರಿ!; ಮಾಧುಸ್ವಾಮಿ, ಅಶೋಕ್ ಅವರಿಗೆ ಸಿಗದ ಜಿಲ್ಲೆಗಳು!!; ಕೋಲಾರಕ್ಕೆ ಮುನಿರತ್ನ
ಬೆಂಗಳೂರು: ಸಚಿವರಿಗೆ ತವರು ಜಿಲ್ಲೆಗಳ ಉಸ್ತುವಾರಿ ನೀಡಬಾರದೆನ್ನುವ ಬಿಜೆಪಿ ಹೈಕಮಾಂಡ್ʼನ ಹೊಸ ರೂಲ್ಸ್ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಾರಿಗೆ ತಂದಿದ್ದಾರೆ.
ಆದರೆ, ಕೆಲವರ ವಿಷಯದಲ್ಲಿ ವರಿಷ್ಠರು ಚಾಪೆ ಕೆಳಗೆ ತೂರಿದರೆ, ಮುಖ್ಯಮಂತ್ರಿ ರಂಗೋಲಿ ಕೆಳಗೆ ಜಾರುವ ಪ್ರಯತ್ನ ಮಾಡಿದ್ದಾರೆ. ತಮ್ಮ ಆಪ್ತರ ವಿಷಯದಲ್ಲಿ ಅವರು ಹಾಗೆ ನಡೆದುಕೊಂಡಿದ್ದಾರೆ ಎನ್ನುವ ಅನುಮಾನ ಮೂಡಿದೆ. ಅದು ಸಂಪುಟ ವಿಸ್ತರಣೆಗೆ ಮುನ್ನ ಸಿಎಂ ಇಟ್ಟ ಹೆಜ್ಜೆ ಅನೇಕ ಅರ್ಥಗಳಿಗೆ ಕಾರಣವಾಗಿದೆ.
ಮುಖ್ಯವಾಗಿ ಚಿಕ್ಕಬಳ್ಳಾಪುರ ಶಾಸಕ ಹಾಗೂ ಹಾಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರಿಗೆ ತವರು ಜಿಲ್ಲೆ ಚಿಕ್ಕಬಳ್ಳಾಪುರದ ಉಸ್ತುವಾರಿ ಬದಲು ಪಕ್ಕದ, ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುವ ಮಹತ್ವದ್ದಾದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಕೊಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿಗೆ ಪಟ್ಟು ಹಿಡಿದಿದ್ದ ಎಂಟಿಬಿ ನಾಗರಾಜ್ ಅವರಿಗೆ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಕೊಡಲಾಗಿದೆ.
ಹೈಕಮಾಂಡ್ ರೂಲ್ಸ್ ಪ್ರಕಾರ ಉತ್ತರ ಕರ್ನಾಟಕದ ಸಚಿವರಿಗೆ ದಕ್ಷಿಣ ಕರ್ನಾಟಕದ ಉಸ್ತುವಾರಿಯನ್ನು, ಬಯಲುಸೀಮೆ ಜಿಲ್ಲೆಗಳ ಸಚಿವರಿಗೆ ಕರಾವಳಿ ಅಥವಾ ಮಲೆನಾಡು ಜಿಲ್ಲೆಗಳ ಉಸ್ತುವಾರಿ, ಆ ಭಾಗದ ಸಚಿವರಿಗೆ ಅದೇ ರೀತಿ ದೂರದ ಜಿಲ್ಲೆಗಳ ಉಸ್ತುವಾರಿ ನೀಡುವುದಾಗಿತ್ತು.
ಸಿಕೆನ್ಯೂಸ್ ನೌ ಎಲ್ಲರಿಗಿಂತ ಮೊದಲೇ; ಅಂದರೆ ಮಾರ್ಚ್ 30ರಂದೇ ಈ ಬಗ್ಗೆ ವರದಿ ಮಾಡಿತ್ತು.
ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..
ಇನ್ನು, ರಾಜರಾಜೇಶ್ವರಿ ನಗರದ ಮುನಿರತ್ನ ಅವರಿಗೆ ಕೋಲಾರ ಜಿಲ್ಲೆ ಉಸ್ತುವಾರಿ ನೀಡಲಾಗಿದೆ. ಮುನಿರತ್ನ ಕೂಡ ಕೋಲಾರ ಉಸ್ತುವಾರಿ ಬಗ್ಗೆ ತೃಪ್ತಿ ಹೊಂದಿಲ್ಲ ಎನ್ನಲಾಗಿದ್ದು, ಅವರೂ ಬೆಂಗಳೂರು ನಗರದ ಮೇಲೆ ಕಣ್ಣಿಟ್ಟಿದ್ದರು ಎನ್ನಲಾಗಿದೆ.
ಚಿಕ್ಕಬಳ್ಳಾಪುರ, ಕೋಲಾರದ ಕಥೆ ಹೀಗಾದರೆ, ಬೆಂಗಳೂರು ನಗರದ ಮೇಲೆ ಕಣ್ಣಿಟ್ಟು ಸಿಎಂ ಮೇಲೆ ಭಾರೀ ಪ್ರಭಾವ ಬೀರಿದ್ದ ಆರ್.ಅಶೋಕ್ ಅವರಿಗೆ ಯಾವ ಜಿಲ್ಲೆಯನ್ನೂ ಕೊಡಲಾಗಿಲ್ಲ. ಬಹುಶಃ ಬೇರೆ ಜಿಲ್ಲೆ ಉಸ್ತುವಾರಿಯನ್ನು ಅಶೋಕ್ ಬೇಡ ಎಂದಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಬೆಂಗಳೂರು ನಗರ ಉಸ್ತುವಾರಿ ಸಿಎಂ ತಮ್ಮ ಕೈಯ್ಯಲ್ಲೇ ಇಟ್ಟುಕೊಂಡಿದ್ದಾರೆ. ಮತ್ತೊಬ್ಬ ಹಿರಿಯ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಶಿವಮೊಗ್ಗವನ್ನು ತಪ್ಪಿಸಿ ನೆರೆಯ ಚಿಕ್ಕಮಗಳೂರು ಜಿಲ್ಲೆ ಕೊಟ್ಟು ಸಿಟ್ಟು ಶಮನ ಮಾಡುವ ಯತ್ನ ನಡೆಸಲಾಗಿದೆ.
ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ ಕಾರಣರಾಗಿದ್ದ ಆನಂದ್ ಸಿಂಗ್ ಅವರಿಗೆ ತವರು ಜಿಲ್ಲೆಯ ಬದಲಾಗಿ ಪಕ್ಕದ ಕೊಪ್ಪಳ ಜಿಲ್ಲೆ ಕೊಡಲಾಗಿದೆ. ಖಾತೆ ಹಂಚಿಕೆ ಬಗ್ಗೆ ಕ್ಯಾತೆ ತೆಗೆದು ಮುಖ್ಯಮಂತ್ರಿ ಮತ್ತು ವರಿಷ್ಟರ ಸಿಟ್ಟಿಗೆ ಗುರಿಯಾಗಿದ್ದ ಸಿಂಗ್ ಅವರಿಗೆ ಈ ರೀತಿ ಟಾಂಗ್ ಕೊಡಲಾಗಿದೆ. ಆದರೆ, ಬಿ.ಶ್ರೀರಾಮುಲು ಅವರಿಗೆ ಬಳ್ಳಾರಿಯನ್ನೇ ಕೊಡಲಾಗಿದೆ. ಇದು ಬಿಕ್ಕಟ್ಟಿಗೆ ಕಾರಣವಾಗುವ ನಿರೀಕ್ಷೆ ಇದೆ.
ಉಳಿದಂತೆ ಮೂವರು ಸಚಿವರುಗೆ ಡಬಲ್ ಧಮಾಕಾ ಸಿಕ್ಕಿದೆ. ಕೆ.ಗೋಪಾಲಯ್ಯ ಅವರಿಗೆ ಹಾಸನ ಜತೆಗೆ ಮಂಡ್ಯ ಉಸ್ತುವಾರಿ ಸಿಕ್ಕಿದೆ. ಬಿಸಿ ಪಾಟೀಲ್ ಅವರಿಗೆ ಚಿತ್ರದುರ್ಗ-ಗದಗ ನೀಡಲಾಗಿದೆ. ಶಂಕರ್ ಪಾಟೀಲ್ ಮುನೇನಕೊಪ್ಪ ಅವರಿಗೆ ರಾಯಚೂರು-ಬೀದರ್ ಜಿಲ್ಲೆಗಳ ಹೊಣೆ ನೀಡಲಾಗಿದೆ. ಮಂಡ್ಯದ ಕೆಸಿ ನಾರಾಯಣ ಗೌಡರಿಗೆ ಶಿವಮೊಗ್ಗ ಕೊಡಲಾಗಿದೆ.
ಉಳಿದಂತೆ ಮುಖ್ಯಮಂತ್ರಿಗಳು ತಮ್ಮ ತವರು ಜಿಲ್ಲೆ ಉಸ್ತುವಾರಿಯನ್ನು ಉತ್ತರ ಕನ್ನಡ ಜಿಲ್ಲೆಯ ಶಿವರಾಮ್ ಹೆಬ್ಬಾರ್ ಅವರಿಗೆ ವಹಿಸಿದ್ದಾರೆ.
ತವರು ಜಿಲ್ಲೆ ತುಮಕೂರು ಉಸ್ತುವಾರಿ ನಿರೀಕ್ಷೆಯಲ್ಲಿದ್ದ ಬಿಸಿ ನಾಗೇಶ್ ಅವರಿಗೆ ಕೊಡಗು ಜಿಲ್ಲೆ ನೀಡೆಲಾಗಿದೆ. ಜೆಸಿ ಮಾಧುಸ್ವಾಮಿ ಅವರಿಗೆ ತುಮಕೂರಷ್ಟೇ ಅಲ್ಲ ಬೇರೆ ಯಾವ ಜಿಲ್ಲೆಯ ಉಸ್ತುವಾರಿಯನ್ನೂ ಕೊಡದಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ತುಮಕೂರು ಜಿಲ್ಲೆ ಉಸ್ತುವಾರಿಯನ್ನು ಅರಗ ಜ್ಞಾನೇಂದ್ರ ಅವರಿಗೆ ವಹಿಸಲಾಗಿದೆ.
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮೇಲೆ, ಸ್ವಾತಂತ್ರ್ಯ ದಿನಾಚರಣೆ ದಿನದಂದು ಧ್ವಜಾರೋಹಣ ಮಾಡಲು, ಆ ನಂತರ ಕೋವಿಡ್ ಪರಿಸ್ಥಿತಿ ನಿಭಾಯಿಸಲು ಮಂತ್ರಿಗಳಿಗೆ ಉಸ್ತುವಾರಿ ನೀಡಿದ್ದರು. ಆದರೆ, ಇದನ್ನೇ ಉಸ್ತುವಾರಿ ಎಂದು ಬಿಂಬಿಸಿಕೊಂಡು ಸರಕಾರ ಸಭೆ, ಕಾರ್ಯಕ್ರಮಗಳನ್ನು ನಡೆಸಿದ್ದ ಕೆಲ ಸಚಿವರು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದರು. ಮಾತ್ರವಲ್ಲದೆ, ಝೀರೋ ಟ್ರಾಫಿಕ್ ಎಂದೆಲ್ಲ ಶೋ ಮಾಡಿದ್ದರು. ಸದ್ಯಕ್ಕೆ ಅವರ ಬುಡ ಅಲ್ಲಾಡಿಸುವ ಕೆಲಸವನ್ನು ಬಿಜೆಪಿ ಮಾಡಿದೆ.
ಈಗ ಜನವರಿ 26ರ ಗಣರಾಜ್ಯೋತ್ಸವ ದಿನದಂದು ಧ್ವಜಾರೋಹಣ ಮಾಡುವುದು ಸೇರಿದಂತೆ ಪೂರ್ಣ ಪ್ರಮಾಣದ ಜಿಲ್ಲಾ ಉಸ್ತುವಾರಿ ಹೊಣೆಯನ್ನು ಸಿಎಂ ವಹಿಸಿದ್ದಾರೆ. ಆದರೆ, ಸದಾ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವ ಮಾಧುಸ್ವಾಮಿ ಹಾಗೂ ಸಿಎಂ ಆಪ್ತ ಬಳಗದಲ್ಲೇ ಇದ್ದ ಆಶೋಕ್ ಅವರಿಗೆ ಜಿಲ್ಲೆಗಳು ಸಿಗದಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರು
1.ಬಸವರಾಜ ಬೊಮ್ಮಾಯಿ: ಬೆಂಗಳೂರು ನಗರ
2.ಗೋವಿಂದ ಕಾರಜೋಳ: ಬೆಳಗಾವಿ
3.ಕೆ.ಎಸ್.ಈಶ್ವರಪ್ಪ: ಚಿಕ್ಕಮಗಳೂರು
4.ಬಿ.ಶ್ರೀರಾಮುಲು: ಬಳ್ಳಾರಿ
5.ವಿ.ಸೋಮಣ್ಣ: ಚಾಮರಾಜನಗರ
6.ಉಮೇಶ್ ಕತ್ತಿ: ವಿಜಯಪುರ
7.ಎಸ್.ಅಂಗಾರ: ಉಡುಪಿ
8.ಆರಗ ಜ್ಞಾನೇಂದ್ರ: ತುಮಕೂರು
9.ಡಾ.ಸಿ. ಎನ್.ಅಶ್ವತ್ಥನಾರಾಯಣ: ರಾಮನಗರ
10.ಸಿ.ಸಿ.ಪಾಟೀಲ್: ಬಾಗಲಕೋಟೆ
11.ಆನಂದ್ ಸಿಂಗ್: ಕೊಪ್ಪಳ
12.ಕೋಟಾ ಶ್ರೀನಿವಾಸ ಪೂಜಾರಿ: ಉತ್ತರ ಕನ್ನಡ
13.ಪ್ರಭು ಚವ್ಹಾಣ್: ಯಾದಗಿರಿ
14.ಮುರುಗೇಶ್ ನಿರಾಣಿ: ಕಲಬುರಗಿ
15.ಶಿವರಾಮ್ ಹೆಬ್ಬಾರ್: ಹಾವೇರಿ
16.ಎಸ್.ಟಿ.ಸೋಮಶೇಖರ್: ಮೈಸೂರು
17.ಬಿ. ಸಿ.ಪಾಟೀಲ್: ಚಿತ್ರದುರ್ಗ ಮತ್ತು ಗದಗ
18.ಬಿ.ಎ.ಬಸವರಾಜ: ದಾವಣಗೆರೆ
19.ಡಾ.ಕೆ.ಸುಧಾಕರ್: ಬೆಂಗಳೂರು ಗ್ರಾಮಾಂತರ
20.ಕೆ. ಗೋಪಾಲಯ್ಯ: ಹಾಸನ ಮತ್ತು ಮಂಡ್ಯ
21.ಶಶಿಕಲಾ ಜೊಲ್ಲೆ: ವಿಜಯನಗರ
22.ಎಂಟಿಬಿ ನಾಗರಾಜ್: ಚಿಕ್ಕಬಳ್ಳಾಪುರ
23.ಕೆ.ಸಿ.ನಾರಾಯಣ ಗೌಡ: ಶಿವಮೊಗ್ಗ
24.ಬಿ.ಸಿ.ನಾಗೇಶ್: ಕೊಡಗು
25.ವಿ.ಸುನೀಲ್ ಕುಮಾರ್: ದಕ್ಷಿಣ ಕನ್ನಡ
26.ಹಾಲಪ್ಪ ಆಚಾರ್: ಧಾರವಾಡ
27.ಶಂಕರ್ ಬಿ. ಮುನೇನಕೊಪ್ಪ: ರಾಯಚೂರು ಮತ್ತು ಬೀದರ್
28.ಮುನಿರತ್ನ: ಕೋಲಾರ
Comments 1