ಜನವರಿ 26ರ ವಿಶೇಷ, ಆಚರಣೆ ವಿಧಿ-ವಿಧಾನ
by Guruprasda Hawldar
ಇಂದು ಜನವರಿ 26ನೇ ತಾರೀಕಿನಂದು ಭಾರತ ದೇಶ 73ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತದೆ. ಭಾರತೀಯ ಕಲೆ, ಸಂಸ್ಕೃತಿ, ಶಕ್ತಿ, ಸಾಮರ್ಥ್ಯಗಳೆಲ್ಲಾ ದೆಹಲಿಯ ರಾಜಪಥದಲ್ಲಿ ಮೆರವಣಿಗೆ ಮೂಲಕ ಇಡೀ ವಿಶ್ವವನ್ನೇ ಗಮನ ಸೆಳೆಯುತ್ತಿದೆ. ಈ ಸಂದರ್ಭದಲ್ಲಿ ನಮ್ಮ ದೇಶದ ಮೊದಲ ಗಣರಾಜ್ಯೋತ್ಸವದ ಹಿನ್ನೆಲೆ ಮತ್ತು ಆಚರಣೆ ಹೇಗೆ ಎಂಬುದನ್ನು ನೋಡೋಣ.
ಭಾರತವು ಸ್ವಾತಂತ್ರ್ಯಗೊಂಡ ನಂತರ ನಮ್ಮ ದೇಶಕ್ಕೆ ನಮ್ಮದೆ ಆದ ಕಾನೂನು ಮತ್ತು ಸಂವಿಧಾನ ಇರಬೇಕು ಎಂದುಕೊಂಡು, ಡಾ.ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವದ ತಂಡ ರಚಿಸಿತ್ತು. ಈ ತಂಡದಲ್ಲಿ ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಗೋಪಾಲಸ್ವಾಮಿ ಅಯ್ಯಂಗಾರ್, ಟಿ.ಟಿ.ಕೃಷ್ಣಮಚಾರಿ, ಡಿ.ಪಿ.ಖೇತಾನ್, ಸರ್ ಬೆನೆಗಲ್, ಕನ್ಹಯ್ಯಲಾಲ್ ಮುನ್ಷಿ ಮತ್ತು ಮೊಹಮ್ಮದ್ ಸಾಅದುಲ್ಲಾ ಅವರಿದ್ದರು.
2 ವರ್ಷ 11 ತಿಂಗಳು ಮತ್ತು 18 ದಿನ
ಡಾ.ಬಿ.ಆರ್.ಅಂಬೇಡ್ಕರ್ ಅವರು ಭಾರತದ ಸಂವಿಧಾನದ ಕರಡನ್ನು ಸಿದ್ಧಪಡಿಸಲು 2 ವರ್ಷ 11 ತಿಂಗಳು ಮತ್ತು 18 ದಿನಗಳನ್ನು ತೆಗೆದುಕೊಂಡರು. ತದನಂತರ ಇಂಗ್ಲೀಷ್ ಮತ್ತು ಹಿಂದಿ ಭಾಷೆಯಲ್ಲಿ ಹಸ್ತಾಕ್ಷರದಲ್ಲಿ ಸಂವಿಧಾನಗಳನ್ನು ಸಿದ್ಧಪಡಿಸಲಾಯಿತು.
ಬಾಬಾ ಸಾಹೇಬ್ ಅಂಬೇಡ್ಕರ್ʼರ ನೇತೃತ್ವದಲ್ಲಿ ಸಂವಿಧಾನ ರಚನಾ ಸಮಿತಿಯು 26 ನವೆಂಬರ್ 1949ರಲ್ಲಿ ಸಲ್ಲಿಸಿದಂಥ ಸಂವಿಧಾನವನ್ನು ಅಳವಡಿಸಿಕೊಂಡಿತ್ತು.
ಈ ಎರಡೂ ಭಾಷೆಗಳಲ್ಲಿ ಸಿದ್ಧಪಡಿಸಿದ ಸಂವಿಧಾನದ ಪ್ರತಿಗಳಿಗೆ 24ನೇ ಜನವರಿ 1950 ರಂದು ಸಭೆ ಮಾಡಿ 308 ಮಂದಿಗಳು ಸಹಿಯನ್ನು ಹಾಕಿದರು. ಅದಾಗಿ ಎರಡು ದಿನಗಳ ನಂತರ ಈ ಸಂವಿಧಾನವು ಜಾರಿಗೆ ತಂದು ಇಡೀ ದೇಶದಲ್ಲಿ ಅನುಷ್ಠಾನಕ್ಕೆ ತರಲಾಯಿತು.
448 ವಿಧಿಗಳನ್ನು 22 ಭಾಗಗಳಲ್ಲಿಯೂ, 10 (ನಂತರ 12) ಅನುಚ್ಛೇದಗಳನ್ನೂ, 118 ತಿದ್ದುಪಡಿಗಳನ್ನೂ ಹೊಂದಿರುವ ಈ ಸಂವಿಧಾನದ ಆಂಗ್ಲ ಭಾಷೆಯ ಆವೃತ್ತಿಯು 1,17,369 ಶಬ್ಧಗಳನ್ನು ಹೊಂದಿದೆ. ಇಲ್ಲಿಯವರೆಗೆ 94 ತಿದ್ದುಪಡಿಗಳನ್ನು ಮಾಡಲಾಗಿದೆ.
ಹಸ್ತಾಕ್ಷರದಲ್ಲಿ ಬರೆದಿರುವ ಭಾರತೀಯ ಸಂವಿಧಾನದ ಆ ಎರಡೂ ಪ್ರತಿಗಳನ್ನು ಸಂಸತ್ತಿನ ಗ್ರಂಥಾಲಯದಲ್ಲಿ ಹೀಲಿಯಂ ಭರ್ತಿ ಮಾಡಿರುವ ಪೆಟ್ಟಿಗೆಯಲ್ಲಿ ಜೋಪಾನವಾಗಿ ಇಡಲಾಗಿದೆ.
ಮುಂಡಕ ಉಪನಿಷತ್ತಿನಿಂದ ಭಾರತದ ಧ್ಯೇಯವಾಕ್ಯ ‘ಸತ್ಯಮೇವ ಜಯತೇ’ ಯನ್ನು ಆರಿಸಿಕೊಳ್ಳಲಾಗಿದೆ. ಅಲ್ಲದೆ ಮದನ್ ಮೋಹನ್ ಮಾಳವಿಯಾರವರು ಈ ಧೇಯವಾಕ್ಯವನ್ನು ಆರಿಸಿದ ಕೀರ್ತಿಗೆ ಪಾತ್ರರಾದರು. ರವೀಂದ್ರನಾಥ ಟ್ಯಾಗೋರರು ಜನಗಣಮನ ಗೀತೆಯನ್ನು ಮೊದಲು ಬೆಂಗಾಳಿಯಲ್ಲಿ ಬರೆದರು. ಇದನ್ನು ಅಬಿದ್ ಅಲಿಯವರು 1911ರಲ್ಲಿ ಹಿಂದಿಗೆ ಭಾಷಾಂತರ ಮಾಡಿದರು. 1950ರಲ್ಲಿ ಇದನ್ನು ಅಧಿಕೃತವಾಗಿ ರಾಷ್ಟ್ರಗೀತೆ ಎಂದು ಘೋಷಣೆ ಮಾಡಲಾಯಿತು.
ಭಾರತದ ರಾಷ್ಟ್ರಗೀತೆಯನ್ನು 52 ಸೆಕೆಂಡುಗಳಲ್ಲಿ ಹಾಡಬೇಕು. ಅಲ್ಲದೆ ಭಾರತದ ರಾಷ್ಟ್ರೀಯ ಲಾಂಛನವಾಗಿರುವ ಅಶೋಕ ಸ್ತಂಭವನ್ನು ಸಾರನಾಥದಿಂದ ಆರಿಸಿಕೊಳ್ಳಲಾಗಿದೆ. ಸಾರನಾಥದ ಈ ಸ್ತಂಭವು ಕ್ರಿ.ಪೂ 250ರಷ್ಟು ಹಳೆಯದು.
ಭಾರತದ ಧ್ವಜವನ್ನು ಮಚಲಿಪಟ್ಟಣದ ರೈತರಾದ ಪಿಂಗಳಿ ವೆಂಕಯ್ಯನವರು ವಿನ್ಯಾಸ ಮಾಡಿದರು. ಭಾರತದ ಧ್ವಜದ ಉದ್ದ ಮತ್ತು ಅಗಲದ ಅನುಪಾತವು 3:2 ಆಗಿರಬೇಕು. ಕಾನೂನು ಪ್ರಕಾರ ಭಾರತದ ಧ್ವಜವನ್ನು ಖಾದಿಯಲ್ಲಿ ಮಾತ್ರ ತಯಾರಿಸಬೇಕು ಹಾಗೂ 9 ನಿರ್ದಿಷ್ಟ ಗಾತ್ರದಲ್ಲಿ ಮಾತ್ರ ತಯಾರಿಸಬೇಕು. ಖಾದಿಯನ್ನು ಹೊರತುಪಡಿಸಿ ಇತರೆ ಬಟ್ಟೆಯಲ್ಲಿ ತಯಾರಿಸಲಾದ ಧ್ವಜವನ್ನು ಹಾರಿಸುವುದು ಶಿಕ್ಷಾರ್ಹ ಅಪರಾಧ. ಇದಕ್ಕಾಗಿ, ದಂಡದ ಜತೆಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಬಹುದು. ಅಲ್ಲದೆ, ಭಾರತದ ಧ್ವಜವು ನೆಲಕ್ಕೆ ಬೀಳಿಸಬಾರದು ಮತ್ತು ನೀರಿಗೆ ಹಾಕಿರಬೇಕು. ಜತೆಗೆ ಇದನ್ನು ಪರದೆಯಾಗಿ ಸಹ ಬಳಸಬಾರದು.
ಪ್ರಥಮ ಗಣರಾಜ್ಯೋತ್ಸವ
1950 ಜನವರಿ 26ನೇ ತಾರೀಕು ಸಂವಿಧಾನ ಅಧಿಕೃತವಾಗಿ ಜಾರಿಗೆ ಬರುವ ಮೂಲಕ ಭಾರತ ಮೊದಲ ಗಣರಾಜ್ಯೋತ್ಸವವನ್ನು ಆಚರಿಸಿತು. ಡಾ.ರಾಜೇಂದ್ರ ಪ್ರಸಾದ್ ಅವರು ಸಹ ಭಾರತದ ಮೊದಲ ರಾಷ್ಟ್ರಪತಿಯಾಗಿ 26ನೇ ಜನವರಿ 1950ರಂದು ಅಧಿಕಾರ ವಹಿಸಿಕೊಂಡರು.
ದೇಶದ ಮೊದಲ ಗಣರಾಜ್ಯೋತ್ಸವ ಸಂಭ್ರಮವನ್ನು ದೆಹಲಿಯ ಪ್ರಸಿದ್ಧ ಇರ್ವಿನ್ ಆಂಫಿಥಿಯೇಟರ್ನಲ್ಲಿ ಆಚರಿಸಲಾಗಿತ್ತು. ಆಂದು ದೇಶ-ವಿದೇಶಗಳ ಗಣ್ಯರು ಸೇರಿದಂತೆ 15 ಸಾವಿರಕ್ಕೂ ಹೆಚ್ಚು ನಾಗರಿಕರು ಪಾಲ್ಗೊಂಡಿದ್ದರು. ಗಣರಾಜ್ಯೋತ್ಸವಕ್ಕೆ ಇಂಡೋನೇಷ್ಯಾ ದೇಶದ ಅಂದಿನ ಅಧ್ಯಕ್ಷರಾಗಿದ್ದ ಸುಕರ್ಣೋ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಭಾರತದ ಮೊದಲ ರಾಷ್ಟ್ರಪತಿಗಳಾಗಿದ್ದ ಡಾ.ರಾಜೇಂದ್ರ ಪ್ರಸಾದ್ ಅವರು, ಇಂಡೋನೇಷ್ಯಾ ಅಧ್ಯಕ್ಷರನ್ನು ತಮ್ಮದೇ ಕುದುರೆ ಸಾರೋಟಿನಲ್ಲಿ ಮೆರವಣಿಗೆ ಮೂಲಕ ಕರೆತಂದಿದ್ದು ವಿಶೇಷವಾಗಿತ್ತು.
ಇನ್ನು ಗಣರಾಜ್ಯೋತ್ಸವ ಆಚರಣೆಗೂ ಮುನ್ನ ಪ್ರಧಾನ ಮಂತ್ರಿ ಜವಾಹರ ಲಾಲ್ ನೆಹರು ಅವರು ಆಲ್ ಇಂಡಿಯಾ ರೇಡಿಯೋ ಮೂಲಕ ಭಾರತೀಯರನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಹಾಗೆಯೇ; ದೆಹಲಿಯಲ್ಲಿ ಪರೇಡ್ ಕೂಡ ನಡೆದಿತ್ತು. ಇದೆಲ್ಲಾ ನಡೆದಿದ್ದು ದೆಹಲಿಯ ಇರ್ವಿನ್ ಆಂಫಿಥಿಯೇಟರ್ʼನ ಮುಂದೆ. ನಂತರ ಇದೇ ಸ್ಥಳ ಮೇಜರ್ ಧ್ಯಾನ್ಚಂದ್ ನ್ಯಾಷನಲ್ ಸ್ಟೇಡಿಯಂ ಆಗಿ ಬದಲಾಯಿತು.
ಅಂದಿನ ಗಣರಾಜ್ಯೋತ್ಸವ ಸಮಾರಂಭದಲ್ಲಿ ಆಗ ತಾನೆ ಭಾರತೀಯ ಸೇನೆ ಆಪರೇಷನ್ ಜಮ್ಮು-ಕಾಶ್ಮೀರ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಮುಗಿಸಿತ್ತು. ಹೀಗಾಗಿ ಈ ಆಪರೇಷನ್ʼನಲ್ಲಿ ಭಾಗವಹಿಸಿ ಶೌರ್ಯ ಮೆರೆದ ನಾಲ್ಕು ವೀರ ಯೋಧರಾದ ಮೇಜರ್ ಸೋಮನಾಥ್ ಶರ್ಮ ಅವರು ಮೊತ್ತಮೊದಲ ಪರಮವೀರ ಚಕ್ರ ಪಡೆದ ಸೇನಾನಿ ಎನಿಸಿದರು. ನಾಯಕ್ ಜಾಧೂನಾಥ್ ಸಿಂಗ್ ಅವರಿಗೆ ಮರಣೋತ್ತರ ಪರಮವೀರ ಚಕ್ರವನ್ನು ಪ್ರದಾನ ಮಾಡಲಾಯಿತು. ಕ್ಯಾಪ್ಟನ್ ರಾಮ್ ರಾಘೋಬಾ ರಾಣೆ ಹಾಗೂ ಹವಾಲ್ದಾರ್ ಕರಮ್ ಸಿಂಗ್ ಅವರಿಗೂ ಪರಮವೀರ ಚಕ್ರವನ್ನು ನೀಡಿ ಸನ್ಮಾನಿಸಲಾಯಿತು.
ಆ ದಿನದಂದು ಭಾರತೀಯ ವಾಯುಸೇನೆಯ 100ಕ್ಕೂ ಹೆಚ್ಚು ಯುದ್ಧ ವಿಮಾನಗಳು ದೆಹಲಿಯ ಬಾನಂಗಳದಲ್ಲಿ ಹಾರಾಡುವ ಮೂಲಕ ಚಿತ್ತಾರ ಬಿಡಿಸಿದ್ದವು. ಯುದ್ಧ ವಿಮಾನಗಳಲ್ಲಿ ವಾಯುಸೇನೆಯ ದಂತಕಥೆ ಎನಿಸಿಕೊಂಡಿರುವ ಹಾರ್ವರ್ಡ್, ಡಕೋಟಾ, ಲಿಬರೇಟರ್ಸ್, ಟೆಂಪೆಸ್ಟ್, ಸ್ಪಿಟ್ಫೈರ್ ವಿಮಾನಗಳೆಲ್ಲಾ ಹಾರಾಟ ನಡೆಸಿದ್ದವು. 1950 ಜನವರಿ 26ನೇ ತಾರೀಕಿನಂದೇ ಬ್ರಿಟೀಷರು ಇಟ್ಟಿದ್ದ ರಾಯಲ್ ಫೋರ್ಸ್ ಎನ್ನುವ ಹೆಸರನ್ನ ಬದಲಿಸಿ ಭಾರತೀಯ ವಾಯುಸೇನೆ ಎಂದು ಮರು ನಾಮಕರಣ ಮಾಡಲಾಯಿತು.
ಭಾರತದ ರಾಷ್ಟ್ರಪತಿಯವರು ನಮ್ಮ ತ್ರಿವರ್ಣ ಧ್ವಜವನ್ನು ಹಾರಿಸುವಾಗ ನೌಕಾದಳ ಮತ್ತು ಭೂಸೇನೆಯ ಗೌರವವನ್ನು ಸೂಚಿಸುವ 21 ಕುಶಾಲ ತೋಪುಗಳನ್ನು ಹಾರಿಸಲಾಗುತ್ತದೆ.
2022ರ ಗಣರಾಜ್ಯೋತ್ಸವದ ಥೀಮ್
ಭಾರತದ ಸ್ವಾತಂತ್ರ್ಯದ 75 ವರ್ಷಗಳ ಸ್ಮರಣಾರ್ಥವಾಗಿ ‘ಪರೇಡ್ʼನ ವಿಷಯವು ಭಾರತ@75’ ಆಗಿದೆ. ಈ ಬಾರಿಯ ಗಣರಾಜ್ಯೋತ್ಸವ ಪರೇಡ್‍ನಲ್ಲಿ ರಾಜ್ಯಗಳು ಕಳುಹಿಸಿ ಭಾಗವಹಿಸುವ ಸ್ತಬ್ಧಚಿತ್ರಗಳು 21, ಬಂದಂತಹ 56 ಪ್ರಸ್ತಾವನೆಗಳಲ್ಲಿ 21 ಸ್ತಬ್ಧಚಿತ್ರಗಳಿಗೆ ಅವಕಾಶ ನೀಡಲಾಗಿದೆ.
ಗಣರಾಜ್ಯೋತ್ಸವ ವೀಕ್ಷಣೆ ಮಾಡಲು ಪ್ರೇಕ್ಷಕರ ಪ್ರಮಾಣವನ್ನು 24,000ಕ್ಕೆ ತಗ್ಗಿಸಲಾಗಿದೆ. ಕೊವಿಡ್-19 ಭೀತಿಗೂ ಮೊದಲು ಅಂದರೆ 2020ರಲ್ಲಿ ಗಣರಾಜ್ಯೋತ್ಸವ ಆಚರಿಸುವ ವೇಳೆ 1.25 ಲಕ್ಷ ಪ್ರೇಕ್ಷಕರಿಗೆ ಪರೇಡ್ ವೀಕ್ಷಿಸಲು ಅನುಮತಿ ನೀಡಲಾಗುತ್ತಿತ್ತು.
ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿನ ಕಾರಣದಿಂದ ಈ ವರ್ಷ ಯಾವುದೇ ವಿದೇಶಿ ಅತಿಥಿಗಳಿಗೆ ಆಹ್ವಾನವನ್ನು ನೀಡಿಲ್ಲ. ಸರ್ಕಾರವು ಐದು ಮಧ್ಯ ಏಷ್ಯಾ ರಾಷ್ಟ್ರಗಳ ಮುಖ್ಯಸ್ಥರಿಗೆ ಆಹ್ವಾನಗಳನ್ನು ಕಳುಹಿಸಿತ್ತು, ಆದರೆ, ಈಗ ಯೋಜನೆಯನ್ನು ರದ್ದುಗೊಳಿಸಲಾಗಿದೆ. ಈ ಹಿಂದೆ 1952 1953ರಲ್ಲೂ ಹಾಗೂ 1966ರಲ್ಲಿ ಗಣರಾಜ್ಯೋತ್ಸವ ಪರೇಡ್ʼನಲ್ಲಿ ಮುಖ್ಯ ಅತಿಥಿಗಳು ಇರಲಿಲ್ಲ.
26ನೆ ತಾರೀಕು ಭಾರತೀಯರ ಪಾಲಿನ ಅತ್ಯಂತ ಮಹತ್ವದ ಹಾಗೂ ಅತ್ಯಂತ ಪವಿತ್ರವಾದ ದಿನವಾಗಿದೆ. ಅದೆಲ್ಲದರ ಪ್ರತೀಕವಾಗಿ ಭಾರತೀಯರು ಗಣರಾಜ್ಯೋತ್ಸವವನ್ನ ಆಚರಿಸಲಾಗುತ್ತದೆ. ಭಾರತದ ಇತಿಹಾಸ, ಕಲೆ, ಸಂಸ್ಕೃತಿ, ಶಕ್ತಿ, ಸಾಮರ್ಥ್ಯಗಳು ಜಗತ್ತಿನ ಮುಂದೆ ಪ್ರತಿ ವರ್ಷವೂ ಪ್ರದರ್ಶನವಾಗುತ್ತದೆ.
ಡಾ.ಗುರುಪ್ರಸಾದ ಹವಲ್ದಾರ್
- ಮೂಲತಃ ಉಪನ್ಯಾಸಕರು. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನ ಹಳ್ಳಿಯವರು. ಪ್ರಸ್ತುತ ಹಗರಿಬೊಮ್ಮನಹಳ್ಳಿ ಜಿವಿಪಿಪಿ ಪದವಿ ಕಾಲೇಜನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತ ಜೊತೆಗೆ ಪತ್ರಿಕೆಗಳಿಗೆ ವೆಬ್ ನ್ಯೂಸ್ ಪೋಟ್೯ಲ್ ಗಳಿಗೆ ಲೇಖನ ಬರೆಯುತ್ತಿದ್ದಾರೆ.