ಡಾ.ಸುಧಾಕರ್ ಬದಲಿಗೆ ಎಂಟಿಬಿ ಅವರಿಂದ ಧ್ವಜಾರೋಹಣ
ಚಿಕ್ಕಬಳ್ಳಾಪುರ: ಭಾರತವು ಸ್ವಾತಂತ್ರ್ಯಾ ನಂತರ 1950ರ ಜನವರಿ 26ರಂದು ತನ್ನದೇ ಸಂವಿಧಾನವನ್ನು ಜಾರಿಗೊಳಿಸಿಕೊಂಡು ಸ್ವತಂತ್ರ ಗಣತಂತ್ರ ರಾಷ್ಟ್ರವಾಯಿತು. ಈ ಹಿನ್ನೆಲೆಯಲ್ಲಿ ಜನವರಿ 26, ಭಾರತೀಯರಿಗೆ ಮಹತ್ವದ ದಿನವಾಗಿದೆ ಎಂದು ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಸಣ್ಣ ಉದ್ದಿಮೆಗಳ ಸಚಿವ ಹಾಗೂ ಜಿಲ್ಲಾ ನೂತನ ಉಸ್ತುವಾರಿ ಸಚಿವ ಎನ್.ನಾಗರಾಜು (ಎಂಟಿಬಿ) ತಿಳಿಸಿದರು.
ಅವರು ಇಂದು ನಗರದ ಸರ್.ಎಂ.ವಿ. ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಆಯೊಜಿಸಿದ್ದ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೊಹಣವನ್ನು ನೆರವೇರಿಸಿ ಮಾತನಾಡಿದರು.
ತಾಯ್ನಾಡಿನ ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡ ದೇಶ ಪ್ರೇಮಿಗಳು ಹಾಗೂ ನಾಯಕರ ತ್ಯಾಗ ಬಲಿದಾನಗಳನ್ನು ನಾವು ಸ್ಮರಿಸೋಣ. ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ನಮ್ಮ ದೇಶಕ್ಕೆ ಅತ್ಯಂತ ಶ್ರೇಷ್ಠ ಸಂವಿಧಾನ ರಚಿಸಿಕೊಟ್ಟು ದೇಶದ ಮುನ್ನಡೆಗೆ ದಾರಿದೀಪವಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಅವರ ತಂಡದ ಸದಸ್ಯರನ್ನು ಕೃತಜ್ಞತಭಾವದಿಂದ ಸ್ಮರಿಸೋಣ ಎಂದರು ಸಚಿವರು.
ಜಗತ್ತಿಗೆ ಮಾತೃಪ್ರೇಮ, ಸಮಾನತೆ ಮತ್ತು ಮಮತೆಯನ್ನು ಬೋಧಿಸಿದ ಪರಂಪರೆ ನಮ್ಮದು. ರಾಜಪ್ರಭುತ್ವ ಮತ್ತು ಊಳಿಗಮಾನ್ಯ ವ್ಯವಸ್ಥೆಯನ್ನು ಧಿಕ್ಕರಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿಕೊಂಡು, ಪ್ರಜೆಗಳೇ ಪ್ರಭುಗಳು ಎಂದು ಭಾವಿಸಿ ಹೆಣ್ಣು ಮಕ್ಕಳನ್ನು ತಾಯಿಯೆಂದು, ಮಕ್ಕಳನ್ನು ದೇವರೆಂದು ನಂಬಿಕೊಂಡು ಹಲವು ಧರ್ಮಗಳು ಮತ್ತು ಆಚರಣೆಗಳನ್ನು ಒಂದೇ ಮಣ್ಣಿನಲ್ಲಿ ಪೋಷಿಸಿಕೊಂಡು, ಅಧ್ಯಾತ್ಮ ಮತ್ತು ವಿಜ್ಞಾನ ಎರಡನ್ನು ಸಮನ್ವಯಿಸಿದ ಹೆಮ್ಮೆಯ ದೇಶ ನಮ್ಮದು ಎಂದು ಅವರು ಹೇಳಿದರು.
ದಿಗ್ಗಜರ ಜಿಲ್ಲೆ ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ ಜಿಲ್ಲೆಯು ಅನೇಕ ಧೀಮಂತ ವ್ಯಕ್ತಿಗಳಿಗೆ ಜನ್ಮ ನೀಡಿದ್ದು, ಈ ಪೈಕಿ ಸರ್ ಎಂ.ವಿಶ್ವೇಶ್ವರಯ್ಯ ಮತ್ತು ಡಾ. ಸಿ.ಎನ್.ಆರ್.ರಾವ್ ಅವರುಗಳು ಭಾರತರತ್ನ ಪ್ರಶಸ್ತಿಗೆ ಭಾಜನರಾಗಿರುವುದು ಜಿಲ್ಲೆಯೇ ಹೆಮ್ಮೆ ಪಡುವಂತಹ ಸಂಗತಿ ಯಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯು ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಹಣ್ಣು, ಹೂವು, ತರಕಾರಿ, ರೇಷ್ಮೆ, ಪ್ರಧಾನ ಆಹಾರ ಧಾನ್ಯ ರಾಗಿ, ಕ್ಷೀರೋತ್ಪಾದನೆಗೆ ಹೆಸರುವಾಸಿಯಾಗಿದೆ. ಜಿಲ್ಲೆಯಲ್ಲಿ ವಾರ್ಷಿಕ ವಾಡಿಕೆ ಮಳೆ (31.12.2021 ರ ಅಂತ್ಯಕ್ಕೆ) 735.7 ಮಿಲಿ ಮೀಟರ್ ಇದ್ದು, ವಾಸ್ತವಿಕವಾಗಿ 1269.3 ಮಿಲಿ ಮೀಟರ್ ಮಳೆಯಾಗುವ ಮೂಲಕ ಶೇ. 73% ಹೆಚ್ಚಿನ ಮಳೆಯಾಗಿದೆ ಎಂದರು.
ಜಿಲ್ಲೆಯಲ್ಲಿ ಒಟ್ಟು 4,244.72 ಕ್ವಿಂಟಲ್ ಬಿತ್ತನೆ ಬೀಜಗಳನ್ನು 30.682 ರೈತರು ಸಹಾಯಧನದಡಿ ಪಡೆದಿರುತ್ತಾರೆ. ಜಿಲ್ಲೆಯಲ್ಲಿ ಈ ವರ್ಷ ಉಂಟಾದ ಅತಿವೃಷ್ಟಿ ಮಳೆಯಿಂದ ಒಟ್ಟಾರೆ 58,207 ಹೆಕ್ಟೇರ್ ಬೆಳೆ ಹಾನಿಯಾಗಿದ್ದು, NDRF ಮಾರ್ಗಸೂಚಿಯನ್ವಯ ಸುಮಾರು 44.87 ಕೋಟಿ ಪರಿಹಾರಧನವನ್ನು 81,165 ರೈತರಿಗೆ ನೇರ ನಗದು ಮೂಲಕ ಪಾವತಿಸಲಾಗಿರುತ್ತದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕರೋನಾ ರೋಗವನ್ನು ದಿಟ್ಟವಾಗಿ ಎದುರಿಸಿದ್ದು, ಪ್ರಸ್ತುತ ಸಾರ್ವಜನಿಕರ ಚಿಕಿತ್ಸೆಗಾಗಿ ಜಿಲ್ಲೆಯಲ್ಲಿ 526 ಆಮ್ಲಜನಕಯುಕ್ತ ಹಾಸಿಗೆಗಳನ್ನು, 35 ಐ.ಸಿ.ಯು. ಜೊತೆಗೆ ವೆಂಟಿಲೇಟರ್, 15 ಐ.ಸಿ.ಯು. ಹಾಸಿಗೆಗಳ ವ್ಯವಸ್ಥೆಯ ಜೊತೆಗೆ ಬೆಂಗಳೂರು ನಗರದ ಆಸ್ಟರ್ ಸಿ.ಎಂ.ಐ. ಅಸ್ಪತ್ರೆಯಲ್ಲಿ 102 ಬೆಡ್ಗ ಳನ್ನು ಕಾಯ್ದಿರಿಸಲಾಗಿದೆ. ಜಿಲ್ಲೆಯು 2ನೇ ಡೋಸ್ ಕೋವಿಡ್ ಲಸಿಕಾ ಸಾಧನೆಯಲ್ಲಿ ರಾಜ್ಯದಲ್ಲಿ 2ನೇ ಸ್ಥಾನದಲ್ಲಿದ್ದು, ಶೇ 103 % ಮೊದಲನೆ ಡೋಸ್ ಹಾಗೂ 93% ಎರಡನೇ ಡೋಸ್ ಲಸಿಕಾಕರಣದ ಸಾಧನೆ ಮಾಡಲಾಗಿದೆ. ಕೋವಿಡ್ ಸೋಂಕಿನಿಂದ ಒಟ್ಟು 468 ಜನ ಮೃತರಾಗಿದ್ದು, ಈ ಪೈಕಿ 355 ಜನರಿಗೆ ಒಟ್ಟು ರೂ. 4.33 ಕೋಟಿ ಗಳನ್ನು ಈಗಾಗಲೇ ಪರಿಹಾರವಾಗಿ ಪಾವತಿಸಲಾಗಿದೆ ಎಂದರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಲು ರಾಜ್ಯದಲ್ಲೇ ಅತಿ ಹೆಚ್ಚು ಅಂದರೆ 836.27 ಎಕರೆ/ಗುಂಟೆ ಜಮೀನನ್ನು ಕಾಯ್ದಿರಿಸಿ ಸಂಬಂಧಪಟ್ಟ ಇಲಾಖೆಗೆ ಹಸ್ತಾಂತರಿಸಲಾಗಿರುತ್ತದೆ. ಜಿಲ್ಲೆಯಲ್ಲಿ 2021-22ನೇ ಸಾಲಿನಲ್ಲಿ ನರೇಗಾ ಯೋಜನೆಯಡಿ 55 ಲಕ್ಷ ಮಾನವ ದಿನಗಳಿಗೆ ಅನುಗುಣವಾಗಿ 57.41 ಲಕ್ಷ ಮಾನವ ದಿನಗಳನ್ನು ಈಗಾಗಲೇ ಸೃಜಿಸಿ ಶೇ. 104.31% ಪ್ರಗತಿಯನ್ನು ಸಾಧಿಸಲಾಗಿದೆ ಎಂದರು.
ಗ್ರಾಮೀಣ ವಸತಿ ಯೋಜನೆಯಡಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಅಮೃತ ಗ್ರಾಮೀಣ ವಸತಿ ಯೋಜನೆಯಡಿ 17 ಗ್ರಾಮ ಪಂಚಾಯತಿಗಳನ್ನು ಈಗಾಗಲೇ ಆಯ್ಕೆ ಮಾಡಿಕೊಳ್ಳಲಾಗಿದೆ. 2021-22ನೇ ಸಾಲಿಗೆ 5,760 ಹೊಸ ಮನೆಗಳ ನಿರ್ಮಾಣದ ಗುರಿ ನೀಡಲಾಗಿದೆ. ಜಿಲ್ಲೆಯನ್ನು ಕೈಗಾರಿಕಾ ಹಬ್ ಆಗಿ ಪರಿವರ್ತಿಸಲು ಸರ್ಕಾರವು ಒಲವು ತೋರಿದ್ದು, ಈ ದಿಸೆಯಲ್ಲಿ ರಾಜ್ಯ ಉನ್ನತ ಮಟ್ಟದ ಸಮಿತಿಯು 43 ಹೊಸ ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ ನೀಡಿದ್ದು, ಒಟ್ಟು 4,521.64 ಕೋಟಿ ರೂ.ಗಳ ಬಂಡವಾಳ ಹೂಡಿಕೆಯನ್ನು ಜಿಲ್ಲೆಯಲ್ಲಿ ನಿರೀಕ್ಷಿಸಲಾಗಿದ್ದು, ಇದರಿಂದ 10,967 ಜನರಿಗೆ ಉದ್ಯೋಗಾವಕಾಶ ಲಭಿಸುವ ಸಾಧ್ಯತೆ ಇರುತ್ತದೆ ಎಂದರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸರ್ಕಾರದ ವತಿಯಿಂದ ವೈಧ್ಯಕೀಯ ಶಿಕ್ಷಣ ಕಾಲೇಜು ಹಾಗೂ 700 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು ಸ್ಥಾಪನೆಯಾಗುವ ದಿನಗಳು ಹತ್ತಿರವಾಗಿದ್ದು, ಶೀಘ್ರದಲ್ಲೇ ಈ ಕನಸು ನನಸಾಗಿ ಜಿಲ್ಲೆಯ ಜನರಿಗೆ ಉತ್ತಮ ಆರೋಗ್ಯ ಸೇವೆ ಸಿಗುವ ದಿನಗಳು ದೂರದಲ್ಲಿಲ್ಲವೆಂದು ಹರ್ಷ ವ್ಯಕ್ತ ಪಡಿಸಿದರು.
ಇತ್ತೀಚೆಗೆ ರಾಜ್ಯ ಸರ್ಕಾರವು ನಗರ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಯ ಹಿತದೃಷ್ಟಿಯಿಂದ ಮುಖ್ಯಮಂತ್ರಿಗಳ ನಗರೋತ್ಥಾನ-4 ಯೋಜನೆಯನ್ನು ಜಾರಿಗೆ ತರಲು ಈಗಾಗಲೇ ಆದೇಶ ಹೊರಡಿಸಿದ್ದು, ಒಟ್ಟು 3,885 ಕೋಟಿ ರೂ.ಗಳನ್ನು (ಜಿಲ್ಲಾ ಕೇಂದ್ರ ಹಾಗೂ ಗ್ರೇಡ್-1 ನಗರಸಭೆಗೆ ರೂ. 40 ಕೋಟಿ, ನಗರಸಭೆಗೆ ರೂ. 30 ಕೋಟಿ, ಪುರಸಭೆಗೆ ರೂ. 10 ಕೋಟಿ ಹಾಗೂ ಪಟ್ಟಣ ಪಂಚಾಯತಿಗೆ ರೂ. 5 ಕೋಟಿ) ಮುಂದಿನ 3 ವರ್ಷಗಳ ಅವಧಿಯಲ್ಲಿ ಅಭಿವೃದ್ಧಿ ವ್ಯಯಿಸಲು ಸರ್ಕಾರವು ಇಚ್ಛಿಸಿದೆ. ಚಿಕ್ಕಬಳ್ಳಾಪುರ ಜಿಲ್ಲೆಯು ರಾಜ್ಯದಲ್ಲೇ ಘನ ತ್ಯಾಜ್ಯ ನಿರ್ವಹಣೆಯಲ್ಲಿ ಉತ್ತಮ ಪದ್ಧತಿಗಳನ್ನು ಅಳವಡಿಸಿಕೊಂಡಿದ್ದು, ಘನ ತ್ಯಾಜ್ಯ ನಿರ್ವಹಣೆಗಾಗಿ ಸೀಮ್ಯಾಕ್ನಿಂ ದ 2018-19ನೇ ಸಾಲಿನ ಪ್ರಶಸ್ತಿಗೆ ಭಾಜನವಾಗಿರುತ್ತದೆ ಎಂದರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಯಾವುದೇ ಶಾಶ್ವತವಾದ ನೀರಿನ ಹರಿವು ಹೊಂದಿರುವ ನದಿಗಳು ಇಲ್ಲದಿರುವುದರಿಂದ ಜನ ಹಾಗೂ ಜಾನುವಾರುಗಳಿಗೆ ತೀವ್ರ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿತ್ತು. ಇದನ್ನು ಮನಗಂಡು ಸರ್ಕಾರವು ಹೆಚ್.ಎನ್. ವ್ಯಾಲಿ ಯೋಜನೆಯಡಿ ಜಿಲ್ಲೆಯ 44 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಜಾರಿಗೆ ತಂದಿರುತ್ತದೆ. ಈ ಬಾರಿ ಸುರಿದ ಉತ್ತಮ ಮಳೆಯಿಂದ 43 ಕೆರೆಗಳು ಸಂಪೂರ್ಣ ಭರ್ತಿಯಾಗಿರುತ್ತದೆ ಎಂದು ತಿಳಿಸಿದತರು.
ಭಾರತದ ಸಂವಿಧಾನವು ಸರ್ವರಿಗೆ ಸಮಪಾಲು, ಸರ್ವರಿಗೆ ಸಮ ಬಾಳು ಎಂಬ ಆದರ್ಶದೊಂದಿಗೆ ಜಾರಿಯಾಗಿದ್ದು, ಈ ದಿನದ ಮಹತ್ವವನ್ನು ನಾವು ನೀವೆಲ್ಲರೂ ಅರಿತು ಮುಂದೆ ಸಾಗಿದಲ್ಲಿ ಭವ್ಯ ಭಾರತದ ನಿರ್ಮಾಣ ಸಾಧ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿ ಜಿಲ್ಲೆಯ, ರಾಜ್ಯದ ಹಾಗೂ ರಾಷ್ಟ್ರದ ಜನತೆಗೆ ಗಣ ರಾಜ್ಯೋತ್ಸವದ ಶುಭಾಷಯಗಳನ್ನು ಕೊರಿದರು.ಈ ವೇಳೆ ಈ ಕಾರ್ಯಕ್ರಮವನ್ನು ಸರಳ ಹಾಗೂ ಅಚ್ಚುಕಟ್ಟಾಗಿ ಆಯೋಜಿಸಿದ್ದಕ್ಕಾಗಿ ಜಿಲ್ಲಾಡಳಿತವನ್ನು ಅಭಿನಂದಿಸಿ ಮೆಚ್ಚುಗೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಮಹಾತ್ಮಾ ಗಾಂಧಿ ಮತ್ತು ಡಾ||ಬಾಬಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.ಪೊಲೀಸ್ ಪಥಸಂಚಲನ ಹಾಗೂ ಪೊಲೀಸ್ ಬ್ಯಾಂಡ್ ಮಾಸ್ಟರ್ ವೆಂಕಟೇಶಪ್ಪ ಮತ್ತು ಅವರ ತಂಡದಿಂದ ಮೂಡಿಬಂದ ರಾಷ್ಟ್ರಗೀತೆ ನೆರೆದಿದ್ದವರ ಗಮನ ಸೆಳೆಯಿತು. ಸಂಗೀತ ಶಿಕ್ಷಕ ಮಹಾಲಿಂಗಯ್ಯ ಮಠದ ಹಾಗೂ ಸರ್ಕಾರಿ ಫ್ರೌಢಶಾಲೆಯ ಮಕ್ಕಳಿಂದ ನಾಡಗೀತೆ ಸುಶ್ರಾವ್ಯವಾಗಿ ಮೂಡಿಬಂದಿತು.
ಮಾನ್ಯ ಮುಖ್ಯಮಂತ್ರಿಗಳಿಂದ ಚಿನ್ನದ ಪದಕ್ಕೆ ಅರ್ಹರಾದ ರಾಜ್ಯ ರಸ್ತೆ ಸಾರಿಗೆ ನಿಗಮದ 11 ಚಾಲಕರನ್ನು ಈ ವೇಳೆ ಗಣ್ಯರು ಸನ್ಮಾನಿಸಿ ಗೌರವಿಸಿದರು. ಪಥಸಂಚಲನದಲ್ಲಿ ಭಾಗವಹಿಸಿದ ಪೊಲೀಸ್ ಪಡೆಯ ತುಕಡಿಗಳ ಮುಖ್ಯಸ್ಥರಿಗೆ ನೆನಪಿನ ಕಾಣಿಕೆ ನೀಡಲಾಯಿತು. ಈ ಸಂದರ್ಭಲ್ಲಿ ಜಿಲ್ಲಾಧಿಕಾರಿ ಆರ್.ಲತಾ,ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್, ಅಪರ ಜಿಲ್ಲಾಧಿಕಾರಿ ಹೆಚ್.ಅಮರೇಶ್, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಜಿಲ್ಲಾಡಳಿತ ಭವನದಲ್ಲಿಯೂ ಗಣರಾಜ್ಯೋತ್ಸವ
ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಧಿಕಾರಿ ಆರ್.ಲತಾ ಅವರು 73 ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಡಳಿತ ಭವನದಲ್ಲಿ ಧ್ವಜಾರೋಹಣ ನೆರವೇರಿಸಿದರು.ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್, ಅಪರ ಜಿಲ್ಲಾಧಿಕಾರಿ ಹೆಚ್.ಅಮರೇಶ್, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.