ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ; ಚಿಂತಾಮಣಿಯಲ್ಲಿ ಮುಂದಿನ ಸಭೆ
ಬೆಂಗಳೂರು: ಜೆಡಿಎಸ್ ಪಕ್ಷಕ್ಕೆ ನಾಲ್ವರು ಕಾರ್ಯಾಧ್ಯಕ್ಷರನ್ನು ನೇಮಕ ಮಾಡುವ ಬಗ್ಗೆ ಪಕ್ಷದ ನೂತನ ಕೋರ್ ಕಮಿಟಿಯ ಸಭೆಯಲ್ಲಿ ವಿಸ್ತೃತವಾಗಿ ಚರ್ಚೆ ನಡೆಸಲಾಗಿದೆ.
ಅಲ್ಲದೆ; ಮುಂಬರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಹಾಗೂ ಪಕ್ಷ ಸಂಘಟನೆ ಇತ್ಯಾದಿ ವಿಷಯಗಳ ಬಗ್ಗೆ ಈ ಸಭೆಯಲ್ಲಿ ಮಹತ್ವದ ಸಮಾಲೋಚನೆ ನಡೆಸಲಾಯಿತು.
ಕೋರ್ ಕಮಿಟಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಬಂಡೆಪ್ಪ ಖಾಷೆಂಪೂರ್ ಹಾಗೂ ಕೋರ್ ಕಮಿಟಿ ವಿಶೇಷ ಆಹ್ವಾನಿತರೂ ಆಗಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಉಪಸ್ಥಿತಿಯಲ್ಲಿ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಈ ಸಭೆ ನಡೆಯಿತು.
ಸಭೆಯ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಬಂಡೆಪ್ಪ ಖಾಷೆಂಪೂರ್ ಅವರು; “ನಾಲ್ವರು ಕಾರ್ಯಾಧ್ಯಕ್ಷರ ನೇಮಕ ಸೇರಿ ವಿವಿಧ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದ್ದು, ಕೋರ್ ಕಮಿಟಿಯ ಮೊದಲ ಸಭೆ ಇದಾಗಿದ್ದು, 17 ಸದಸ್ಯರು ಹಾಜರಿದ್ದರು” ಎಂದರು.
ಪಕ್ಷದ ಬಲವರ್ಧನೆಗೆ ಏನು ಕ್ರಮ ತೆಗೆದುಕೊಳ್ಳಬೇಕು? ತಳಮಟ್ಟದಲ್ಲಿ ಪಕ್ಷವನ್ನು ಗಟ್ಟಿಗೊಳಿಸುವ ಬಗ್ಗೆ ಹಾಗೂ ಬೇರೆ ಬೇರೆ ಘಟಕಗಳಿಗೆ ನೇಮಕಾತಿ ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಪಕ್ಷವನ್ನು ಎಲ್ಲ ದಿಕ್ಕುಗಳಲ್ಲೂ ಬಲಿಷ್ಠಗೊಳಿಸುವ ಹಿನ್ನೆಲೆಯಲ್ಲಿ ನಾಲ್ವರು ಕಾರ್ಯಾಧ್ಯಕ್ಷರನ್ನು ನೇಮಕ ಮಾಡುವ ಬಗ್ಗೆ ಸಭೆಯಲ್ಲಿ ಪ್ರಮುಖವಾಗಿ ಸಮಾಲೋಚನೆ ನಡೆಸಲಾಗಿದೆ” ಎಂದು ಅವರು ತಿಳಿಸಿದರು.
ಪದಾಧಿಕಾರಿಗಳು, ಮಹಿಳಾ ಅಧ್ಯಕ್ಷರ ನೇಮಕ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಚರ್ಚೆಗಳು ಆಗಿವೆ. ಜೆಡಿಎಸ್ ಮಾಧ್ಯಮ ಸೆಲ್ ಅಧ್ಯಕ್ಷರನ್ನಾಗಿ ಮಾಜಿ ಸಂಸದ ಕುಪೇಂದ್ರ ರೆಡ್ಡಿ ಅವರನ್ನು ಹಾಗೂ ಕೈಗಾರಿಕಾ ವಿಭಾಗದ ರಾಜ್ಯಾಧ್ಯಕ್ಷರಾಗಿ ಸುಧಾಕರ್ ಶೆಟ್ಟಿ ಅವರನ್ನು ನೇಮಕ ಮಾಡುವ ಬಗ್ಗೆ ಒಂದು ಶಾರ್ಟ್ ಲಿಸ್ಟ್ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಬೆಂಗಳೂರು ಸಭೆ
ಬಿಬಿಎಂಪಿ ಚುನಾವಣೆ ಸಂಬಂಧ ಇಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ನಗರದ 28 ಕ್ಷೇತ್ರಗಳಿಂದ ಅಧ್ಯಕ್ಷರನ್ನು ಕರೆಸಿ ಚರ್ಚೆ ಮಾಡಲಾಗಿದ್ದು, ಮುಂಬರುವ ಬಿಬಿಎಂಪಿ ಚುನಾವಣೆಗೆ ತಯಾರಿ ಆರಂಭಿಸಲಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಫೆಬ್ರವರಿ 11ರಂದು ಚಿಂತಾಮಣಿಯಲ್ಲಿ ಕೋರ್ ಕಮಿಟಿ ಸಭೆ ನಡೆಸಲಾಗುತ್ತದೆ. ಅಲ್ಲಿ ಶಾಸಕ ಜೆ.ಕೆ.ಕೃಷ್ಣಾ ರೆಡ್ಡಿ ಅವರ ಹೊಸ ಕಚೇರಿ ಉದ್ಘಾಟನೆ ಮಾಡಲಾಗುತ್ತದೆ. ಅಲ್ಲಿಯೇ ಈ ಮೀಟಿಂಗ್ ನಡೆಸಲಾಗುತ್ತದೆ. ಜತೆಗೆ; ಜಲಧಾರೆ ವಿಚಾರವಾಗಿಯೂ ರೋಡ್ ಮ್ಯಾಪ್ ಮಾಡಲಾಗುತ್ತಿದೆ. ಫೆಬ್ರವರಿ 15ರ ನಂತರ ಜಲಧಾರೆ ಕಾರ್ಯಕ್ರಮ ಮಾಡಬೇಕು ಅಂದುಕೊಂಡಿದ್ದೇವೆ. ಕೊರೊನಾ ಕಡಿಮೆಯಾದರೆ ನಿಗದಿತ ವೇಳೆಗೆ ಮಾಡುತ್ತೇವೆ ಎಂದರು.
ಕೋರ್ ಕಮಿಟಿ ಸಭೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ (ವಿಶೇಷ ಆಹ್ವಾನಿತರು), ವಿಧಾನ ಪರಿಷತ್ ಸದಸ್ಯ ಹಾಗೂ ಸಮಿತಿ ಸಂಚಾಲಕ ಕೆ.ಎ.ತಿಪ್ಪೇಸ್ವಾಮಿ, ಮಾಜಿ ಸಚಿವರಾದ ವೆಂಕಟರಾವ್ ನಾಡಗೌಡ, ಸಿ.ಎಸ್.ಪುಟ್ಟರಾಜು, ಮಾಜಿ ಸಂಸದ ಕುಪೇಂದ್ರ ರೆಡ್ಡಿ, ಶಾಸಕರಾದ ಕೃಷ್ಣಾರೆಡ್ಡಿ,ರಾಜಾ ವೆಂಕಟಪ್ಪನಾಯ್ಕ ದೊರೆ, ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್, ವಿಧಾನ ಪರಿಷತ್ ಮಾಜಿ ಸದಸ್ಯ ಟಿ.ಎ.ಶರವಣ, ಮಾಜಿ ಶಾಸಕ ತಿಮ್ಮರಾಯಪ್ಪ, ನಾಸೀರ್ ಭಗವಾನ್, ಹನುಮಂತ ಬಸಪ್ಪ ಬೇವಿನಮರದ, ರೂತ್ ಮನೋರಮಾ, ಸುಧಾಕರ್ ಶೆಟ್ಟಿ, ವಿ.ನಾರಾಯಣಸ್ವಾಮಿ. ಸಮೃದ್ಧಿ ಮಂಜುನಾಥ್ ಭಾಗಿಯಾಗಿದ್ದರು.