ಮೊಬೈಲ್ ಕರೆ ಮಾಡಿದರೆ ತೆಗೆಯಲ್ಲ, ಶಾಸಕರ ಕೆಲಸ ಮಾಡಿಕೊಡಲ್ಲ; ಹಿಂದೆ ಡಾ.ಸುಧಾಕರ್ ವಿರುದ್ಧ ಗುಡುಗಿದ್ದ ರೇಣುಕಾಚಾರ್ಯ
- ಪ್ರತಿಯೊಂದಕ್ಕೂ ಪಿಎಸ್ ಹಾಗೂ ಪಿಎಗಳನ್ನು ಸಂಪರ್ಕಿಸಲು ಸಬೂಬು ಕೊಡುತ್ತಾರೆ.
- ಸಚಿವರೇನೂ ದೇವಲೋಕದಿಂದ ಇಳಿದುಬಂದಿಲ್ಲ.
- ರಾಷ್ಟ್ರೀಯ ನಾಯಕರಿಗೂ ದೂರು ನೀಡುವ ಎಚ್ಚರಿಕೆ
ಬೆಂಗಳೂರು: ಸ್ವಪಕ್ಷೀಯ ಬಿಜೆಪಿ ಶಾಸಕರ ಕೆಲಸಗಳಿಗೆ ಸ್ಪಂದಿಸದೆ ಕನಿಷ್ಠಪಕ್ಷ ದೂರವಾಣಿ ಕರೆಗಳನ್ನು ಸ್ವೀಕರಿಸದ ಸುಮಾರು 15ಕ್ಕೂ ಹೆಚ್ಚು ಸಚಿವರ ವಿರುದ್ಧ ಮುಖ್ಯಮಂತ್ರಿ ಹಾಗೂ ಪಕ್ಷದ ರಾಜ್ಯ ಅಧ್ಯಕ್ಷರಿಗೆ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ದೂರು ನೀಡಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲು ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿರುವ ಅವರು; ಸಚಿವರ ಕಾರ್ಯವೈಖರಿ ವಿರುದ್ದ ಅಸಮಾಧಾನ ಹೊರ ಹಾಕಿದ್ದಾರೆ.
ಪಕ್ಷದ ಶಾಸಕರ ಮನವಿಗೆ ಸ್ಪಂದಿಸದ ಸಚಿವರ ವಿರುದ್ಧ ಈವರೆಗೆ ಮೌಖಿಕವಾಗಿ ಅಸಮಾಧಾನ ಹೊರಹಾಕುತ್ತಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರು ಇದೀಗ ಪಕ್ಷದ ನಾಯಕರಿಗೆ ಹಲವು ಸಚಿವರ ವಿರುದ್ದ ಲಿಖಿತ ದೂರು ಸಲ್ಲಿಸಿದ್ದು, ಇದು ಮುಂದಿನ ದಿನಗಳಲ್ಲ ಗಂಭೀರ ಸ್ವರೂಪ ಪಡೆಯುವ ಲಕ್ಷಣ ಕಾಣುತ್ತಿದೆ.
ಮುಂದಿನ ವಿಧಾನಸಭಾ ಚುನಾವಣೆಗೆ ಕೇವಲ 14 ತಿಂಗಳು ಬಾಕಿ ಉಳಿದಿದೆ ಇಂಥ ಸಂದರ್ಭದಲ್ಲಿ ನಮ್ಮ ಪಕ್ಷದ ಸಚಿವರು ಯಾವುದೇ ಕೆಲಸಗಳಿಗೆ ಸ್ಪಂದಿಸುತ್ತಿಲ್ಲ. ಮೊಬೈಲ್ ಕರೆ ಮಾಡಿದರೆ ಸ್ವೀಕರಿಸುವುದಿಲ್ಲ ಅಷ್ಟೇ ಅಲ್ಲ ಖುದ್ದಾಗಿ ಭೇಟಿಯಾಗಿ ಪತ್ರಗಳನ್ನು ಕೊಟ್ಟರೆ ಆಪ್ತ ಸಹಾಯಕರಿಂದ ಸಹಿ ಮಾಡಿಸಿ ಅಧಿಕಾರಿಗಳಿಗೆ ಕೊಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಮ್ಮ ಕ್ಷೇತ್ರದ ಯಾವುದೇ ಕೆಲಸಗಳು ಆಗುತ್ತಿಲ್ಲ. ನಾವು ಕ್ಷೇತ್ರಕ್ಕೆ ಸಂಬಂಧಿಸಿದ ಪತ್ರಗಳನ್ನು ನೀಡಿದರೂ ಸಚಿವರು ಪ್ರತಿಕ್ರಿಯೆಯನ್ನೂ ಕೊಡುವುದಿಲ್ಲ. ಕ್ಷೇತ್ರದಲ್ಲಿ ನಮ್ಮ ಕೆಲಸಗಳೇ ಆಗದಿದ್ದರೆ ನಾವು ಹೇಗೆ ಮುಖ ಹೊತ್ತು ತಿರಗಬೇಕೆಂದು ಪ್ರಶ್ನಿಸಿದ್ದಾರೆ.
ಕೆಲವರಿಗೆ ನಮ್ಮಿಂದಲೇ ಸರ್ಕಾರ ಬಂದಿದೆ ಎಂಬ ಅಹಂ ಇದೆ. ಅವರು ತಮ್ಮ ವರ್ತನೆ ಸರಿಪಡಿಸಿಕೊಳ್ಳಬೇಕು. ಕನಿಷ್ಟ ಪಕ್ಷ ಪೋನ್ ಕಾಲ್ ರಿಸೀವ್ ಮಾಡಬೇಕು. ನಮ್ಮ ಕ್ಷೇತ್ರಗಳ ಕೆಲಸ ಮಾಡಿಕೊಡುವಂತೆ ಸಚಿವರಿಗೆ ಸೂಚನೆ ಕೊಡಬೇಕೆಂದು ಅವರು ಸಿಎಂ ಮತ್ತು ಪಕ್ಷದ ರಾಜ್ಯಾದ್ಯಕ್ಷರಿಗೆ ಮನವರಿಕೆ ಮಾಡಿದ್ದಾರೆ.
ಶಾಸಕರಿಗೆ ಸ್ವಂದನೆ ಸಿಗುತ್ತಿಲ್ಲ, ಕ್ಷೇತ್ರದ ಕೆಲಸ ಕಾರ್ಯಗಳು ನಡೆಯುತ್ತಿಲ್ಲ, ಶಾಸಕರು ಕೆಲಸ ಮಾಡಿಕೊಡಿ ಎಂದು ಕೇಳಿಕೊಂಡರೂ ಸ್ಪಂದಿಸುತ್ತಿಲ್ಲ. ಶಾಸಕರ ನಿರೀಕ್ಷೆ ಈಡೇರುತ್ತಿಲ್ಲ. ಈಗಿನ ಸರ್ಕಾರದಲ್ಲೂ ಕ್ಷೇತ್ರದ ಕೆಲಸ ಕಾರ್ಯಗಳು ನಡೆಯುತ್ತಿಲ್ಲ ಎಂಬ ಅಸಮಾಧಾನವನ್ನು ಹೊರಹಾಕಿದ್ದಾರೆ.
ಸಚಿವರೆಂದರೆ ದೇವಲೋಕದಿಂದ ಇಳಿದು ಬಂದವರಲ್ಲ. ನಾವು ಕೂಡ ಜನರಿಂದಲೇ ಆರಿಸಿಬಂದವರು. ಕೆಲವು ಸಚಿವರು ಕೈಗೇ ಸಿಗೋದಿಲ್ಲ. ಅವರ ಪಿ.ಎಗಳು, ಪಿ.ಎಸ್‍ಗಳು ಪೋನ್ ರಿಸೀವ್ ಮಾಡುವುದಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಜನರು ಕೇಳುತ್ತಿದ್ದಾರೆ. ಅನೇಕ ಕೆಲಸಗಳು ಹಾಗೆಯೇ ಉಳಿದಿವೆ. ಈ ಬಗ್ಗೆ ಸಂಬಂಧಪಟ್ಟ ಸಚಿವರು ಪೋನ್ ಮಾಡಿದರೆ ಅವರು ರಿಸೀವ್ ಮಾಡುತ್ತಿಲ್ಲ. ನೇರವಾಗಿ ಭೇಟಿಯಾಗಿ ಕೇಳಿದರೂ ಅವರಿಗೆ ಸೌಜನ್ಯದಿಂದ ಮಾತನಾಡುವ ತಾಳ್ಮೆ ಇಲ್ಲ, ಈ ವರ್ತನೆ ಸರಿ ಹೋಗದಿದ್ದರೆ ಪರಿಸ್ಥಿತಿ ಹದಗಡೆಲಿದೆ. ಈಗಲಾದರೂ ವರ್ತನೆ ಸರಿಪಡಿಸಿಕೊಳ್ಳಲು ಸೂಚನೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ನಮ್ಮ ಪತ್ರಗಳಿಗೆ ಸಚಿವರು ತಮ್ಮ ಆಪ್ತ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದರೆ ಅವರು ಪತ್ರಗಳನ್ನು ಪರಿಶೀಲನೆ ಮಾಡಲಾಗುವುದು. ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು, ಪರಿಶೀಲನೆ ಮಾಡಲಗುವುದು ಇಂತಹ ಸಬೂಬುಗಳನ್ನು ನೀಡುತ್ತಾರೆ. ಶಾಸಕರಾಗಿ ನಮಗೆ ಬೆಲೆ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಇನ್ನು ಮುಂದೆ ಸಚಿವರ ವರ್ತನೆಯನ್ನು ಬದಲಿಸದಿದ್ದರೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ದೂರು ನೀಡುವುದು ಅನಿವಾರ್ಯವಾಗುತ್ತದೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.
ಶೀಘ್ರದಲ್ಲೇ ಸಭೆ
ಇನ್ನು ಸಚಿವರ ಕಾರ್ಯ ವೈಖರಿ ವಿರುದ್ಧ ಅಸಮಾಧಾನ ಹೊರಹಾಕಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸಿಎಂ ಬೊಮ್ಮಾಯಿ, ರಾಜ್ಯಾಧ್ಯಕ ನಳೀನ್‍ಕುಮಾರ್ ಕಟೀಲ್ ಅವರಿಂದ ದೂರುಗಳು ಬಂದಿವೆ. ಪದೇಪದೆ ಇಂತಹ ಘಟನೆಗಳು ಮರುಕಳಿಸುತ್ತಲೇ ಇವೆ. ಇನ್ನು ನಾಲ್ಕು ದಿನದೊಳಗೆ ಸಭೆ ಕರೆದು ಇತ್ಯರ್ಥಪಡಿಸುವುದಾಗಿ ಆಶ್ವಾಸನೆ ನೀಡಿದ್ದಾರೆ.
ಸಚಿವರು ಈ ಹಿಂದೆಯೂ ಶಾಸಕಾಂಗ ಸಭೆಯಲ್ಲಿ ಶಾಸಕರ ಕೆಲಸ ಕಾರ್ಯಗಳನ್ನು ಮಾಡಿಕೊಡಬೇಕೆಂದು ಸಚಿವರಿಗೆ ಸೂಚನೆ ಕೊಡಲಾಗಿತ್ತು. ಆದರೂ ಕೆಲವರ ವರ್ತನೆಯನ್ನು ಸರಿಪಡಿಸಿಕೊಂಡಿಲ್ಲ. ಶೀಘ್ರದಲ್ಲೇ ಸಭೆ ಕರೆದು ಅಂತಹ ಸಚಿವರಿಗೆ ತಿಳಿ ಹೇಳುವುದಾಗಿ ತಿಳಿಸಿದ್ದಾರೆ.
ಸುಳ್ಳು ಹೇಳಿದ ಸಚಿವರು
ಇತ್ತೀಚೆಗೆ ಕ್ಷೇತ್ರಕ್ಕೆ ಸಂಬಂಧಿಸಿಂತೆ ಕೆಲಸವೊಂದಕ್ಕೆ ಸಚಿವರೊಬ್ಬರಿಗೆ ದೂರವಾಣಿ ಕರೆ ಮಾಡಿದರೆ ಅವರ ಆಪ್ತ ಕಾರ್ಯದರ್ಶಿ ಅವರಿಗೆ ಕೋವಿಡ್ ಬಂದು ಹೋಂ ಐಸೋಲೇಷನ್‍ನಲ್ಲಿದ್ದಾರೆ ಎಂದು ಹೇಳಿದ್ದರು. ಬೆಳಗ್ಗೆ 10 ಗಂಟೆಗೆ ಕರೆ ಮಾಡಿದಾಗ ಆಪ್ತ ಕಾರ್ಯದರ್ಶಿ ಸಚಿವರಿಗೆ ಕೋವಿಡ್ ಬಂದಿದೆ ಎಂದು ಹೇಳಿದ್ದರು. ಆದರೆ ಅದೇ ಸಚಿವರು ಅಂದು ನಡೆದ ಸಚಿವ ಸಂಪುಟ ಸಭೆಗೆ ಆಗಮಿಸಿದ್ದರು. ಎದುರಿಗೆ ಬಂದ ರೆಣುಕಾಚಾರ್ಯರನ್ನು ನೋಡಿದಾಗ ಕಕ್ಕಾಬಿಕ್ಕಿಯಾದರು. ಇದು ಸಚಿವರ ಕಾರ್ಯವೈಖರಿಗೆ ಹಿಡಿದ ಕೈಕನ್ನಡಿ ಎಂದು ಅಸಮಾಧಾನ ಹೊರಹಾಕಿದರು.
ಈ ಸುದ್ದಿ ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..
ಡಾ.ಕೆ.ಸುಧಾಕರ್ ವಿರುದ್ಧ ಗುಡುಗಿದ್ದ ರೇಣುಕಾಚಾರ್ಯ
ಈ ಹಿಂದೆ ರೇಣಿಕಾಚಾರ್ಯ ಅವರು ತಮ್ಮ ಕೆಲಸ ಮಾಡಿಕೊಡುತ್ತಿಲ್ಲ, ಕಾಲ್ ಮಾಡಿದರೆ ತಮ್ಮ ಕರೆ ತೆಗೆಯುವುದಿಲ್ಲ. ಆಪ್ತರ ಮೂಲಕ ಇಲ್ಲ ಎಂದು ಹೇಳಿಸುತ್ತಾರೆ ಎಂದು ಬಹಿರಂಗವಾಗಿ ಗುಡುಗಿದ್ದರು. ಈ ಬಗ್ಗೆ ಅವರು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಗೆ ದೂರು ನೀಡಿದ್ದರು.
Comments 1