ಗಿರಿಧಾಮಕ್ಕೆ ಭೇಟಿ ಪರಿಶೀಲನೆ ನಡೆಸಿದ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್
ಡಿಕೆಶಿ ಭೇಟಿ ಮಾಡಿದ್ದು ರಾಜಕೀಯ ಉದ್ದೇಶಕ್ಕಲ್ಲ; ಮಗಳನ್ನು ರಾಜಕೀಯಕ್ಕೆ ತರುವ ಉದ್ದೇಶವಿಲ್ಲ ಎಂದ ಸಚಿವರು
by M Krishnappa Chikkaballapura
ಚಿಕ್ಕಬಳ್ಳಾಪುರ: ಜಗದ್ವಿಖ್ಯಾತ ಗಿರಿಧಾಮ ನಂದಿಬೆಟ್ಟಕ್ಕೆ ರೋಪ್ ವೇ ಮಾಡುವ ಸಂಬಂಧ ಒಂದು ತಿಂಗಳ ಒಳಗಾಗಿ ಟೆಂಡರ್ ಕರೆಯಲಾಗುವುದು ಎಂದು ಪ್ರವಾಸೊದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಖಾತೆ ಸಚಿವ ಆನಂದ್ ಸಿಂಗ್ ಅವರು ಹೇಳಿದರು.
ಅವರು ಬುಧವಾರ ಬೆಳಗ್ಗೆ ನಂದಿಬೆಟ್ಟಕ್ಕೆ ಆಗಮಿಸಿ ಇಲ್ಲಿನ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದರು.
ನಂದಿಬೆಟ್ಟಕ್ಕೆ ಬರುವ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಕ್ರಮ ವಹಿಸಲಾಗುವುದು, ಪ್ರವಾಸೊದ್ಯಮ ಅಭಿವೃದ್ದಿಪಡಿಸಲು ಪ್ರವಾಸಿಗರ ಆಗಮನ ಬಹಳ ಮುಖ್ಯ. ಗಿರಿಧಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಸೇರಿದಂತೆ ಸ್ವಚ್ಚತೆಗೆ ಆದ್ಯತೆ ನೀಡಲಾಗುವುದು. ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ನಂದಿಬೆಟ್ಟಕ್ಕೆ ಬಂದು ಹೋಗುತ್ತಾರೆ. ಇಲ್ಲಿನ ಸುಂದರ ಪರಿಸರವನ್ನು ಇಷ್ಟಪಡುತ್ತಾರೆ. ಅದಕ್ಕೆ ಅನುಗುಣವಾಗಿ ಬೆಟ್ಟದ ಮೇಲಿನ ಸೌಲಭ್ಯಗಳನ್ನು ಉತ್ತಮಪಡಿಸಲಾಗುವುದು ಎಂದು ಅವರು ತಿಳಿಸಿದರು.

ನಂದಿಬೆಟ್ಟದ ಮೇಲಿನ ಟಿಪ್ಪು ಡ್ರಾಪ್, ಯೊಗನಂದೀಶ್ವರ ಸ್ವಾಮಿ ದೇವಸ್ಥಾನಗಳ ಸುತ್ತಮುತ್ತ ಮೂಲಸೌಕರ್ಯಗಳು ಸರಿಯಾಗಿ ಇಲ್ಲದಿರುವ ಬಗ್ಗೆ ಹಾಗೂ ಹದಗೆಟ್ಟ ಶೌಚಾಲಯಗಳನ್ನು ವೀಕ್ಷಿಸಿದ ಸಚಿವರು ಅಧಿಕಾರಿಗಳ ಮೇಲೆ ಕೆಂಡಾಮಂಡಲರಾದರು.
ಇಡೀ ಜಗತ್ತಿನಲ್ಲೇ ನಂದಿ ಗಿರಿಧಾಮವೆಂದರೆ ಪ್ರತ್ಯೇಕ ಸ್ಥಾನವಿದೆ. ದೇಶ ವಿದೇಶಗಳ ಪ್ರವಾಸಿಗರಿಗೂ ಈ ಗಿರಿಧಾಮ ಅಚ್ಚುಮೆಚ್ಚು. ಇಂಥ ಕಡೆ ಸೌಲಭ್ಯಗಳು ಉತ್ತಮವಾಗಿರಬೇಕು. ಕೂಡಲೇ ಈ ಬಗ್ಗೆ ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಇಲ್ಲಿನ ಹಾಪ್ ಕಾಮ್ಸ್ ಮಳಿಗೆ, ನಂದಿನಿ ಪಾರ್ಲರ್, ಕೆ.ಎಸ್.ಟಿ.ಡಿ.ಸಿ ಹೊಟೆಲ್ʼನಲ್ಲಿ ಮಾರಾಟ ಮಾಡಲಾಗುವ ತಿಂಡಿ-ತಿನಿಸು, ಹಣ್ಣು ಹಂಪಲು ಮತ್ತಿತರೆ ವಸ್ತುಗಳ ದರ ಹಾಗೂ ಗುಣಮಟ್ಟವನ್ನು ಪರಿಶೀಲನೆ ಮಾಡಿದರು ಸಚಿವರು.
ಡಿಕೆಶಿ ಭೇಟಿಗೆ ರಾಜಕೀಯ ಉದ್ದೇಶವಿಲ್ಲ
ಇನ್ನು ರಾಜಕಾರದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಆನಂದ್ ಸಿಂಗ್; ಡಿಕೆ ಶಿವಕುಮಾರ್ ಅವರ ಜತೆಗಿನ ಭೇಟಿ ರಾಜಕೀಯ ಉದ್ದೇಶವಿಟ್ಟುಕೊಂಡು ಮಾಡಿದ್ದಲ್ಲ. ತುಂಗಾ ಆರತಿ ಬಗ್ಗೆ ಸಮಾಲೋಚಿಸಲು ಭೇಟಿ ಮಾಡಿದ್ದೇ ಅಷ್ಟೆ. ಇದಕ್ಕೆ ರಾಜಕೀಯ ಲೇಪನ ಸಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನನಗೆ ಜಿಲ್ಲೆ ಮಾಡಿಕೊಟ್ಟರು. ಏತ ನೀರಾವರಿ ಯೋಜನೆ ನೀಡಿದರು. ಅಂತಹ ಪಕ್ಷವನ್ನು ಬಿಟ್ಟು ನಾನು ಯಾವುದೇ ಅನ್ಯ ಪಕ್ಷಕ್ಕೆ ಹೊಗಲು ಸಾಧ್ಯವೇ ಎಂದು ಪ್ರಶ್ನಿಶಿದರು.
ತಮ್ಮ ಪುತ್ರಿ ರಾಜಕೀಯ ಬರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು; ನನ್ನ ಮಗಳು ಇನ್ನು ಚಿಕ್ಕವಳು. ರಾಜಕೀಯದ ಬಗ್ಗೆ ಏನು ಗೊತ್ತಿಲ್ಲ, ನಮ್ಮ ಮನೆಯಲ್ಲಿ ಹೆಣ್ಣುಮಕ್ಕಳು ರಾಜಕೀಯಕ್ಕೆ ಬರುವುದು ತೀರಾ ಅಪರೂಪ. ಮಗಳನ್ನು ರಾಜಕೀಯಕ್ಕೆ ತರುವ ಉದ್ದೇಶವೂ ನನಗಿಲ್ಲ ಎಂದರು.
ಈ ಸಂದರ್ಭದಲ್ಲಿ ಪ್ರವಾಸೊದ್ಯಮ ಇಲಾಖೆ ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ಕೆ.ಎಸ್.ಟಿ.ಡಿ.ಸಿ ವ್ಯವಸ್ಥಾಪಕ ನಿರ್ದೇಶಕರಾದ ಜಗದೀಶ್, ಅಪರ ಜಿಲ್ಲಾಧಿಕಾರಿ ಎಚ್.ಅಮರೇಶ್, ಉಪ ವಿಭಾಗಾಧಿಕಾರಿ ಸಂತೋಷ್ ಕುಮಾರ್, ತಹಸೀಲ್ದಾರ್ ಗಣಪತಿ ಶಾಸ್ತ್ರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.





















