ಶಾಸಕರಿಗೆ ತೆರಿಕೆ ಟಿಪ್ಸ್ ಕೊಟ್ಟ ಪ್ರತಿಪಕ್ಷ ನಾಯಕ
ಬೆಂಗಳೂರು: ಹೂವಿನಿಂದ ಜೇನು ಹುಳು ಮಕರಂದ ತೆಗೆದ ರೀತಿಯಲ್ಲಿ ತೆರಿಗೆ ಇರಬೇಕು ಎಂದು ವಿಧಾನಸಭೆ ವಿರೋಧ ಪಕ್ಷದನಾಯಕ ಸಿದ್ದರಾಮಯ್ಯ ಹೇಳಿದರು.
ಕರ್ನಾಟಕ ವಿಧಾನ ಮಂಡಲದಿಂದ ವಿಕಾಸಸೌಧದಲ್ಲಿ ಆಯೋಜಿಸಿರುವ ಶಾಸಕರಿಗೆ ಎರಡು ದಿನಗಳ ತರಬೇತಿ ಶಿಬಿರದಲ್ಲಿ ವಿಧೇಯಕಗಳು, ವಿತ್ತೀಯ ಕಾರ್ಯಕಲಾಪಗಳು ಕುರಿತು ಸಿದ್ದು ಮಾತನಾಡಿದರು.
ಜೇನುಹುಳು ಮಕರಂದ ತೆಗೆದರೆ ಹೂವಿಗೂ ಹಾನಿಯಾಗಲ್ಲ,ಕಾಯಿಗೂ ಹಾನಿಯಾಗಲ್ಲ. ಹಾಗೆಯೇ ತೆರಿಗೆಯಿಂದ ಸಾಮಾನ್ಯ ಜನರಿಗೆ ತೊಂದರೆಯಾಗಬಾರದು ಎಂದು ಹೇಳಿದರು.
ಹಿಂದೆ ಶೇ.25ರಷ್ಟು ಜನರಿಂದ ಶೇ.75ರಷ್ಟು ಕಾರ್ಪೊರೇಟ್ ಕಂಪನಿಯಿಂದ ತೆರಿಗೆ ಸಂಗ್ರಹವಾಗುತ್ತಿತ್ತು. ಈಗ ಶೇ.25ರಷ್ಟು ಕಾರ್ಪೊರೇಟ್ ಕಂಪನಿಯಿಂದ ಶೇ. 75ರಷ್ಟು ಜನರಿಂದ ತೆರಿಗೆ ಸಂಗ್ರಹವಾಗುತ್ತಿದೆ. ಈ ರೀತಿ ಆಗಬಾರದು ಎಂದು ತಿಳಿಸಿದರು.
ರಾಜ್ಯದ ಸಾಲದ ಪ್ರಮಾಣ ಎರಡು ಲಕ್ಷದ ನಲವತ್ತೇಳು ಸಾವಿರ ಕೋಟಿ ರೂ. ಇದೆ. 2024-25ರ ವೇಳೆಗೆ ರೆವಿನ್ಯೂ ಡೆಪಾಸಿಟ್ 59 ಸಾವಿರ ಕೋಟಿಗೆ ತಲುಪಬಹುದು. ಆಗ ಸಾಲ ದೊರೆಯುವುದೂ ಕಷ್ಟವಾಗಬಹುದು ಎಂದು ಅಭಿಪ್ರಾಯ ಪಟ್ಟರು.
ಅನಾವಶ್ಯಕ ವೆಚ್ಚ ಕಡಿಮೆ ಮಾಡಿ ಉಪಯುಕ್ತ ವೆಚ್ಚಗಳನ್ನು ಹೆಚ್ಚಿಸಬೇಕು. ಕಾಲಮಿತಿಯಲ್ಲಿ ಕಾಮಗಾರಿ ಮುಗಿಯದೇ ವೆಚ್ಚ ಹೆಚ್ಚಾಗುತ್ತಿದೆ ಎಂದು ಸಿದ್ದು ಹೇಳಿದರು.
ಶಾಸಕರು ಬಜೆಟ್, ಆರ್ಥಿಕ ಸಮೀಕ್ಷೆ, ಸಂವಿಧಾನ, ಸದನದ ನಿಯಮಗಳನ್ನು ತಿಳಿದುಕೊಂಡಾಗ ಸದನದ ಕಾರ್ಯಕಲಾಪಗಳಲ್ಲಿ ಅರ್ಥಪೂರ್ಣವಾಗಿ ಭಾಗವಹಿಸಬಹುದು.
ಸದನಕ್ಕೆ ಪೂರ್ವ ಸಿದ್ದತೆಯೊಂದಿಗೆ ಬರಬೇಕು. ವಿಧಾನಸೌಧದ ಮೆಟ್ಟಿಲು ಹತ್ತಿದರೆ ಸಾಕು ಎನ್ನುತ್ತಾರೆ. ಕೆಲವರು ಸರಿಯಾಗಿ ಸದನಕ್ಕೇ ಬರುವುದಿಲ್ಲ. ಎಲ್ಲರೂ ತಪ್ಪದೇ ಹಾಜರಾಗಬೇಕು ಎಂದು ಸಲಹೆ ನೀಡಿದರು.