ನಿಗದಿತ ಕಾರ್ಯಕ್ರಮವಿದ್ದರೂ ಭೂಕಂಪಪೀಡಿತ ಹಳ್ಳಿಗಳತ್ತ ಸುಳಿಯದ ಸಚಿವ ಡಾ.ಕೆ.ಸುಧಾಕರ್
by GS Bharath Gudibande
ಚಿಕ್ಕಬಳ್ಳಾಪುರ: ಒಂದೆಡೆ ಅಂಕೆ ಇಲ್ಲದ ಕಲ್ಲು ಗಣಿಗಾರಿಕೆ ಹಾಗೂ ನಿರಂತರ ಭೂಕಂಪನಗಳಿಂದ ಕಂಗೆಟ್ಟಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಭೂಕಂಪ ಪೀಡಿತ ಪ್ರದೇಶಗಳಿಗೆ ಕೇಂದ್ರದ ತಜ್ಞರು ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಳೆದ ಒಂದು ತಿಂಗಳಿಂದ ಜಿಲ್ಲೆಯಾದ್ಯಂತ ಸತತ ಭೂಕಂಪನಗಳು ಸಂಭವಿಸಿ ಜನರು ತೀವ್ರ ಆತಂಕಕ್ಕೆ ಗುರಿಯಾಗಿದ್ದರೂ ಜಿಲ್ಲೆಯ ಅಧಿಕಾರಿಗಳು, “ಭಯಪಡಬೇಡಿ.. ಏನೂ ಆಗಲ್ಲ” ಎಂದು ಸಬೂಬು ಹೇಳಿಕೊಂಡು ಬರುತ್ತಿದ್ದರು. ಈಗ ಕೇಂದ್ರ ತಂಡವೇ ಭೂಕಂಪ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದರೊಂದಿಗೆ ಕಂಪನದ ತೀವ್ರತೆಯ ಬಿಸಿ ಸರಕಾರಕ್ಕೂ ತಟ್ಟಿದೆ.
ಗುರುವಾರ ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯ ವರೆಗೂ ಕೇಂದ್ರ ಸರಕಾರದ ಕೇಂದ್ರ ಭೂ ವಿಜ್ಞಾನ ಇಲಾಖೆ, ಭೂಕಂಪನ ಶಾಸ್ತ್ರ ಇಲಾಖೆಯ ತಜ್ಞರು ಸೇರಿ ಉನ್ನತ ಅಧಿಕಾರಿಗಳು ಚಿಕ್ಕಬಳ್ಳಾಪುರ ಜಿಲ್ಲಾಮಟ್ಟದ ಅಧಿಕಾರಿಗಳನ್ನು ಹೊರಗಿಟ್ಟು ಭೂಕಂಪ ಪೀಡಿತ ಪ್ರದೇಶಗಳ ಸುತ್ತಮುತ್ತಲಿನ ಸ್ಥಳಗಳಿಗೆ ಭೇಟಿ ಮಾಡಿ ಮಾಹಿತಿ ಕಲೆ ಹಾಕಿದ್ದಾರೆ. ಆದರೆ, ಕೇಂದ್ರ ತಂಡದ ಜತೆ ಶೆಟ್ಟಿಗೆರೆ, ಬಂಡಹಳ್ಳಿ ಗ್ರಾಮಗಳಿಗೆ ಭೇಟಿ ನೀಡಬೇಕಾಗಿದ್ದ ಸಚಿವ ಡಾ.ಕೆ.ಸುಧಾಕರ್ ಹೋಗಿಲ್ಲದಿರುವುದು ಎಲ್ಲರ ಹುಬ್ಬೇರಿಸಿದೆ.
ಈ ಸುದ್ದಿಯನ್ನುಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..
ಕಲ್ಲು-ಗಣಿಗಾರಿಕೆ ಕಾರಣವೇ?
ಕಳೆದ ತಿಂಗಳಲ್ಲಿ ನಿರಂತರವಾಗಿ ಭೂಕಂಪನ ಆದ ಪರಿಣಾಮ ಸಾರ್ವಜನಿಕರು ಬೆಚ್ಚಿ ಬಿದ್ದಿದಾರೆ. ಹೀಗಿರುವಾಗ ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಕಣ್ಣೊರೆಸುವ ಪ್ರಯತ್ನ ಮಾಡಿದ್ದಾರೆ. ಭೂಕಂಪನ ಪ್ರದೇಶಗಳ ಸುತ್ತಮುತ್ತಲಿನ ಪರಿಸರ ನಾಶ, ಹವಾಮಾನ ವ್ಯತ್ಯಯಕ್ಕೆ ಅವ್ಯಾಹತವಾಗಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಹಾಗೂ ಅಕ್ರಮವಾಗಿ ನಡೆಸುತ್ತಿರುವ ಬ್ಲಾಸ್ಟಿಂಗ್ʼಗಳೇ ಕಾರಣ ಎಂಬುದು ಸಾರ್ವಜನಿಕರ ಆಕ್ರೋಶ. ಕೇಂದ್ರ ತಂಡವು ಈ ಕುರಿತ ಮಾಹಿತಿಯನ್ನೂ ಕಲೆ ಹಾಕಿದೆ.
ಸ್ಥಳೀಯರಿಂದಲೂ ಕೇಂದ್ರ ತಂಡವು ಮಾಹಿತಿ ಪಡೆದಿದ್ದು, ಬೆಟ್ಟಗುಡ್ಡಗಳನ್ನು ಸ್ಫೋಟಿಸಿ ಸೀಳಿ ಹಾಕಿರುವ ದೃಶ್ಯಗಳನ್ನು ತಂಡದ ಸದಸ್ಯರು ಖುದ್ದು ವೀಕ್ಷಣೆ ಮಾಡಿದರು ಎಂದು ಗೊತ್ತಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಾಸಕರು, ಸಚಿವರು ಆಗಿರುವ ಡಾ.ಕೆ ಸುಧಾಕರ್ ಅವರ ಹುಟ್ಟೂರು ಪೇರೆಸಂದ್ರಕ್ಕೆ ಕೂಗಳತೆ ದೂರದಲ್ಲಿ ಕಲ್ಲು ಗಣಿಗಣಿಗಾರಿಕೆ ಮಿತಿಮೀರಿ ನಡೆಯುತ್ತಿದೆ. ಭೂಕಂಪಪೀಡಿತ ಗ್ರಾಮಗಳಾದ ಶೆಟ್ಟಿಗೆರೆ, ಬಂಡಹಳ್ಳಿ, ಹಿರೆನಾಗವೇಲಿ, ಪೆರೇಸಂದ್ರ, ಮಂಡಿಕಲ್ಲು ಸೇರಿದಂತೆ ಹತ್ತು ಹಲವು ಹಳ್ಳಿಗಳಲ್ಲಿ ಕಂಪನಗಳು ಉಂಟಾಗಿದ್ದವು. ಗುರುವಾರ ವಿಜ್ಞಾನಿಗಳ ಜತೆ ಶೆಟ್ಟಗೆರೆ, ಬಂಡಹಳ್ಳಿ ಗ್ರಾಮಗಳಿಗೆ ಭೇಟಿ ನೀಡುವುದಾಗಿ ಸ್ವತಃ ಸಚಿವ ಸುಧಾಕರ್ ಅವರು ಟ್ವೀಟ್ʼನಲ್ಲಿ ಸ್ಟೇಟಸ್ ಹಾಕಿದ್ದರು. ಆದರೆ, ಭೂಕಂಪ ಪೀಡಿತ ಪ್ರದೇಶಗಳತ್ತ ಸುಳಿಯದೇ ಚಿಕ್ಕಬಳ್ಳಾಪುರದಲ್ಲಿ ಗುದ್ದಲಿಪೂಜೆ, ಟೇಪ್ ಕಟಿಂಗ್ʼನಲ್ಲಿ ಬ್ಯುಸಿಯಾಗಿದ್ದ ಸಚಿವರ ಬಗ್ಗೆ ಸ್ಥಳೀಯ ಜನರ ಆಕ್ರೋಶ ಕಟ್ಟೆಯೊಡೆದಿದೆ.
ಸಚಿವ ಡಾ.ಕೆ.ಸುಧಾಕರ್ ಮೌನ ಯಾಕೆ?
ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಡಾ.ಕೆ.ಸುಧಾಕರ್ ಶಾಸಕರಾದ ನಂತರ ಆ ಭಾಗದಲ್ಲಿ ಕಲ್ಲು ಕ್ರಷರ್ʼಗಳ ಪ್ರಮಾಣ ಹೆಚ್ಚಾಗಿದೆ. ಬೆಟ್ಟಗುಡ್ಡಗಳನ್ನು ಬಗೆಯಲು ಬೇಕಾಬಿಟ್ಟಿ ಲೈಸೆನ್ಸ್ʼಗಳನ್ನು ಕೊಡಲಾಗಿದೆ ಎಂಬ ಆರೋಪವಿದೆ. ಈ ಬಗ್ಗೆ ಜಿಲ್ಲೆಯ ಅನೇಕ ಹೋರಾಟಗಾರರೇ ನೇರವಾಗಿ ಆರೋಪ ಮಾಡಿದ್ದರು.
ಈ ಸುದ್ದಿಯನ್ನುಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..
ಸುಧಾಕರ್ ಅವರ ಹುಟ್ಟೂರು ಪೇರೆಸಂದ್ರಕ್ಕೆ ಸಮೀಪವಿರುವ ಹಿರೇನಾಗವೇಲಿ ಬಳಿಯ ಕಲ್ಲು ಕ್ವಾರಿಯಲ್ಲಿ ಸಂಭವಿಸಿದ 2021 ಫೆಬ್ರವರಿ 23ರಂದು ಸಂಭವಿಸಿದ ಜಿಲೆಟಿನ್ ಸ್ಫೋಟದಲ್ಲಿ 6 ಕಾರ್ಮಿಕರ ದೇಹಗಳು ಛಿದ್ರವಾದವು. ಆಗಿನ ಗೃಹ ಮಂತ್ರಿ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡಸಿದ್ದರು. ಆದರೂ ಈ ಭಾಗದಲ್ಲಿ ಕಲ್ಲು ಗಣಿಗಾರಿಕೆಗಳಿಗೆ ಅಂಕೆ ಬಿದ್ದಿಲ್ಲ. ಆ ದುರಂತ ಘಟನೆಯೂ ಸೇರಿದಂತೆ ರಾಜಕೀಯ ಕೃಪಾ ಕಟಾಕ್ಷದಿಂದ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಕೇಂದ್ರ ತಂಡವು ಮಾಹಿತಿ ಕಲೆ ಹಾಕಿದೆ ಎಂದು ಮಾಹಿತಿ ಸಿಕ್ಕಿದೆ.
ಈ ಸುದ್ದಿಯನ್ನುಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..