ಸತ್ಯ ಒಪ್ಪಿಕೊಂಡ ಸಚಿವ ಕೆಎಸ್ ಈಶ್ವರಪ್ಪ
ಬೆಂಗಳೂರು: ಸೂರತ್’ನಿಂದಲ್ಲ, ಅಯೋಧ್ಯೆಯಿಂದ ಕೇಸರಿ ಶಾಲುಗಳನ್ನು ತರಿಸಿ ರಾಜ್ಯಾದ್ಯಂತ ಹಂಚಿದ್ದೇನೆ. ಈಗೇನು? ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ನೇರವಾಗಿ ಪ್ರಶ್ನಿಸಿದ್ದಾರೆ.
ತ್ಯಾಗ, ಬಲಿದಾನ ಸಂಕೇತ ಕೇಸರಿ. ಧರ್ಮ-ರಾಷ್ಟ್ರಭಕ್ತಿ ಸಾರುವ ಶಾಲು ವಿತರಿಸಿದ್ದೇನೆ. ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ರೀತಿ ಬಂಡೆ ಒಡೆದು ಬೇರೆ ರಾಜ್ಯಗಳಿಗೆ ಕದ್ದು ಮಾರಾಟ ಮಾಡಿ ಹಣ ಮಾಡುತ್ತಿಲ್ಲ ಎಂದು ಡಿಕೆ ಸಹೋದರರ ವಿರುದ್ಧ ವಾಗ್ದಾಳಿ ನಡಸಿದರು.
ಅಯೋಧ್ಯೆಯ ಶ್ರೀರಾಮ ಕಾರ್ಖಾನೆಯಿಂದ ಹನುಮ ಸಾರಿಗೆಯ ಮೂಲಕ ಕೇಸರಿ ಶಾಲುಗಳನ್ನು ತರಿಸಿ ರಾಜ್ಯಾದ್ಯಂತ ಯುವಕರಿಗೆ ಹಂಚಿದ್ದೇನೆ. ಇದರಲ್ಲಿ ತಪ್ಪೇನಿದೆ ಎಂದು ಅವರು ಪ್ರಶ್ನಿಸಿದರು.
ರಾಷ್ಟ್ರದ ಹಿಂದುತ್ವವನ್ನು ಸಾರುವ ಮತ್ತು ಬಲಾಢ್ಯತೆಯನ್ನು ತೋರುವ ಸಂಕೇತವಾದ ಶಾಲುವನ್ನು ನಾನು ವಿತರಿಸಿದ್ದೇನೆಯೇ ಹೊರತು ಕಲ್ಲು ಬಂಡೆ, ಕಳ್ಳ ಭೂಮಿಗಳನ್ನು ನೀಡಿಲ್ಲ ಎಂದು ಅವರು ಸುದ್ದಿಗಾರರ ಜತೆ ಮಾತನಾಡುತ್ತಾ ಹೇಳಿದರು.
ನಾನು ಕದ್ದು ಮುಚ್ಚಿ ಏನನ್ನೂ ಮಾಡಿಲ್ಲ. ನಮ್ಮ ಸಂಘದ ಹುಡುಗರುಗಳು ಕೇಸರಿ ಶಾಲುಗಳನ್ನು ಯುವಕರಿಗೆ ವಿತರಿಸಿ ಅವರಲ್ಲಿ ರಾಷ್ಟ್ರಪ್ರೇಮವನ್ನು ಮೂಡಿಸುವ ಕೆಲಸ ಮಾಡಿದ್ದಾರೆ. ಶಿವಕುಮಾರ್ ಇದನ್ನೇ ಏನೋ ಹಿಡಿದಿದ್ದೇನೆ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಅವರು ತಿಳಿಸಿದರು.
ಶಿವಕುಮಾರ್ ಅವರಿಗೆ ಗೊತ್ತಿಲ್ಲದೆ ಇರುವುದೆಂದರೆ ವಿದ್ಯಾರ್ಥಿಗಳು ಸೇರಿದಂತೆ ರಾಷ್ಟ್ರದ ಪ್ರತಿಯೊಬ್ಬರ ಹೃದಯದಲ್ಲಿ ಕೇಸರಿ ಇದೆ ಎಂದರು ಅವರು.
ಹಿಜಾಬ್ ವಿವಾದದ ಹಿನ್ನಲೆಯಲ್ಲಿ ಆರೋಪ ಮತ್ತು ಪ್ರತ್ಯಾರೋಪಗಳು ನಡೆಯುತ್ತಿರುವ ಬೆನ್ನಲ್ಲೇ ಈಶ್ವರಪ್ಪ ಅವರ ಹೇಳಿಕೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ನಿನ್ನೆ ಶಿವಕುಮಾರ್ ಸಚಿವರೊಬ್ಬರ ಪುತ್ರರು ಸೂರತ್’ನಿಂದ ಕೇಸರಿ ಶಾಲುಗಳನ್ನು ತರಿಸಿ ಹಂಚಿದ್ದಾರೆ ಎಂದು ದೂರಿದ್ದರು. ಇದನ್ನು ಎಲ್ಲಿಂದ ತರಿಸಿದ್ದಾರೆ? ಯಾವ ಸಾರಿಗೆ ಮೂಲಕ ಬಂದಿದೆ? ಇದೆಲ್ಲವನ್ನು ಬಹಿರಂಗಪಡಿಸುತ್ತೇನೆ ಎಂದಿದ್ದರು. ಇದಕ್ಕೆ ಈಶ್ವರಪ್ಪ ಖಾರವಾಗಿ ಪ್ರತಿಕ್ರಿಯಿಸಿ, ಡಿಕೆಶಿ ಹೇಳಿದ್ದು ಸುಳ್ಳು, ನಾನು ಹೇಳಿದ್ದು ಸರಿ ಎಂದಿದ್ದಾರೆ.