ಎಲ್ಲರಿಗೂ ಮನವಿ ಮಾಡಿದ ಮುಖ್ಯಮಂತ್ರಿ ಬೊಮ್ಮಾಯಿ
ಬೆಂಗಳೂರು: ರಾಜ್ಯದ ಹಲವು ಭಾಗಗಳಲ್ಲಿ ಭುಗಿಲೆದ್ದ ಹಿಜಾಬ್ ವಿವಾದದ ಬಗ್ಗೆ ಆರೋಪ ಪ್ರತ್ಯಾರೋಪ ಮಾಡುತ್ತಿರುವವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸಿಎಂ ಬಸವರಾಜ ಬೊಮ್ಮಾಯಿ,ಇದುವರೆಗೆ ಆಗಿದ್ದಾಯಿತು.ಇನ್ನು ಇದನ್ನು ನಿಲ್ಲಿಸಿಬಿಡಿ ಎಂದು ಕರೆ ನೀಡಿದ್ದಾರೆ.,
ಬೆಂಗಳೂರಿನಲ್ಲಿಂದು ತಮ್ಮ ನಿವಾಸದ ಬಳಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ವಿಷಯದ ಬಗ್ಗೆ ಸಂಯಮ ಕಾಯ್ದುಕೊಳ್ಳುವುದು ಎಲ್ಲ ಸಂಘಟನೆಗಳ ಕರ್ತವ್ಯವಾಗಿದೆ ಎಂದು ಹೇಳಿದರು.
ಶಾಂತಿ ಕದಡುವ ಯಾವ ಪ್ರಯತ್ನ ಮಾಡದೆ ನಮ್ಮಷ್ಟಕ್ಕೆ ನಾವೇ ಸ್ವನಿಯಂತ್ರಣ ಹೇರಿಕೊಳ್ಳುವುದು ಬಹಳ ಮುಖ್ಯ ಎಂದು ಅವರು ನುಡಿದರು.
ಜವಾಬ್ದಾರಿಯ ಜಾಗದಲ್ಲಿರುವ ನಾವು,ಈ ವಿಷಯದಲ್ಲಿ ಸೂಕ್ಷ್ಮವಾಗಿರಬೇಕು,ಇದರಿಂದ ಯಾವ ಲಾಭವೂ ಇಲ್ಲ ಎಂದು ಅಭಿಪ್ರಾಯ ಪಟ್ಟರು.
ಮಂತ್ರಿಗಳ ಮಗನೇ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಪೂರೈಸಿದ ಆರೋಪಗಳ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಅವರು, ಆರೋಪಗಳು ಎರಡೂ ಕಡೆಯಿಂದ ಕೇಳಿ ಬರುತ್ತಿವೆ.ಹೀಗಾಗಿ ನಾನವರಿಗೆ ಮನವಿ ಮಾಡಿಕೊಳ್ಳುತ್ತಿದ್ದೇನೆ.ಇದನ್ನು ನಿಲ್ಲಿಸಿ ಬಿಡಿ ಎಂದರು.
ವಿವಾದದ ಬಗ್ಗೆ ಯಾರ್ಯಾರು ಏನೇನು ಹೇಳಬೇಕೋ ಅದನ್ನೆಲ್ಲ ಹೇಳಿದ್ದಾಗಿದೆ.ಹೀಗಾಗಿ ಇನ್ನು ಇದನ್ನು ನಿಲ್ಲಿಸಿ ಪರಿಸ್ಥಿತಿ ತಿಳಿಯಾಗಲು ಸಹಕರಿಸಬೇಕು ಎಂದು ಇದೇ ಸಂದರ್ಭದಲ್ಲಿ ಅವರು ನುಡಿದರು.
ಈ ಸಂದರ್ಭದಲ್ಲಿ ಹೊರಗಿನವರು ಮಧ್ಯೆ ಪ್ರವೇಶ ಮಾಡದಂತೆ,ಕಾನೂನು ಸುವ್ಯವಸ್ಥೆಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.
ಶಾಲಾ ಮಕ್ಕಳ ಸಮವಸ್ತ್ರದ ಬಗ್ಗೆ ವಿಚಾರಣೆ ನಡೆಸಲು ಮುಖ್ಯನ್ಯಾಯಮೂರ್ತಿಗಳ ನೇತೃತ್ವದ ತ್ರಿಸದಸ್ಯ ಪೀಠ ರಚನೆಯಾಗಿದ್ದು,ಅದು ಏನು ತೀರ್ಪು ಕೊಡುತ್ತದೋ ಕಾದು ನೋಡೋಣ,ಶಾಂತಿಯುವ ವಾತಾವರಣ ಕಾಪಾಡಿಕೊಂಡರೆ ನ್ಯಾಯಾಲಯದ ಮೂಲಕ ವಿವಾದಕ್ಕೆ ಪರಿಹಾರ ಸಿಗಲು ಸಾಧ್ಯ ಎಂದರು.