ಅಂತಿಮ ತೀರ್ಪು ಬರುವ ತನಕ ಈ ಆದೇಶ ಪಾಲಿಸಿ ಎಂದ ನ್ಯಾಯಾಯಲಯ
ಬೆಂಗಳೂರು: ಶಾಲೆ ಕಾಲೇಜುಗಳಲ್ಲಿ ಧಾರ್ಮಿಕ ಗುರುತನ್ನು ಬಿಂಬಿಸುವ ಹಿಜಾಬ್ ಅಥವಾ ಶಾಲುಗಳನ್ನು ಧರಿಸುವಂತಿಲ್ಲ ಎಂದು ರಾಜ್ಯದ ಹೈಕೋರ್ಟ್ ವಿಸ್ತೃತ ನ್ಯಾಯ ಪೀಠ ಮೌಖಿಕ ಆದೇಶ ನೀಡಿದೆ. ಜತೆಗೆ, ಶಾಲೆ-ಕಾಲೇಜುಗಳನ್ನು ಪುನರಾರಂಭಿಸಿ ಎಂದು ರಾಜ್ಯ ಸರಕಾರಕ್ಕೆ ಸೂಚನೆ ನೀಡಿದೆಯಲ್ಲದೆ, ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿ ಎಂದು ವಿದ್ಯಾರ್ಥಿಗಳಿಗೆ ಸೂಚನೆ ನೀಡಿದೆ.
ಈ ಬಗ್ಗೆ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠವು ಪ್ರಕರಣವನ್ನು ವಿಸ್ತೃತ ಪೀಠಕ್ಕೆ ನಿನ್ನೆ ಪ್ತಕರಣವನ್ನು ವರ್ಗಾವಣೆ ಮಾಡಿತ್ತು. ಇಂದು ಮುಖ್ಯ ನ್ಯಾಯಮೂರ್ತಿ ರಿತೂರಾಜ್ ಅವಸ್ಥಿ, ನ್ಯಾಯಮೂರ್ತಿಗಳಾದ ಕೃಷ್ಣ ದೀಕ್ಷಿತ್, ಜೈಉನ್ನೀಸಾ ಎಂ ಖಾಜಿ ಅವರನ್ನೊಳಗೊಂಡ ಪೀಠವು ವಾದ ಪ್ರತಿವಾದವನ್ನು ಆಲಿಸಿದ ಬಳಿಕ ಈ ಮೌಖಿಕ ಆದೇಶ ನೀಡಿತಲ್ಲದೆ, ವಿಚಾರಣೆಯನ್ನು ಸೋಮವಾರ ಮಧ್ಯಾಹ್ನ 2.30ಕ್ಕೆ ಮುಂದೂಡಿತು.
ಅಂತಿಮ ತೀರ್ಪು ಬರುವವರೆಗೂ ನ್ಯಾಯಾಲಯದ ಆದೇಶ ಪಾಲನೆ ಮಾಡಬೇಕು. ಈ ವಿಚಾರದ ಬಗ್ಗೆ ವಿಸ್ತೃತವಾಗಿ ವಾದ ಪ್ರತಿವಾದವನ್ನು ಪೀಠವು ಆಲಿಸಿ ಅಂತಿಮ ತೀರ್ಪು ನೀಡಲಿದೆ. ಇದಕ್ಕೆ ನಿಮ್ಮ ಆಕ್ಷೇಪಣೆ ಇದೆಯೇ ಎಂದು ಎರಡೂ ಕಡೆಯ ವಕೀಲರನ್ನು ಪ್ರಶ್ನಿಸಿತು.
ವಿದ್ಯಾರ್ಥಿಗಳ ಪರ ವಕೀಲರು ಮಧ್ಯಂತರ ಆದೇಶ ಎಂದು ಪರಿಗಣಿಸಿ, ಇಲ್ಲವೇ ನಮ್ಮ ಆಕ್ಷೇಪಣೆಯನ್ನು ದಾಖಲಿಸಿ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ವಿಸ್ತೃತ ಚರ್ಚೆ ಆಗುವವರೆಗೂ ನಾವು ಯಾವುದೇ ತೀರ್ಪು ಪ್ರಕಟಿಸುವುದಿಲ್ಲ. ಆದರೆ ಶಾಲಾ ಕಾಲೇಜುಗಳು ಪುನಾರಂಭ ಆಗಬೇಕು, ಶಾಂತಿ-ಸುವ್ಯವಸ್ಥೆ ಕಾಪಾಡಬೇಕು. ಇದನ್ನು ಗಮನದಲ್ಲಿ ಇಟ್ಟುಕೊಂಡು ಮೌಖಿಕ ಆದೇಶ ನೀಡುತ್ತಿದ್ದೇವೆ ಎಂದು ವಿಚಾರಣೆಯನ್ನು ಸೋಮವಾರಕ್ಕೆ ಪೀಠವು ಮುಂದೂಡಿತು.
ಇದಕ್ಕೂ ಮೊದಲು ರಾಜ್ಯದ ಅಡ್ವೋಕೇಟ್ ಜನರಲ್ ಅವರು; ಸವಿಸ್ತಾರವಾಗಿ ಶಾಲೆಗಳ ಸಮವಸ್ತ್ರ, ಸಮವಸ್ತ್ರದ ನೀತಿ, ಪರಿಪಾಲನೆ, ಯಾವ ರೀತಿ ಅದನ್ನು ಜಾರಿ ಮಾಡಲಾಗುತ್ತದೆ, ಎಂದಿನಿಂದ ಕಾನೂನು ಜಾರಿಗೆ ಬಂದಿದೆ ಎಂಬ ಅಂಶಗಳನ್ನು ದಾಖಲೆ ಸಮೇತ ಪೀಠದ ಮುಂದೆ ಇಟ್ಟರು.
ವಿದ್ಯಾರ್ಥಿಗಳ ಮತ್ತು ಸಂಘಟನೆಗಳ ಪರ ವಕೀಲರು ದೇಶ ವಿದೇಶಗಳ ನ್ಯಾಯಾಲಯಗಳಲ್ಲಿ ವಿದ್ಯಾರ್ಥಿಗಳ ಸಮವಸ್ತ್ರ ಸಂಹಿತೆ ಬಗ್ಗೆ, ಸಂವಿಧಾನ ನೀಡಿರುವ ಹಕ್ಕುಗಳ ಬಗ್ಗೆ ಎರಡೂ ಕಡೆಯ ವಕೀಲರು ಪೀಠದ ಗಮನಕ್ಕೆ ತಂದರು.
ನ್ಯಾಯಾಲಯದ ಮೌಖಿಕ ಆದೇಶ ಹೊರಬರುತ್ತಿದ್ದಂತೆ ಪೊಲೀಸ್ ಅಧಿಕಾರಿಗಳು ಧಾರ್ಮಿಕ ಮುಖಂಡರ ಸಭೆ ನಡೆಸಿ ಶಾಂತಿ ಸುವ್ಯವಸೆ ಕಾಪಾಡಬೇಕು ಹಾಗೂ ನ್ಯಾಯಾಲಯದ ಆದೇಶ ಇಟ್ಟುಕೊಂಡು ವಿಜೃಂಭಣೆ ಇಲ್ಲವೇ ಪ್ರತಿಭಟನೆ ಮಾಡಬಾರದು. ನ್ಯಾಯಾಲಯಗಳ ಗೌರವ ಕಾಪಾಡಬೇಕು ಎಂದು ಹೇಳಿ ಮನವಿ ಮಾಡಿಕೊಂಡಿದ್ದಾರೆ.
ತದ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಅರಗ ಜ್ಞಾನೇಂದ್ರ, ಪ್ರಾಥಮಿಕ & ಪ್ರೌಢಶಿಕ್ಷಣ ಸಚಿವ ಬಿಸಿ ನಾಗೇಶ್, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹಾಗೂ ಅಧಿಕಾರಿಗಳ ಜತೆ ನ್ಯಾಯಾಲಯದ ಮೌಖಿಕ ಆದೇಶದ ಬಗ್ಗೆ ಚರ್ಚೆ ನಡಸಿ ಶಾಲಾ ಕಾಲೇಜುಗಳನ್ನು ಪುನಾರಂಭಿಸುವ ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡುವ ಬಗ್ಗೆ ಪರಿಶೀಲನೆ ನಡೆಸಿದರು.