ವಿದ್ಯಾರ್ಥಿಗಳ ಜತೆ ಸಂವಾದ
ಚಿಕ್ಕಬಳ್ಳಾಪುರ: ಜಿಲ್ಲಾಧಿಕಾರಿ ಆರ್.ಲತಾ ಅವರು ಶುಕ್ರವಾರ ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿಕ್ರಾಸ್ (ದೇವಿಶೆಟ್ಟಿಹಳ್ಳಿ ಬಲಭಾಗದ) ಸಮೀಪದ ಯಲವಳ್ಳಿಯ ಸಿದ್ಧಾರ್ಥ ಪ್ರೌಢಶಾಲೆಗೆ ಭೇಟಿ ನೀಡಿ 10ನೇ ತರಗತಿಯ ವಿದ್ಯಾರ್ಥಿಗಳೊಂದಿಗೆ ಮಾರ್ಚ್ 28ಕ್ಕೆ ನಡೆಯುವ 2021-22 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ ಕುರಿತು ಯಾವ ರೀತಿ ಪೂರ್ವ ಸಿದ್ಧತೆ ನಡೆಸಬೇಕು ಎಂಬ ವಿಷಯದ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದರು.
ಜಿಲ್ಲೆಯಲ್ಲಿ ಭಾರತ ರತ್ನ ಪುರಸ್ಕೃತ ಸರ್.ವಿ.ವಿಶ್ವೇಶ್ವರಯ್ಯ ಹಾಗೂ ವಿಜ್ಞಾನಿ ಸಿ.ಎನ್.ಆರ್.ರಾವ್, ಶಿಕ್ಷಣ ತಜ್ಞ ಎಚ್.ನರಸಿಂಹಯ್ಯ ರವರು ಗ್ರಾಮೀಣ ಭಾಗದಿಂದ ಬಂದತಹ ಮಹಾನ್ ದ್ರುವತಾರೆಗಳು ದೇಶಕ್ಕೆ ಹಾಗೂ ಜಿಲ್ಲೆಗೆ ಅಪಾರ ಕೊಡುಗೆ ನೀಡಿದ್ದಾರೆ. ಅಲ್ಲದೇ ತಾವು ಸಹ ಗ್ರಾಮೀಣ ಭಾಗದ ವಿದ್ಯಾರ್ಥಿಗಳಾಗಿದ್ದು, ತಮ್ಮಲ್ಲಿ ಇರುವ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಪ್ರದರ್ಶಿಸಲು ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆ ಒಂದು ಸುವರ್ಣವಕಾಶವಾಗಿದೆ. ತಾವೆಲ್ಲರೂ ಈ ಅಮೂಲ್ಯ ಸಮಯವನ್ನು ವ್ಯರ್ಥ ಮಾಡದೆ ಹೆಚ್ಚಿನ ಅಧ್ಯಯನ ಮಾಡಿ ಉತ್ತಮ ಅಂಕಗಳನ್ನು ಪಡೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿಯವರು ಉತ್ತೇಜನ ನೀಡಿದರು.
ಈಗಾಗಲೇ ಶಿಕ್ಷಕರು ಎಸ್.ಎಸ್.ಎಲ್.ಸಿ ಪಠ್ಯಕ್ರಮವನ್ನು ಸಂಪೂರ್ಣವಾಗಿ ಮುಗಿಸಿದ್ದಾರೆ. ಈ ಪಠ್ಯಕ್ಕೆ ಸಂಬಂಧಿಸಿದಂತೆ ಪುನರ್ ಮನನ ಮಾಡಿಕೊಂಡು ಅರ್ಥವಾಗದ ವಿಷಯಗಳ ಬಗ್ಗೆ ಶಿಕ್ಷಕರೊಂದಿಗೆ ಚರ್ಚಿಸಬೇಕು. ಜೊತೆಗೆ ವಿದ್ಯಾರ್ಥಿಗಳು ಶೇ 90 ಕ್ಕಿಂತ ಅಧಿಕ ಅಂಕಗಳನ್ನು ಪಡೆಯಲು ಶ್ರಮಿಸಬೇಕು ಎಂದು ಪಠ್ಯಕ್ರಮಗಳ ಅಭ್ಯಾಸದ ಕುರಿತು ಮತ್ತು ಸರಳ ಕಲಿಕಾ ವಿಧಾನಗಳ ಬಗ್ಗೆ ತಿಳುವಳಿಕೆ ನೀಡಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿದರು.
ಪ್ರತಿಕ್ರಿಯಿಸಿದ ವಿದ್ಯಾರ್ಥಿಗಳು ತಮ್ಮಲ್ಲಿದ್ದ ಗೊಂದಲಗಳನ್ನು ಹಾಗೂ ಅಭ್ಯಾಸದ ಕೊರತೆಗಳನ್ನು ಜಿಲ್ಲಾಧಿಕಾರಿಗಳೊಂದಿಗೆ ಹಂಚಿಕೊಂಡು ಪರಿಹಾರಗಳನ್ನು ಪಡೆದುಕೊಂಡರು.
2 ದಶಕಗಳ ಶಾಲೆಗೆ ಜಿಲ್ಲಾಧಿಕಾರಿ ಭೇಟಿ
ಯಲವಳ್ಳಿ ಪ್ರೌಢಶಾಲೆ ಪ್ರಾರಂಭವಾಗಿ 2 ದಶಕಗಳಾಗಿವೆ. ಈ ಶಾಲೆಗೆ ಮಾನ್ಯ ಜಿಲ್ಲಾಧಿಕಾರಿ ಅವರು ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಪಠ್ಯಕ್ರಮಗಳ ಅಭ್ಯಾಸದ ಕುರಿತು ಮತ್ತು ಸರಳ ಕಲಿಕಾ ವಿಧಾನಗಳನ್ನು ಶಿಕ್ಷಕರಾಗಿ ತಿಳಿಸಿಕೊಟ್ಟಿರುವುದು ಸಂತೋಷವಾಗಿದೆ. ಜಿಲ್ಲಾಧಿಕಾರಿಗಳು ತಿಳಿಸಿರುವ ಮಾರ್ಗಸೂಚಿಗಳನ್ನು ನಮ್ಮ ಶಾಲೆಯಲ್ಲಿನ 48 ವಿದ್ಯಾರ್ಥಿಗಳು ಶ್ರದ್ಧೆಯಿಂದ ಕೇಳಿಸಿಕೊಂಡಿದ್ದಾರೆ ಎಂದು ಯಲವಳ್ಳಿ ಪ್ರೌಢಶಾಲೆಯ ಸಹ ಶಿಕ್ಷಕರಾದ ನಂಜೇಗೌಡ ತಿಳಿಸಿದರು.
ಈ ಸಂದರ್ಭದಲ್ಲಿ ಯಲವಳ್ಳಿ ಸಿದ್ದಾರ್ಥ ಪ್ರೌಢಶಾಲೆಯ ನಿರ್ದೇಶಕರಾದ ಮಂಜಣ್ಣ, ಮುಖ್ಯಕಾರ್ಯದರ್ಶಿ ಚಲಪತಿ ಹಾಗೂ ಶಾಲೆಯ ಶಿಕ್ಷಕರ ವೃಂದ ಹಾಜರಿದ್ದರು.