ನಿಸರ್ಗದತ್ತ ಶ್ರೀ ಆದಿನಾರಾಯಣ ಸ್ವಾಮಿ ಬೆಟ್ಟದಲ್ಲಿ ಭಕ್ತಜಾತ್ರೆ
by GS Bharath Gudibande
ಗುಡಿಬಂಡೆ: ತಾಲೂಕಿನ ಎಲ್ಲೋಡು ಶ್ರೀ ಆದಿನಾರಾಯಣ ಸ್ವಾಮಿ ಬೆಟ್ಟದ ಪ್ರಕೃತಿಯ ಚೆಲುವಿನ, ವನಸಿರಿಯ ವೈಭವದಲ್ಲಿ, ನಿಸರ್ಗದತ್ತ ಹಸಿರುಮಲೆಯಲ್ಲಿ ನೆಲೆಸಿರುವ ಶ್ರೀ ಲಕ್ಷ್ಮೀ ಆದಿನಾರಾಯಣ ಸ್ವಾಮಿಯ ಬ್ರಹ್ಮ ರಥೋತ್ಸವಕ್ಕೆ ಸಿದ್ಧತೆಗಳು ಭರದಿಂದ ನಡೆದಿವೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಎಲ್ಲೋಡುನಲ್ಲಿ ಭಾನುವಾರ ಫೆಬ್ರುವರಿ 20ರಂದು ಬ್ರಹ್ಮ ರಥೋತ್ಸವಕ್ಕೆ ನಡೆಯಲಿದ್ದು, ಪ್ರತಿವರ್ಷ ಮಾಘ ಮಾಸದಲ್ಲಿ ಹತ್ತು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವಕ್ಕೆ ರಾಜ್ಯ ಹಾಗೂ ಹೊರ ರಾಜ್ಯಗಳ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸಿ ದೇವರಿಗೆ ಪೂಜೆ, ಹರಕೆ ಸಲ್ಲಿಸುತ್ತಾರೆ.
ಕಳೆದ ವರ್ಷ ಕೋವಿಡ್ ಕಾರಣದಿಂದ ಜಾತ್ರೆ ನಡೆಸಲು ಅನುಮತಿ ಸಿಕ್ಕಿರಲಿಲ್ಲ ಆದರೆ ಈ ವರ್ಷ ಫೆಬ್ರುವರಿ 19ರಿಂದ 21ರವರೆಗೆ ಜಾತ್ರೆ ನಡೆಯಲಿದೆ. 20ರಂದು ಬ್ರಹ್ಮರಥೋತ್ಸವ, 21ರಂದು ರಾತ್ರಿ ಹೂವಿನ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ. ರಥೋತ್ಸವದ ಪ್ರಯುಕ್ತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ದಕ್ಷಿಣ ಭಾರತದ ಪ್ರಸಿದ್ಧ ದೇವಾಲಯ
ಎಲ್ಲೋಡು ಗುಡಿಬಂಡೆ ತಾಲೂಕಿನಲ್ಲಿರುವ ರಾಜ್ಯದ ಒಂದು ಪ್ರಮುಖ ಯಾತ್ರಾಸ್ಥಳ. ಪಂಚನಾರಾಯಣ ಕ್ಷೇತ್ರಗಳಲ್ಲಿ ಒಂದೆನಿಸಿರುವ ಲಕ್ಷ್ಮೀ ಆದಿನಾರಾಯಣಸ್ವಾಮಿಯ ಉಗಮ ಸ್ಥಾನವೇ ಕೂರ್ಮಗಿರಿ. ಎಲ್ಲೋಡು ಬೆಟ್ಟ ಸಂಪೂರ್ಣವಾಗಿ ಆಮೆಯಾಕಾರದಲ್ಲಿ ಇರುವುದರಿಂದ ಇದಕ್ಕೆ ʼಕೂರ್ಮಗಿರಿʼ ಎಂದು ಹೆಸರು ಬಂದಿದೆ. ಪಂಚನಾರಾಯಣ ಕ್ಷೇತ್ರಗಳ ಉಗಮ ಸ್ಥಾನ ಎಂದು ಪುರಾಣ ಪ್ರಸಿದ್ಧವಾಗಿದೆ. ಉತ್ತರ ಭಾರತದ ಬದರಿ ಕ್ಷೇತ್ರದ ಬದರಿನಾರಾಯಣ, ಗದುಗಿನ ವೀರನಾರಾಯಣ, ಕೈವಾರ ಕ್ಷೇತ್ರದ ಅಮರನಾರಾಯಣ, ಮೇಲುಕೋಟೆ, ಚೆಲುವನಾರಾಯಣ ಹಾಗೂ ಎಲ್ಲೋಡಿನ ಆದಿನಾರಾಯಣ ಶ್ರೀವಿಷ್ಣು ಅವತಾರದ ಪಂಚನಾರಾಯಣ ಕ್ಷೇತ್ರಗಳೆಂದು ಕರೆಯಲಾಗುತ್ತದೆ. ಈ ಕ್ಷೇತ್ರ ರಾಜ್ಯ ಸೇರಿದಂತೆ ಆಂಧ್ರಪ್ರದೇಶ, ತಮಿಳುನಾಡು, ಒರಿಸ್ಸಾ ಮುಂತಾದ ಹೊರ ರಾಜ್ಯಗಳಲ್ಲಿಯೂ ಪ್ರಸಿದ್ಧಿ ಪಡೆದುಕೊಂಡಿದೆ.
ಬೆಟ್ಟದ ಇತಿಹಾಸ
ಕೂರ್ಮಗಿರಿ ಪುರಾಣ ರೀತ್ಯಾ ಹಿಂದೆ ಕೂರ್ಮಮಹರ್ಷಿ ಎಂಬ ಮುನಿ ಈ ಪ್ರದೇಶದಲ್ಲಿದ್ದ ದಟ್ಟ ಅರಣ್ಯದಲ್ಲಿ ಮಹಾವಿಷ್ಣುವನ್ನು ಕುರಿತು ತಪಸ್ಸು ಮಾಡಿದಾಗ ಆತನ ಇಷ್ಟ ದೇವರು ಬೆಟ್ಟದ ಮೇಲಿನ ಗುಹೆಯಲ್ಲಿ ಆತನಿಗೆ ದರ್ಶನವಿತ್ತ ಬಗ್ಗೆ ಉಲ್ಲೇಖವಿದೆ. 150 ವರ್ಷಗಳ ಹಿಂದೆ ಆಂಧ್ರಪ್ರದೇಶದ ಕಂಚಿಸಮುದ್ರಂ ಗ್ರಾಮದ ದಾಸರನರಸಯ್ಯಶೆಟ್ಟಿ ಎಂಬ ಭಕ್ತರು ದೇವರಿಗೆ ಗುಡಿಗೋಪುರಗಳನ್ನು ನಿರ್ಮಿಸಿಕೊಡಲು ಮುಂದಾದಾಗ ಕನಸಿನಲ್ಲಿ ಕಾಣಿಸಿಕೊಂಡ ಆದಿನಾಯಣ ನನಗೆ ಗುಡಿಗೋಪುರಗಳು ಬೇಡ, ಜನತೆಗೆ ಉಪಯೋಗವಾಗುವ ಕೆಲಸಮಾಡು ಎಂದು ತಿಳಿಸಿದ್ದು, ಅದರಂತೆ ಆತ ಅಂದು ನಿರ್ಮಿಸಿದ ದೇವರ ಕೆರೆ ಇಂದಿಗೂ ಜನರಿಗೆ ನೀರಿನ ಆಸರೆಯಾಗಿದೆ.
ಪ್ರವಾಸಿಗರ ಮನತಣಿಸಲೆಂದೇ ಸೃಷ್ಟಿಯಾಗಿರುವ ಎಲ್ಲೋಡಿನ ಕೂರ್ಮಗಿರಿ ಬೆಟ್ಟ ಹತ್ತು ಹಲವು ವೈಶಿಷ್ಟಗಳಿಂದ ಕೂಡಿದೆ. ಇತ್ತೀಚೆಗೆ ಗೋಪುರ, ಬೆಟ್ಟಕ್ಕೆ ಹೋಗುವ ಮೆಟ್ಟಲು, ಚಾವಣಿ ವ್ಯವಸ್ಥೆ, ಬೆಟ್ಟದಲ್ಲಿರುವ ವಿಶ್ರಾಂತಿ ಮಂಟಪ ಹಾಗೂ ದೇವಾಲಯಕ್ಕೆ ಹೊಸ ರೂಪ ನೀಡಿರುವುದು ಕ್ಷೇತ್ರಕ್ಕೆ ಮೆರುಗು ತಂದಿದೆ.
ಮೂಲ ಸೌಲಭ್ಯಗಳ ಕೊರತೆ
ತಾಲೂಕು ಕೇಂದ್ರದಿಂದ 7 ಕಿ.ಮೀ ದೂರದಲ್ಲಿದ್ದು, ರಾಜಧಾನಿ ಬೆಂಗಳೂರಿನಿಂದ 105 ಕಿ.ಮೀ. ದೂರದಲ್ಲಿರುವ ಕ್ಷೇತ್ರದಲ್ಲಿ ಮುಖ್ಯವಾಗಿ ನಾಗರಿಕ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ. ಬೆಟ್ಟದ ಮೇಲೆ ಮುಡಿ ಕೊಡುವ ಪದ್ಧತಿ ರೂಢಿಯಲ್ಲಿದೆ ಆದರೆ ಸ್ನಾನದ ಕೊಠಡಿಗಳು ಹಾಗೂ ಶೌಚಾಲಯ ವ್ಯವಸ್ಥೆ ಇಲ್ಲದಿರುವುದು ಬಹುದೊಡ್ಡ ಸಮಸ್ಯೆಯಾಗಿದೆ. ಎಲ್ಲೆಡೆಯಿಂದ ಆಗಮಿಸುವ ಭಕ್ತರು ಸರಿಯಾದ ಬಸ್ ಸೌಲಭ್ಯವಿಲ್ಲದೆ ಪರದಾಡುವಂತಾಗುತ್ತದೆ. ಈ ದೇಗುಲ ಮುಜರಾಯಿ ಇಲಾಖೆಗೆ ಸೇರಿದ್ದು, ಆದಾಯದ ಮೇಲೆ ಮಾತ್ರ ಕಣ್ಣಿಟ್ಟಿರುವ ಆ ಇಲಾಖೆಯವರು ಈವರೆಗೆ ಅಭಿವೃದ್ಧಿ ಬಗ್ಗೆ ಮಾತ್ರ ತಲೆಕೆಡಿಸಿಕೊಂಡಿಲ್ಲ ಎಂಬುದು ಭಕ್ತರ ಆರೋಪವಾಗಿದೆ.
ಕೋವಿಡ್ ನಿಂದ ಜಾತ್ರೆಗಳನ್ನು ಅದ್ದೂರಿಯಾಗಿ ಎಲ್ಲರೂ ಸೇರಿ ಮಾಡಿರಲಿಲ್ಲ, ಈ ವರ್ವ ಸ್ವಲ್ಪ ನೆಮ್ಮದಿ ನೀಡಿದೆ, ತಾಲೂಕು ಆಡಳಿತ, ಪೊಲೀಸ್ ಇಲಾಖೆ ಸಹಕಾರದಲ್ಲಿ ನಡೆಯುತ್ತಿರುವುದು ಸಂತಸದ ವಿಷಯ,
ಜಿ.ಎನ್.ನವೀನ್, ಜಿಲ್ಲಾ ಯುವ ಅಧ್ಯಕ್ಷ, ಜಯಕರ್ನಾಟಕ, ಗುಡಿಬಂಡೆ