ಟ್ರಕಿಂಗ್ ಮಾಡುವಾಗ ಕಾಲುಜಾರಿ ಬಿದ್ದ ಯುವಕ; ಹೆಲಿಕಾಪ್ಟರ್ ಮೂಲಕ ಕಾರ್ಯಾಚರಣೆ
by GS Bharath Gudibande
ಚಿಕ್ಕಬಳ್ಳಾಪುರ: ನಂದಿಬೆಟ್ಟದಲ್ಲಿ ಟ್ರಕಿಂಗ್ ಮಾಡುವಾಗ ಕಾಲು ಜಾರಿ ಪ್ರಪಾತಕ್ಕೆ ಬಿದ್ದು ಪ್ರಾಣಾಪಾಯಕ್ಕೆ ಸಿಲುಕಿದ್ದ ದೆಹಲಿ ಮೂಲದ ವಿದ್ಯಾರ್ಥಿಯನ್ನು ರಕ್ಷಣೆ ಮಾಡಲಾಗಿದೆ.
ಪ್ರಾಣಾಪಾಯದಿಂದ ಪಾರಾದ ಯುವಕ ನಿಶಾಂಕ್ ಎಂಬಾತ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೊದಲ ವರ್ಷದ ವ್ಯಾಸಂಗ ಮಾಡುತ್ತಿದ್ದು, ಈತ ಮೂಲತಃ ದೆಹಲಿ ಮೂಲದವ ಎಂದು ಗೊತ್ತಾಗಿದೆ.
ಹೊಸ ನಿಯಮಗಳು ಜಾರಿಗೆ ಬಂದ ಮೇಲೆ ನಂದಿಬೆಟ್ಟದ ಪ್ರವೇಶಕ್ಕೆ ವಾರಾಂತ್ಯದ ವೇಳೆ ಪ್ರವಾಸಿಗರ ಭೇಟಿಯನ್ನು ನಿರ್ಬಂಧಿಸಲಾಗಿದೆ. ಇದು ಗೊತ್ತಿದ್ದೂ ನಂದಿಬೆಟ್ಟದ ತಪ್ಪಲಿಗೆ ಬಂದ ನಿಶಾಂಕ್, ಅಲ್ಲಿನ ಚೆಕ್ ಪೋಸ್ಟ್ ಬಳಿ ವಾಹನವನ್ನು ಪಾರ್ಕ್ ಮಾಡಿ ಬ್ರಹ್ಮಗಿರಿ ಮಾರ್ಗವಾಗಿ ನಂದಿಬೆಟ್ಟಕ್ಕೆ ಟ್ರೆಕ್ಕಿಂಗ್ ಮಾಡಲು ಹೊರಟಿದ್ದಾರೆ. ಬೆಟ್ಟವನ್ನು ಏರುವಾಗ ಆಯತಪ್ಪಿ ಕೆಳಕ್ಕೆ ಬಿದ್ದ ನಿಶಾಂಕ್ ಸುಮಾರು 250 ಅಡಿ ಆಳದ ಪ್ರಪಾತಕ್ಕೆ ಬಿದ್ದಿದ್ದಾನೆ.
ಅದೃಷ್ಟವಶಾತ್ ಆತನ ಬಳಿ ಮೊಬೈಲ್ ಇತ್ತು. ಕೂಡಲೇ ಸಹಾಯಕ್ಕಾಗಿ ಪೊಲೀಸ್ ಕಂಟ್ರೋಲ್ ರೂಂ ಗೆ ಕರೆ ಮಾಡಿ ರಕ್ಷಣೆಗೆ ಮನವಿ ಮಾಡಿದ್ದಾನೆ. ಕೂಡಲೇ ಕಾರ್ಯಾಚರಣೆಗಿಳಿದ ಜಿಲ್ಲಾ ಪೊಲೀಸರು, ರಾಜ್ಯ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಕಾರ್ಯಾಚರಣೆ ನಡೆಸಿದವು. ಜತೆಗೆ, ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಅನ್ನು ಕೂಡ ಕಾರ್ಯಾಚರಣೆಗೆ ಬಳಕೆ ಮಾಡಿಕೊಳ್ಳಲಾಯಿತು.
ಸಣ್ಣಪುಟ್ಟ ತರಚಿದ ಗಾಯಗಳಿಂದ ಗಾಯಗೊಂಡ ನಿಶಾಂಕ್ ನನ್ನು ಸುಮಾರು 250 ಅಡಿ ಆಳದ ಕಂದಕದಿಂದ ರಕ್ಷಣೆ ಮಾಡಲಾಗಿದೆ. ಆತ ಸಿಲುಕಿದ್ದ ಅಪಾಯಕಾರಿ ಜಾಗಕ್ಕಿಂತ ಕೆಳಕ್ಕೆ ಇನ್ನೂ 300 ಅಡಿ ಆಳದ ಪ್ರಪಾತವಿತ್ತು. ಸ್ವಲ್ಪ ಆಯತಪ್ಪಿದ್ದರೆ ಆತ ಆ ಪ್ರಪಾತಕ್ಕೆ ಬಿದ್ದು ಜೀವ ಕಳೆದುಕೊಳ್ಳುವ ಸ್ಥಿತಿ ಇತ್ತು. ಅದೃಷ್ಟವಶಾತ್ ಆತ ಪಾರಾಗಿ ಬಂದಿದ್ದಾನೆ ಎಂದು ಅಧಿಕಾರಿಯಿಬ್ಬರು ಸಿಕೆನ್ಯೂಸ್ ನೌ ಜತೆ ಮಾತನಾಡುತ್ತಾ ತಿಳಿಸಿದರು.
ವ್ಯವಸ್ಥಿತವಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿದ ತಂಡಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಗಾಯಗೊಂಡ ಯುವಕನನ್ನು ಬೆಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
Comments 1