ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಭಜರಂಗ ದಳ ಇನ್ನಿತರೆ ಘಟನೆಗಳ ಆಗ್ರಹ
By GS Bharath Gudibande
ಗುಡಿಬಂಡೆ: ಶಿವಮೊಗ್ಗದ ಭಜರಂಗ ದಳದ ಕಾರ್ಯಕರ್ತ 23 ವರ್ಷದ ಯುವಕ ಹರ್ಷ ಕೊಲೆ ಪ್ರಕರಣದ ಆರೋಪಿಗಳನ್ನು ಕೊಡಲೇ ಬಂಧಿಸುವಂತೆ ಆಗ್ರಹಿಸಿ ಪಟ್ಟಣದ ಮುಖ್ಯರಸ್ತೆಯಲ್ಲಿ ಇಂದು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಪಟ್ಟಣದ ಮುಖ್ಯರಸ್ತೆಯಲ್ಲಿ ವಿಶ್ವ ಹಿಂದೂ ಪರಿಷತ್, ಭಜರಂಗದಳ ಸೇರಿದಂತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ತಕ್ಷಣವೇ ಕೊಲೆ ಆರೋಪಿಗಳನ್ನು ಬಂಧಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಭಜರಂಗ ದಳದ ಜಿಲ್ಲಾ ಸಂಚಾಲಕ ಗರುಡಾಚಾರ್ಲಹಳ್ಳಿ ಜಿ.ಎ.ಅಮರೇಶ್ ಮಾತನಾಡಿ; “ಹಿಜಾಬ್ ಸಂಘರ್ಷದ ನಡುವೆಯೇ ಶಿವಮೊಗ್ಗದಲ್ಲಿ ಹಿಂದೂ ಯುವಕನ ಕೊಲೆ ಮಾಡಲಾಗಿದೆ. ಈಗ ಮತ್ತೆ ಭಯೋತ್ಪಾದಕರ ಚಟುವಟಿಕೆ ಆರಂಭವಾಗಿದೆ. ಇದರ ಬೇರನ್ನು ಪತ್ತೆ ಹಚ್ಚಿ ತುಂಡರಿಸಬೇಕು” ಎಂದು ಅವರು ಆಗ್ರಹಿಸಿದರು.
ಶಾಂತಿಪ್ರಿಯರಾದ ಹಿಂದೂಗಳನ್ನು ಪದೇ ಪದೆ ಕೆಣಕುತ್ತಿದ್ದಾರೆ. ಅದರಲ್ಲೂ ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಕಳೆದ ಹಲವಾರು ವರ್ಷಗಳಿಂದ ದಾಳಿ ನಡೆಯುತ್ತಿದೆ. ಕೊಲೆ, ಹಲ್ಲೆ ಪ್ರಕರಣಗಳು ಹೆಚ್ಚಾಗಿವೆ. ಇನ್ನೂ ಮುಂದೆ ನಾವು ಸುಮ್ಮನೆ ಕೂರುವುದಿಲ್ಲ. ನಮ್ಮ ಶಕ್ತಿಯನ್ನು ತೋರಿಸುತ್ತೆವೆ.
-ಗರುಡಾಚಾರ್ಲಹಳ್ಳಿ ಜಿ.ಎ.ಅಮರೇಶ್
ಶಿವಮೊಗ್ಗದ ಎಸ್.ಡಿ.ಪಿ.ಐ, ಸಿ.ಎಫ್.ಐ ಹಾಗೂ ಬಿ.ಎಫ್.ಐ ಸಂಘನೆಗಳ ಕಾರ್ಯಕರ್ತರು ಹಿಂದೂಗಳನ್ನು ಗುರಿಯಾಗಿಸಿಕೊಂಡು ಈ ಹತ್ಯೆ ಮಾಡುತ್ತಿದ್ದಾರೆ. ಶಿವಮೊಗ್ಗದ ಯುವಕನ ಕೊಲೆಯನ್ನು ಈ ಸಂಘಟನೆಗಳ ಕಾರ್ಯಕರ್ತರೇ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.
ಈ ಸಂದರ್ಭದಲ್ಲಿ ವಿಶ್ವ ಹಿಂದು ಪರಿಷತ್ತಿನ ಅಧ್ಯಕ್ಷ ನರಸಿಂಹರೆಡ್ಡಿ, ಕಾರ್ಯದರ್ಶಿ ಈಶ್ವರರೆಡ್ಡಿ, ಭಜರಂಗ ದಳದ ತಾಲೂಕು ಸಂಚಾಲಕ ಗಂಗೇಶ್, ಕಾರ್ಯಕರ್ತರಾದ ಗಗನ್, ಗುಡಿಬಂಡೆ ರವಿಕುಮಾರ್, ಬಾಲಾಜಿ, ಚೇತನ್, ಎ.ಪಿ.ಎಂ.ಸಿ ನಿರ್ದೇಶಕ ತಿಮ್ಮಾರೆಡ್ಡಿ, ಬಿಜೆಪಿ ತಾಲೂಕು ಅಧ್ಯಕ್ಷ ಗಂಗಿರೆಡ್ಡಿ, ಮಾಜಿ ಅಧ್ಯಕ್ಷ ನಾಗಭೂಷಣ್ ರೆಡ್ಡಿ, ಕೆ.ಡಿ.ಪಿ ಸದಸ್ಯ ಮಂಜುನಾಥ್, ಎಲ್ಲೋಡು ಗ್ರಾಮ ಪಂಚಾಯತಿ ಉಪಾಧ್ಯಕ್ಷ ಕೃಷ್ಣರೆಡ್ಡಿ, ಸದಸ್ಯರಾದ ಹರೀಶ್ ರೆಡ್ಡಿ,ಮುತ್ಯಾಲಪ್ಪ, ಜಯಶಂಕರ್ ರೆಡ್ಡಿ, ನರೇಶ್, ಮಂಜುನಾಥ್ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.