ಕಲಾಪದ ಕೋಲಾಹಲದ ನಡುವೆ ಜನಪ್ರತಿನಿಧಿಗಳಿಗೆ ಭರ್ಜರಿ ಜಾಕ್ʼಪಾಟ್
ಬೆಂಗಳೂರು: ಹಿಜಾಬ್, ಕೇಸರಿ ಶಾಲು ಹಾಗೂ ಸಚಿವ ಕೆಎಸ್ ಈಶ್ವರಪ್ಪ ಅವರ ರಾಷ್ಟ್ರಧ್ವಜ ಕುರಿತಾದ ವಿವಾದಾತ್ಮಕ ಹೇಳಿಕೆ ಹಾಗೂ ಕಾಂಗ್ರೆಸ್ ಸದಸ್ಯರ ಆಹೋರಾತ್ರಿ ಧರಣಿ ಇತ್ಯಾದಿ ಕಾರಣಗಳಿಂದ ತತ್ತರಿಸಿದ್ದ ವಿಧಾನಮಂಡಲ ಕಲಾಪದಲ್ಲಿ ಜನಪ್ರತಿನಿಧಿಗಳಿಗೆ ಬಂಪರ್ ಫಸಲು ಸಿಕ್ಕಿದೆ.
ಒಟ್ಟಾರೆ ಏರಿಕೆಯಲ್ಲಿ ಶೇ.50ಕ್ಕೂ ಹೆಚ್ಚು ಪ್ರಮಾಣದ ವೇತನ, ಭತ್ಯೆಗಳನ್ನು ಏರಿಕೆ ಮಾಡಲಾಗಿದೆ.
ಅವರ ವೇತನದಲ್ಲಿ ಭಾರೀ ಹೆಚ್ಚಳವಾಗಿದ್ದು, ಮುಖ್ಯಮಂತ್ರಿ, ಸಚಿವರ ವೇತನದಲ್ಲಿ ಶೇ.50ರಷ್ಟು ಹೆಚ್ಚಳವಾಗಿದೆ. ಇನ್ನು ಸಭಾಧ್ಯಕ್ಷರು, ಶಾಸಕರು, ಸಚೇತಕರ ಭತ್ಯೆದಲ್ಲೂ ಏರಿಕೆ ಮಾಡಲಾಗಿದೆ. ಮುಖ್ಯವಾಗಿ ಮುಖ್ಯಮಂತ್ರಿಗಳ ತಿಂಗಳ ವೇತನವು 50,000 ಇದ್ದು, ಅದಕ್ಕೆ ಈಗ 25,000 ಏರಿಕೆ ಮಾಡಲಾಗಿದೆ. ಅಲ್ಲಿಗೆ ಸಿಎಂ ಸಂಬಳ ಮಾಸಿಕ 75,000 ರೂ. ಆಗಿದೆ.
ಇದಾದ ಮೇಲೆ ಸಂಪುಟ ದರ್ಜೆ ಸಚಿವರ ಮಾಸಿಕ ವೇತನ 40,000 ರೂ. ಇದ್ದು, ಅದನ್ನು 60,000 ರೂ.ಗಳಿಗೆ ಹೆಚ್ಚಿಸಲಾಗಿದೆ. ಜತೆಗೆ ಅವರ ಅತಿಥಿ ಭತ್ಯೆಯನ್ನು ವರ್ಷಕ್ಕೆ 3ರಿಂದ ಲಕ್ಷದಿಂದ 4.5 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಸಚಿವರ ಮನೆ ಬಾಡಿಗೆಯನ್ನು 80,000 ರೂ.ಗಳಿಂದ 1.20 ಲಕ್ಷ ರೂ.ಗೆ ಹೆಚ್ಚು ಮಾಡಲಾಗಿದೆ. 20,000 ಇದ್ದ ಮನೆ ನಿರ್ವಹಣಾ ವೆಚ್ಚವನ್ನು 30,000 ರೂ.ಗೆ ಹೆಚ್ಚಿಸಲಾಗಿದೆ. ಹಾಗೆಯೇ; ತಿಂಗಳಿಗೆ ಸಾವಿರ ಲೀಟರ್ ಪೆಟ್ರೋಲ್ ಸೌಲಭ್ಯವನ್ನು ಈಗ ಎರಡು ಸಾವಿರ ಲೀಟರ್ಗೆ ಹೆಚ್ಚಳ ಮಾಡಲಾಗಿದೆ.
ಇದೇ ವೇಳೆ ಸಭಾಧ್ಯಕ್ಷರು ಮತ್ತು ಉಪ ಸಭಾಧ್ಯಕ್ಷರ ವೇತನದಲ್ಲೂ ಏರಿಕೆಯಾಗಿದೆ. ತಿಂಗಳಿಗೆ 50,000 ರೂ. ಇದ್ದ ವೇತನವನ್ನು 75,000 ರೂ.ಗೆ ಹೆಚ್ಚಿಸಲಾಗಿದೆ.
ಅದರ ಜತೆಗೆ ಇವರಿಬ್ಬರ ಸೌಲಭ್ಯಗಳ ಹೆಚ್ಚಳದ ವಿವರಗಳು ಹೀಗಿವೆ;
ಇಂಧನ ಭತ್ಯೆ 1000 ಲೀಟರ್ ಪೆಟ್ರೋಲ್ʼನಿಂದ 2000 ಲೀಟರ್, ಆತಿಥ್ಯ ಭತ್ಯೆ ವರ್ಷಕ್ಕೆ 3 ಲಕ್ಷದಿಂದ 4 ಲಕ್ಷ ರೂ.ಗಳಿಗೆ ಏರಿಕೆ, ಮನೆ ಬಾಡಿಗೆ ಮಾಸಿಕ 80,000 ದಿಂದ 1.60 ಲಕ್ಷ ರೂ.ಗಳಿಗೆ ಏರಿಕೆ, ಪ್ರಯಾಣ ಭತ್ಯೆಯಲ್ಲಿ ಪ್ರತಿ ಕಿ.ಮೀ.ಗೆ 30 ರಿಂದ 40 ರೂ.ಗೆ ಹೆಚ್ಚಳ, ದಿನದ ಭತ್ಯೆ 2,000ದಿಂದ 3,000 ರೂ.ಗಳಿಗೆ ಏರಿಕೆ, ಹಾಗೂ ಹೊರ ರಾಜ್ಯ ಪ್ರವಾಸದ ಭತ್ಯೆಯನ್ನು ದಿನಕ್ಕೆ 2500+5000 ರೂ. ಇದ್ದದ್ದು ಈಗ 3000+7000 ರೂ. ಆಗಿದೆ.
ಅದೇ ರೀತಿ ಪ್ರತಿಪಕ್ಷ ನಾಯಕರ ವೇತನ, ಭತ್ಯೆಗಳಲ್ಲಿಯೂ ಗಣನೀಯ ಪ್ರಮಾಣದ ಏರಿಕೆ ಆಗಿದೆ. ಇವರ ಮಾಸಿಕ ವೇತನ 40,000 ದಿಂದ 60,000 ರೂ.ಗಳಿಗೆ ಹೆಚ್ಚಳವಾಗಿದೆ. ಇಂಧನ ಭತ್ಯೆಯನ್ನು ಸಾವಿರ ಲೀಟರ್ ನಿಂದ ಎರಡು ಸಾವಿರ ಲೀಟರ್ʼಗೆ ಏರಿಕೆ ಮಾಡಲಾಗಿದೆ. ಆತಿಥ್ಯ ಭತ್ಯೆಯನ್ನು ವಾರ್ಷಿಕ 2 ಲಕ್ಷದಿಂದ 2.50 ಲಕ್ಷ ರೂ.ಗೆ ಹೆಚ್ಚಳ, ದಿನದ ಭತ್ಯೆಯನ್ನು ದಿನಕ್ಕೆ 2,000 ದಿಂದ 3,000 ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ. ಹೊರ ರಾಜ್ಯ ಪ್ರವಾಸದ ವೇಳೆ ದಿನ ಭತ್ಯೆಯನ್ನು 5,000 ದಿಂದ 7,000 ರೂ.ಗಳಿಗೆ ಏರಿಕೆ ಮಾಡಲಾಗಿದೆ.
ಶಾಸಕರ ವೇತನದಲ್ಲಿಯೂ ಬಂಪರ್ ಹೆಚ್ಚಳ ಮಾಡಲಾಗಿದ್ದು, ಮಾಸಿಕ ವೇತನವನ್ನು 20,000ದಿಂದ 40,000 ರೂ.ಗಳಿಗೆ ಹೆಚ್ಚಿಸಲಾಗಿದೆ ಸಾವಿರಕ್ಕೆ ಏರಿಕೆ, ಇಂಧನ ಭತ್ಯೆ 1,000 ಲೀಟರ್ ನಿಂದ 2,000 ಲೀಟರ್ಗೆ ಹೆಚ್ಚಳ, ಆತಿಥ್ಯ ಭತ್ಯೆಯನ್ನು ವಾರ್ಷಿಕ 2 ಲಕ್ಷದಿಂದ 2.50 ಲಕ್ಷ ರೂ.ಗಳಿಗೆ ಏರಿಕೆ, ಪ್ರಯಾಣ ಭತ್ಯೆಯನ್ನು ಪ್ರತಿ ಕಿ.ಮೀ.ಗೆ 25 ರಿಂದ 30 ರೂ.ಗಳಿಗೆ ಹೆಚ್ಚಳ, ದಿನದ ಭತ್ಯೆಯನ್ನು ದಿನಕ್ಕೆ 2,000ದಿಂದ 3,000 ರೂ.ಗಳಿಗೆ ಏರಿಕೆ ಮಾಡಲಾಗಿದೆ. ಹೊರ ರಾಜ್ಯ ಪ್ರವಾಸದ ಭತ್ಯೆಯನ್ನು ದಿನಕ್ಕೆ 5,000 ದಿಂದ 7,000 ರೂ.ಗಳಿಗೆ ಹೆಚ್ಚಿಸಲಾಗಿದೆ.