ಬೆಳ್ಳಂಬೆಳಗ್ಗೆ ಆದೇಶ ನೀಡಿದ ವ್ಲಾದಿಮೀರ್ ಪುಟಿನ್; ಅಮೆರಿಕ ಸೇರಿ ಜಾಗತಿಕ ಸಮುದಾಯ ಖಂಡನೆ, ಯುದ್ಧ ನಿಲ್ಲಿಸುವಂತೆ ಆಗ್ರಹ
ಮಾಸ್ಕೋ: ಜಾಗತಿಕ ಸಮುದಾಯ ಆತಂಕ ನಿಜವಾಗಿದ್ದು, ನಿರೀಕ್ಷೆಯಂತೆ ರಷ್ಯಾ ತನ್ನ ನೆರೆಯ ಉಕ್ರೇನ್ ಮೇಲೆ ಯುದ್ಧ ಆರಂಭಸಿದೆ.
ಭಾರತೀಯ ಕಾಲಮಾನದಂತೆ ಇಂದು ಬೆಳಗ್ಗೆ ಹೊತ್ತಿಗೆ ಮಾಸ್ಕೋದಲ್ಲಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ ರಷ್ಯಾ ಅಧ್ಯಕ್ಷ ವ್ಲಾದಿಮೀರ್ ಪುಟಿನ್, ಉಕ್ರೇನ್ ಮೇಲೆ ರಷ್ಯಾ ದಾಳಿಗೆ ಆದೇಶ ನೀಡಿರುವುದಾಗಿ ಘೋಷಣೆ ಮಾಡಿದರು. ಬೆಳಗ್ಗೆ ಸುಮಾರು ಆರು ಗಂಟೆ ಹೊತ್ತಿಗೆ ರಷ್ಯಾ ಪಡೆಗಳು ದಾಳಿ ಶುರು ಮಾಡಿವೆ ಎಂದು ಗೊತ್ತಾಗಿದೆ.
ರಷ್ಯಾ ನಡೆಸಿರುವ ಶೆಲ್ ದಾಳಿಯಲ್ಲಿ ಉಕ್ರೇನ್ʼನ ಕೆಲ ಗ್ರಾಮಗಳಲ್ಲಿ ಮನೆಗಳಿಗೆ ಹಾನಿಯಾಗಿದೆ. ಕೆಲ ಜನರಿಗೆ ಗಾಯಗಳಾಗಿವೆ. ಸಾವು ನೋವಿನ ಬಗ್ಗೆ ಯಾವ ಮಾಹಿತಿಯೂ ಸಿಕ್ಕಿಲ್ಲ. ಇದೇ ವೇಳೆ ರಷ್ಯಾಕ್ಕೆ ತಿರುಗೇಟು ನೀಡಲು ಉಕ್ರೇನ್ ಕೂಡ ಸಿದ್ಧತೆ ಮಾಡಿಕೊಂಡಿದೆ.
ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟು ಶರಣಾಗುವಂತೆ ಉಕ್ರೇನ್ ಸೇನೆಗೆ ಕರೆ ನೀಡಿರುವ ಪುಟಿನ್, ರಷ್ಯಾ ಸಾರ್ವಭೌಮತೆ ರಕ್ಷಿಸಿಕೊಳ್ಳಲು ಹಾಗೂ ಯುರೋಪ್ ಖಂಡದಲ್ಲಿ ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಎಲ್ಲ ರೀತಿ ಕ್ರಮಗಳನ್ನು ಕೈಗೊಳ್ಳಲು ಮುಕ್ತ ಅಧಿಕಾರ ಹೊಂದಿದೆ ಎಂದು ಪುಟಿನ್ ಹೇಳಿದ್ದಾರೆ.
ಈ ವಿಷಯದಲ್ಲಿ ಯಾರೇ ಮೂರನೇ ಶಕ್ತಿ ಮಧ್ಯಪ್ರವೇಶ ಮಾಡಿದರೆ ಅವರಿಗೂ ತಕ್ಕ ಉತ್ತರ ನೀಡಲಾಗುವುದು ಎಂದು ಪುಟಿನ್ ಇದೇ ವೇಳೆ ಅಮೆರಿಕ ಹಾಗೂ ನ್ಯಾಟೋ ಪಡೆಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಎಚ್ಚರಿಕೆ ನೀಡಿದ್ದಾರೆ.
ಇದಕ್ಕೆ ಪ್ರತಿಯಾಗಿ ಹೇಳಿಕೆ ನೀಡಿದರುವ ಅಮೆರಿಕ ಅಧ್ಯಕ್ಷ ಜೋ ಬೈಡನ್, ರಷ್ಯಾ ದಾಳಿಯನ್ನು ಕಠಿಣ ಶಬ್ದಗಳಲ್ಲಿ ಖಂಡಿಸಿದ್ದು, ಇದು ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಅಪ್ರಚೋದಿತ ದಾಳಿ ಎಂದು ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ, ಈ ದಾಳಿಗೆ ರಷ್ಯ ತಕ್ಕ ಬೆಲೆ ತೆರಲಿದೆ ಎಂದು ಬೈಡನ್ ಎಚ್ಚರಿಕೆ ನೀಡಿದ್ದಾರೆ. ಜತೆಯಲ್ಲಿ ಜರ್ಮನಿ, ಬ್ರಿಟನ್ ಸೇರಿದಂತೆ ಯುರೋಪ್,ನ ಬಹುತೇಕ ದೇಶಗಳು ದಾಳಿಯನ್ನು ಖಂಡಿಸಿವೆ.
ಇದರ ಬೆನ್ನಲ್ಲೇ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆ ಸೇರಿದ್ದು, ರಷ್ಯಾ ದಾಳಿಯನ್ನು ಖಂಡಿಸಿದೆ. ಆದರೆ, ಜಾಗತಿಕ ಸಮುದಾಯದ ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಹೇಳಿರುವ ಪುಟಿನ್, ರಷ್ಯದ ಹಿತವನ್ನು ಬಲಿಗೊಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.