ಪೋರ್ಚುಗೀಸರಿಗೆ ಸಿಂಹಸ್ವಪ್ನವಾಗಿದ್ದ ಶರಾವತಿ ಕಣಿವೆಯ ಒಡತಿ
ಬೆಂಗಳೂರು: ಭರತ ಖಂಡದ ಇತಿಹಾಸದಲ್ಲಿ ಅತ್ಯಂತ ಸುಧೀರ್ಘ ಕಾಲ ರಾಜ್ಯವಾಳಿದ ಜೈನ ವಂಶದ ರಾಣಿ, ಶರಾವತಿ ಕಣಿವೆಯ ಒಡತಿ, ಕನ್ನಡ ನಾಡಿನ ಅಸ್ಮಿತೆ ಮತ್ತು ಪೋರ್ಚುಗೀಸರಿಗೆ ಸಿಂಹಸ್ವಪ್ನವಾಗಿದ್ದ ಚೆನ್ನ ಭೈರಾದೇವಿಯ ಕೋಟೆಯನ್ನು ಪುನರುಜ್ಜೀವಗೊಳಿಸುವ ಯೋಜನೆಯನ್ನು ರಾಜ್ಯ ಬಜೆಟ್ ನಲ್ಲಿ ಪ್ರಕಟಿಸಬೇಕೆಂಬ ಮನವಿಯನ್ನು ಪರೀಶಿಲಿಸುವ ಭರವಸೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ್ದಾರೆ.
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕಾರ್ಗಲ್ -ಭಟ್ಕಳ್ ರಸ್ತೆಯಲ್ಲಿ ಬಿಳಿಗಾರು ಸಮೀಪ ದಟ್ಟಡವಿಯಲ್ಲಿ ಪಾಳು ಬಿದ್ದಿರುವ ಕೋಟೆಯನ್ನು ಪುನರುಜ್ಜೀವಗೊಳಿಸಿ, ಅದನ್ನು ಇಂದಿನ ಪೀಳಿಗೆಗೆ ಸ್ಫೂರ್ತಿಯ ತಾಣವನ್ನಾಗಿ ಅಭಿವೃದ್ಧಿಪಡಿಸಬೇಕೆಂದು ಪತ್ರಕರ್ತರ ನಿಯೋಗವೊಂದು ಮುಖ್ಯಮಂತ್ರಿಯವರಿಗೆ ಇಂದು ವಿಧಾನಸೌಧದಲ್ಲಿ ಮನವಿ ಸಲ್ಲಿಸಿತು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಹಿರಿಯ ಪತ್ರಕರ್ತ ಸಿ ರುದ್ರಪ್ಪ , ನ್ಯೂಸ್ 18 ಪೊಲಿಟಿಕಲ್ ಬ್ಯುರೋ ಮುಖ್ಯಸ್ಥ ಚಿದಾನಂದ ಪಟೇಲ್, ಪಬ್ಲಿಕ್ ಟಿವಿ ಪೊಲಿಟಿಕಲ್ ಬ್ಯುರೋ ಮುಖ್ಯಸ್ಥ ಬದ್ರುದ್ದೀನ್ ಮತ್ತಿತರು ಈ ನಿಯೋಗದಲ್ಲಿದ್ದರು.
ರೈನಾ ದ ಪಿಮೆಂಟಾ ಬಿರುದು
ಈ ವೀರವನಿತೆ ಕ್ರಿಸ್ತಶಕ 1552 ರಿಂದ 1606ರ ವರೆಗೆ ರಾಜ್ಯವನ್ನು ಆಳಿದ್ದಳು. ದಕ್ಷಿಣ ಕೊಂಕಣಕ್ಕೆ ತಮ್ಮ ಸಾಮ್ರಾಜ್ಯವನ್ನು ಮತ್ತು ಮತಾಂತರ ಪ್ರಕ್ರಿಯೆಯನ್ನು ವಿಸ್ತರಿಸಲು ದಂಡೆತ್ತಿ ಬಂದಿದ್ದ ಪೋರ್ಚುಗೀಸರ ಸೈನ್ಯವನ್ನು ಹಿಮ್ಮೆಟ್ಟಿಸಿದ್ದರು.
ರಾಜಕೀಯವಾಗಿ ಪೋರ್ಚುಗೀಸರನ್ನು ವಿರೋಧಿಸಿದರೂ ಬಹು ಚಾಣಾಕ್ಷತೆಯಿಂದ ಅವರೊಂದಿಗೆ ವ್ಯಾವಹಾರಿಕ ಮೈತ್ರಿಯನ್ನು ಬೆಸೆದುಕೊಂಡು ಅಕ್ಕಿ, ಮೆಣಸು, ಏಲಕ್ಕಿ, ದಾಲ್ಚಿನ್ನಿ, ಬೆಲ್ಲ, ಬೆತ್ತ, ಶ್ರೀಗಂಧ, ಶುಂಠಿ, ಲವಂಗ, ದಂತ ಮುಂತಾದ ಪದಾರ್ಥಗಳನ್ನು ಮಾರಿ ಅವರಿಂದಲೇ ರೈನಾ ದ ಪಿಮೆಂಟಾ (Rainha da Pimenta) ಎಂಬ ಬಿರುದನ್ನು ಪಡೆದು ಮುತ್ಸದ್ದಿ ಎನಿಸಿಕೊಂಡವರು.
ಕಲ್ಲಿಕೋಟೆ ಜಾಮೋರಿನ್ನರಿಂದ ಹಿಡಿದು ಗುಜರಾತಿನ ಸುಲ್ತಾನನವರೆಗೆ ಇಡೀ ಪಶ್ಚಿಮ ಕರಾವಳಿಯ ಅರಸರು ಒಗ್ಗೂಡಿ 1570ರಲ್ಲಿ ಪೋರ್ಚುಗೀಸರ ವಿರುದ್ಧ ನಡೆಸಿದ ಸಂಯುಕ್ತ ಹೋರಾಟದ ಹಿಂದಿನ ಸ್ಫೂರ್ತಿಯಾಗಿದ್ದಾರೆ ಚೆನ್ನಭೈರಾದೇವಿ.