ಜನವಸತಿಗಳ ಮೇಲೆ ಪುಟಿನ್ ಪಡೆ ಅಟ್ಯಾಕ್; ಉಕ್ರೇನ್ʼಗೆ ಜಾಗತಿಕ ಬೆಂಬಲ
ಕೀವ್ : ರಷ್ಯಾ ಆಕ್ರಮಣದಿಂದ ಜರ್ಝರಿತವಾಗಿದ್ದ ಉಕ್ರೇನ್ ಅಂತಾರಾಷ್ಟ್ರೀಯ ಸಮುದಾಯದ ಬೆಂಬಲದಿಂದಾಗಿ ನಿಧಾನವಾಗಿ ಚೇತರಿಸಿಕೊಳ್ಳಲಾರಂಭಿಸಿದೆ.
ಹಲವಾರು ರಾಷ್ಟ್ರಗಳು ಸೈನಿಕರು ಸೇರಿದಂತೆ ಶಸ್ತ್ರಾಸ್ತ್ರಗಳನ್ನು ರವಾನೆ ಮಾಡುತ್ತಿದ್ದು, ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಳ್ಳುತ್ತಿದೆ. ಇದರಿಂದ ರಷ್ಯಾ ಮತ್ತಷ್ಟು ರೊಚ್ಚುಗೆದಿದ್ದು, ಉಕ್ರೇನ್‍ನ ತೈಲ ಸಂಗ್ರಹಗಾರಗಳು ಸೇರಿದಂತೆ ಸೂಕ್ಷ್ಮ ಪ್ರದೇಶಗಳ ಮೇಲೆ ದಾಳಿ ನಡೆಸಿದೆ.
ರಷ್ಯಾ ಜನವಸತಿ ಪ್ರದೇಶಗಳ ಮೇಲೆ ದಾಳಿ ಮಾಡುವುದಿಲ್ಲ ಎಂದು ಸ್ಪಷ್ಟ ಭರವಸೆ ನೀಡಿತ್ತು. ಆದರೆ ಅದನ್ನೂ ಮೀರಿ ಅಪಾರ್ಟ್‍ಮೆಂಟ್ ಮೇಲೆ ಕ್ಷಿಪಣಿ ದಾಳಿ ನಡೆಸಿದೆ.
ಜನ ವಸತಿ ಪ್ರದೇಶಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿ ಸುಮಾರು 5 ಲಕ್ಷಕ್ಕೂ ಹೆಚ್ಚು ಮಂದಿ ನೆರೆಯ ರಾಷ್ಟ್ರಗಳಿಗೆ ಪಲಾಯನಗೈದಿದ್ದಾರೆ. ರೊಮಿನಿಯ, ಪೋಲಾಂಡ್, ಹಂಗೇರಿ ಸೇರಿದಂತೆ ಹಲವು ರಾಷ್ಟ್ರಗಳು ಯುದ್ಧಪೀಡಿತ ಪ್ರದೇಶಗಳ ಜನರಿಗೆ ಆಶ್ರಯ ಕಲ್ಪಿಸುತ್ತಿವೆ.
ಮತ್ತೊಂದೆಡೆ ತೈಲ ಪೂರೈಕೆಯ ಪೈಪ್‍ಲೈನ್ ಮಾರ್ಗಗಳನ್ನು ಕೂಡ ಧ್ವಂಸಗೊಳಿಸಲಾಗಿದೆ. ಇದರಿಂದ ಸುತ್ತಮುತ್ತಲಿನ ಜನ ಸಂಕಷ್ಟಕ್ಕೊಳಗಾಗಿದ್ದು, ಆತಂಕ ಎದುರಿಸುತ್ತಿದ್ದಾರೆ.
ತೈಲ ಸಂಗ್ರಹಗಾರ ಹೊತ್ತಿ ಉರಿಯುತ್ತಿದ್ದು, ಹೊಗೆ ಜನರ ಜೀವ ಹಿಂಡಲಾರಂಭಿಸಿದೆ. ಉಸಿರಾಟ ಕಷ್ಟವಾಗಿದ್ದು, ಬೇರೆಡೆ ಸ್ಥಳಾಂತರಗೊಳ್ಳುವ ಅನಿವಾರ್ಯತೆ ಎದುರಾಗಿದೆ. ಇದರಿಂದ ಪರಿಸರ ವಿಕೋಪ ಪರಿಸ್ಥಿತಿ ನಿರ್ಮಾಣವಾಗಿದೆ.
ಇತ್ತ ತಮ್ಮ ರಕ್ಷಣೆಗೆ ಬಂದಿದ್ದ ಅಮೆರಿಕ ಸೇನಾ ವಿಮಾನಗಳನ್ನು ವಾಪಸ್ ಕಳುಹಿಸಿದ ಜೆಲೆನ್ಸ್ಕಿ ಯುದ್ಧ ಇಲ್ಲಿ ನಡೆಯುತ್ತಿದೆ. ಇಲ್ಲಿ ನನ್ನ ಅಗತ್ಯವಿದೆ ಎಂದು ಹೇಳಿದ್ದರು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.