ರಾಷ್ಟ್ರೀಯ ವಿಜ್ಞಾನ ದಿನದಂದೇ ಅಂತಾರಾಷ್ಟ್ರೀಯ ವಿಜ್ಞಾನ ಕೇಂದ್ರಕ್ಕೆ ಶಂಕುಸ್ಥಾಪನೆ
ಹೊಸಕೋಟೆ ಕ್ರಾಸ್ (ಗೌರಿಬಿದನೂರು): ರಾಷ್ಟ್ರೀಯ ವಿಜ್ಞಾನ ದಿನ’ವಾದ ಸೋಮವಾರದಂದು ಇಲ್ಲಿನಡಾ.ಎಚ್. ನರಸಿಂಹಯ್ಯ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ನೂತನವಾಗಿ ನಿರ್ಮಿಸಿರುವ ಸಭಾಂಗಣ, ಕಿರು ತಾರಾಲಯ ಮತ್ತು ವಿಜ್ಞಾನ ಗ್ಯಾಲರಿಗಳನ್ನು ಉನ್ನತ ಶಿಕ್ಷಣ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಲೋಕಾರ್ಪಣೆ ಮಾಡಿದರು.,
ಜತೆಗೆ, 200 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಅಂತಾರಾಷ್ಟ್ರೀಯ ವಿಜ್ಞಾನ ಕೇಂದ್ರಕ್ಕೆ ಅವರು ಶಂಕುಸ್ಥಾಪನೆ ನೆರವೇರಿಸಿದರು. ತಾಲ್ಲೂಕಿನ ಹೊಸೂರು ಗ್ರಾಮವು ಖ್ಯಾತ ವಿಚಾರವಾದಿಗಳಾಗಿದ್ದ ದಿ.ಎಚ್. ನರಸಿಂಹಯ್ಯನವರ ಹುಟ್ಟೂರಾಗಿರುವುದನ್ನು ಇಲ್ಲಿ ಸ್ಮರಿಸಬಹುದು.
ಇದರ ಅಂಗವಾಗಿ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, `ನರಸಿಂಹಯ್ಯನವರ ಈ ಊರು ತನ್ನ ವೈಜ್ಞಾನಿಕ ಕೆಲಸಗಳಿಂದ ಇಡೀ ಜಗತ್ತಿನ ಗಮನ ಸೆಳೆಯುವಂತಾಗಬೇಕು. ಈ ಮೂಲಕ ಕೇಂದ್ರವು ಸ್ಥಳೀಯವಾಗಿ ಸುಸ್ಥಿರ ಅಭಿವೃದ್ಧಿಗೆ ಪ್ರೇರಣೆ ಮತ್ತು ಮಾರ್ಗದರ್ಶನ ನೀಡಬೇಕು,’ ಎಂದರು.
100 ಎಕರೆ ಪ್ರದೇಶದಲ್ಲಿ ಇಲ್ಲಿ ಅಂತಾರಾಷ್ಟ್ರೀಯ ವಿಜ್ಞಾನ ಕೇಂದ್ರ ತಲೆ ಎತ್ತಲಿದೆ. ಇದರೊಂದಿಗೆ ಇರುವ ಕನಸುಗಳು ನನಸಾಗಬೇಕೆಂದರೆ, ಮಕ್ಕಳಿಗೆ ಚಿಕ್ಕಂದಿನಿಂದಲೇ ವೈಜ್ಞಾನಿಕ ಮನೋಭಾವವನ್ನು ಬೆಳೆಸಿ, ಇಂತಹ ಸಂಸ್ಕೃತಿ ಗ್ರಾಮಾಂತರ ಪ್ರದೇಶಗಳಲ್ಲೂ ಹಬ್ಬುವಂತೆ ಮಾಡಬೇಕು. ಇದಕ್ಕೆ ಸರಕಾರವು ಅಗತ್ಯ ನೆರವನ್ನೆಲ್ಲ ನೀಡಲಿದೆ ಎಂದು ಅವರು ಭರವಸೆ ನೀಡಿದರು.
ಆರ್ಥಿಕ ಅಭಿವೃದ್ಧಿ, ಸಾಮಾಜಿಕ ಸಬಲೀಕರಣಗಳೆಲ್ಲ ಇದ್ದಕ್ಕಿದ್ದಂತೆ ಸಾಧ್ಯವಾಗುವುದಿಲ್ಲ. ಇದಕ್ಕೆಲ್ಲ ಬುನಾದಿಯೆಂದರೆ, ಗುಣಮಟ್ಟದ ಶಿಕ್ಷಣವೇ ಆಗಿದೆ. ಆದ್ದರಿಂದ ನೂತನ ಶಿಕ್ಷಣ ನೀತಿಯಲ್ಲಿ ವಿದ್ಯಾರ್ಥಿಗಳಿಗೆ ಆರಂಭದಿಂದಲೇ ಅತ್ಯುತ್ತಮ ಭಾಷಿಕ ಕೌಶಲ್ಯ ಮತ್ತು ಗಣಿತಪ್ರೇಮವನ್ನು ಬೆಳೆಸಲು ಒತ್ತು ಕೊಡಲಾಗಿದೆ ಎಂದು ಸಚಿವರು ವಿವರಿಸಿದರು.
ಹೊಸೂರಿನಲ್ಲಿ ಹುಟ್ಟಿದ ನರಸಿಂಹಯ್ಯನವರು ಅಮೆರಿಕಕ್ಕೆ ಹೋಗಿ ಎರಡು ಪಿಎಚ್.ಡಿ.ಗಳನ್ನು ಮಾಡಿಕೊಂಡು ವಾಪಸ್ ತಾಯ್ನಾಡಿಗೆ ಬಂದು, ಇಲ್ಲಿ ಸೇವೆ ಸಲ್ಲಿಸಿದರು. ಎನ್ಇಪಿಯಲ್ಲಿ ಕೂಡ ಮಕ್ಕಳ ಮೂಲಕ ದೇಶದ ಉಜ್ವಲ ಭವಿಷ್ಯವನ್ನು ನಿರ್ಮಿಸುವುದೇ ಮುಖ್ಯ ಗುರಿಯಾಗಿದೆ. ಇದರ ಫಲಗಳು ಇನ್ನು ಹತ್ತು ವರ್ಷಗಳಲ್ಲಿ ಸಮಾಜಕ್ಕೆ ಸಿಗಲಿದೆ ಎಂದು ಅಶ್ವತ್ಥನಾರಾಯಣ ಆಶಾಭಾವ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ.ನಾಗರಾಜ್, ಶಾಸಕ ಶಿವಶಂಕರ ರೆಡ್ಡಿ, ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್, ಎಚ್ಚೆನ್ ಅಂತಾರಾಷ್ಟ್ರೀಯ ವಿಜ್ಞಾನ ಕೇಂದ್ರದ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷ ಪ್ರೊ.ಕೆ.ಪಿ.ಜೆ.ರೆಡ್ಡಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ಇದೇ ಗ್ರಾಮದವರಾದ ನಿವೃತ್ತ ನ್ಯಾಯಮೂರ್ತಿ ಎನ್.ಕುಮಾರ್, ಜಿಲ್ಲಾಧಿಕಾರಿ ಆರ್.ಲತಾ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ತಾಂತ್ರಿಕ ನಿರ್ದೇಶಕ ಎ.ಬಿ.ಬಸವರಾಜು ಉಪಸ್ಥಿತರಿದ್ದರು.