ಅಗಲಿದ ಪವರ್ ಸ್ಟಾರ್ʼಗೆ ರಾಜ್ಯ ಸರಕಾರದ ಗೌರವ
ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸರಕಾರಿ ಶಾಲೆಗಳ ಮಕ್ಕಳೇ ಉಪಗ್ರಹ ಅಭಿವೃದ್ಧಿ ಮಾಡಲಿದ್ದು, ಇದಕ್ಕೆ ಅಪ್ಪು ಗೌರವಾರ್ಥ ಪುನೀತ್ ರಾಜಕುಮಾರ್ ಹೆಸರನ್ನೇ ಇಡಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಮಲ್ಲೇಶ್ವರಂನ 18ನೇ ಅಡ್ಡರಸ್ತೆಯಲ್ಲಿರುವ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಈ ಘೋಷಣೆ ಮಾಡಿದರು.
ಸ್ವಾತಂತ್ರ್ಯದ 75ನೇ ವರ್ಷಾಚರಣೆ ಅಂಗವಾಗಿ ಐಟಿಸಿಎ 75 ಉಪಗ್ರಹಗಳನ್ನು ಉಡಾಯಿಸುತ್ತಿದೆ. ಈ ಪೈಕಿ ಒಂದು ಉಪಗ್ರಹವನ್ನು ರಾಜ್ಯ ಸರಕಾರದ ಸಹಕಾರದಲ್ಲಿ ಸರಕಾರಿ ಶಾಲೆಗಳ ಮಕ್ಕಳು ನಿರ್ಮಿಸುತ್ತಿದ್ದು, ಇದಕ್ಕೆ 1.90 ಕೋಟಿ ರೂ. ವಿನಿಯೋಗಿಸಲಾಗುತ್ತಿದೆ ಎಂದು ತಿಳಿಸಿದರು
ಉದ್ದೇಶಿತ ಉಪಗ್ರಹವು 1.50 ಕೆ.ಜಿ. ತೂಕವಿರಲಿದೆ. ಯೋಜನೆಯ ಗ್ರೌಂಡ್ ಸ್ಟೇಷನ್ ಕೂಡಾ ಇದೇ ಕಾಲೇಜಿನ ಆವರಣದಲ್ಲಿ ಇರಲಿದೆ. ಎಲ್ಲ ನಿರ್ವಹಣೆಯೂ ಇಲ್ಲಿಂದಲೇ ಆಗಲಿದೆ.
ಈ ಯೋಜನೆಗೆ 20 ಸರಕಾರಿ ಶಾಲೆಗಳ 100 ಪ್ರತಿಭಾವಂತ ಮಕ್ಕಳನ್ನು ನಾನಾ ಸ್ಪರ್ಧೆ ಮತ್ತು ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
ಈ ತರಬೇತಿಯಲ್ಲಿ ನ್ಯಾನೋ ಉಪಗ್ರಹಗಳ ಪರಿಚಯ, ಬೆಂಗಳೂರಿನಲ್ಲಿರುವ ವೈಜ್ಞಾನಿಕ ಸಂಸ್ಥೆಗಳಿಗೆ ಭೇಟಿ, ಉಡಾವಣೆ ಸಮಯದಲ್ಲಿ ಶ್ರೀಹರಿಕೋಟಾಗೆ ಭೇಟಿ, ವಿಜ್ಞಾನಿಗಳೊಂದಿಗೆ ಸಂವಾದ, ಗ್ರೌಂಡ್ ಸ್ಟೇಷನ್ ನಲ್ಲಿ ತರಬೇತಿ ಮತ್ತಿತರ ಚಟುವಟಿಕೆಗಳು ಇರುತ್ತವೆ ಎಂದು ಅಶ್ವತ್ಥನಾರಾಯಣ ತಿಳಿಸಿದರು.