ಉಕ್ರೇನ್ ನಗರಗಳನ್ನು ಸುತ್ತುವರಿದ ಪುಟಿನ್ ಪುಂಡ ಸೇನೆ
ಕಿವ್: ಸಂಧಾನ ಮಾತುಕತೆ ಮುಂದುವರಿದಿದ್ದರೂ ಉಕ್ರೇನ್ ನ ರಾಜಧಾನಿ ಕಿವ್ ಸೇರಿದಂತೆ ಪ್ರಮುಖ ನಗರಗಳನ್ನು ರಷ್ಯಾ ಪಡೆಗಳು ಸುತ್ತುವರೆದಿವೆ. ಹಾಗಾಗಿ ಆತಂಕದ ವಾತಾವರಣ ಇದ್ದೇ ಇದೆ. ಯಾವ ಕ್ಷಣದಲ್ಲಾದರೂ ಯುದ್ಧ ನಿರ್ಣಾಯಕ ಹಂತ ತಲುಪಬಹುದಾಗಿದೆ.
ಉಕ್ರೇನ್ ಜನವಸತಿ ಪ್ರದೇಶಗಳ ಮೇಲೆ ಶೆಲ್ ದಾಳಿ ಮುಂದುವರೆದಿದೆ. ಒಂದೇ ಕಡೆ 70 ಉಕ್ರೇನ್ ಸೈನಿಕರು ಹತರಾಗಿದ್ದಾರೆ.
ರಷ್ಯಾ ಪಡೆಗಳು ಉಕ್ರೇನ್ ರಾಜಧಾನಿ ಕಿವ್, ಎರಡನೇ ಮಹಾನಗರ ಖರ್ಕಿವ್, ಲುಹನ್ಸಕ್, ಡೊನೆಟ್ಸಕ್, ಮರಿಯುಪೋಲ್, ಕ್ರಿಮೆನಿಯಾ ಸೇರಿದಂತೆ ಹಲವು ಭಾಗಗಳಲ್ಲಿ ಸುಮಾರು 200 ಕಿಲೋ ಮೀಟರ್ ವರೆಗೆ ರಷ್ಯಾ ಸೇನೆ ಸುತ್ತುವರೆದಿದೆ.
ಉಕ್ರೇನ್‍ನ ಪೂರ್ವ, ದಕ್ಷಿಣ, ಪಶ್ಚಿಮ ಭಾಗದಲ್ಲಿ ಸೇನೇ ಜಮಾವಣೆಯಾಗಿದೆ. ಸಮುದ್ರ ( ಬ್ಲಾಕ್ ಸೀ ) ಮಾರ್ಗವೂ ರಷ್ಯಾದ ಹಿಡಿತದಲ್ಲಿದೆ. ವಾಯು ಸೇನೆಯ ಯುದ್ಧವಿಮಾನಗಳು ನಿರಂತರವಾಗಿ ಸಂಚರಿಸುತ್ತಿದ್ದು, ಸೆಲ್ ದಾಳಿ ಮುಂದುವರೆಸಿವೆ. ಕಿವ್ ನಿಂದ ಕೇವಲ ಆರು ಕಿಲೋ ಮೀಟರ್ ಅಂತರದಲ್ಲಿ ಸಾಲು ಗಟ್ಟಿ ನಿಂತಿರುವ ಉಪಗ್ರಹ ಆಧಾರಿತ ಚಿತ್ರಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿದೆ.
ಮೂರು ಪಥದಲ್ಲಿ ವಾಹನಗಳು ದಟ್ಟವಾಗಿ ಜಮಾವಣೆಗೊಂಡಿವೆ. ರಷ್ಯಾ ಅಧ್ಯಕ್ಷರು ಯಾವ ಕ್ಷಣದಲ್ಲಿ ಸೂಚನೆ ನೀಡಿದರು ಉಕ್ರೇನ್ ರಾಜಧಾನಿಗೆ ನುಗ್ಗಿ ಅರಮನೆಯನ್ನು ತಮ್ಮ ವಶಕ್ಕೆ ಪಡೆದು ಅಲ್ಲಿನ ಸರ್ಕಾರವನ್ನು ಅಮಾನತಿನಲ್ಲಿಡಲು ಸೈನಿಕರು ಕಾಯುತ್ತಿದ್ದಾರೆ.
ಯುದ್ಧ ಆರಂಭವಾಗಿ ಆರು ದಿನ ಕಳೆದಿದ್ದು, ನಿನ್ನೆಯಿಂದ ಸಂಧಾನ ಮಾತುಕತೆಗಳು ಆರಂಭವಾಗಿದ್ದು,ಎರಡು ಸುತ್ತಿನ ಮಾತುಕತೆಗಳು ವಿಫಲವಾಗಿವೆ. ಉಕ್ರೇನ್ ಅಧ್ಯಕ್ಷರು ಅಂತರರಾಷ್ಟ್ರೀಯ ಬೆಂಬಲಯಾಚನೆಯಲ್ಲಿ ತೊಡಗಿದ್ದಾರೆ. ಪೋಲೆಂಡ್, ಜೆಕ್, ಬ್ರಿಟನ್, ಗ್ರಿಸ್ ಸೇರಿದಂತೆ ಹಲವು ರಾಷ್ಟ್ರಗಳು ಉಕ್ರೇನ್‍ಗೆ ನೆರವು ನೀಡಿವೆ.
ಆದರೆ ಜಗತ್ತಿನಲ್ಲಿ ಬಲಿಷ್ಠ ಸೇನೆ ಹೊಂದಿರುವ ರಷ್ಯಾ ಮುಂದೆ ಈ ಬಲ ಸಾಲದಾಗಿದೆ. ಅಮೆರಿಕಾ, ಪ್ರಾನ್ಸ್ ರಾಷ್ಟ್ರಗಳು ಉಕ್ರೇನ್ ಗೆ ನೈತಿಕ ಬೆಂಬಲ ವ್ಯಕ್ತ ಪಡಿಸಿವೆಯೇ ಹೊರತು ಭೌತಿಕವಾಗಿ ಬೆಂಬಲಕ್ಕೆ ನಿಂತಿಲ್ಲ. ಉಕ್ರೇನ್ ಈವರೆಗೂ ಸ್ವಂತ ಬದಲ ಮೇಲೆ ಪ್ರತಿರೋಧ ವ್ಯಕ್ತ ಪಡಿಸುತ್ತಲೆ ಬಂದಿದೆ. ಆದರೆ ಅದು ಎಷ್ಟು ದಿನಗಳವರೆಗೆ ಮುಂದುವರೆಯಲಿದೆಯೋ ನೋಡಬೇಕಿದೆ.
ಯಾವುದೇ ಕಾರಣಕ್ಕೂ ನಾವು ಮಣಿಯುವುದಿಲ್ಲ. ರಷ್ಯಾ ನಮ್ಮ ದೇಶವನ್ನು ತೊರೆಯಬೇಕು. ಶಸ್ತ್ರ ತ್ಯಜಿಸುವ ಪ್ರಮೇಯವೇ ಇಲ್ಲ. ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಉಕ್ರೇನ್ ಅಧ್ಯಕ್ಷ ವೋಲೋಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.