ಕೇಂದ್ರದ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಟೀಕಾಪ್ರಹಾರ; ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆ ಬಗ್ಗೆ ಅತೃಪ್ತಿ
ಹೆಚ್‌ಡಿಕೆ ಹೇಳಿರುವುದೇನು?
- ನೀಟ್ ಬಂದ ಟ್ಯೂಷನ್ ದಂಧೆ ಹೆಚ್ಚಾಗಿದೆ
- ಟ್ಯೂಷನ್ʼಗೆ ಹೋಗುವುದು ಬಡ-ಮಧ್ಯಮವರ್ಗದ ವಿದ್ಯಾರ್ಥಿಗಳಿಗೆ ಕಷ್ಟ
- ಸ್ವದೇಶ-ವಿದೇಶ ವೈದ್ಯಶಿಕ್ಷಣ ವೆಚ್ಚದ ಬಗ್ಗೆ ಪ್ರಹ್ಲಾದ ಜೋಶಿ ಹೇಳಿಕೆ ಬಗ್ಗೆ ಟೀಕೆ
- ಟ್ಯೂಷನ್ ಅಂಗಡಿಗಳ ಹಿಂದೆ ಕೇಂದ್ರವೇ ಅವಿತಿದೆಯಾ?
- ನವೀನ್ ದುರಂತ ಸಾವು ಭಾರತದ ಆತ್ಮಸಾಕ್ಷಿಗೆ ಪ್ರಶ್ನೆಯಾಗಿದೆ
ಬೆಂಗಳೂರು: ನೀಟ್ ವ್ಯವಸ್ಥೆಯಿಂದ ಬಡ ಮತ್ತು ಮಧ್ಯಮ ವರ್ಗದ, ಗ್ರಾಮೀಣ ವಿದ್ಯಾರ್ಥಿಗಳ ವೈದ್ಯಶಿಕ್ಷಣದ ಕನಸು ನುಚ್ಚುನೂರು ಆಗುತ್ತಿದೆ ಎಂದು ಕಿಡಿಕಾರಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು; ವೈದ್ಯಶಿಕ್ಷಣ ವೆಚ್ಚದ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ನೀಡಿರುವ ಹೇಳಿಕೆ ಬಗ್ಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದ್ದಾರೆ.
ನೀಟ್ ಬಂದ ಮೇಲೆ ಟ್ಯೂಷನ್ ದಂಧೆ ಮೇರೆ ಮೀರಿದ್ದು, ಅದಕ್ಕೆ ಕೇಂದ್ರ ಸರಕಾರವೇ ಪ್ರೋತ್ಸಾಹ ನೀಡುತ್ತಿರುವಂತಿದೆ. ಕೇಂದ್ರ ಸಚಿವರ ಹೇಳಿಕೆ ಅನೇಕ ಗುಮಾನಿಗಳಿಗೆ ಕಾರಣವಾಗಿದೆ ಎಂದು ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ಮಾಜಿ ಮುಖ್ಯಮಂತ್ರಿಗಳು ಸರಣಿ ಟ್ವೀಟ್ ಮಾಡಿದ್ದು, ಅದರ ಪೂರ್ಣಪಾಠ ಇಲ್ಲಿದೆ.
ವೈದ್ಯಶಿಕ್ಷಣದ ಕನಸು ಕಾಣುವ ಬಡ, ಮಧ್ಯಮ ವರ್ಗದ ಬದುಕನ್ನು ಛಿದ್ರಗೊಳಿಸುತ್ತಿರುವ ನೀಟ್ (ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ- NEET), ವಿದ್ಯಾರ್ಥಿಗಳು & ಪೋಷಕರ ಪಾಲಿಗೆ ಮರಣಶಾಸನವಾಗಿದೆ. ಉನ್ನತ ಶಿಕ್ಷಣವನ್ನು ಉಳ್ಳವರಿಗೆ ಮೀಸಲಿಟ್ಟು ಉಳಿದವರಿಗೆ ವ್ಯವಸ್ಥಿತವಾಗಿ ನಿರಾಕರಿಸಲಾಗುತ್ತಿದೆ.
ಉಕ್ರೇನ್ʼಗೆ ಮೆಡಿಕಲ್ ಓದಲು ಹೋಗಿ ರಷ್ಯಾ ದಾಳಿಗೆ ತುತ್ತಾದ ವಿದ್ಯಾರ್ಥಿ ನವೀನ್ ದುರಂತ ಸಾವು ʼ ನೀಟ್ ವ್ಯವಸ್ಥೆಯ ನಿರ್ಲಜ್ಜ ಮುಖʼವನ್ನು ಇಡೀ ದೇಶಕ್ಕೆ ದರ್ಶನ ಮಾಡಿಸಿದೆ. ʼಅರ್ಹತೆʼ ನೆಪದಲ್ಲಿ ಪ್ರತಿಭಾವಂತ ಆರ್ಥಿಕ ದುರ್ಬಲ & ಗ್ರಾಮೀಣ ವಿದ್ಯಾರ್ಥಿಗಳಿಗೆ ಮಾಡಲಾಗುತ್ತಿರುವ ʼಅನ್ಯಾಯʼಕ್ಕೆ ಅಂತ್ಯ ಹಾಡಬೇಕಿದೆ.
10ನೇ ತರಗತಿಯಲ್ಲಿ 96%, 2ನೇ ಪಿಯುಸಿಯಲ್ಲಿ 97% ಅಂಕ ಗಳಿಸಿದ್ದರೂ ನವೀನ್ʼಗೆ ʼಜಗತ್ತಿನ ಶಿಕ್ಷಣ ಕಾಶಿʼ ಭಾರತದಲ್ಲಿ ವೈದ್ಯಸೀಟು ಸಿಗಲ್ಲ. ಗ್ರಾಮೀಣ ವಿದ್ಯಾರ್ಥಿಯೊಬ್ಬ ಇಷ್ಟು ಉತ್ತಮ ಅಂಕ ಗಳಿಸುವುದು ಸುಲಭವಲ್ಲ. ಆದರೂ, ಆತನಿಗೆ ನಮ್ಮ ದೇಶದಲ್ಲಿ ವೈದ್ಯಶಿಕ್ಷಣವನ್ನು ನಿರಾಕರಿಸಲಾಗಿದೆ.
ಭಾರತದಲ್ಲಿ ನಿರಾಕರಿಸಲ್ಪಟ್ಟ ಶಿಕ್ಷಣವನ್ನು ಹುಡುಕಿಕೊಂಡು ಉಕ್ರೇನ್ʼಗೆ ಹೋಗಿ, ಅಲ್ಲಿ ಕಲಿತು ಇನ್ನೊಬ್ಬರ ಜೀವ ಉಳಿಸಲು ನೂರುಕಾಲ ಬಾಳಿ ಬದುಕಬೇಕಿದ್ದ ನವೀನ್ ಇಂದು ಜೀವ ಕಳೆದುಕೊಂಡು ʼವಿಶ್ವಗುರುʼ ಆಗಬೇಕೆಂದು ಹಾತೊರೆಯುತ್ತಿರುವ ʼಭಾರತದ ಆತ್ಮಸಾಕ್ಷಿʼಗೆ ಪ್ರಶ್ನೆಯಾಗಿದ್ದಾನೆ. ಇದಕ್ಕೆ ಯಾರು ಹೊಣೆ?
ನೀಟ್ ಭಾರತದ ಮಧ್ಯಮ, ಬಡವರ್ಗದ ಮಕ್ಕಳ ಮೆಡಿಕಲ್ ಕನಸನ್ನು ಮರೀಚಿಕೆಯನ್ನಾಗಿಸಿದೆ. ಅದು ವಕ್ಕರಿಸಿದ ಮೇಲೆ ʼಟ್ಯೂಷನ್ ಅಂಗಡಿʼಗಳು ನಾಯಿಕೊಡೆಗಳಂತೆ ಮೇಲೆದ್ದಿವೆ. ಕೋಟಿ ಕೋಟಿ ವ್ಯಾಪಾರ ಆಗುತ್ತಿದೆ. ಅವು ವಿದ್ಯಾರ್ಥಿಗಳಿಂದ ಲಕ್ಷ ಲಕ್ಷ ಪೀಕುತ್ತಿವೆ ಮತ್ತೂ ಶೇ.99ರಷ್ಟು ಕೋಚಿಂಗ್ ಪಡೆದ ವಿದ್ಯಾರ್ಥಿಗಳೇ ನೀಟ್ ಪಾಸ್ ಮಾಡುತ್ತಿದ್ದಾರೆ!
ಸರಕಾರಿ ಶಾಲೆ-ಕಾಲೇಜು ವಿದ್ಯಾರ್ಥಿಗಳಿಗೆ ನೀಟ್ ತೇರ್ಗಡೆ ಕಷ್ಟಸಾಧ್ಯ. ಈ ದೌರ್ಬಲ್ಯವನ್ನರಿತೇ ʼಟ್ಯೂಷನ್ ಅಂಗಡಿʼಗಳು ಮಾರುಕಟ್ಟೆ ವಿಸ್ತರಿಸಿ ನವೀನ್ʼರಂಥ ವಿದ್ಯಾರ್ಥಿಗಳ ಶವಗಳ ಮೇಲೆ ರಣಕೇಕೆ ಹಾಕುತ್ತಿವೆ. ನೀಟ್ ಹೆಸರಿನಲ್ಲಿ ನೀಟಾಗಿ ಉಳ್ಳವರಿಗೆ ವೈದ್ಯ ಶಿಕ್ಷಣವನ್ನು ʼದಾಸೋಹʼ ಮಾಡುವ ದಂಧೆ ವಿರುದ್ಧ ಎಲ್ಲರೂ ದನಿ ಎತ್ತಬೇಕಿದೆ.
ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಅವರ ಹೇಳಿಕೆ ನನಗೆ ಅಚ್ಚರಿ ತಂದಿದೆ. “ವಿದೇಶದಲ್ಲಿ ವೈದ್ಯಪದವಿ ಪಡೆಯುವ 90% ವಿದ್ಯಾರ್ಥಿಗಳು ಭಾರತದಲ್ಲಿ ಅಗತ್ಯ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದಿಲ್ಲ. ವಿದೇಶ & ಭಾರತದಲ್ಲಿ ವೈದ್ಯಶಿಕ್ಷಣಕ್ಕೆ ಆಗುವ ವೆಚ್ಚದ ಬಗ್ಗೆ ಚರ್ಚೆ ಬೇಡ. ಆ ಚರ್ಚೆಗೆ ಇದು ಸಮಯವೂ ಅಲ್ಲ” ಎಂದಿದ್ದಾರೆ ಅವರು.
ಕೇಂದ್ರದ ಕಾನೂನು & ಸಂಸದೀಯ ವ್ಯವಹಾರ ಖಾತೆ ಮಂತ್ರಿಗಳೇ, “ವೆಚ್ಚದ ಹೋಲಿಕೆ ಮಾಡಲು ನಾನು ಬಯಸುವುದಿಲ್ಲ. ಯಾವುದೇ ವಿವಾದ ಅಥವಾ ಚರ್ಚೆಗೆ ನಾನೀಗ ಕಾರಣನಾಗುವುದಿಲ್ಲ” ಎಂದು ಹೇಳುವುದರ ಹಿಂದಿನ ಮರ್ಮವೇನು? ಅವರ ಹೇಳಿಕೆ ಅನೇಕ ಗುಮಾನಿಗಳಿಗೆ ಕಾರಣವಾಗಿದೆ.
ʼಟ್ಯೂಷನ್ ಅಂಗಡಿʼಗಳ ಹಿಂದೆ ಯಾರಿದ್ದಾರೆ? ಯಾರಿಗೂ ಕಾಣದಂತೆ ಕೇಂದ್ರ ಸರಕಾರವೇ ಅವಿತು ಕೂತಿದೆಯಾ? ನೀಟ್ ಸೃಷ್ಟಿಸಿದ ʼಶೈಕ್ಷಣಿಕ ಅರಾಜಕತೆʼಗೆ ಇನ್ನೆಷ್ಟು ವಿದ್ಯಾರ್ಥಿಗಳು ಬಲಿಯಾಗಬೇಕು?
ನವೀನ್ ಸಾವು ನೀಟ್ ಸಾಚಾತನವನ್ನೇ ಪ್ರಶ್ನಿಸಿದೆ. ಬಡಮಕ್ಕಳ ರಕ್ತವನ್ನು ಹೀರುವ, ಶ್ರೀಮಂತರಿಗಷ್ಟೇ ಮೀಸಲಾಗಿರುವ ವೈದ್ಯಶಿಕ್ಷಣದ ʼವ್ಯಾಪಾರೀಕರಣʼ ದೇಶಕ್ಕೆ ಅಪಮಾನಕರ. ವಿಶ್ವಗುರು, ರಾಷ್ಟ್ರೀಯ ಶಿಕ್ಷಣ ನೀತಿ ಎಂದೆಲ್ಲಾ ಬೊಬ್ಬೆ ಹೊಡೆಯುವ ಕೇಂದ್ರವು ಒಮ್ಮೆ ಶುದ್ಧ ಅಂತಃಕರಣದಿಂದ ಆಲೋಚಿಸಲಿ.” ಎಂದು ಮಾಜಿ ಮುಖ್ಯಮಂತ್ರಿಗಳು ಒತ್ತಾಯ ಮಾಡಿದ್ದಾರೆ.