35 ಸಾವಿರ ಶಿಕ್ಷಕರು ಮತ್ತು ಉಪನ್ಯಾಸಕರಿಂದ ಅಹೋರಾತ್ರಿ ಹೋರಾಟ
ಬೆಂಗಳೂರು: ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅನುದಾನಿತ ಶಾಲಾ,ಕಾಲೇಜುಗಳ ಶಿಕ್ಷಕರು ಅಂತಿಮ ಹೋರಾಟಕ್ಕೆ ಸಿದ್ದತೆ ನಡೆಸಿದ್ದಾರೆ.
ಮಾರ್ಚ್ 4 ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಶಾಲಾ,ಕಾಲೇಜುಗಳ ನೌಕರರ ಸಂಘದ ನೇತೃತ್ವದಲ್ಲಿ ರಾಜ್ಯಾದ್ಯಂತ ಸುಮಾರು 35 ಸಾವಿರ ಶಿಕ್ಷಕರು ಮತ್ತು ಉಪನ್ಯಾಸಕರು ಅಹೋರಾತ್ರಿ ಹೋರಾಟ ಮಾಡಲಿದ್ದಾರೆ.
ಇದು ಅನಿರ್ದಿಷ್ಟಾವಧಿ ಹಾಗೂ ಅಂತಿಮ ಹೋರಾಟವಾಗಿದೆ ಎಂದು ಅನುದಾನಿತ ಶಾಲಾ,ಕಾಲೇಜು ಶಿಕ್ಷಕರು ಮತ್ತು ಉಪನ್ಯಾಸಕರು ಸ್ಪಷ್ಟಪಡಿಸಿದ್ದಾರೆ.
2006 ಏಪ್ರಿಲ್ ಒಂದರ ನಂತರ ನೇಮಕಾತಿಗೊಂಡ ಅನುದಾನಿತ ಶಾಲಾ,ಕಾಲೇಜು ಶಿಕ್ಷಕರು, ಉಪನ್ಯಾಸಕರು ಗಳಿಗೆ ವೇತನ ಬಿಟ್ಟರೆ ಬೇರೆ ಯಾವುದೇ ಸೌಲಭ್ಯಗಳು ಇಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ನಮಗೆ ಪಿಂಚಣಿಯಾಗಲಿ,ಆರೋಗ್ಯ ನಿಧಿ,ಭವಿಷ್ಯ ನಿಧಿಯಾಗಲಿ ಯಾವುದೂ ಇಲ್ಲ. ನಿವೃತ್ತಿ ನಂತರ ಬರಿ ಕೈನಲ್ಲಿ ಮನೆಗೆ ಹಿಂದಿರುಗಬೇಕಿದೆ ಭವಿಷ್ಯದಲ್ಲಿ ನಾವು ಬದುಕುವುದಾದರು ಹೇಗೆ ಎಂದು ಪ್ರಶ್ನಿಸಿದ್ದಾರೆ.
ಸರ್ಕಾರಿ ಶಾಲಾ,ಕಾಲೇಜು ಶಿಕ್ಷಕರಿಗೆ 2008 ರಿಂದ ನ್ಯೂ ಪೆನ್ಷನ್ ಸ್ಕೀಮ್ ( ಎನ್ ಪಿ ಎಸ್) ಜಾರಿಗೊಳಿಸಲಾಗಿದೆ.ಆದರೆ ನಮಗೆ ಈ ಸೌಲಭ್ಯವೂ ಇಲ್ಲ ಎಂದು ಬೇಸರ ತೋಡಿ ಕೊಂಡಿದ್ದಾರೆ ಮರಿಮಲ್ಲಪ್ಪ ಕಾಲೇಜು ಸೇರಿದಂತೆ ಹಲವು ಕಾಲೇಜುಗಳ ಉಪನ್ಯಾಸಕರು. ನಮಗೆ ಓಲ್ಡ್ ಪೆನ್ಷನ್ ಸ್ಕೀಮ್ ಆಗಲಿ ಅಥವಾ ನ್ಯೂ ಪೆನ್ಷನ್ ಸ್ಕೀಮ್ ಆಗಲಿ ನೀಡಲೇಬೇಕು ಎಂದು ಒತ್ತಾಯಿಸಿದ್ದಾರೆ.
ನಾವು ಕೂಡಾ ಸರ್ಕಾರಿ ಶಾಲಾ,ಕಾಲೇಜು ಶಿಕ್ಷಕರಂತೆಯೇ ಮಕ್ಕಳಿಗೆ ಪಾಠ ಮಾಡುವುದಿಲ್ಲವೆ ನಮಗೆ ಏಕೆ ತಾರತಮ್ಯ ಮಾಡಬೇಕು,ಇದು ಸರಿಯಲ್ಲ ತಾರತಮ್ಯ ಬಿಟ್ಟು ನಮಗೂ ಪಿಂಚಣಿ ಸೌಲಭ್ಯ ಕೊಡಬೇಕೆಂದು ಅನುದಾನಿತ ಶಾಲಾ,ಕಾಲೇಜುಗಳ ಶಿಕ್ಷಕರು, ಉಪನ್ಯಾಸಕರು ಸರ್ಕಾರವನ್ನು ಆಗ್ರಹಿಸಿದ್ದಾರೆ.