ಪ್ರತಿಭಟನೆಗಳಿಂದ ಜನಸಂಚಾರಕ್ಕೆ ಧಕ್ಕೆಯಾಗುವಂತಿಲ್ಲ: ಸರಕಾರಕ್ಕೆ ಖಡಕ್ ವಾರ್ನಿಂಗ್
ಬೆಂಗಳೂರು: ಮೇಕೆದಾಟು ಯೋಜನೆಗೆ ಒತ್ತಾಯಿಸಿ ಕಾಂಗ್ರಸ್ ಹಮ್ಮಿಕೊಂಡಿದ್ದ ಪಾದಯಾತ್ರೆಗೆ ಹೈಕೋರ್ಟ್ ಮತ್ತೆ ಚಾಟಿ ಬೀಸಿದೆ.
ಮೊದಲ ಹಂತದಲ್ಲಿ ಮೇಕೆದಾಟುವಿನಿಂದ ಪಾದಯಾತ್ರೆ ಆರಂಭವಾದಾಗ ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ದೊಡ್ಡ ಪ್ರಮಾಣದಲ್ಲಿ ಹರಡಿತ್ತು.
ಈ ಸಂದರ್ಭದಲ್ಲಿ ಸರಕಾರ ಏನು ಮಾಡಲಾಗದೆ, ಕೈ ಚೆಲ್ಲಿ ಕುಳಿತ್ತಿದ್ದಾಗ, ಮಧ್ಯಪ್ರವೇಶಿಸಿದ ನ್ಯಾಯಾಲಯ ಪಾದಯಾತ್ರೆಗೆ ಬ್ರೇಕ್ ಹಾಕಿತ್ತು.
ಇದೀಗ ಮುಂದುವರಿದ ಪಾದಯಾತ್ರೆಯ ಕೊನೆ ದಿನದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಉಂಟದ ಟ್ರಾಫಿಕ್ ಜಾಮ್‌ಗೆ ಹೈಕೋರ್ಟಿನ ಮುಖ್ಯ ನ್ಯಾಯಾಮೂರ್ತಿ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರು ಕೆಲ ಕಾಲ ರಸ್ತೆಯಲ್ಲಿ ನಿಲ್ಲಬೇಕಾಯಿತು.


ಇದರಿಂದ ಬೇಸರಗೊಂಡ ಅವರು, ನ್ಯಾಯಾಲಯಕ್ಕೆ ಬರುತ್ತಿದ್ದಂತೆ ಸ್ವಯಂ ಪ್ರೇರಿತವಾಗಿ ಟ್ರಾಫಿಕ್ ಜಾಮ್ ವಿಚಾರ ಪ್ರಸ್ತಾಪಿಸಿ, ಇನ್ನು ಮುಂದೆ ಬೆಂಗಳೂರು ನಗರದಲ್ಲಿ ಯಾವುದೇ ಪ್ರತಿಭಟನೆಗಳನ್ನು ಕೈಗೊಳ್ಳದಂತೆ ಮಹತ್ವದ ಆದೇಶ ನೀಡಲಾಗುವುದು ಎಂದರು.
ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಎಸ್.ಆರ್ ಕೃಷ್ಣಕುಮಾರ್ ಅವರಿದ್ದ ವಿಭಾಗೀಯ ಪೀಠದಿಂದ ಈ ಆದೇಶ ಹೊರಡಿಸಲಾಗಿದೆ. ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸುವ ವೇಳೆಯೂ ನಗರದ ಸಾರಿಗೆ-ಸಂಚಾರ ಹಾಗೂ ಜನರ ದಿನನಿತ್ಯದ ಚಟುವಟಿಕೆಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಸರಕಾರಕ್ಕೆ ತಾಕೀತು ಮಾಡಿದೆ.
ಇಂದು (ಗುರುವಾರ) ಹೈಕೋರ್ಟ್ ತಲುಪಲು ನಮಗೇ ಒಂದು ಗಂಟೆ ತಗುಲಿತು. ಜನಸಾಮಾನ್ಯರು ಓಡಾಡುವುದು ಹೇಗೆ? ಎಂದು ಪ್ರಶ್ನಿಸಿದ ಹೈಕೋರ್ಟ್, ಇದಕ್ಕೆಲ್ಲಾ ನಿರ್ಬಂಧಗಳನ್ನು ವಿಧಿಸಿ ಎಂದು ಸರಕಾರಕ್ಕೆ ಸೂಚನೆ ನೀಡಿತು.
ಕಾನೂನು ಉಲ್ಲಂಘನೆ ಮಾಡಿದಲ್ಲಿ ಐಪಿಸಿ ಸೆಕ್ಷನ್ 144 ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆ-1963ರ ಅಡಿ ಸಂಬಂಧಪಟ್ಟ ಪೊಲೀಸ್ ಠಾಣೆಯ ಇನ್ಸಪೆಕ್ಟರ್‌ಗೆ ಕಾನೂನುರಿತ್ಯಾ ಕ್ರಮ ಕೈಗೊಳ್ಳಲು ಆದೇಶ ಹೊರಡಿಸಲಾಗಿದೆ.

















