ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಅನುದಾನ; ಯಡಿಯೂರಪ್ಪ ಮೂಲಕ ಸಿಎಂ ಮೇಲೆ ಒತ್ತಡ ಹಾಕಿಸುತ್ತಿರುವ ಆಡಳಿತ ಪಕ್ಷದ ಶಾಸಕರು; ಬಜೆಟ್ ಗಾತ್ರ ಹೆಚ್ಚಿಸಿ 71,000 ಕೋಟಿ ರೂ. ಸಾಲ ಪಡೆದಿದ್ದ BSY
ಬೆಂಗಳೂರು: ಚುನಾವಣಾ ವರ್ಷದಲ್ಲಿ ಬಿಜೆಪಿ ಶಾಸಕರ ಕ್ಷೇತ್ರಗಳ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ 60-75 ಸಾವಿರ ಕೋಟಿ ರೂ ಸಾಲ ಪಡೆಯಲು ಮುಂದಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ವಿಧಾನಸಭೆಯಲ್ಲಿ ತಮ್ಮ ಚೊಚ್ಚಲ ಮುಂಗಡ ಪತ್ರ ಮಂಡಿಸುತ್ತಿದ್ದು, ಜನಪರ ಯೋಜನೆ ಹಾಗೂ ಪಕ್ಷದ ಶಾಸಕರ ತೃಪ್ತಿಪಡಿಸಲು ಯೋಜನಾ ಗಾತ್ರವನ್ನು 2.47 ಲಕ್ಷ ಕೋಟಿ ರೂ ನಿಂದ 2.53 ಲಕ್ಷ ಕೋಟಿ ರೂಗೆ ಹೆಚ್ಚಿಸುವ ತೀರ್ಮಾನಕ್ಕೆ ಬರಲಾಗಿದೆ. ಈ ಗಾತ್ರದ ಪ್ರಮಾಣ ಹೆಚ್ಚಿಸಿದ್ದರಿಂದ 2022-23ನೇ ಸಾಲಿನಲ್ಲಿ 75,000 ಕೋಟಿ ರೂ. ಸಾಲ ಪಡೆಯಲು ಅವಕಾಶ ದೊರೆಯುತ್ತದೆ.
ಕಳೆದ ಎರಡು ವರ್ಷಗಳಿಂದ ಕೋವಿಡ್-19ರಿಂದಾಗಿ ರಾಜ್ಯದ ಸಂಪನ್ಮೂಲ ಸಂಗ್ರಹದಲ್ಲಿ ಹಿನ್ನಡೆಯಾಗಿದೆ. ಸಂಪನ್ಮೂಲ ಕೊರತೆ ನೀಗಿಸಿ ಕೆಲವು ಯೋಜನೆ ನೀಡುವುದು, ಮುಂಬರುವ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲ ಮಾಡಿಕೊಡಲು ಶಾಸಕರ ಕ್ಷೇತ್ರಾಭಿವೃದ್ಧಿಗಾಗಿ ಹಣ ನೀಡಲು ಈ ದೊಡ್ಡ ಮೊತ್ತ ಸಾಲ ಮಾಡಲು ಮುಂದಾಗಿದೆ.
ಮುಖ್ಯಮಂತ್ರಿಯಾಗಿ ಮೊದಲ ಮುಂಗಡ ಪತ್ರ ಮಂಡಿಸುವ ಸಂದರ್ಭದಲ್ಲಿ ಜನ ಮಾನಸದಲ್ಲಿ ಉಳಿಯುವಂತಹ ಕೆಲವು ಕಾರ್ಯಕ್ರಮಗಳನ್ನು ನೀಡಬೇಕಾಗಿದೆ. ಇದಕ್ಕೆ ಸಂಪನ್ಮೂಲದ ಕೊರತೆ ಇದೆ. ಇದಕ್ಕೆ ಕೇಂದ್ರದ ನೆರವು ಅಷ್ಟಕಷ್ಠೇ. ಇಂತಹ ಸಂದರ್ಭದಲ್ಲಿ ತಮ್ಮ ಗುರು ಬಿ.ಎಸ್.ಯಡಿಯೂರಪ್ಪ ಅವರ ಮಾರ್ಗವನ್ನೇ ಅನುಸರಿಸಲು ಹೊರಟಿದ್ದಾರೆ.
ಮುಂಬರುವ ಚುನಾವಣೆ ಎದುರಿಸಲು ತಮ್ಮ ಕ್ಷೇತ್ರಗಳ ಅಭಿವೃದ್ಧಿ ಮಾಡಬೇಕಾಗಿದೆ. ಕಳೆದ ಎರಡು ವರ್ಷಗಳಿಂದ ನಮಗೆ ಅನುದಾನವೇ ದೊರೆತಿಲ್ಲ. ಈ ವರ್ಷವೂ ನೀಡದಿದ್ದರೆ, ಪಕ್ಷವೂ ಕೆಲವು ಕ್ಷೇತ್ರಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ತಮ್ಮ ಶಾಸಕರು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
ಕೆಲವು ಶಾಸಕರಂತೂ ಕ್ಷೇತ್ರದಲ್ಲಿ ಯಾವ ಕಾರ್ಯಕ್ರಮ ಕೈಗೊಳ್ಳಬೇಕು, ಎಷ್ಟು ಖರ್ಚಾಗಲಿದೆ ಎಂಬ ಮಾಹಿತಿ ನೀಡಿ 500-1500 ಕೋಟಿ ರೂ. ಅನುದಾನ ಕೋರಿದ್ದಾರೆ. ತಮ್ಮ ಮಾತಿಗೆ ಮುಖ್ಯಮಂತ್ರಿ ಮನ್ನಣೆ ನೀಡಿದ್ದರೆ ಏನು ಮಾಡುವುದು ಎಂಬ ಭಯದಿಂದ ಯಡಿಯೂರಪ್ಪ ಅವರಿಂದ ಶಿಫಾರಸ್ಸು ಪತ್ರಗಳನ್ನು ಹಾಕಿಸಿದ್ದಾರೆ.
ಅವರು ಎಲ್ಲ ಶಾಸಕರ ಬೇಡಿಕೆಗೆ ಸ್ಪಂಧಿಸಿ, ಇಂತಹ ಕ್ಷೇತ್ರಗಳ ಶಾಸಕರ ಕ್ಷೇತ್ರಗಳಿಗೆ ಇಂತಿಷ್ಟು ಹಣ ನೀಡಿ ಎಂದು ಪತ್ರವನ್ನು ಮುಖ್ಯಮಂತ್ರಿಗೆ ಬರೆದಿದ್ದಾರೆ. ಇದು ಬೊಮ್ಮಾಯಿ ಅವರಿಗೆ ತಲೆನೋವಾಗಿ ಪರಿಣಮಿಸಿದೆ. ಚುನಾವಣಾ ವರ್ಷದಲ್ಲಿ ಪಕ್ಷದ ಹಿತದೃಷ್ಟಿಯಿಂದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು. ಆಂತರಿಕ ಸಂಪನ್ಮೂಲದಲ್ಲಿ ಇವುಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ.
ರಾಜ್ಯದ ಸಂಪನ್ಮೂಲ ವೃದ್ಧಿಗಾಗಿ ಸಾಲ ಮಾಡಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲು ಮುಖ್ಯಮಂತ್ರಿ ಹೊರಟಿದ್ದಾರೆ. ಇದಕ್ಕಾಗಿ ಯೋಜನಾ ಗಾತ್ರವನ್ನು ಹಿಗ್ಗಿಸಿ ದೊಡ್ಡ ಪ್ರಮಾಣದಲ್ಲಿ ಸಾಲ ಪಡಯುವ ಮಾರ್ಗ ಹುಡುಕಿಕೊಂಡಿದ್ದಾರೆ. ಕಳೆದ ಮುಂಗಡ ಪತ್ರ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಯೋಜನಾ ಗಾತ್ರವನ್ನು ಹೆಚ್ಚಿಸಿ 71,000 ಕೋಟಿ ರೂ. ಸಾಲ ಪಡೆದಿದ್ದರು. ಅದೇ ಮಾರ್ಗವನ್ನು ಬೊಮ್ಮಾಯಿ ತುಳಿಯುತ್ತಿದ್ದಾರೆ.
Comments 1